ಭಾನುವಾರ, ಮೇ 22, 2022
27 °C

ಒಳನೋಟ: ಸಲಕರಣೆ ಸಾಲದು, ಬದುಕಲು ಕಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಅಂಗವಿಕಲರಿಗೆ ಗಾಲಿಕುರ್ಚಿ, ಕೃತಕ ಕೈಕಾಲು, ಸಾಧನ, ಸಲಕರಣೆಗಳನ್ನು ಸರ್ಕಾರ ಅಲ್ಲದೇ ಕೆಲ ಸಂಘ ಸಂಸ್ಥೆಗಳು ಸಹ ಒದಗಿಸುತ್ತವೆ. ಆದರೆ, ಬದುಕು ಕಟ್ಟಿಕೊಳ್ಳಲು, ವ್ಯಕ್ತಿತ್ವ ರೂಪಿಸಿಕೊಳ್ಳಲು ಮತ್ತು ಆತ್ಮವಿಶ್ವಾಸ ವೃದ್ಧಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ ನೀಡಬಲ್ಲ ಸ್ವಯಂ-ಸೇವಾ ಸಂಸ್ಥೆಗಳ ತೀವ್ರ ಕೊರತೆಯಿದೆ. ಕೃತಕ ವ್ಯವಸ್ಥೆ ಮಾಡಿಕೊಂಡು ಸಮರ್ಪಕವಾಗಿ ಜೀವನ ನಿರ್ವಹಿಸಲು ಸಾಧ್ಯವಾಗದಿದ್ದರೆ ಏನು ಪ್ರಯೋಜನ?

ಹೀಗೊಂದು ಪ್ರಶ್ನೆ ಒಬ್ಬಿಬ್ಬರಿಗಲ್ಲ, ಅಂಗವೈಕಲ್ಯದಿಂದ ಬಳಲುತ್ತಿರುವ ಬಹುತೇಕ ಮಂದಿಗೆ ಕಾಡುತ್ತಿದೆ. ನಿತ್ಯವೂ ಮಾನಸಿಕ ಮತ್ತು ದೈಹಿಕ ಹಿಂಸೆಗೆ ತುತ್ತಾಗುತ್ತಿರುವ ಅವರು ಇತ್ತ ಸಮಸ್ಯೆ ಪರಿಹರಿಸಿಕೊಳ್ಳಲು ಆಗದೇ, ಅತ್ತ ಸಂಕಟಗಳನ್ನು ಮುಕ್ತವಾಗಿ ಹೇಳಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ‘ಸಾಧನ-ಸಲಕರಣೆ ಒದಗಿಸಿಬಿಟ್ಟರೆ, ಅಲ್ಲಿಗೆ ಕೆಲಸ ಮುಗಿಯಿತು ಅಂತಲ್ಲ. ಅಸಲಿಗೆ ಸಮಸ್ಯೆ ಶುರುವಾಗುವುದೇ ಅಲ್ಲಿಂದ’ ಎಂದು ಅಂಗವಿಕಲರು ಹೇಳುತ್ತಾರೆ.

‘ಸರ್ಕಾರದಿಂದ ನೇರವಾಗಿ ಸಿಗುವ ಗಾಲಿಕುರ್ಚಿಗಾಗಿ ವರ್ಷಗಳವರೆಗೆ ಕಾಯಬೇಕು. ಅದನ್ನು ಅನುದಾನಿತ ಸ್ವಯಂ-ಸೇವಾ ಸಂಸ್ಥೆಗಳು ಕಡಿಮೆ ದರದಲ್ಲಿ ನೀಡುತ್ತವೆ. ಆದರೆ, ಅದರ ನಿರ್ವಹಣೆ, ಬದುಕಲು ಉದ್ಯೋಗಾವಕಾಶ ಮತ್ತು ಆರ್ಥಿಕ ನೆರವು‌ ಸಿಗುವುದಿಲ್ಲ’ ಎಂದು ಕಲಬುರ್ಗಿಯ‌ ಎಸ್.ಮಾರುತಿ ಹೇಳುತ್ತಾರೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕೆಲ ಸ್ವಯಂ-ಸೇವಾ ಸಂಸ್ಥೆಗಳು ಸರ್ಕಾರದ ಸಹಯೋಗದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ತಮ್ಮ ಶಾಖಾ ಕಚೇರಿಗಳ ಮೂಲಕ ಶಿಬಿರಗಳನ್ನು ಏರ್ಪಡಿಸುತ್ತವೆ. ಆದರೆ, ಅವು ಸಾಧನಗಳ ವಿತರಣೆಗೆ ಸೀಮಿತವಾಗದೇ ಅಂಗವಿಕಲರ ಅಹವಾಲು ಸಲ್ಲಿಸಲು ವೇದಿಕೆಯಾಗಬೇಕು. ಸಮಸ್ಯೆಗಳಿಗೆ ಸ್ಪಂದನೆ ಸಿಗಬೇಕು ಎಂದು ಚಿಕ್ಕಬಳ್ಳಾಪುರದ ಕರ್ನಾಟಕ ವಿಕಲಚೇತನರ ಸಂಘಟನೆಯ ಕಾರ್ಯದರ್ಶಿ ಕಿರಣ್ ಹೇಳುತ್ತಾರೆ.

ಸ್ವತಃ ಅಂಗವಿಕಲರಾದ ಕಿರಣ್ ಅವರು ಗಾಲಿಕುರ್ಚಿ ಮತ್ತು ತ್ರಿಚಕ್ರ ವಾಹನದ ಮೂಲಕ ಓಡಾಡುತ್ತಾರೆ. ಅಂಗವಿಕಲರಲ್ಲಿ ಧೈರ್ಯ ತುಂಬುವುದರ ಜೊತೆಗೆ ಆಪ್ತ ಸಮಾಲೋಚನೆ ಮಾಡುತ್ತಾರೆ. ಸರ್ಕಾರ ಮತ್ತು ಸಂಘಟನೆಯಿಂದ ಸೌಲಭ್ಯ ಒದಗಿಸುತ್ತಾರೆ.

ಬೀದರ್‌ನಲ್ಲಿ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಡೆಸುತ್ತಿರುವ ಮಂಗಲಾ ಮರಕಲೆ ಅವರು ಸ್ವತಃ ಅಂಗವಿಕಲರಾಗಿದ್ದು, ಸರ್ಕಾರ ಕೊಟ್ಟಿರುವ ತ್ರಿಚಕ್ರವಾಹನದಲ್ಲಿ ಸಂಚರಿಸಿ ಕಷ್ಟದಲ್ಲಿರುವ ಅಂಗವಿಕಲ ಯುವತಿಯರಿಗೆ ನೆರವಾಗುತ್ತಾರೆ.

ರಾಜ್ಯದ ವಿವಿಧೆಡೆ ಅಂಧರು, ಕಿವುಡರು, ಮೂಗರು ಮತ್ತು ಬುದ್ಧಿಮಾಂದ್ಯರಿಗಾಗಿ ವಿಶೇಷ ಶಾಲೆಗಳಿದ್ದು, ಕೊರೊನಾ ಲಾಕ್‌ಡೌನ್ ಬಳಿಕ ಅವುಗಳ ಕಾರ್ಯನಿರ್ವಹಣೆಗೆ ಹಿನ್ನಡೆ ಉಂಟಾಗಿದೆ.

ರಾಯಚೂರಿನಲ್ಲಿ ಎಂ.ಕೆ. ಭಂಡಾರಿ ಟ್ರಸ್ಟ್ ಸಂಸ್ಥೆಯು ಉಚಿತವಾಗಿ ಕೃತಕ ಕೈ, ಕಾಲುಗಳನ್ನು ಸಿದ್ಧಪಡಿಸಿಕೊಡುತ್ತದೆ. ಸಾಧನ ಸಲಕರಣೆಗಳ ಶಿಬಿರವನ್ನೂ ನಡೆಸುತ್ತದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯಲ್ಲಿನ ಸಮೂಹ ಸಾಮರ್ಥ್ಯ ಸಂಸ್ಥೆಯು ಅಂಗವಿಕರಿಗೆ ಕೌಶಲ‌ ತರಬೇತಿ ಹಾಗೂ ಉದ್ಯೋಗ ‌ಒದಗಿಸಿ ಪುನರ್ವಸತಿ ಕಲ್ಪಿಸುತ್ತದೆ.

ಕೊಪ್ಪಳದಲ್ಲಿ ಅದೇ ಸಂಸ್ಥೆಯು ಅಂಗವಿಕಲರಿಗೆ ಸಾಧನ, ಸಲಕರಣೆಗಳನ್ನು ವಿತರಿಸುವುದರ ಜೊತೆಗೆ ಆಗಾಗ್ಗೆ ಆರೋಗ್ಯ ತಪಾಸಣೆ ಶಿಬಿರ ಕೂಡ ಆಯೋಜಿಸುತ್ತದೆ.

***

ಇಲಾಖೆಯಲ್ಲಿ ವಿವಿಧ ಯೋಜನೆಗಳಿಗೆ ಅನುದಾನದ ಕೊರತೆ ಇಲ್ಲ. ರಾಜ್ಯದಲ್ಲಿ ಇರುವ ವಿಶೇಷ ಶಾಲೆಗಳಿಗೂ ಅನುದಾನ ಸಿಗುತ್ತಿದೆ. ಸಮಸ್ಯೆಗಳಿದ್ದಲ್ಲಿ ಜಿಲ್ಲಾಮಟ್ಟದಲ್ಲೇ ಪರಿಹರಿಸಲಾಗುತ್ತಿದೆ. ಕೋವಿಡ್‌ ಕಾರಣದಿಂದ ಗೌರವಧನ ಆಧರಿತ ಶಿಕ್ಷಕರಿಗೆ ಸಮಸ್ಯೆ ಆಗಿತ್ತು. ಈಗ ಎಲ್ಲವೂ ಸರಿಯಾಗಿದೆ.

ಮುನಿರಾಜು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕ

***

ಪ್ರತಿ ಇಲಾಖೆವಾರು ಶೇ 5ರಷ್ಟು ಅನುದಾನ ಇದೆ. ಆದರೆ, ಬಳಕೆ ಆಗುತ್ತಿಲ್ಲ. ಕೆಳಹಂತದ ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ಗ್ರಾಮ ಪಂಚಾಯಿತಿಯಿಂದ ಹಿಡಿದು ಪ್ರತಿ ಇಲಾಖೆಯಲ್ಲೂ ಅರಿವು, ಜಾಗೃತಿ ಮೂಡಿಸಬೇಕಾಗಿದೆ.

ಬಾಬು ಖಾನ್‌, ದಕ್ಷಿಣ ಭಾರತ ಅಂಗವಿಕಲರ ಕಾನೂನು ಸಮಿತಿ ಸಂಯೋಜಕ

***

ಕಾಲ ಕಾಲಕ್ಕೆ ಜಿಲ್ಲಾ ಸಮಿತಿಗಳು ಸಭೆ ನಡೆಬೇಕು. ಶಿಕ್ಷಣ, ಉದ್ಯೋಗ, ತರಬೇತಿ, ಪುನರ್ವಸತಿ ಯೋಜನೆಗಳ ಅನುದಾನ ಬಳಕೆಯಾಗಬೇಕು. ಜಿಲ್ಲಾ ಸಮಿತಿಗಳು ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಿದರೆ ಅಂಗವಿಕಲರ ಹಕ್ಕುಗಳು ಬಲವರ್ಧನೆಗೊಳ್ಳಲು ಸಹಾಯಕವಾಗಲಿದೆ.

ಹಂಪಣ್ಣ, ಅಂಗವಿಕರಲ ಸಲಹಾ ಸಮಿತಿ ಸದಸ್ಯ, ಕೊಪ್ಪಳ

***

ಅಂಗವಿಕಲರ ಆರೈಕೆದಾರರಿಗೂ ಸೌಲಭ್ಯ ಕಲ್ಪಿಸಬೇಕಾಗಿದೆ. ಎಷ್ಟೋ ಮಂದಿ ಪೋಷಕರಿಗೆ ಕೆಲಸ ಇಲ್ಲದೆ ತೊಂದರೆ ಆಗಿದೆ. ಮಾಸಾಶನ, ಸೌಲಭ್ಯಗಳಿಗಾಗಿ ಕಚೇರಿಗೆ ಅಲೆದಾಡಬೇಕಾಗಿದೆ. ಹೋರಾಟ ಒಂದೇ ಮಾರ್ಗ.

ವರ್ಷಾ ಹಿರೇಮಠ, ರಾಜ್ಯ ವಿಕಲ ಚೈತನ್ಯ ಆರೈಕೆದಾರರ ಸಂಸ್ಥೆ ಅಧ್ಯಕ್ಷೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು