ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸೊಪ್ಪು ಮಾರಾಟಕ್ಕಿಳಿದ ಬಾಲಕಿ

Last Updated 10 ಜುಲೈ 2021, 21:18 IST
ಅಕ್ಷರ ಗಾತ್ರ

ಮೈಸೂರು: ‘ಅಪ್ಪ, ಅಮ್ಮ ಬೀದಿಬದಿ ವ್ಯಾಪಾರ ಮಾಡುತ್ತಾರೆ. ಮೊಬೈಲ್‌ ಕೆಟ್ಟು ಹೋಗಿದ್ದು, ಆನ್‌ಲೈನ್‌ ಪಾಠ ಕೇಳಲು ಆಗುತ್ತಿಲ್ಲ. ಹೊಸ ಮೊಬೈಲ್‌ ಖರೀದಿಸೋಣವೆಂದು ನಾನೂ ಸೊಪ್ಪು ಮಾರಲು ಆರಂಭಿಸಿದೆ...’

ಹೀಗೆಂದ ಮೈಸೂರಿನ ಸಾತಗಳ್ಳಿ ನಿವಾಸಿ, 16ರ ಹರೆಯದ ಬಾಲಕಿಯ ಕಂಗಳಲ್ಲಿ ನೀರು ತುಂಬಿಕೊಂಡಿತು. ಈಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ.

ಬಾಲಕಿ ತಂದೆ ಹನುಮಂತು, ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಲೈಟಿಂಗ್ಸ್‌ ಅಲಂಕಾರದ ಕೆಲಸ ಮಾಡುತ್ತಾರೆ. ಆದರೆ, ಕೋವಿಡ್‌ ಲಾಕ್‌ಡೌನ್‌ ಕಾರಣ ಆ ಕೆಲಸವೂ ಇಲ್ಲದೆ ಸಂಕಷ್ಟಕ್ಕೆ ಒಳಗಾದರು. ಕುಟುಂಬ ನಿರ್ವಹಣೆಗಾಗಿ ಸೊಪ್ಪು ಮಾರಾಟಕ್ಕೆ ಮುಂದಾದರು. ಚೆನ್ನಾಗಿ ಓದಬೇಕು, ಮುಂದೆ ಬರಬೇಕು ಎಂಬ ಛಲ ಬಾಲಕಿಗೆ. ಆದರೆ, ಆನ್‌ಲೈನ್‌ ಕ್ಲಾಸ್‌ಗೆ ಮೊಬೈಲ್‌, ಕಂಪ್ಯೂಟರ್‌ ಎಲ್ಲಿಂದ ತರುವುದು? ಅದನ್ನು ಖರೀದಿಸಿಕೊಡುವ ಸಾಮರ್ಥ್ಯವೂ ಪೋಷಕರಿಗಿಲ್ಲ. ಅದಕ್ಕಾಗಿ ಆಕೆ ಕಂಡುಕೊಂಡ ಹಾದಿ ತಂದೆ ಜೊತೆ ತೆರಳಿ, ಸೊಪ್ಪು ಮಾರಿ ಹಣ ಸಂಪಾದಿಸುವುದು.

‘ಬೆಳಿಗ್ಗೆ 5 ಗಂಟೆ ಸೊಪ್ಪು ಮಾರಾಟಕ್ಕೆ ಮಗಳನ್ನು ಕರೆದುಕೊಂಡು ಹೋಗುತ್ತೇನೆ. ನಾನು ಬಡಾವಣೆಗಳಲ್ಲಿ ಮನೆಮನೆ ಬಳಿ ತೆರಳಿ ಮಾರುತ್ತೇನೆ. ಆ ಸಮಯದಲ್ಲಿ ಮಗಳು ಬೀದಿಬದಿಯಲ್ಲಿ ಕುಳಿತು ಸೊಪ್ಪು ಮಾರುತ್ತಿರುತ್ತಾಳೆ. ನಮ್ಮ ಕಷ್ಟ ಕೇಳಿ ಈಚೆಗೆ ದಾನಿಗಳು ಮಗಳಿಗೆ ಟ್ಯಾಬ್‌ ಖರೀದಿಸಿಕೊಟ್ಟರು’ ಎಂದು ಹನುಮಂತು ಹೇಳುತ್ತಾರೆ.

*
‘ಮಕ್ಕಳ ಮನಸ್ಸು ಜರ್ಜರಿತಗೊಂಡಿದೆ’
ಲಾಕ್‌ಡೌನ್‌ನಿಂದಾಗಿ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ಹಸಿವಿನ ಅಂಶವೂ ಹೆಚ್ಚಳವಾಗಿದೆ. ಪೋಷಕರಿಗೆ ಉದ್ಯೋಗ ಸಿಗದ ಕಾರಣ ಮಕ್ಕಳೂ ಕೆಲಸಕ್ಕೆ ಇಳಿದಿದ್ದಾರೆ. ಭೌತಿಕ ತರಗತಿಗಳು ಆರಂಭವಾಗದೇ ಮಕ್ಕಳ ಮನಸ್ಸು ಜರ್ಜರಿತಗೊಂಡಿದೆ. ಗ್ರಾಮೀಣ ಪ್ರದೇಶದ ಬಡ ಮಕ್ಕಳ ಬಳಿ ಮೊಬೈಲ್‌ ಇಲ್ಲ. ಕೆಲವು ಕಡೆ ನೆಟ್‌ವರ್ಕ್‌ ಸಿಗದೆ ಮಕ್ಕಳಲ್ಲಿ ಕೀಳರಿಮೆ ಮೂಡಿದೆ.
–ಪರಶುರಾಂ, ಒಡನಾಡಿ ಸಂಸ್ಥೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT