ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಹದ್ದು ಮತ್ತು ಮೀನು

Published : 12 ಆಗಸ್ಟ್ 2024, 23:44 IST
Last Updated : 12 ಆಗಸ್ಟ್ 2024, 23:44 IST
ಫಾಲೋ ಮಾಡಿ
Comments

ದುಃಖಿಯೊಬ್ಬ ‘ನನ್ನ ಜೀವನದಲ್ಲಿ ಏನೆಲ್ಲಾ ನಡೆಯಿತು, ನಾನು ಏನೆಲ್ಲವನ್ನೂ ಎದುರಿಸಿದೆ. ಎಲ್ಲಾ ಕೆಟ್ಟದ್ದು ನನ್ನ ಜೊತೆಗೇ ಯಾಕೆ ನಡೆಯುತ್ತದೋ ತಿಳಿಯದು. ಈಗ ನಾನು ಎದುರಿಸುವ ಶಕ್ತಿ ಕಳಕೊಂಡಿದ್ದೇನೆ. ಅದಕ್ಕೆ ಎಲ್ಲವನ್ನೂ ಬಿಟ್ಟು ಹೋಗಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು ತನ್ನ ಗೆಳೆಯನ ಮುಂದೆ ತೋಡಿಕೊಂಡ. ಗೆಳೆಯ ಹೇಳಿದ ‘ಜಗತ್ತಿನಲ್ಲಿ ಯಾರಿಗೂ ಆಗದ್ದು ನಿನಗಾಗಿದೆಯೇ? ಅವರೆಲ್ಲರೂ ಎದುರಿಸದೇ ನಿನ್ನ ಹಾಗೆ ತಲೆತಪ್ಪಿಸಿಕೊಂಡು ಹೋಗುತ್ತಿದ್ದಾರೆಯೇ’ ಎಂದು. ‘ಬೇರೆಯವರಿಗೆ ಏನಾಯಿತೋ ತಿಳಿಯದು. ನನಗೆ ಮಾತ್ರ ಜೀವನ ಕೆಟ್ಟದ್ದು ಅನ್ನಿಸಿದೆ. ನಾನು ಇದನ್ನು ತೊರೆಯುತ್ತೇನೆ’ ಎನ್ನುತ್ತಾನೆ. ಅವನ ಈ ಮಾತಿಗೆ ಗೆಳೆಯ ನಗುತ್ತಾ ‘ನಿನಗೆ ಆ ಕಥೆಯನ್ನು ಹೇಳುತ್ತೇನೆ, ರಾಮಕೃಷ್ಣರು ತಮ್ಮ ಶಿಷ್ಯರಿಗೆ ಹೇಳಿದ್ದು’ ಎನ್ನುತ್ತಾ ಕಥೆಯನ್ನು ಹೇಳಲು ಆರಂಭಿಸುತ್ತಾನೆ.

‘ಒಮ್ಮೆ ಮೀನುಗಾರನ ಬಲೆಯಲ್ಲಿ ದೊಡ್ಡ ಮೀನುಗಳು ಸಿಕ್ಕಿಕೊಂಡವು. ಅವನು ಅವುಗಳನ್ನು ದಡಕ್ಕೆ ಸುರಿದ. ಹಸಿದ ಕಾಗೆಗಳು ಮೀನನ್ನು ಹೊತ್ತೊಯ್ಯಲಿಕ್ಕೆ ಹೊಂಚು ಹಾಕಿದ್ದವು. ಆಗಲೇ ಹದ್ದೊಂದು ಎರಗಿ ಅದರಿಂದ ಒಂದು ಮೀನನ್ನು ಎತ್ತಿಕೊಂಡು ಹಾರಿಹೋಯಿತು. ಮೀನುಗಾರ ಜಾಗೃತನಾಗಿ ಮೀನಿನ ಮೇಲೆ ಬಲೆಯನ್ನು ಹರಡಿಟ್ಟ. ಆಗ ಕಾಗೆಗಳಿಗೆ ಮೀನು ಸಿಗದ ಕಾರಣ ಅವು ಆ ಹದ್ದನ್ನು ಹಿಂಬಾಲಿಸಿದವು. ಹಸಿವು ಅವುಗಳನ್ನು ಕಾಡುತ್ತಿತ್ತು. ಈಗ ಮೀನನ್ನು ಕಾಪಾಡಲು ಹದ್ದು ವಿರುದ್ಧ ದಿಕ್ಕಿಗೆ ಹಾರಿತು. ಕಾಗೆಗಳು ಅಲ್ಲಿಯೂ ಬಿಡಲಿಲ್ಲ. ಮತ್ತದು ತನಗೆ ತೋಚಿದ ದಿಕ್ಕಿನ ಕಡೆಗೆಲ್ಲಾ ಹಾರಿತು. ಆದರೆ ಹಸಿದ ಕಾಗೆಗಳು ಬಿಡಲೇ ಇಲ್ಲ.

ಹದ್ದಿಗೆ ತಿನ್ನುವುದಕ್ಕಿಂತ ಮೀನನ್ನು ಕಾಪಾಡಿಕೊಳ್ಳುವುದೇ ಮುಖ್ಯವಾಗಿಬಿಟ್ಟಿತ್ತು. ಅದು ಕಾಗೆಗಳ ಕೈಗೆ ಸಿಕ್ಕದೆ ಹಾರಾಡಿ ಹಾರಾಡಿ ಸುಸ್ತಾಗಿಬಿಟ್ಟಿತ್ತು. ಹೀಗೆ ಹಾರಿ ತಪ್ಪಿಸಿಕೊಳ್ಳುವ ಭರದಲ್ಲಿ ಅದರ ಕೊಕ್ಕಲ್ಲಿ ಕಚ್ಚಿಕೊಂಡಿದ್ದ ಮೀನು ಬಿದ್ದೇ ಹೋಯಿತು. ಕಾಗೆಗಳೆಲ್ಲವೂ ಹದ್ದನ್ನು ಬಿಟ್ಟು ಮೀನಿನತ್ತ ಧಾವಿಸಿದವು. ಸುಸ್ತಾದ ಹದ್ದು ಒಂದೆಡೆ ಕುಳಿತು, ‘ಅಬ್ಬಾ ಈ ಅನಿಷ್ಟ ಮೀನಿನಿಂದ ಇವತ್ತು ನಾನು ಎಷ್ಟೆಲ್ಲಾ ಶ್ರಮಪಡಬೇಕಾಯಿತು. ಸದ್ಯ ಅದು ನನ್ನ ಕೊಕ್ಕಿಂದ ಜಾರಿಬಿದ್ದದ್ದೇ ಒಳ್ಳೆಯದಾಯಿತು. ಈಗ ನಾನು ಎಷ್ಟು ನಿರಾಳವಾದೆ ಎಂದುಕೊಂಡಿತು’.

ಕಥೆಯನ್ನು ಕೇಳುತ್ತಿದ್ದ ದುಃಖಿತ ತಕ್ಷಣ ಪ್ರತಿಕ್ರಿಯಿಸಿದ, ‘ದಡ್ಡ ಹದ್ದು’. ಗೆಳೆಯ ನಗುತ್ತಾ ಕೇಳಿದ, ‘ಅದ್ಯಾಕೆ ದಡ್ಡ ಹದ್ದಾಗುತ್ತದೆ. ಕಾಗೆಗಳಿಂದ ತಪ್ಪಿಸಿಕೊಂಡಿತಲ್ಲವೇ’ ಎಂದು. ಅದಕ್ಕೆ ದುಃಖಿತ ದೃಢವಾಗಿ ಹೇಳಿದ, ‘ಕಷ್ಟಪಟ್ಟು ಗಳಿಸಿದ್ದ ಮೀನನ್ನು ಉಳಿಸಿಕೊಳ್ಳದೆ ನೆಲಕ್ಕೆ ಚೆಲ್ಲಿ, ಆ ಹದ್ದು ಯಾವ ಸಾಧನೆ ಮಾಡಿತು? ತಿರುಗಿ ಬಿದ್ದಿದ್ದರೆ ಅದಕ್ಕೆ ಆ ಕಾಗೆಗಳು ಯಾವ ಲೆಕ್ಕ?’ ಎಂದು. ಗೆಳೆಯ ನಗುತ್ತ ಹೇಳಿದ, ‘ನಿನಗೆ ಬಂದ ಕಷ್ಟಕ್ಕೂ ಹದ್ದಿಗೆ ಬಂದ ಕಷ್ಟಕ್ಕೂ ಏನು ವ್ಯತ್ಯಾಸವಿದೆ ಹೇಳು? ಇನ್ನೊಬ್ಬರಿಗೆ ಬಂದ ದುಃಖಕ್ಕೆ ಸುಲಭವಾಗಿ ಪರಿಹಾರ ನೀಡುತ್ತೇವೆ. ಆದರೆ ನಮಗೆ ಯಾಕೆ ಹೇಳಿಕೊಳ್ಳುವುದಿಲ್ಲ? ಈ ಜೀವನ ಕೂಡಾ ನೀನು ಕಷ್ಟಪಟ್ಟು ಗಳಿಸಿಕೊಂಡಿದ್ದಲ್ಲವೇ? ಕಷ್ಟ ಎನ್ನುವ ಸಣ್ಣ ಕಾರಣಕ್ಕೆ ದೊಡ್ಡ ಉದ್ದೇಶವನ್ನು ಮರೆಯಬಾರದಲ್ಲವೇ’ ಎಂದ. ದುಃಖಿತನಿಗೆ ತನ್ನ ತಪ್ಪಿನ ಅರಿವಾಯಿತು. ಗೆಳೆಯನ ಕೈಹಿಡಿದು ಹೇಳಿದ, ‘ನನಗಿಂತ ಕಷ್ಟ ದೊಡ್ಡದಲ್ಲ. ಇನ್ನು ಯಾವುದನ್ನೂ ಬಿಟ್ಟುಕೊಡುವುದಿಲ್ಲ. ಎದುರಿಸುವೆ’. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT