ಸುಂದರವಾದ ಉದ್ಯಾನವನಗಳೂ ಕೊಳಚೆ ಪ್ರದೇಶಗಳೂ ಸಮಾನವಾಗಿದ್ದ ಈ ಊರನ್ನು ಗಾರ್ದಭ ನಗರಿ ಎಂದು ಕರೆಯುತ್ತಿದ್ದರು. ಎರಡು ಕತ್ತೆಗಳು ಇಲ್ಲಿನ ಉದ್ಯಾನವೊಂದರ ವಿರುದ್ಧ ದಿಕ್ಕಿನಲ್ಲಿ ಮೇಯುತ್ತಿದ್ದವು. ಅದರಲ್ಲಿ ಒಂದು ಕುದುರೆಯ ಹಾಗೆ ಮಜಬೂತಾಗಿತ್ತು. ಅದರ ಬೆನ್ನು ಕೈಯಿಟ್ಟರೆ ಜಾರುವಷ್ಟು ನುಣುಪಾಗಿತ್ತು. ಇನ್ನೊಂದು ತೀರಾ ಬಡವಾಗಿತ್ತು. ಅದರ ಮೈತುಂಬ ಗಾಯಗಳಾಗಿದ್ದವು. ಬೆನ್ನು ಮೇಲಿನ ಚರ್ಮ ಕಿತ್ತು ಕೀವು ರಕ್ತ ಸೋರುತ್ತಿತ್ತು. ಕಾಗೆಗಳು ಹಾರಿ ಬಂದು ಅದರ ಮೈಮೇಲೆ ಕುಳಿತು ಕುಕ್ಕಿ ತಿನ್ನುತ್ತಿದ್ದವು. ಈ ಯಾವುದರ ಪರಿವೆಯೂ ಇಲ್ಲದಂತೆ ಅದು ತಲೆ ತಗ್ಗಿಸಿ ಮೇಯುತ್ತಿತ್ತು.

ಕುದುರೆಯಂತಿದ್ದ ಕತ್ತೆ ಮೇಯುತ್ತಾ ಮೇಯುತ್ತಾ ಗಾಯ ತುಂಬಿದ ಕತ್ತೆಯ ಹತ್ತಿರ ಬಂದು ‘ಇದೇನಿದು? ಮೈತುಂಬಾ ಗಾಯ ಏನಾಯ್ತು?’ ಅಂತ ಕೇಳುತ್ತದೆ. ‘ನನ್ನ ಯಜಮಾನ ದೊಣ್ಣೆಯಿಂದ ದಿನಾ ಹೊಡೆಯುತ್ತಾನೆ. ಬಯ್ಯುತ್ತಾನೆ. ಹೊಟ್ಟೆ ತುಂಬಾ ಊಟ ಹಾಕುವುದಿಲ್ಲ’ ಎನ್ನುತ್ತದೆ. ‘ನೀನು ನಿಜವಾಗಲೂ ಕತ್ತೆ. ಅಷ್ಟೆಲ್ಲಾ ಹಿಂಸೆ ಅವಮಾನ ಸಹಿಸಿಕೊಂಡು ಅಲ್ಲೇ ಯಾಕಿದ್ದೀಯ? ನನ್ನ ಯಜಮಾನ ಒಳ್ಳೆಯವನು. ನಾನು ಎಷ್ಟು ಚೆನ್ನಾಗಿದ್ದೇನೆ ನೋಡು, ನನ್ನ ಜೊತೆ ಬಂದುಬಿಡು’ ಎಂದು ಕರೆಯುತ್ತದೆ. ‘ಇಲ್ಲ, ನಾನು ಬರುವುದಿಲ್ಲ. ನನ್ನ ಯಜಮಾನನಿಗೆ ಅಪ್ಸರೆಯಂತಹ ಮಗಳಿದ್ದಾಳೆ. ಅವಳ ಮೇಲೆ ಕೋಪ ಬಂದಾಗಲೆಲ್ಲಾ ಆತ ನಿನ್ನನ್ನು ಕತ್ತೆಗೆ ಕೊಟ್ಟು ಮದುವೆ ಮಾಡುತ್ತೇನೆ ಎನ್ನುತ್ತಿರುತ್ತಾನೆ. ನಾನು ಅದಕ್ಕಾಗಿ ಕಾಯುತ್ತಿದ್ದೇನೆ’ ಎನ್ನುತ್ತದೆ.

ಹೀಗೆಯೇ ಸಲ್ಲದ ನಿರೀಕ್ಷೆಗಳನ್ನು ಇಟ್ಟುಕೊಂಡು ಪಡಬಾರದ ಕಷ್ಟನಿಷ್ಠುರಗಳನ್ನು ಅನುಭವಿಸುತ್ತಿರುವ ಮನುಷ್ಯರ ಕಥೆಯಿದು. ಕೆಲವರಿಗೆ ಸುಖ ಎಂಬುದು ಬಲು ದೂರದಲ್ಲಿರುತ್ತದೆ. ಎಷ್ಟೇ ಕಷ್ಟ ಅಡ್ಡಿ ಆತಂಕಗಳು ಎದುರಾಗಲಿ ಅದನ್ನು ಪಡೆದೇ ತೀರಬೇಕು ಎನ್ನುವ ಹುಚ್ಚು ಸಂಕಲ್ಪ ಹೊಂದಿರುತ್ತಾರೆ. ಸುಖ ಎನ್ನುವುದು ತನ್ನ ಕಾಲಬುಡದಲ್ಲಿ ಬಿದ್ದಿದ್ದರೂ ಕಾಣಲಾಗದ ಕುರುಡು ಇವರಿಗೆ. ಇಂಥವರನ್ನು ಕಂಡೇ ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದ ಬಯಸುವವನು ವೀರನೂ ಅಲ್ಲ ಧೀರನೂ ಅಲ್ಲ’ ಎಂದಿರಬೇಕು. ಹೇಗೆ, ಎಲ್ಲಿ ಹುಟ್ಟಬೇಕು ಮತ್ತು ಸಾಯಬೇಕು ಎಂಬುದು ಯಾರ ಆಯ್ಕೆಯೂ ಅಲ್ಲ. ಆದರೆ ಯಾರೊಂದಿಗೆ ಹೇಗೆ ಎಲ್ಲಿ ಬದುಕಬೇಕು ಎನ್ನುವುದು ಖಂಡಿತಾ ನಮ್ಮ ಆಯ್ಕೆಗೆ ಬಿಟ್ಟಿದ್ದು.

ದುಡಿದು ತಿನ್ನುವ ಶಕ್ತಿ -ಆಸಕ್ತಿ ಹೊಂದಿದ ಎಲ್ಲರಿಗೂ ಇಲ್ಲಿ ಕೆಲಸವೂ ಇದೆ, ಅನ್ನವೂ ಇದೆ. ಇರುವ ಪರಿಮಿತಿಗಳಲ್ಲಿ ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳುವುದು ಎಲ್ಲರಿಗೂ ಸಾಧ್ಯವಿದೆ. ಹಾಗಾಗಿ ಅಸಂಬದ್ಧ ಆಸೆಗಳನ್ನು ತುಂಬಿಕೊಂಡು ಚಡಪಡಿಸುತ್ತಾ ಕೂರುವುದು ಜಾಣತನವಲ್ಲ. ಕನಸು ಕಾಣುವುದು, ಕಂಡ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದೇ. ಆದರೆ ಸಾಧುವಲ್ಲದ ಬಯಕೆಗಳನ್ನಿಟ್ಟುಕೊಂಡು ಹಿಂಸೆ ಅವಮಾನವನ್ನು ಸಹಿಸಿಕೊಳ್ಳುವುದಿದೆಯಲ್ಲಾ, ಅದು ಮೂರ್ಖತನ. ಎಷ್ಟು ಹಾಳಾದರೂ, ಎಷ್ಟು ಜೀವ ಸವೆಸಿದರೂ ಹತ್ತಾರು ವರ್ಷಗಳಿಂದ ಜೀವವಿರೋಧಿ ದುಷ್ಟ ಕಾರ್ಯಗಳಲ್ಲಿ ತೊಡಗಿರುವ ಸಂಘ- ಸಂಸ್ಥೆ, ಜನ-ಜಾಗ, ಪಂಥ- ಪಾರ್ಟಿಗಳನ್ನು ಬಿಟ್ಟು ಬರಲು ತಯಾರಿಲ್ಲದ ಮನಃಸ್ಥಿತಿ ನಿಯತ್ತಿನದಲ್ಲ. ಅದು ಬೌದ್ಧಿಕ ದಾರಿದ್ರ್ಯದ ಪರಮಾವಧಿ. ನಿತ್ಯದ ಹಂಗು. ಬೌದ್ಧಿಕ ಗುಲಾಮಗಿರಿಯೇ ಭೌತಿಕ ಜೀತಗಾರಿಕೆಯ ಮೂಲ.

ನೋವು, ಅವಮಾನ ರೂಢಿಯಲ್ಲಿರುವ ಜೀತಗಾರಿಕೆ ತೊರೆದು ಬದುಕಿದರೆ ಅದು ಸ್ವಾತಂತ್ರ್ಯದ ಮೊದಲ ಹೆಜ್ಜೆ, ಅಲ್ಲಿಂದಲೇ ಅವಮಾನಿಸುವವರ ಅವನತಿ ಆರಂಭ. ಕಿರುಕುಳದ ಜಾಗದಿಂದ ಹೊರಬರುವುದೇ ಅವರಿಗೆ ಕೊಡುವ ಶಿಕ್ಷೆ. ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸು, ಭಂಗಪಟ್ಟುಂಬ ಬಿಸಿ ಅನ್ನಕ್ಕಿಂತ ತಂಗುಳವೆ ಲೇಸು ಎನ್ನುವುದು ಮಾನವ ಘನತೆಗೆ ಕೊಟ್ಟ ವ್ಯಾಖ್ಯಾನ. ಬಾಳೆಗೆ ಒಂದೇ ಗೊನೆ. ಮನುಷ್ಯನಿಗೆ ಒಂದೇ ಬಾಳುವೆ. ಸುಖದುಃಖಗಳು ಬಂದಂತೆ ಬದುಕುವುದೇ ಬಾಳುವೆಗೆ ಸೊಗಸು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.