ಸೋಮವಾರ, ಅಕ್ಟೋಬರ್ 3, 2022
24 °C

ಒಳನೋಟ | ಅಧಿಕಾರಿಗಳ ದರ್ಬಾರ್‌: ನಿಗಮಗಳು ಬರ್ಬಾದ್‌

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿರುವ ಜಾತಿವಾರು ನಿಗಮಗಳ ಪೈಕಿ ಹೆಚ್ಚಿನ ಸಂಸ್ಥೆಗಳಿಗೆ ಸಿಗುತ್ತಿರುವ ಅನುದಾನ ತೀರಾ ಕಡಿಮೆ. ಬೆರಳೆಣಿಕೆಯ ನಿಗಮಗಳಿಗೆ ಮಾತ್ರ ನೂರಾರು ಕೋಟಿ ರೂಪಾಯಿ ಲಭಿಸುತ್ತಿದೆ. ದೊಡ್ಡ ನಿಗಮಗಳ ಪೈಕಿ ಹೆಚ್ಚಿನವು ಅಧಿಕಾರಿಗಳ ದರ್ಬಾರಿನ ಭಾರಕ್ಕೆ ನಲುಗುತ್ತಿವೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಭೋವಿ ಅಭಿವೃದ್ಧಿ ನಿಗಮ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ಕೆಲವು ನಿಗಮಗಳಲ್ಲಿ ಆಯಕಟ್ಟಿನ ಹುದ್ದೆಗಳಲ್ಲಿ ಕುಳಿತ ಅಧಿಕಾರಿಗಳ ಕೈವಾಡದಿಂದಲೇ ಹಗರಣಗಳು ನಡೆದ ಉದಾಹರಣೆಗಳಿವೆ. ಕೆಲವು ಸಂಸ್ಥೆಗಳಲ್ಲಿ ನಿರಂತರವಾಗಿ ಅಕ್ರಮಗಳು ನಡೆಯುತ್ತಿದ್ದರೂ ಆಡಳಿತವನ್ನು ಸರಿದಾರಿಗೆ ತರುವ ಪ್ರಯತ್ನಗಳೇ ನಡೆದಿಲ್ಲ.

ಜಿಲ್ಲಾ ಮಟ್ಟದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಾಗ ಭ್ರಷ್ಟಾಚಾರದ ಆರೋಪ ಹೊತ್ತವರು, ಲಂಚ ಪ್ರಕರಣ, ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳದಿಂದ (ಎಸಿಬಿ) ಬಂಧಿತರಾದ ಅಧಿಕಾರಿಗಳೇ ವರ್ಷ ಕಳೆಯುವುದರೊಳಗೆ ಇಂತಹ ನಿಗಮಗಳ ವ್ಯವಸ್ಥಾಪಕ ನಿರ್ದೇಶಕ, ಪ್ರಧಾನ ವ್ಯವಸ್ಥಾಪಕ ಹುದ್ದೆಗೇರುತ್ತಾರೆ. ಆಡಳಿತ ಪಕ್ಷದ ಪ್ರಭಾವಿಗಳು ಮತ್ತು ‘ಥೈಲಿ’ಯ ನೆರವಿನಲ್ಲಿ ಹೀಗೆ ಆಯಕಟ್ಟಿನ ಹುದ್ದೆಗಳಿಗೆ ಬಂದು ಕೂರುವ ಅಧಿಕಾರಿಗಳು, ಕೆಲವೇ ದಿನಗಳೊಳಗೆ ನಿಗಮಗಳ ಖಜಾನೆಯನ್ನೇ ಬರಿದು ಮಾಡುತ್ತಿದ್ದಾರೆ.

ಕೆಲವು ನಿಗಮಗಳಲ್ಲಿ ಒಬ್ಬರೇ ಅಧಿಕಾರಿಗೆ ಒಂದಕ್ಕಿಂತ ಹೆಚ್ಚು ಹುದ್ದೆಗಳ ಜವಾಬ್ದಾರಿ ನೀಡಲಾಗುತ್ತಿದೆ. ಫಲಾನುಭವಿಗಳ ಆಯ್ಕೆಪಟ್ಟಿ, ಅನುದಾನ ಬಿಡುಗಡೆ, ಮಂಜೂರಾತಿ ಎಲ್ಲ ಕಡತಗಳಿಗೂ ಒಬ್ಬ ಅಧಿಕಾರಿಯೇ ಸಹಿ ಮಾಡುವಂತಹ ಪರಿಸ್ಥಿತಿಯೇ ಭೋವಿ ನಿಗಮದಲ್ಲಿ ಹತ್ತಾರು ಕೋಟಿ ರೂಪಾಯಿಗಳ ಅಕ್ರಮ ನಡೆಯಲು ಕಾರಣ ಎಂಬುದನ್ನು ಎಸಿಬಿ ತನಿಖೆ ಹೊರಗೆಡವಿದೆ. ಇತರ ಕೆಲವು ನಿಗಮಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ.

ನಿಗಮಗಳ ಆಡಳಿತ ನಿರ್ವಹಣೆಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಆದರೆ, ರಾಜಕೀಯ ಪಕ್ಷಗಳಿಂದ ನೇಮಕಗೊಂಡವರನ್ನು ಮನವೊಲಿಸಿ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. ನಂತರದ ದಿನಗಳಲ್ಲಿ ಅವರೂ ನಿಗಮಗಳಲ್ಲಿ ನಡೆಯುವ ಹಗರಣ, ಅಕ್ರಮಗಳ ಜತೆ ಕೈಜೋಡಿಸಿದ ಉದಾಹರಣೆಗಳೇ ಹೆಚ್ಚು ಎಂಬ ಆರೋಪಗಳಿವೆ.

ಹೊರಗುತ್ತಿಗೆ ಆಟ: ಬಹುತೇಕ ನಿಗಮಗಳಲ್ಲಿ ಅಗತ್ಯ ಸಂಖ್ಯೆಯ ಕಾಯಂ ಸಿಬ್ಬಂದಿ ಇಲ್ಲ. ಜಿಲ್ಲಾ ವ್ಯವಸ್ಥಾಪಕರ ಕಚೇರಿ, ನಿಗಮಗಳ ಕೇಂದ್ರ ಕಚೇರಿಯಲ್ಲಿ ಹೊರಗುತ್ತಿಗೆ ನೌಕರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ನೆರವು ಕೇಳಿ ನಿಗಮದ ಕಚೇರಿಗೆ ಬರುವ ಜನರನ್ನು ಹೊರ ಗುತ್ತಿಗೆ ನೌಕರರು ಶೋಷಿಸುತ್ತಿರುವ ದೂರುಗಳೂ ಹೆಚ್ಚುತ್ತಿವೆ.

ದಲ್ಲಾಳಿಗಳ ಕೂಟದ್ದೇ ಆಟ
ರಾಜ್ಯದಲ್ಲಿ ಜಾತಿವಾರು ನಿಗಮಗಳಲ್ಲಿ ಹೆಚ್ಚಿನವು ದಲ್ಲಾಳಿಗಳ ಕೂಟದ ಕಪಿಮುಷ್ಟಿಯಲ್ಲಿ ಸಿಲುಕಿವೆ. ಕೆಲವು ಕಡೆ ಅಧಿಕಾರಿಗಳೇ ದಲ್ಲಾಳಿಗಳ ಕೂಟವನ್ನು ಕಟ್ಟಿಕೊಂಡಿದ್ದರೆ, ಇನ್ನು ಕೆಲವು ನಿಗಮಗಳಲ್ಲಿ ದಲ್ಲಾಳಿಗಳೇ ಅಧಿಕಾರಿಗಳ ನಿಯೋಜನೆಯನ್ನೂ ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ.

ಭೂ ಒಡೆತನ, ಗಂಗಾ ಕಲ್ಯಾಣ, ಸ್ವಯಂ ಉದ್ಯೋಗಕ್ಕೆ ನೆರವು ನೀಡುವಂತಹ ದೊಡ್ಡ ಮೊತ್ತದ ಸಹಾಯಧನ ಇರುವ ಯೋಜನೆಗಳಲ್ಲಿ ದಲ್ಲಾಳಿಗಳ ಹಸ್ತಕ್ಷೇಪ ವ್ಯಾಪಕವಾಗಿದೆ. ಕೆಲವು ನಿಗಮಗಳಲ್ಲಿ ಕಚೇರಿಗಳ ಪ್ರವೇಶಕ್ಕೂ ದಲ್ಲಾಳಿಗಳ ಶಿಫಾರಸು ಬೇಕು ಎಂಬ ವಾತಾವರಣ ಇದೆ. ನಿಗಮಗಳ ಆಯಕಟ್ಟಿನ ಹುದ್ದೆಗೆ ಬರುವ ಅಧಿಕಾರಿಗಳು ಪ್ರತಿ ಜಿಲ್ಲೆಗೂ ತಮ್ಮದೇ ಏಜೆಂಟರನ್ನು ನಿಯೋಜಿಸಿಕೊಂಡು, ಅವರ ಮೂಲಕವೇ ಫಲಾನುಭವಿಗಳಿಗೆ ‘ಗಾಳ’ ಹಾಕುತ್ತಿದ್ದಾರೆ.

‘ಕೆಲವು ನಿಗಮಗಳಲ್ಲಿ ಹೆಚ್ಚಿನ ದಲ್ಲಾಳಿಗಳು ಅದೇ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಸಮುದಾಯದ ಸ್ಥಳೀಯ ನಾಯಕರನ್ನೂ ಅಧಿಕಾರಿಗಳು ಪಳಗಿಸಿ, ದಲ್ಲಾಳಿಗಳ ಕೆಲಸಕ್ಕೆ ನಿಯೋಜಿಸಿಕೊಂಡಿರುವ ಉದಾಹರಣೆಗಳಿವೆ. ಅಕ್ರಮ ಪ್ರಶ್ನಿಸಲು ಬಂದವರೇ ಮುಂದೆ ಮಧ್ಯವರ್ತಿಗಳಾಗಿರುವುದೂ ಗಮನಕ್ಕೆ ಬಂದಿದೆ’ ಎನ್ನುತ್ತಾರೆ ಎಸಿಬಿ ಅಧಿಕಾರಿಗಳು.

ಓದಿ... ಒಳನೋಟ: ‘ಗಂಗಾ ಕಲ್ಯಾಣ’ದಲ್ಲಿ ಅಕ್ರಮದ್ದೇ ಪಾರಮ್ಯ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು