ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಆಟೊಮೊಬೈಲ್ ಉದ್ಯಮಕ್ಕೆ ಲಾಕ್‌ಡೌನ್‌ ಪೆಟ್ಟು

ಅಕ್ಷರ ಗಾತ್ರ

ಧಾರವಾಡ: ವಾಹನ ತಯಾರಿಕಾ ಕ್ಷೇತ್ರದ ದೊಡ್ಡ ಕೈಗಾರಿಕೆಗಳು ಭವಿಷ್ಯದ ತಂತ್ರಜ್ಞಾನ ಆಯ್ಕೆಯ ಗೊಂದಲ್ಲಿರುವಾಗಲೇ ಎದುರಾದ ಲಾಕ್‌ಡೌನ್‌ನಿಂದಾಗಿ, ದೊಡ್ಡ ಮರದ ನೆರಳಿನಲ್ಲಿರುವ ಸಣ್ಣ ಕೈಗಾರಿಕೆಗಳು ತತ್ತರಿಸಿವೆ. ಮಾಲೀಕರು ನಷ್ಟದ ಸುಳಿಯಲ್ಲಿದ್ದರೆ, ನೌಕರರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.

ಟಾಟಾ ಮೋಟಾರ್ಸ್, ಟಾಟಾ ಹಿಟಾಚಿ ಮತ್ತು ಟಾಟಾ ಮಾರ್ಕೊಪೊಲೊದಂತಹ ದೊಡ್ಡ ವಾಹನ ಕಾರ್ಖಾನೆಗಳು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳಿಗೆ ಪೂರಕ ಸಲಕರಣೆಗಳನ್ನು ಸಿದ್ಧಪಡಿಸಿ ನೀಡುವ ಸುಮಾರು 350ಕ್ಕೂ ಹೆಚ್ಚು ಸಣ್ಣ ಕೈಗಾರಿಕೆಗಳು ಇಲ್ಲಿನ ಬೇಲೂರು, ತಾರಿಹಾಳ ಮತ್ತು ಲಕ್ಕಮನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿವೆ.

ಸದಾ ಚಟುವಟಿಕೆಯಲ್ಲಿರುತ್ತಿದ್ದ ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶ ಬಿಕೊ ಎನ್ನುತ್ತಿದೆ. ಹಲವು ಘಟಕಗಳು ಬಾಗಿಲು ಹಾಕಿವೆ. ಉಳಿದ ಕೆಲವು ವಾರದಲ್ಲಿ ಒಂದು ಅಥವಾ ಎರಡು ದಿನ ಮಾತ್ರ ತೆರೆದಿರುತ್ತವೆ. ಕಾರ್ಮಿಕರು ಉದ್ಯೋಗ ನಷ್ಟ ಮತ್ತು ವೇತನ ಕಡಿತದ ಭೀತಿಯ ನಡುವೆ ‘ಎಲ್ಲವೂ ಸರಿ ಹೋಗಬಹುದು’ ಎಂಬ ಆಶಾಭಾವದಲ್ಲಿದ್ದಾರೆ.

ಇಲ್ಲಿನ ಪರಿಸ್ಥಿತಿಯ ಮಾಹಿತಿ ನೀಡಿದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಧಾರವಾಡ ಬೆಳವಣಿಗೆ ಕೇಂದ್ರ ಉದ್ಯಮಗಳ ಸಂಘದ ಅಧ್ಯಕ್ಷ ಶ್ರೀಕಾಂತ ಥಿಟೆ, ‘ಹುಬ್ಬಳ್ಳಿ– ಧಾರವಾಡ ಕೈಗಾರಿಕಾ ಪ್ರದೇಶಗಳಲ್ಲಿರುವ ಬಹಳಷ್ಟು ಘಟಕಗಳು ಆಟೊಮೊಬೈಲ್ ಕ್ಷೇತ್ರಕ್ಕೆ ಸೇರಿವೆ. ಇವುಗಳು ಆಶ್ರಯಿಸಿರುವುದು ಟಾಟಾದಂತ ದೊಡ್ಡ ಕಂಪನಿಗಳನ್ನೇ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕೊರತೆ ಎದುರಾಗಿರುವುದರಿಂದ ಉತ್ಪಾದನೆಯೂ ಕಡಿಮೆಯಾಗಿದೆ. ಇದರ ನೇರ ಪರಿಣಾಮ ಸಣ್ಣ ಕೈಗಾರಿಕೆಗಳ ಮೇಲಾಗುತ್ತಿದೆ’ ಎಂದರು.

‘ಇಲ್ಲಿ ಕೆಲಸ ಮಾಡುತ್ತಿದ್ದ ಬಹಳಷ್ಟು ಕಾರ್ಮಿಕರು ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್‌ನವರು. ಅವರಲ್ಲಿ ಬಹುತೇಕರು ಮೊದಲ ಲಾಕ್‌ಡೌನ್‌ ನಂತರ ಹಿಂದಿರುಗಲೇ ಇಲ್ಲ. ಸ್ಥಳೀಯರನ್ನು ನೇಮಿಸಿಕೊಂಡು ಕೆಲಸ ಆರಂಭಿಸುವ ಹೊತ್ತಿಗೆ ಎರಡನೇ ಅಲೆ ಅಪ್ಪಳಿಸಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸದ್ಯದ ಪರಿಸ್ಥಿತಿಯಲ್ಲಿ ಆಟೊಮೊಬೈಲ್ ಕ್ಷೇತ್ರವೇ ಕವಲು ದಾರಿಯಲ್ಲಿದೆ. ಒಂದೊಮ್ಮೆ ವಿದ್ಯುತ್ ಚಾಲಿತ ವಾಹನಗಳೇ ಭವಿಷ್ಯ ಎಂದಾದರೆ ಈಗಿರುವ ಎಂಜಿನ್‌ಗೆ ಬಿಡಿಭಾಗ ಸಿದ್ಧಪಡಿಸುವ ಹಲವು ಕೈಗಾರಿಕೆಗಳು ಬಾಗಿಲು ಹಾಕುವುದರಲ್ಲಿ ಅನುಮಾನವೇ ಇಲ್ಲ’ ಎಂಬುದು ಥಿಟೆ ಅವರ ಅಭಿಪ್ರಾಯ.

***

ವಿದ್ಯುತ್ ಚಾಲಿತ ವಾಹನಗಳು ಬರುವವರೆಗಾದರೂ ಇರುವ ವ್ಯವಸ್ಥೆಯನ್ನು ಜೀವಂತ ಇಡಲು ಕ್ರಮ ಕೈಗೊಳ್ಳಬೇಕು. ಹಾಗಾದಾಗ ಮಾತ್ರ ಕೈಗಾರಿಕೆಗಳ ಉದ್ಧಾರ ಸಾಧ್ಯ.
–ಶ್ರೀಕಾಂತ ಥಿಟೆ, ಅಧ್ಯಕ್ಷ,ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಧಾರವಾಡ ಬೆಳವಣಿಗೆ ಕೇಂದ್ರ ಉದ್ಯಮಗಳ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT