ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಸಹಕಾರದ ಒಳಗಿನ ವಿರೋಧಾಭಾಸ

Last Updated 16 ಅಕ್ಟೋಬರ್ 2021, 20:26 IST
ಅಕ್ಷರ ಗಾತ್ರ

ಸಹಕಾರವು ಅತ್ಯಂತ ಜಟಿಲ ಕ್ಷೇತ್ರ. ಈ ಕ್ಷೇತ್ರದ ವಿನ್ಯಾಸದ ಒಳಗೆಯೇ ತೊಡಕುಗಳೂ ಇವೆ. ಹಾಗಾಗಿ, ಸಹಕಾರ ಕ್ಷೇತ್ರದಲ್ಲಿ ವೈಫಲ್ಯ ಕಾಣುವುದು ಸಹಜವೇ ಆಗಿದೆ.

ಬಂಡವಾಳವನ್ನು ದೂರ ಇಟ್ಟು ವ್ಯಾಪಾರ ಮಾಡುವ ಯೋಚನೆಯು ಸಹಕಾರ ಕ್ಷೇತ್ರದ ಉದಯಕ್ಕೆ ಕಾರಣ. ಬಂಡವಾಳ ಕೇಂದ್ರಿತ ವ್ಯಾಪಾರಕ್ಕೆ ವಿರುದ್ಧವಾಗಿ ಎರಡು ಪ್ರಯೋಗಗಳು ನಡೆದವು. ಅವೆಂದರೆ, ಉದ್ಯಮದ ಒಳಗೇ ಇದ್ದುಕೊಂಡು ಉದ್ಯಮವನ್ನು ತನಗೆ ಬೇಕಾದ ರೀತಿಯಲ್ಲಿ ಬಾಗಿಸಬಹುದಾದ ಕಾರ್ಮಿಕ ಸಂಘಟನೆಯ ಪ್ರಯೋಗ ಮತ್ತು ಎರಡನೆಯದು ಹೊರಗಿನಿಂದ ಬಂಡವಾಳ ಮೂಲಕ್ಕೆ ಸವಾಲೊಡ್ಡುವ ಸಹಕಾರ.

ಸಹಕಾರ ಕ್ಷೇತ್ರದಲ್ಲಿ ಹಲವು ವಿರೋಧಾಭಾಸಗಳಿವೆ. ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಬಂಡವಾಳವೂ ಬೇಕು ಹಾಗೂ ಉತ್ಪಾದಕರ ಹಾಲೂ ಬೇಕು. ಬಂಡವಾಳವನ್ನು ಹಾಲು ಉತ್ಪಾದಕರಿಂದ ಸಂಗ್ರಹಿಸುವುದು ಕಷ್ಟದ ಕೆಲಸ. ಅದೇ ಕಾಲಕ್ಕೆ ಹಾಲು ಉತ್ಪಾದನೆ ಮತ್ತು ಸರಬರಾಜು ಮಾಡುವ ರೈತರು ಸಂಘವನ್ನು ವ್ಯಾವಹಾರಿಕವಾಗಿ ನೋಡುತ್ತಾರೆ. ಸಂಘದಲ್ಲಿ ಸದಸ್ಯತ್ವ ಇದ್ದರೂ ಆ ಸಂಬಂಧವನ್ನು ದೀರ್ಘಕಾಲಿಕ ನಂಟಾಗಿ ಪರಿಗಣಿಸಲು ಗಟ್ಟಿ ಕಾರಣಗಳಿಲ್ಲ. ಬೇರೆಡೆ ಇನ್ನೂ ಹೆಚ್ಚಿನ ದರ ದೊರೆತರೆ ಹಾಲನ್ನು ಅಲ್ಲಿಗೆ ನೀಡಲು ಈ ಸದಸ್ಯರಿಗೆ ಹಿಂಜರಿಕೆಯಾಗದಿರುವುದು ಸಹಜ.

ಸಹಕಾರ ಒಂದು ವ್ಯಾಪಾರಿ ವ್ಯವಸ್ಥೆಯಾದರೂ ಅದರ ನಿರ್ವಹಣೆ ಸಹಕಾರ ತತ್ವದ ಪ್ರಕಾರ ಪ್ರಜಾತಾಂತ್ರಿಕವಾಗಿ ಇರಬೇಕು. ಆದರೆ ನಮ್ಮಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಅನುಸರಿಸಿ ವ್ಯಾಪಾರ ವ್ಯವಹಾರ ನಡೆಯುವುದಿಲ್ಲ. ಆ ವ್ಯವಸ್ಥೆಯನ್ನು ಪಾಲಿಸುವುದು ಕೇವಲ ರಾಜಕಾರಣಕ್ಕೆ ಸಂಬಂಧಿಸಿದ ಸಂಸ್ಥೆಗಳು ಮಾತ್ರ. ಹೀಗಿರುವಾಗ ವ್ಯಾಪಾರದ ಉದ್ದೇಶದ ಸಹಕಾರ ಸಂಘಟನೆಯು ಪ್ರಜಾತಾಂತ್ರಿಕವಾಗಿ ಇರಲು ಪ್ರಯತ್ನಿಸುವುದರಲ್ಲಿಯೇ ಒಂದು ವಿರೋಧಾಭಾಸವಿದೆ. ಇದರಲ್ಲಿ ರಾಜಕೀಯ ಪ್ರವೇಶಿಸಿದೆ ಎಂದು ಗೊಣಗುವುದರಲ್ಲಿ ಅರ್ಥವಿಲ್ಲ. ಇವುಗಳ ಸಂರಚನೆಯಲ್ಲಿಯೇ ರಾಜಕೀಯಕ್ಕೆ ಆಹ್ವಾನವನ್ನು ಒಡ್ಡಿದ್ದೇವೆ. ಸಹಕಾರ ಬ್ಯಾಂಕ್‌ಗಳಲ್ಲಿ ಸಹಕಾರಕ್ಕಿಂತ ಬ್ಯಾಂಕಿಂಗ್‌ ವ್ಯವಹಾರವೇ ಹೆಚ್ಚು ಶುದ್ಧ. ಸಹಕಾರ ಸಿದ್ಧಾಂತ ಮತ್ತು ವ್ಯಾಪಾರದ ನಡುವೆ ಸಮನ್ವಯವು ಕಷ್ಟ.

ಮುಖ್ಯವಾಹಿನಿಯ ವ್ಯಾಪಾರಕ್ಕೆ ಬಂಡವಾಳ ಮುಖ್ಯ ಹಾಗೂ ಲಾಭವೇ ಅದರ ಉದ್ದೇಶ. ಲಾಭ ಮಾಡಿಕೊಳ್ಳುವುದು ಬಂಡವಾಳ ಹೂಡಿದವನ ಮುಖ್ಯ ಗಮನ ಕೇಂದ್ರ. ಈ ಎಲ್ಲದರ ನಡುವೆ ಅತ್ಯುತ್ತಮ ಸಮನ್ವಯ ಸಾಧ್ಯ. ಆದರೆ, ಸಹಕಾರದಲ್ಲಿ ಇದು ಜಟಿಲವಾಗುತ್ತದೆ.ಸಹಕಾರಿ ಸಂಸ್ಥೆಯೊಂದು ಯಶಸ್ವಿ ಆಗುವುದು ಎಂದರೇನು? ಅಮುಲ್‌ ಸಂಸ್ಥೆಯನ್ನು ತೆಗೆದುಕೊಳ್ಳಿ. ಅದು ವ್ಯಾಪಾರದ ದೃಷ್ಟಿಯಿಂದ ಯಶಸ್ವಿಯಾಗಿದೆ. ಆದರೆ, ಸಹಕಾರದ ದೃಷ್ಟಿಯಿಂದ ಯಶಸ್ವಿ ಆಗಿದೆಯೇ? ಸಹಕಾರ ಸಂಸ್ಥೆಯ ವ್ಯಾಪಾರ ವೃದ್ಧಿಯಾದಂತೆ ವಿಸ್ತರಣೆ ಅಗತ್ಯವಾಗುತ್ತದೆ. ನಂದಿನಿಯ ವ್ಯಾಪಾರ ಹೆಚ್ಚಾಗಿ ಕರ್ನಾಟಕದಲ್ಲಿ ಲಭ್ಯವಿರುವ ಹಾಲು ಸಾಲದು ಎಂಬ ಪರಿಸ್ಥಿತಿ ಬಂದಾಗ ತಮಿಳುನಾಡಿನಿಂದಲೂ ಹಾಲು ಸಂಗ್ರಹಿಸಬಹುದು. ಆಗ, ಅದು ಉತ್ತಮ ವ್ಯಾಪಾರಿ ಸಂಸ್ಥೆಯಾದರೂ, ಸಹಕಾರ ಸಿದ್ಧಾಂತ ಉಳಿಯುತ್ತದೆಯೇ? ಹಾಗಂತ, ಬೆಳೆಯದೇ ಇರಲು ಸಾಧ್ಯವೇ? ಈ ವಿರೋಧಾಭಾಸಗಳಲ್ಲಿ ಸಹಕಾರ ಕ್ಷೇತ್ರವು ಸಿಲುಕಿದೆ.

ಹೀಗಾಗಿಯೇ ಸಹಕಾರ ಕ್ಷೇತ್ರದಲ್ಲಿನ ಯಶಸ್ಸನ್ನು ನಾವು ಅರ್ಥಮಾಡಿಕೊಳ್ಳಬೇಕೇ ಹೊರತು ವೈಫಲ್ಯದ ಗಾಯವನ್ನು ಬಿಡಿಸಿ ಹುಣ್ಣನ್ನು ಕೆರೆಯಬಾರದು.

(ಲೇಖಕರು ಸಹಕಾರಿ ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT