ಬ್ಯಾನ್‌ ಮಾಡಿದ್ರೆ ಜೀವ ಉಳಿತಾವೆ..

ಸೋಮವಾರ, ಮೇ 20, 2019
33 °C

ಬ್ಯಾನ್‌ ಮಾಡಿದ್ರೆ ಜೀವ ಉಳಿತಾವೆ..

Published:
Updated:

ಹಾಸನ: ಆತನ ವಯಸ್ಸು 20. ಭವಿಷ್ಯದಲ್ಲಿ ತಮ್ಮ ಬಾಳಿಗೆ ಬೆಳಕಾಗುತ್ತಾನೆ ಎಂದು ಪೋಷಕರು ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದರು. ಆದರೆ, ಸ್ನೇಹಿತರ ಜತೆ ಸೇರಿ ಐಪಿಎಲ್ ಬೆಟ್ಟಿಂಗ್ ಆಡಲು ಆರಂಭಿಸಿದ. ಪಂದ್ಯದಲ್ಲಿ ಸೋತು, ಬೆಟ್ಟಿಂಗ್ ಕಟ್ಟಿದ ಹಣ ವಾಪಸ್ ಕೊಡಲಾಗದೆ, ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಮಗ ಮಾಡಿದ ತಪ್ಪಿನಿಂದಾಗಿ, ಹೆತ್ತವರು ಕಣ್ಣೀರಿಡುವಂತಾಗಿದೆ.

–ಇದು ಆಲೂರು ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಯುವಕ ಲತೇಶ್ ಕುಮಾರನ ದುರಂತ ಕಥೆ.

ಇದನ್ನೂ ಓದಿ: ಕ್ರಿಕೆಟ್ ರನ್ ಹೊಳೆಯಲ್ಲಿ ಭೀಕರ ‘ಬೆಟ್ಟಿಂಗ್’ ಸುಳಿ

ನಗರದ ರಾಜೀವ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದ. ಎರಡು ವಿಷಯಗಳಲ್ಲಿ ಫೇಲ್ ಆಗಿದ್ದರಿಂದ ಕೆಲಸ ಹುಡುಕಿಕೊಂಡು ಬೆಂಗಳೂರು ಸೇರಿದ್ದ. ಮನೆಯವರ ಒತ್ತಡಕ್ಕೆ ಕಟ್ಟು ಬಿದ್ದು ಮತ್ತೆ ಊರಿಗೆ ಬಂದಿದ್ದ ಲತೇಶ್, ಟ್ಯೂಶನ್‌ಗೆ ಸೇರಿ, ಪರೀಕ್ಷೆ ಬರೆಯುವ ಸಿದ್ಧತೆಯಲ್ಲಿದ್ದ.

ಇದನ್ನೂ ಓದಿ: ಕ್ರಿಕೆಟ್ ಬೆಟ್ಟಿಂಗ್ ಕೇಕೆ: ಹರಿಯುತ್ತಿದೆ ಹಣದ ಹೊಳೆ

ಈ ನಡುವೆ ಐಪಿಎಲ್ ಬೆಟ್ಟಿಂಗ್ ಆಡಿದ್ರೆ ಸುಲಭವಾಗಿ ಹಣ ಸಿಗಲಿದೆ ಎಂಬ ಗೆಳೆಯರ ಮಾತು ಕೇಳಿ ಬೆಟ್ಟಿಂಗ್ ಕಟ್ಟಲು ಆರಂಭಿಸಿದ.

‘ಕೋಟ್ಯಂತರ ರೂಪಾಯಿ ಸಾಲ ಮಾಡಿದವರು ಜೀವಂತವಾಗಿದ್ದಾರೆ. ₹ 15 ಸಾವಿರ ಸಾಲ ಮಾಡಿದ ಮಗ, ಆತ್ಮಹತ್ಯೆ ಮಾಡಿಕೊಂಡು ನಮ್ಮನ್ನು ಕಣ್ಣೀರಿನಲ್ಲಿ ಮುಳುಗಿಸಿಬಿಟ್ಟ. ಅವನ ಪಾಡಿಗೆ ಓದಿಕೊಂಡಿದ್ದವನನ್ನು ದಾರಿ ತಪ್ಪಿಸಿದ್ದೇ ಸ್ನೇಹಿತರು. ಮನೆಯಲ್ಲಿ ₹ 10 ಇಟ್ಟಿದ್ದರೂ ಮುಟ್ಟುತ್ತಿರಲಿಲ್ಲ. ಆತ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರ ಬಗ್ಗೆ ಮಾಹಿತಿ ಇರಲಿಲ್ಲ. ಈ ಕ್ರಿಕೆಟ್‌ ಬೆಟ್ಟಿಂಗ್‌ ಬ್ಯಾನ್‌ ಮಾಡಿದರೆ ಎಷ್ಟೋ ಮಕ್ಕಳ ಜೀವ ಉಳಿಯುತ್ತದೆ. ಸರ್ಕಾರ ಕಠಿಣ ಕಾನೂನು ತರಲೇಬೇಕು. ನನ್ನಂತೆ ಮತ್ತೊಬ್ಬ ತಾಯಿ ಸಂಕಟ ಪಡಬಾರದು’ ಎಂದು ಸಂಕಟ ತೋಡಿಕೊಂಡ, ತಾಯಿ ಗಾಯತ್ರಿ ಅವರ ಕಣ್ಣೀರಿಗೆ ಕೊನೆ ಇರಲಿಲ್ಲ.

ಯಾವ ಪಂದ್ಯವನ್ನೂ ಬಿಡಲ್ಲ...

2018ರ ಆ.27ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ‘ಎ’ ಹಾಗೂ ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವಾಗ, ಹರಿಯಾಣದ ರಿಕಿ ವೀರಮಣಿ ಹಾಗೂ ರಾಜಸ್ಥಾನದ ಮಯಾಂಕ್ ಸುರಾನಾ ಎಂಬುವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಅವರು ಪಂದ್ಯ ವೀಕ್ಷಿಸುತ್ತಲೇ ದೆಹಲಿ ಹಾಗೂ ರಾಜಸ್ಥಾನದ ಬುಕ್ಕಿಗಳ ಜತೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಪ್ರತಿ ಎಸೆತದ ಬಗ್ಗೆಯೂ ಅವರಿಗೆ ಮಾಹಿತಿ ರವಾನಿಸುತ್ತಿದ್ದರು. ಐಪಿಎಲ್‌ ಮಾತ್ರವಲ್ಲದೇ, ಎಲ್ಲ ರೀತಿಯ ಪಂದ್ಯಗಳಿಗೂ ಬೆಟ್ಟಿಂಗ್ ನಡೆಯುತ್ತದೆ ಎಂಬುದಕ್ಕೆ ಇದೊಂದು ತಾಜಾ ನಿದರ್ಶನವಾಯಿತು. ಆ ಪಂದ್ಯ ನಡೆದು ಒಂಬತ್ತು ತಿಂಗಳು ಕಳೆದರೂ, ಬುಕ್ಕಿಗಳು ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ.

ಜೂಜಾಟವೆಂಬ ಮಾನಸಿಕ ವ್ಯಸನ

‘ಬೆಟ್ಟಿಂಗ್‌ ಅಥವಾ ಗ್ಯಾಂಬ್ಲಿಂಗ್‌ ಒಂದು ಬಗೆಯ ಮಾನಸಿಕ ಕಾಯಿಲೆ. ಇದರಿಂದ ಜೀವನವೇ ಸರ್ವನಾಶವಾಗಿಬಿಡುತ್ತದೆ, ಕುಟುಂಬ ಬೀದಿಗೆ ಬರುತ್ತದೆ ಎಂಬುದರ ಅರಿವಿದ್ದೂ ಹಲವರು ಈ ಕೂಪಕ್ಕೆ ಬಿದ್ದುಬಿಡುತ್ತಾರೆ. ಸತತವಾಗಿ ಹಣ ಕಳೆದುಕೊಂಡವರು ಇದರಿಂದ ವಿಮುಖರಾಗುವ ಸಾಧ್ಯತೆ ಇರುತ್ತದೆ. ವಾಸ್ತವವಾಗಿ ಹಾಗಾಗುವುದೇ ಇಲ್ಲ. ಹತ್ತು ಪ್ರಯತ್ನಗಳ ಪೈಕಿ ಒಮ್ಮೆ ಗೆಲ್ಲುವ ಅವಕಾಶ ಇರುತ್ತದೆ. ಆಗ ಕೈತುಂಬಾ ಹಣ ಸಿಗುತ್ತದೆ. ಇದರಿಂದ ದುರಾಸೆ ಹುಟ್ಟುತ್ತದೆ. ಬೆಟ್ಟಿಂಗ್ ಗೀಳು ಮುಂದುವರಿಯುತ್ತದೆ’ ಎಂದು ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಬಿ.ಎನ್‌.ರವೀಶ್‌ ಹೇಳುತ್ತಾರೆ.

‘ಜೈವಿಕ, ಮಾನಸಿಕ ಮತ್ತು ಸಾಮಾಜಿಕ (ಬಯೋ, ಸೈಕೊ, ಸೋಷಿಯಲ್‌) ಕಾರಣಗಳಿಂದ ಅವರು ಹೀಗಾಗಿರುತ್ತಾರೆ. ಮೈ ಬಗ್ಗಿಸಿ ದುಡಿದು ಸಂಪಾದನೆ ಮಾಡುವ ಮನಸ್ಥಿತಿ ಇವರಲ್ಲಿರುವುದಿಲ್ಲ. ಇವರಲ್ಲಿ ಬಹುತೇಕರು ಧೂಮಪಾನಿಗಳು ಹಾಗೂ ಮದ್ಯವ್ಯಸನಿಗಳೂ ಆಗಿರುತ್ತಾರೆ. ಮನೆ ಮಠ, ಆಸ್ತಿಯನ್ನೆಲ್ಲಾ ಕಳೆದುಕೊಂಡಾಗ ಸಾಲಗಾರರ ಕಾಟ ಹೆಚ್ಚಾಗುತ್ತದೆ. ಇದರಿಂದ ಖಿನ್ನತೆಗೆ ಒಳಗಾಗುತ್ತಾರೆ. ಸಮಾಜವನ್ನು ಎದುರಿಸಲಾಗದೇ ಅಂತಿಮವಾಗಿ ಆತ್ಮಹತ್ಯೆಗೆ ಶರಣಾಗಿಬಿಡುತ್ತಾರೆ. ಔಷಧಿಗಳು ಹಾಗೂ ಮನೋವೈದ್ಯಕೀಯ ಥೆರಪಿಗಳಿಂದ ಇವರನ್ನು ಬೆಟ್ಟಿಂಗ್‌ನಂತಹ ವ್ಯಸನದಿಂದ ಮುಕ್ತರನ್ನಾಗಿಸಬಹುದು’ ಎಂದೂ ಅವರು ವಿವರಿಸುತ್ತಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !