ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಕಾಸಿದ್ದರಷ್ಟೇ ಸರ್ಕಾರಿ ಹುದ್ದೆ: ಪರೀಕ್ಷೆ ಹಂತದಲ್ಲಿ ಅಕ್ರಮ

ನೇಮಕಾತಿ ವೇಳೆ ಭ್ರಷ್ಟಾಚಾರ
Last Updated 7 ಮೇ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆ ಹಂತದಲ್ಲಿ ಅಕ್ರಮ, ನೇಮಕಾತಿ ಸಂದರ್ಭದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ. ಕಳ್ಳ ಮಾರ್ಗ ಹಿಡಿದೋ, ಆಸ್ತಿ–ಪಾಸ್ತಿ ಮಾರಿಯೋ ಮೂಟೆಯಲ್ಲಿ ಹೊತ್ತು ತಂದ ನೋಟು ಕೈಗಿಟ್ಟವರಿಗಷ್ಟೆ ಸರ್ಕಾರಿ ಹುದ್ದೆ. ಅರ್ಥಾತ್‌, ಇದು ರಾಜ್ಯ ಸರ್ಕಾರಿ ಹುದ್ದೆಗಳ ‘ಕಾಸ್‌’ಗೀಕರಣ!

ದುಡ್ಡಿದ್ದರಷ್ಟೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಪೊಲೀಸ್‌ ನೇಮಕಾತಿ ಮಂಡಳಿ ನಡೆಸುವ ನೇಮಕಾತಿಗಳಲ್ಲಿ ಹುದ್ದೆ ಗಿಟ್ಟಿಸಿಕೊಳ್ಳಲು ಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಗೊಳ್ಳುತ್ತಿದ್ದಂತೆ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಲ್ಲಿ ಕನಸು ಗರಿಗೆದರಿಕೊಂಡರೆ, ಆಮಿಷ ಒಡ್ಡಿ ಹುದ್ದೆ ಹರಾಜಿಗಿಡುವವರ ಕಿವಿಗಳು ನಿಮಿರಿಕೊಳ್ಳುತ್ತವೆ. ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ಕಳ್ಳ ಮಾರ್ಗಗಳು ತೆರೆದುಕೊಳ್ಳುತ್ತವೆ.

ಬಿ.ಎಸ್‌. ಯಡಿಯೂರಪ್ಪ ಸಂಪುಟದಲ್ಲಿ (2010ರಲ್ಲಿ) ವೈದ್ಯಕೀಯ ಸಚಿವರಾಗಿದ್ದ ರಾಮಚಂದ್ರೇಗೌಡ ವೈದ್ಯಕೀಯ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಕುರ್ಚಿಯಿಂದ ಇಳಿದಿದ್ದು ಹಳೆ ಕಥೆ. ಅಲ್ಲಿಂದ ಆರಂಭಿಸಿ, ಈಗ ಸುದ್ದಿಯಲ್ಲಿರುವ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ವರೆಗಿನ ವಿವಿಧ ಹುದ್ದೆಗಳ ನೇಮಕಾತಿಗಳಲ್ಲಿ ಅಕ್ರಮ, ಅವ್ಯವಹಾರ, ಸ್ವಜನಪಕ್ಷಪಾತ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಭ್ರಷ್ಟಾಚಾರ ಇಲ್ಲದೇ ಯಾವ ಹುದ್ದೆಯ ನೇಮಕವೂ ಆಗುವುದಿಲ್ಲ ಎಂಬುದು ಜಗಜ್ಜಾಹಿರವಾಗಿಬಿಟ್ಟಿದೆ.

‘ಹತ್ತಾರು ಕೋಟಿ ಕೊಟ್ಟು ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರಾಗಿ ಅಧಿಕಾರ ನಡೆಸುವವರು ಸುಮ್ಮನೇ ಕೆಲಸ ಮಾಡುತ್ತಾರೆಯೇ? ಎಲ್ಲ ಪಕ್ಷಗಳ ಅಧಿಕಾರ ಅವಧಿಯಲ್ಲೂ ಭ್ರಷ್ಟಾಚಾರ ನಡೆಯುತ್ತಲೇ ಬಂದಿದೆ. ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ, ಬಿ.ಎಸ್‌. ಯಡಿಯೂರಪ್ಪ ಅವಧಿಯಲ್ಲಿ ಕೆಪಿಎಸ್‌ಸಿಗೆ ಯಾವ ಸದಸ್ಯರನ್ನು ಹಣ ಇಲ್ಲದೇ ನೇಮಕ ಮಾಡಿದ್ದಾರೆ? ಯಾವ ನೇಮಕಾತಿ ಪ್ರಾಮಾಣಿಕವಾಗಿ ನಡೆದಿದೆ’ ಎನ್ನುವುದು ಉದ್ಯೋಗಾಕಾಂಕ್ಷಿಗಳ ಪ್ರಶ್ನೆ.

ಟಿ.ಎಂ. ವಿಜಯಭಾಸ್ಕರ್‌
ಟಿ.ಎಂ. ವಿಜಯಭಾಸ್ಕರ್‌

‘ರಾಜ್ಯದಲ್ಲೂ ಎನ್‌ಟಿಎ ಸೂಕ್ತ’

ಸರ್ಕಾರಿ ಹುದ್ದೆಗಳಿಗೆ ಸಾಮಾನ್ಯ ಅರ್ಹತಾ ಪರೀಕ್ಷೆ (ಸಿಇಟಿ) ನಡೆಸಲು ಕೇಂದ್ರ ಸರ್ಕಾರ ‘ನ್ಯಾಷನಲ್‌ ಟೆಸ್ಟಿಂಗ್‌ ಏಜೆನ್ಸಿ’ (ಎನ್‌ಟಿಎ) ಮಾಡಿದೆ. ರಾಜ್ಯ ಸರ್ಕಾರ ಕೂಡಾ ಅದೇ ಮಾದರಿ ಅಳವಡಿಸಿಕೊಳ್ಳುವುದು ಸೂಕ್ತ. ಅಭ್ಯರ್ಥಿಗಳ ಆಯ್ಕೆಗೆ ಒಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಆ ಪಟ್ಟಿಯನ್ನು ಇತರ ಎಲ್ಲ ಇಲಾಖೆಗಳು ಬಳಸಿಕೊಳ್ಳಬಹುದು. ಪ್ರತಿಯೊಂದು ಇಲಾಖೆ ಪರೀಕ್ಷೆ ಮಾಡುವುದರಿಂದ ಅವ್ಯವಹಾರಗಳಿಗೆ ಅವಕಾಶವಾಗುತ್ತಿದೆ. ಕೇಂದ್ರ ಸರ್ಕಾರ ನಡೆಸುವ ಸಿಇಟಿಗೆ ಎಲ್ಲರೂ ಬೆಂಬಲ ಕೊಡುತ್ತಿದ್ದಾರೆ. 10 ಪರೀಕ್ಷೆಗಳನ್ನು ಮಾಡುವ ಬದಲು 2–3 ಪರೀಕ್ಷೆ ಮಾಡಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬಹುದು. ಈ ವ್ಯವಸ್ಥೆಯಿಂದ ಕಡಿಮೆ ಸಂಖ್ಯೆಯ ಪರೀಕ್ಷೆಗಳ ಕಡೆಗೆ ಹೆಚ್ಚಿನ ಗಮನ ಕೊಡಬಹುದು. ಅಲ್ಲದೆ, ಯಾವುದೇ ಲೋಪದೋಷ ಇಲ್ಲದಂತೆ ನೇಮಕಾತಿ ಮಾಡಬಹುದು. ಪರೀಕ್ಷೆಗಳ ಸಂಖ್ಯೆ ಹೆಚ್ಚಿದಂತೆ ಲೋಪದೋಷಗಳು ಹೆಚ್ಚುತ್ತದೆ, ಸಮಸ್ಯೆಗಳಾಗುತ್ತಿವೆ.

- ಟಿ.ಎಂ. ವಿಜಯಭಾಸ್ಕರ್‌, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ

ನ್ಯಾ. ಎನ್‌. ಸಂತೋಷ್‌ ಹೆಗ್ಡೆ
ನ್ಯಾ. ಎನ್‌. ಸಂತೋಷ್‌ ಹೆಗ್ಡೆ

‘ದುರಾಸೆಗೆ ಮದ್ದಿಲ್ಲ, ನಿಯಂತ್ರಣ ಅಸಾಧ್ಯ’

ಅಕ್ರಮ, ಭ್ರಷ್ಟಾಚಾರವನ್ನು ಕಾನೂನಿನಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಅದಕ್ಕೆ ಸಾಮಾಜಿಕ ಬದಲಾವಣೆ ಬರಬೇಕು. ಇದರ ಹಿನ್ನೆಲೆ ದುರಾಸೆ. ದುರಾಸೆಗೆ ಮದ್ದಿಲ್ಲ. ದುರಾಸೆ ಯಾವ ಕಾನೂನಿಗೂ ಹೆದರಲ್ಲ. ಯಾವ ಕಾನೂನು ಇದ್ದರೂ ಅದನ್ನು ಮುರಿಯುವ, ದಾರಿ ತಪ್ಪಿಸುವ ಯತ್ನ ಆಗುತ್ತಿದೆ. ನೇಮಕಾತಿ ಪ್ರಕ್ರಿಯೆಯ ಎಲ್ಲ ಹಂತಗಳು ಪ್ರಾಮಾಣಿಕವಾಗಿ ನಡೆಯಬೇಕು. ಈ ವಿಷಯದ ಬಗ್ಗೆ ಗಂಭೀರವಾದ ಚರ್ಚೆ ನಡೆಯಬೇಕು. ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ ದೊಡ್ಡ ಚಕ್ರವ್ಯೂಹ. ತೃಪ್ತಿ ಮತ್ತು ಮಾನವೀಯತೆ ಎಂಬ ಮೌಲ್ಯಗಳ ಕುಸಿತವೇ ಎಲ್ಲದಕ್ಕೂ ಕಾರಣ. ಹಣ ಇದ್ದರೆ ಅಧಿಕಾರ, ಅಧಿಕಾರವಿದ್ದರೆ ಹಣ ಬರುತ್ತದೆ ಎಂಬ ಭಾವನೆಯಿದೆ. ಸಾಮಾಜಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದಿದ್ದರೆ, ಯಾವ ಕಾನೂನಿನಿಂದಲೂ ವ್ಯವಸ್ಥೆಯ ಸುಧಾರಣೆ ಸಾಧ್ಯವಿಲ್ಲ. ಲಂಚ ಕೊಡುವವನೂ, ತೆಗೆದುಕೊಂಡವನೂ ಭ್ರಷ್ಟ. ಹಣ ಕೊಟ್ಟು ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯನಾದವ ‘ಪ್ರಾಮಾಣಿಕ’ನಾಗಿ ಇರಲು ಸಾಧ್ಯವೇ ಇಲ್ಲ.

- ನ್ಯಾ. ಎನ್‌. ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ

ಎಂ.ಆರ್. ಶ್ರೀನಿವಾಸಮೂರ್ತಿ
ಎಂ.ಆರ್. ಶ್ರೀನಿವಾಸಮೂರ್ತಿ

‘ಸ್ವತಂತ್ರ ಸಂಸ್ಥೆ, ಹೊಸ ವಿಧಾನ ಅಗತ್ಯ’

ನೇಮಕಾತಿ ಪ್ರಕ್ರಿಯೆ ಸ್ವತಂತ್ರವಾಗಿ ನಡೆಯಬೇಕು. ಪ್ರತಿಯೊಂದು ಇಲಾಖೆಗಳು ಕೂಡಾ ತಮ್ಮ ತಮ್ಮ ನಿಯಮಗಳನ್ನು ಒಂದು ಸಂಸ್ಥೆಗೆ ವಹಿಸಿಕೊಟ್ಟು ಆ ಸಂಸ್ಥೆಯವರು ಸ್ವತಂತ್ರವಾಗಿ ಕೆಲಸ ಮಾಡುವಂಥ ವಾತಾವರಣ ಕಲ್ಪಿಸಬೇಕು. ಕೆಪಿಎಸ್‌ಸಿ ರಚನೆಯಾಗಿದ್ದು ಅದೇ ಉದ್ದೇಶದಿಂದ. ಆದರೆ, ಆ ಸಂಸ್ಥೆ ಸ್ವತಂತ್ರವಾಗಿ ಕೆಲಸ ಮಾಡಲು ಕೆಲವು ಬಾರಿ ತೊಂದರೆಗಳಾಗುತ್ತಿವೆ. ಹಾಗೆಂದು, ನೇಮಕಾತಿಗೆ ಸ್ವತಂತ್ರ ಸಂಸ್ಥೆ ಇದ್ದರೆ, ಉದ್ಯೋಗ ಸೌಧ ಕಟ್ಟಿಕೊಂಡು ಕುಳಿತರೆ ಸಾಲದು. ಅಲ್ಲಿರುವವರಿಗೆ ಪರಿಣತಿಯೂ ಬೇಕು. ಈಗ ಉದ್ಯೋಗಾಕಾಂಕ್ಷಿಗಳು ಲಕ್ಷಾಂತರ ಮಂದಿ ಇರುವುದರಿಂದ ಮತ್ತು ಕೆಲಸ ಮಾಡುವ ರೀತಿಯೂ ಬದಲಾಗಿರುವುದರಿಂದ ಪರೀಕ್ಷೆಯಿಂದ ಮಾತ್ರ ಆಯ್ಕೆ ಮಾಡುವ ವಿಧಾನ ಈಗಿನ ಪರಿಸ್ಥಿತಿಗೆ ಸಾಲದು. ಮನೋವೈಜ್ಞಾನಿಕವಾದ, ಕೌಶಲ ಪರೀಕ್ಷೆಗಳ ಹೊಸ ವಿಧಾನ, ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ ಆಯ್ಕೆ ಪ್ರಕ್ರಿಯೆ ನಡೆಸಬೇಕು.

- ಎಂ.ಆರ್. ಶ್ರೀನಿವಾಸಮೂರ್ತಿ, ಮಾಜಿ ಅಧ್ಯಕ್ಷ, ವೇತನ ಆಯೋಗ

ಕಳ್ಳ ಮಾರ್ಗಗಳು: ನೇಮಕಾತಿ ಅಕ್ರಮಗಳಲ್ಲಿನ ಕಳ್ಳ ಮಾರ್ಗಗಳಲ್ಲಿ ಗೌಪ್ಯ ವಿಭಾಗದ ಅಧಿಕಾರಿ, ಸಿಬ್ಬಂದಿಯಿಂದ ಮುದ್ರಣ ಹಂತದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮೊದಲಿನದು. ಮನೆಯೊಳಗಿನ ಕಳ್ಳರಿವರು. ಕೆಪಿಎಸ್‌ಸಿ ನಿಗದಿಪಡಿಸಿದ್ದ 2020ರಲ್ಲಿ ನಡೆಸಿದ ಎಫ್‌ಡಿಎ ನೇಮಕಾತಿಯ ಪ್ರಶ್ನೆ ಪತ್ರಿಕೆ, ಪರೀಕ್ಷೆಯ ಹಿಂದಿನ ದಿನ ಸೋರಿಕೆಯಾಗಿತ್ತು. ಎಫ್‌ಡಿಎ ಪರೀಕ್ಷೆ ಬರೆಯಲು ಮುಂದಾಗಿದ್ದ ಕೆಪಿಎಸ್‌ಸಿಯ ಎಸ್‌ಡಿಎಯನ್ನು ನಂಬಿ, ಅಲ್ಲಿನ ಪರೀಕ್ಷಾ ನಿಯಂತ್ರಕ ವಿಭಾಗದ ಸ್ಟೆನೋಗ್ರಾಫರ್‌ ಪ್ರಶ್ನೆಪತ್ರಿಕೆ ಕದ್ದು ಪೆನ್‌ಡ್ರೈವ್‌ಗೆ ಹಾಕಿ ಕೊಟ್ಟಿದ್ದಳು. ಆ ಖದೀಮ ಇತರ ಅಭ್ಯರ್ಥಿಗಳನ್ನು ಸಂಪರ್ಕಿಸಿ ಡೀಲ್‌ ಕುದುರಿಸಿದ್ದ!

'ಪ್ರಶ್ನೆಪತ್ರಿಕೆ ಸೋರಿಕೆ‌ ಪಿತಾಮಹ', ‘ಕಿಂಗ್‌ ಪಿನ್‌’ ಎಂದೆಲ್ಲ ಕರೆಸಿಕೊಂಡಿದ್ದ ಶಿವಕುಮಾರಯ್ಯ ಅಲಿಯಾಸ್‌ ಗುರೂಜಿ (ಇತ್ತೀಚೆಗೆ ಕೋವಿಡ್‌ನಿಂದ ಮೃತಪಟ್ಟಿದ್ದಾನೆ) ದ್ವಿತೀಯ ಪಿಯುಸಿ, ಪೊಲೀಸ್‌ ಕಾನ್‌ಸ್ಟೆಬಲ್‌, ಬಿಎಂಟಿಸಿ (ಚಾಲಕ ಹಾಗೂ ನಿರ್ವಾಹಕ), ಪಿಎಸ್ಐ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ ಲಕ್ಷಾಂತರ ಹಣ ಗಳಿಸಿದ್ದ. ಅಧಿಕಾರಿಗಳಿಗೆ ಆಮಿಷವೊಡ್ಡಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಆತನ ವಿರುದ್ಧ ಬೆಂಗಳೂರು, ತುಮಕೂರು ಸೇರಿ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ. ಸರ್ಕಾರ ಆತನ ಪತ್ತೆಗಾಗಿ ₹ 50 ಸಾವಿರ ಬಹುಮಾನ ಘೋಷಿಸಿತ್ತು!

ಅತ್ಯಾಧುನಿಕ ತಂತ್ರಜ್ಞಾನ (ಬ್ಲೂ ಟೂತ್) ಬಳಸಿ ಪರೀಕ್ಷಾ ಅಕ್ರಮ ಇತ್ತೀಚಿನ ಬೆಳವಣಿಗೆ. ಕೆಪಿಎಸ್‌ಸಿ ಇತ್ತೀಚೆಗೆ ನಡೆಸಿದ ಬಹುತೇಕ ಪರೀಕ್ಷೆಗಳಲ್ಲಿ ಬ್ಲೂ ಟೂತ್‌ ಬಳಕೆಯಾದ ಅನುಮಾನಗಳಿವೆ. ಈ ರೀತಿ ಅಕ್ರಮದಲ್ಲಿ, ನೇಮಕಾತಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ, ಅಕ್ರಮ ಎಸಗಲು ಅವಕಾಶವಾಗುವ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿ ಅಭ್ಯರ್ಥಿಗಳನ್ನು ಆ ಕೇಂದ್ರಕ್ಕೆ ಹಾಕಿಸಿಕೊಳ್ಳವ ಪ್ರಯತ್ನ ಮೊದಲು ನಡೆಯುತ್ತದೆ. ಪ್ರಶ್ನೆಪತ್ರಿಕೆ ಸೋರಿಕೆಯಾದ ಕಾರಣಕ್ಕೆ ನಡೆದ ಎಫ್‌ಡಿಎ ಮರುಪರೀಕ್ಷೆಯ ಆಯ್ಕೆ ಪಟ್ಟಿ ಇತ್ತೀಚೆಗೆ ಪ್ರಕಟವಾಗಿದ್ದು, ಆ ಪಟ್ಟಿಯಲ್ಲಿರುವ 200ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ತಂತ್ರಜ್ಞಾನ ಬಳಸಿ ಆಯ್ಕೆಯಾಗಿದ್ದಾರೆ ಎನ್ನುವ ಆರೋಪ ಅನೇಕರದ್ದು.

ಎಸ್‌ಡಿಎ, ಜಲಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್ 550 ಹುದ್ದೆಗಳಿಗೆ (2017ರಲ್ಲಿ ನಡೆದಿದ್ದ ಪರೀಕ್ಷೆ) ಕಲಬುರಗಿ ಜಿಲ್ಲೆಯೊಂದರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಂದೇ ಗ್ರಾಮದ 10ಕ್ಕೂ ಹೆಚ್ಚು ಮಂದಿ ಆಯ್ಕೆಯಾಗಿರುವುದು ಅನುಮಾನಗಳಿಗೆ ಕಾರಣವಾಗಿದೆ. ಬ್ಲೂ ಟೂತ್ ಬಳಸಿ ಆಯ್ಕೆಯಾದ ಕೆಲವರು ಬಳಿಕ ಆ ಸಾಧನ ಬಳಸುವ ದಂಧೆಯ ‘ಕಿಂಗ್‌ಪಿನ್’ಗಳಾಗಿದ್ದಾರೆ. ಪಿಎಸ್‌ಐ ಹಗರಣದಲ್ಲಿ ಸಿಕ್ಕಿಬಿದ್ದಿರುವ ಸಹಾಯಕ ಎಂಜಿನಿಯರ್‌ ಮಂಜುನಾಥ್ ಮೇಳಕುಂದಿ ಅಂಥವರಲ್ಲೊಬ್ಬ ಎನ್ನುವ ಸಂದೇಹವಿದೆ.

ಕಲ್ಯಾಣ ಕರ್ನಾಟಕ ಭಾಗಕ್ಕೆ ಸಹಾಯಕ ಎಂಜಿನಿಯರ್ 181 ಹುದ್ದೆಗಳ ಆಯ್ಕೆಗೆ ಕೆಪಿಎಸ್‌ಸಿ 2020ರಲ್ಲಿ ನಡೆಸಿದ ಪರೀಕ್ಷೆಯಲ್ಲಿ ಬ್ಲೂ ಟೂತ್‌ ಬಳಸಿ ಹಲವು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರಿಂದಲೇ, ಈ ಹುದ್ದೆಯಲ್ಲಿ ಹೆಚ್ಚಿನ ಕಟ್ ಆಫ್ ಅಂಕ ನಿಗದಿಯಾಗಿದೆ ಎನ್ನುವ ಅನುಮಾನ ಅಭ್ಯರ್ಥಿಗಳದ್ದು, ಅದೇ ರೀತಿ ಮಹಾನಗರಪಾಲಿಕೆಗಳಿಗೆ ಎಂಜಿನಿಯರ್‌ (2017), ಅಬಕಾರಿ ಸಬ್ ಇನ್‌ಸ್ಪೆಕ್ಟರ್‌ (2017 ಮತ್ತು 2020) ನೇಮಕಾತಿಯಲ್ಲಿಯೂ ಅತಿ ಹೆಚ್ಚಿನ ಕಟ್ ಆಫ್ ಅಂಕ ನಿಗದಿಯಾಗಿತ್ತು. ಅಕ್ರಮ ಎಸಗದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಇಷ್ಟೊಂದು ಅಂಕ ಗಳಿಕೆ ಸಾಧ್ಯವೇ ಇಲ್ಲ ಎನ್ನುವುದು ಇತರ ಪರೀಕ್ಷಾರ್ಥಿಗಳ ವಾದ. ಹೀಗೆ ಹಲವು ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂ ಟೂತ್ ಬಳಕೆ ಆಗಿದ್ದರೂ ಸಾಕ್ಷ್ಯ ಸಿಗದೆ ಮುಚ್ಚಿ ಹೋಗಿವೆ.

ಹಾಗೆಂದು, ಬ್ಲೂ ಟೂತ್ ದಂಧೆ ಕಲಬುರಗಿಗೆ (ಅಫಜಲಪುರ ಗ್ಯಾಂಗ್) ಮಾತ್ರ ಸೀಮಿತವಾಗಿಲ್ಲ. ಬೀದರ್‌ (ಭಾಲ್ಕಿ), ವಿಜಯಪುರ, ಧಾರವಾಡ, ಬೆಂಗಳೂರು, ದಾವಣಗೆರೆ (ಹರಪನಹಳ್ಳಿ ಗ್ಯಾಂಗ್), ಬೆಳಗಾವಿ (ಗೋಕಾಕ್ ಗ್ಯಾಂಗ್), ರಾಯಚೂರು (ಮಾನ್ವಿ), ತುಮಕೂರು, ಹಾಸನ, ಮಂಡ್ಯ, ಬಾಗಲಕೋಟೆ–ಹೀಗೆ ಹಲವು ಜಿಲ್ಲೆಗಳಿಗೂ ಈ ಜಾಲ ಹರಡಿದೆ. ಕೆಲವು ಪರೀಕ್ಷೆಗಳು ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವುದರಿಂದ ಅಕ್ರಮ ಸಾಧ್ಯತೆ ಹೆಚ್ಚು. ಸಿಸಿಟಿವಿ ಕ್ಯಾಮೆರಾ, ಪ್ರವೇಶದ್ವಾರದಲ್ಲಿ ಕಟ್ಟುನಿಟ್ಟಿನ ಪರಿಶೀಲನಾ ವ್ಯವಸ್ಥೆ ಇಲ್ಲದಿರುವುದು ಇಂಥ ಅಕ್ರಮಕ್ಕೆ ರಹದಾರಿ.

ಪರೀಕ್ಷಾ ಕೇಂದ್ರಗಳಲ್ಲಿ ಪ್ರಾಂಶುಪಾಲರ ಕೊಠಡಿಯಲ್ಲಿ, ಮೇಲ್ವಿಚಾರಕರ ಸಹಾಯದಿಂದ ಒಎಂಆರ್‌ ಶೀಟ್ ತಿದ್ದುಪಡಿ, ಮೇಲ್ವಿಚಾರಕರನ್ನು ಬುಕ್ ಮಾಡಿ ಸಾಮೂಹಿಕ ನಕಲು ಮಾಡಿ ಸಾಕಷ್ಟು ಅಭ್ಯರ್ಥಿಗಳು ಆಯ್ಕೆಯಾದ ನಿದರ್ಶನಗಳೂ ಇವೆ. ವಿಜಯಪುರದಲ್ಲಿ ಎಫ್‌ಡಿಎ ಪರೀಕ್ಷೆಯಲ್ಲಿ ಬಸ್ ಟಿಕೆಟ್ ಹಿಂದೆ ‘ಡಿ’ ಗ್ರೂಪ್ ನೌಕರರು ಸರಿ ಉತ್ತರ (ಕೀ ಉತ್ತರ) ಬರೆದು ತಲುಪಿಸಿದ್ದು ಸುದ್ದಿಯಾಗಿತ್ತು. ಅಭ್ಯರ್ಥಿ ಸಿಕ್ಕಿಬಿದ್ದರೂ ಪರೀಕ್ಷಾ ಕೇಂದ್ರವಿರುವ ಸಂಸ್ಥೆಯವರು ಪ್ರಕರಣ ಹೊರಗೆ ಬರದಂತೆ ಮುಚ್ಚಿ ಹಾಕಿದ ಆರೋಪಗಳೂ ಇವೆ.

ಸಚಿವರ ಮತ್ತು ಶಾಸಕರ ಭ್ರಷ್ಟಾಚಾರವನ್ನು ಬದಿಗಿಟ್ಟು ನೋಡಿದರೆ, ನಿತ್ಯದ ಭ್ರಷ್ಟಾಚಾರ ಮತ್ತು ದುರಾಡಳಿತದಲ್ಲಿ ನೇರ ಪಾತ್ರಧಾರಿಗಳು ಅಧಿಕಾರಿಗಳೇ. ಈ ಅಧಿಕಾರಿಗಳು ಕೆಲಸಕ್ಕೆ ಸೇರಿದ ಮೊದಲ ದಿನದಿಂದಲೇ ‘ಭ್ರಷ್ಟಾಚಾರ ಮಾಡಲೇಬೇಕು, ಲಂಚ ತೆಗೆದುಕೊಳ್ಳಲೇಬೇಕು. ಕೆಳಹಂತದ ಸಿಬ್ಬಂದಿಯಿಂದ ಮಾಮೂಲಿ ಪಡೆಯಲೇಬೇಕು’ ಎನ್ನುವ ಮನಸ್ಥಿತಿಗೆ ಬಂದಿದ್ದರೆ ಅದಕ್ಕೆ ಮುಖ್ಯ ಕಾರಣ ನೇಮಕಾತಿ ದಂಧೆ. ಅದಕ್ಕೆ ಕೈಜೋಡಿಸುವುದು ನೇಮಕಾತಿ ಪ್ರಾಧಿಕಾರಗಳು ಮತ್ತು ರಾಜ್ಯ ಸರ್ಕಾರ.

‘ಕೆಇಎ’ಗೂ ಅಂಟಿದ ಕಳಂಕ

ಕೆಪಿಎಸ್‌ಸಿ ಮೂಲಕ ನೇಮಕಾತಿ ವಿಳಂಬವಾಗುತ್ತದೆ ಎಂಬ ಕಾರಣ ಮುಂದಿಟ್ಟು ‘ವಿಶೇಷ ನೇಮಕಾತಿ ನಿಯಮ’ದ ನೆರಳಿನಡಿ ಕೆಲವು ಇಲಾಖೆಗಳು ಇತ್ತೀಚೆಗೆ ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ’ದ (ಕೆಇಎ) ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿವೆ. ತ್ವರಿತ, ಪಾರದರ್ಶಕ ನೇಮಕಾತಿ ಆಗಬೇಕೆಂಬ ಕಾರಣಕ್ಕೆ ತನ್ನ ನಿಯಂತ್ರಣದಲ್ಲೇ ಇರುವ ಪ್ರಾಧಿಕಾರದ ಮೂಲಕ ‘ಅರ್ಹ’ರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುವುದು ಸರ್ಕಾರ ನೀಡುವ ಸಮರ್ಥನೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ 1,193 ಹುದ್ದೆಗಳ ಭರ್ತಿಗೆ 2015ರಲ್ಲಿ ಅಧಿಸೂಚನೆ ಹೊರಡಿಸಿದ್ದ ಕೆಇಎ, 4 ವರ್ಷ ಹಲವು ಬಾರಿ ಪ್ರಕ್ರಿಯೆ ಆರಂಭಿಸಿ, ನಿಲ್ಲಿಸುವ ಚೆಲ್ಲಾಟವಾಡಿತ್ತು. ಕೋರ್ಟ್‌ ಮೆಟ್ಟಿಲೇರಿದ್ದ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು 2020ರಲ್ಲಿ. ಎಚ್‌.ಕೆ. ಪಾಟೀಲರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) 815, ಗ್ರಾಮ ಪಂಚಾಯತಿ ಕಾರ್ಯದರ್ಶಿ 809 ಹುದ್ದೆಗಳಿಗೆ ಕೆಇಎ ನಡೆಸಿದ್ದ ನೇಮಕಾತಿ ಗೊಂದಲ ನ್ಯಾಯಾಲಯದ ಮೂಲಕ ಪರಿಹಾರ ಕಂಡಿತ್ತು!

ಸಮ್ಮಿಶ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್‌.ಡಿ. ರೇವಣ್ಣ, 990 ಎಂಜಿನಿಯರ್‌ಗಳ ನೇಮಕಾತಿಯನ್ನು ಕೆಇಎಗೆ ವಹಿಸಿದ್ದರು. 2020ರ ಜೂನ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಕೂಡಾ ನಡೆದಿತ್ತು. ಆ ಬೆನ್ನಲ್ಲೆ, ಭಾರಿ ಅವ್ಯವಹಾರದ ವಾಸನೆ ದಟ್ಟವಾಗಿ ಹರಡಿತ್ತು. ಆದರೆ, ನಂತರ ಅಧಿಕಾರಕ್ಕೆ ಬಂದ ಬಿ.ಎಸ್. ಯಡಿಯೂರಪ್ಪ ಸರ್ಕಾರ ಆ ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಪಡಿಸಿ, ಕೆಪಿಎಸ್‌ಸಿಗೆ ವಹಿಸಿದೆ. ಇತ್ತೀಚೆಗಷ್ಟೆ ಕೆಪಿಎಸ್‌ಸಿ ಈ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದು, ಮೌಲ್ಯಮಾಪನ ನಡೆಯುತ್ತಿದೆ. ಈ ಹಂತದಲ್ಲಿ, ಈ ಪರೀಕ್ಷೆಯಲ್ಲಿಯೂ ಅಭ್ಯರ್ಥಿಗಳು ಬ್ಲೂ ಟೂತ್‌ ಬಳಸಿದ ಆರೋಪ ಕೇಳಿಬಂದಿದೆ. ಕೆಇಎಗೆ ವಹಿಸಿರುವ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೂ ಕಳಂಕ ತಟ್ಟಿದೆ. ಕನ್ನಡ ಪ್ರಶ್ನೆಪತ್ರಿಕೆಯಲ್ಲಿನ ವ್ಯಾಕರಣ ದೋಷ, ಅರ್ಥ–ಅನರ್ಥಗಳ ಗೊಂದಲ, ಪರೀಕ್ಷೆಗೆ ಕೆಲವೇ ಗಂಟೆ ಮೊದಲು ಭೂಗೋಳ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆಯ ಕಂಟಕ ಸುತ್ತಿಕೊಂಡಿದೆ.

ಕೆಪಿಎಸ್‌ಸಿ ಎಂದರೆ ಭ್ರಷ್ಟಚಾರದ ಕೂಪ

ಕೆಪಿಎಸ್‌ಸಿ ಮೂಲಕ ಸರ್ಕಾರದ ನಾನಾ ಹುದ್ದೆಗಳಿಗೆ 1998, 1999, 2004, 2011ನೇ ಸಾಲಿನಲ್ಲಿ ಒಟ್ಟು 989 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ ಹಗರಣಗಳ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿವೆ. ಕೆಪಿಎಸ್‌ಸಿಯ ಅಧ್ಯಕ್ಷರಾಗಿದ್ದವರೊಬ್ಬರು ಜೈಲಿಗೂ ಹೋಗಿದ್ದರು. ಕಳಂಕದ ನಂಟು 2015ರ ಕೆಎಎಸ್‌ ನೇಮಕಾತಿಯನ್ನೂ ಬಿಟ್ಟಿಲ್ಲ. ನೇಮಕಾತಿಗಳಲ್ಲಿ ಆದ ಲೋಪ ಸರಿಪಡಿಸುವಂತೆ ಕೋರ್ಟ್‌ಗಳು ನೀಡಿದ್ದ ತೀರ್ಪುಗಳೂ ಅನುಷ್ಠಾನಕ್ಕೆ ಬಂದಿಲ್ಲ. 2011ನೇ ಸಾಲಿನ ಆಯ್ಕೆ ಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದರೂ, ಕಾಯ್ದೆಯ ರೂಪಿಸಿ ಸರ್ಕಾರ ಅಕ್ರಮಕ್ಕೆ ‘ಸಕ್ರಮ’ದ ಮುದ್ರೆ ಒತ್ತಿದೆ.

‘ಆಯೋಗದ ಅಧ್ಯಕ್ಷ, ಸದಸ್ಯರ ನೇಮಕ ‘ರಾಜಕೀಯ' ಹಿನ್ನೆಲೆ ಹೊಂದಿರುವುದರಿಂದ ನೇಮಕಾತಿಯಲ್ಲಿ ‘ರಾಜೀ' ವ್ಯವಹಾರಗಳು ನಿರೀಕ್ಷಿತ. ಹಣ, ಸ್ವಜನಪಕ್ಷಪಾತ ಮತ್ತು ಪ್ರಭಾವದ ಕಾರಣಕ್ಕಾಗಿಯೇ ಈ ಅವ್ಯವಹಾರಗಳು ನಡೆಯುತ್ತವೆ. ಅಲ್ಲದೆ, ಈ ಅಪಕೃತ್ಯಗಳಲ್ಲಿ ಭಾಗಿಯಾದವರು ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ ಎಸಗುತ್ತಾರೆ. ಎಸ್.ಎಂ. ಕೃಷ್ಣ, ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ ಆಡಳಿತಾವಧಿಯಲ್ಲಿ ಈ ಎಲ್ಲ ಕೃತ್ಯಗಳು ನಡೆದಿವೆ. ‘ಪುಟ್ಟಣ್ಣ (ಈಗ ವಿಧಾನ ಪರಿಷತ್‌ ಬಿಜೆಪಿ ಸದಸ್ಯ) ಜೆಡಿಎಸ್‌ನಲ್ಲಿದ್ದಾಗ ನನ್ನ ಮೂಲಕ ಅವರ ಕುಟುಂಬದ 10ರಿಂದ 12 ಜನರಿಗೆ ಕೆಪಿಎಸ್‌ಸಿ ಮೂಲಕ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದಾರೆ’ ಎಂದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದ ಮಾತೊಂದು ಕೆಪಿಎಸ್‌ಸಿಯಲ್ಲಿ ವಶೀಲಿ ಕೆಲಸಗಳು ನಡೆಯುತ್ತವೆ ಎನ್ನುವುದಕ್ಕೆ ಪುಷ್ಟಿ. ಅಧಿಕಾರಸ್ಥರ ತಾಳಕ್ಕೆ ತಕ್ಕಂತೆ ಕೆಪಿಎಸ್‌ಸಿ ಕುಣಿಯುತ್ತದೆ ಎನ್ನುವುದೂ ಇದರಿಂದ ಸ್ಪಷ್ಟ. ಇತ್ತೀಚಿನ ವರ್ಷಗಳಲ್ಲಂತೂ ಕೆಪಿಎಸ್‌ಸಿಯಲ್ಲಿ ಕಳಂಕರಹಿತವಾಗಿ ಯಾವೊಂದು ನೇಮಕವೂ ನಡೆದ ಉದಾಹರಣೆ ಇಲ್ಲ. ಭ್ರಷ್ಟಮಾರ್ಗದಿಂದ ನೇಮಕಗೊಂಡ ಅಧಿಕಾರಿಗಳನ್ನು ಮತ್ತು ಆಯ್ಕೆ ಮಾಡಿದ ಭ್ರಷ್ಟರನ್ನು ಸರ್ಕಾರ ರಕ್ಷಿಸುತ್ತಿದೆ. ಹೀಗಾಗಿ, ಅರ್ಹ, ಪ್ರಾಮಾಣಿಕ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಮುಂದುವರೆಯುತ್ತದೆ’ ಎನ್ನುತ್ತಾರೆ ಕೆಪಿಎಸ್‌ಸಿ ಮಾಜಿ ಸದಸ್ಯರೊಬ್ಬರು.

'ಭ್ರಷ್ಟಾಚಾರದ ಕೂಪ’ದಿಂದ ಕೆಪಿಎಸ್‌ಸಿಯನ್ನು ಹೊರತಂದು, ಸುಧಾರಣೆ ತರಲು ಅಗತ್ಯ ಶಿಫಾರಸುಗಳನ್ನು ಮಾಡಲು ಸಿದ್ದರಾಮಯ್ಯ ಸರ್ಕಾರ (2013) ಯುಪಿಎಸ್‌ಸಿ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಪಠ್ಯಕ್ರಮ, ಪರೀಕ್ಷಾ ಪದ್ಧತಿ, ಸಂದರ್ಶನ ಪ್ರಕ್ರಿಯೆ ಸೇರಿ ಎಲ್ಲ ಹಂತಗಳಲ್ಲಿ ಸುಧಾರಣೆಗಳಿಗೆ ಶಿಫಾರಸು ಮಾಡಿತ್ತು. ಆದರೆ, ಆ ಶಿಫಾರಸುಗಳಲ್ಲಿ ಸರ್ಕಾರ ಮತ್ತು ಕೆಪಿಎಸ್‌ಸಿ ತನಗೆ ಯಾವುದೋ ಬೇಕೋ ಅವುಗಳನ್ನು ಮಾತ್ರ ಆಯ್ದುಕೊಂಡು ಜಾರಿಗೊಳಿಸಿದೆ. ಹೀಗಾಗಿ, ವಿವಾದಗಳು ಆಯೋಗವನ್ನು ಬೆನ್ನು ಬಿಡದೇ ಕಾಡುತ್ತಿವೆ!

ಕೆಪಿಎಸ್‌ಸಿ ಎಂದರೆ ಭ್ರಷ್ಟಚಾರದ ಕೂಪ

ಕೆಪಿಎಸ್‌ಸಿ ಮೂಲಕ ಸರ್ಕಾರದ ನಾನಾ ಹುದ್ದೆಗಳಿಗೆ 1998, 1999, 2004, 2011ನೇ ಸಾಲಿನಲ್ಲಿ ಒಟ್ಟು 989 ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಗಳಲ್ಲಿ ನಡೆದಿದೆ ಎನ್ನಲಾದ ಭಾರಿ ಭ್ರಷ್ಟಾಚಾರ, ಅವ್ಯವಹಾರ, ಅಕ್ರಮ ಹಗರಣಗಳ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸಿವೆ. ಕೆಪಿಎಸ್‌ಸಿಯ ಅಧ್ಯಕ್ಷರಾಗಿದ್ದವರೊಬ್ಬರು ಜೈಲಿಗೂ ಹೋಗಿದ್ದರು. ಕಳಂಕದ ನಂಟು 2015ರ ಕೆಎಎಸ್‌ ನೇಮಕಾತಿಯನ್ನೂ ಬಿಟ್ಟಿಲ್ಲ. ನೇಮಕಾತಿಗಳಲ್ಲಿ ಆದ ಲೋಪ ಸರಿಪಡಿಸುವಂತೆ ಕೋರ್ಟ್‌ಗಳು ನೀಡಿದ್ದ ತೀರ್ಪುಗಳೂ ಅನುಷ್ಠಾನಕ್ಕೆ ಬಂದಿಲ್ಲ. 2011ನೇ ಸಾಲಿನ ಆಯ್ಕೆ ಪಟ್ಟಿಯನ್ನು ಹೈಕೋರ್ಟ್‌ ರದ್ದುಪಡಿಸಿದ್ದರೂ, ಕಾಯ್ದೆಯ ರೂಪಿಸಿ ಸರ್ಕಾರ ಅಕ್ರಮಕ್ಕೆ ‘ಸಕ್ರಮ’ದ ಮುದ್ರೆ ಒತ್ತಿದೆ.

‘ಆಯೋಗದ ಅಧ್ಯಕ್ಷ, ಸದಸ್ಯರ ನೇಮಕ ‘ರಾಜಕೀಯ' ಹಿನ್ನೆಲೆ ಹೊಂದಿರುವುದರಿಂದ ನೇಮಕಾತಿಯಲ್ಲಿ ‘ರಾಜೀ' ವ್ಯವಹಾರಗಳು ನಿರೀಕ್ಷಿತ. ಹಣ, ಸ್ವಜನಪಕ್ಷಪಾತ ಮತ್ತು ಪ್ರಭಾವದ ಕಾರಣಕ್ಕಾಗಿಯೇ ಈ ಅವ್ಯವಹಾರಗಳು ನಡೆಯುತ್ತವೆ. ಅಲ್ಲದೆ, ಈ ಅಪಕೃತ್ಯಗಳಲ್ಲಿ ಭಾಗಿಯಾದವರು ಪ್ರಜ್ಞಾಪೂರ್ವಕವಾಗಿ, ವ್ಯವಸ್ಥಿತವಾಗಿ ಎಸಗುತ್ತಾರೆ. ಎಸ್.ಎಂ. ಕೃಷ್ಣ, ಧರಂಸಿಂಗ್, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ ಆಡಳಿತಾವಧಿಯಲ್ಲಿ ಈ ಎಲ್ಲ ಕೃತ್ಯಗಳು ನಡೆದಿವೆ. ‘ಪುಟ್ಟಣ್ಣ (ಈಗ ವಿಧಾನ ಪರಿಷತ್‌ ಬಿಜೆಪಿ ಸದಸ್ಯ) ಜೆಡಿಎಸ್‌ನಲ್ಲಿದ್ದಾಗ ನನ್ನ ಮೂಲಕ ಅವರ ಕುಟುಂಬದ 10ರಿಂದ 12 ಜನರಿಗೆ ಕೆಪಿಎಸ್‌ಸಿ ಮೂಲಕ ಕ್ಲಾಸ್ ಒನ್ ಹುದ್ದೆ ಕೊಡಿಸಿದ್ದಾರೆ’ ಎಂದು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದ ಮಾತೊಂದು ಕೆಪಿಎಸ್‌ಸಿಯಲ್ಲಿ ವಶೀಲಿ ಕೆಲಸಗಳು ನಡೆಯುತ್ತವೆ ಎನ್ನುವುದಕ್ಕೆ ಪುಷ್ಟಿ. ಅಧಿಕಾರಸ್ಥರ ತಾಳಕ್ಕೆ ತಕ್ಕಂತೆ ಕೆಪಿಎಸ್‌ಸಿ ಕುಣಿಯುತ್ತದೆ ಎನ್ನುವುದೂ ಇದರಿಂದ ಸ್ಪಷ್ಟ. ಇತ್ತೀಚಿನ ವರ್ಷಗಳಲ್ಲಂತೂ ಕೆಪಿಎಸ್‌ಸಿಯಲ್ಲಿ ಕಳಂಕರಹಿತವಾಗಿ ಯಾವೊಂದು ನೇಮಕವೂ ನಡೆದ ಉದಾಹರಣೆ ಇಲ್ಲ. ಭ್ರಷ್ಟಮಾರ್ಗದಿಂದ ನೇಮಕಗೊಂಡ ಅಧಿಕಾರಿಗಳನ್ನು ಮತ್ತು ಆಯ್ಕೆ ಮಾಡಿದ ಭ್ರಷ್ಟರನ್ನು ಸರ್ಕಾರ ರಕ್ಷಿಸುತ್ತಿದೆ. ಹೀಗಾಗಿ, ಅರ್ಹ, ಪ್ರಾಮಾಣಿಕ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಮುಂದುವರೆಯುತ್ತದೆ’ ಎನ್ನುತ್ತಾರೆ ಕೆಪಿಎಸ್‌ಸಿ ಮಾಜಿ ಸದಸ್ಯರೊಬ್ಬರು.

'ಭ್ರಷ್ಟಾಚಾರದ ಕೂಪ’ದಿಂದ ಕೆಪಿಎಸ್‌ಸಿಯನ್ನು ಹೊರತಂದು, ಸುಧಾರಣೆ ತರಲು ಅಗತ್ಯ ಶಿಫಾರಸುಗಳನ್ನು ಮಾಡಲು ಸಿದ್ದರಾಮಯ್ಯ ಸರ್ಕಾರ (2013) ಯುಪಿಎಸ್‌ಸಿ ಮಾಜಿ ಅಧ್ಯಕ್ಷ ಪಿ.ಸಿ. ಹೋಟಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿ ಪಠ್ಯಕ್ರಮ, ಪರೀಕ್ಷಾ ಪದ್ಧತಿ, ಸಂದರ್ಶನ ಪ್ರಕ್ರಿಯೆ ಸೇರಿ ಎಲ್ಲ ಹಂತಗಳಲ್ಲಿ ಸುಧಾರಣೆಗಳಿಗೆ ಶಿಫಾರಸು ಮಾಡಿತ್ತು. ಆದರೆ, ಆ ಶಿಫಾರಸುಗಳಲ್ಲಿ ಸರ್ಕಾರ ಮತ್ತು ಕೆಪಿಎಸ್‌ಸಿ ತನಗೆ ಯಾವುದೋ ಬೇಕೋ ಅವುಗಳನ್ನು ಮಾತ್ರ ಆಯ್ದುಕೊಂಡು ಜಾರಿಗೊಳಿಸಿದೆ. ಹೀಗಾಗಿ, ವಿವಾದಗಳು ಆಯೋಗವನ್ನು ಬೆನ್ನು ಬಿಡದೇ ಕಾಡುತ್ತಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT