ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಆರ್ಥಿಕಾಭಿವೃದ್ಧಿಯ ಕನಸಿಗೆ ತಪ್ಪದ ಹೊಡೆತ

ಸಾಲದ ಕೂಪದಲ್ಲಿ ಬೇಸಾಯದ ಬದುಕು: ಪರ್ಯಾಯವಿಲ್ಲದೇ ಕಂಗೆಟ್ಟ ಕೃಷಿಕ
Last Updated 26 ಜೂನ್ 2021, 20:33 IST
ಅಕ್ಷರ ಗಾತ್ರ

ಮೈಸೂರು: ರೈತರು ಈಗ ಹಣ್ಣು, ತರಕಾರಿ, ವಾಣಿಜ್ಯ ಬೆಳೆಗಷ್ಟೇ ಅಲ್ಲ; ಆಹಾರ ಧಾನ್ಯ ಬೆಳೆಯಲೂ ಸಾಲ ಮಾಡಬೇಕಿದೆ. ಒಮ್ಮೆ ಮಾಡಿದ ಸಾಲವನ್ನು ತೀರಿಸಲಾಗದೆ, ಮತ್ತೆ ಮತ್ತೆ ಸಾಲ ಮಾಡುವಂತಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿದಾತ ಜಮೀನು ಮಾರಲು ಮುಂದಾದರೂ; ಕಾಸಿಗೆ ಕಡೆಯಾಗಿ ಕೇಳುವವರೇ ಹೆಚ್ಚು. ಸಾಲ ಕೊಟ್ಟಾತ ಮನೆ ಬಾಗಿಲಿಗೆ ಬಂದು ನಿಂತಾಕ್ಷಣ; ಬ್ಯಾಂಕಿನ ನೋಟಿಸ್‌ ಮನೆಗೆ ಬರುತ್ತಿದ್ದಂತೆ ಮರ್ಯಾದೆಗೆ ಅಂಜುವ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ.

ಖಾಸಗಿ ಹಣಕಾಸು ಸಂಸ್ಥೆಗಳ ಹಾವಳಿ ಮಂಡ್ಯ ಜಿಲ್ಲೆಯಲ್ಲಿ ವಿಪರೀತವಾಗಿದೆ. ಇವು ವಿಧಿಸುವ ಅತ್ಯಧಿಕ ಬಡ್ಡಿಗೆ ರೈತರು ಜರ್ಜರಿತರಾಗಿದ್ದಾರೆ. 2015ರಿಂದಲೂ ರೈತರ ಆತ್ಮಹತ್ಯೆ ಇಲ್ಲಿ ಹೆಚ್ಚಿದೆ.

ಆದಾಯಕ್ಕಾಗಿ ರೈತರು ವಾಣಿಜ್ಯ ಬೆಳೆ ಬೆಳೆಯುವುದು ಹೆಚ್ಚಿದೆ. ನಿರೀಕ್ಷಿತ ಆದಾಯ ಸಿಗದಿರುವುದರಿಂದ; ಮನೆ ಕಟ್ಟುವ, ಹೊಸ ವಾಹನ–ಚಿನ್ನಾಭರಣ ಖರೀದಿಸುವ, ಮಕ್ಕಳ ಮದುವೆ ಮಾಡುವ ಕನಸು ಕಮರಿವೆ. ಬೆಳೆಗಾಗಿ ಮಾಡಿದ ಸಾಲ ತೀರಿಸಿದರೆ ಸಾಕು ಎನ್ನುವಂತಹ ದಯನೀಯ ಪರಿಸ್ಥಿತಿ ಬೆಳೆಗಾರರದ್ದಾಗಿದೆ.

ವೆಚ್ಚವೇ ಹೆಚ್ಚು: ‘5 ವರ್ಷಗಳ ಹಿಂದೆ ಒಂದು ಎಕರೆಯಲ್ಲಿ ದ್ರಾಕ್ಷಿ ಬೆಳೆಯಲು ₹ 25 ಸಾವಿರ ಖರ್ಚಾಗುತ್ತಿತ್ತು. ಈಗ ಕನಿಷ್ಠ ₹ 75 ಸಾವಿರ ಬೇಕು. ಇದಕ್ಕೆ ತಕ್ಕಂತೆ ಒಣದ್ರಾಕ್ಷಿಯ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ಸಾಲದ ಹೊರೆ ತಾಳಲಾರದೇ ನೇಣಿಗೆ ಕೊರಳೊಡ್ಡುವುದು ಮುಂದುವರೆದಿದೆ’ ಎನ್ನುತ್ತಾರೆ ವಿಜಯಪುರದ ದ್ರಾಕ್ಷಿ ಬೆಳೆಗಾರ ರವಿ ಖಾನಾಪುರ.

‘ಲಕ್ಷ ಲಕ್ಷ ಬಂಡವಾಳ ಹಾಕಿ ದಾಳಿಂಬೆ ಬೆಳೆದೆ. ಹಣ್ಣು ಕೀಳಬೇಕು ಎನ್ನುವಷ್ಟರಲ್ಲೇ ರೋಗ. ಬೆಲೆಯೂ ಸಿಗಲಿಲ್ಲ. ನಮ್ಮ ಭಾಗದ ಬಹುತೇಕರ ಸಂಕಟವಿದು. ವಿಧಿಯಿಲ್ಲದೇ ಕಿತ್ತು ಬೆಂಕಿಯಿಟ್ಟರು. ಬೆಳೆಗಾಗಿ ಮಾಡಿದ ಸಾಲ ಬೆಟ್ಟವಾಗಿದೆ. ದಿಕ್ಕೇ ತೋಚದ ಸ್ಥಿತಿ ನಮ್ಮದಾಗಿದೆ’ ಎಂದು ಹಾಸನ ಜಿಲ್ಲೆ ಡಿ.ಎಂ.ಕುರ್ಕೆಯ ಬಸವರಾಜು ತಿಳಿಸಿದರು.

‘ನಷ್ಟವಾದರೂ ಹೊಲ ಪಾಳು ಬಿಡಬಾರದು ಎಂದು ಆಲೂಗೆಡ್ಡೆ ಬೆಳೆಯೋರೇ ಹೆಚ್ಚು. ಈಗಾಗಲೇ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದೇವೆ. ಹೊಸದಾಗಿ ಸಾಲ ಸಿಗಲ್ಲ. ವಿಧಿಯಿಲ್ಲದೇ ಸ್ವಸಹಾಯ ಸಂಘಗಳಲ್ಲಿ ಬೆಳೆಗಾಗಿಯೇ ಸಾಲ ಪಡೆಯುತ್ತೇವೆ. ಬೆಲೆ ಸಿಕ್ಕರಷ್ಟೇ ನಮಗೂ ಬೆಲೆ. ಮರ್ಯಾದೆಗಂಜಿದವರಿಗೆ ಸಾವೇ ಗತಿ’ ಎನ್ನುತ್ತಾರೆ ಹಾಸನದ ಪ್ರವೀಣ್‌.

‘ಟೊಮೆಟೊ ‘ಲಾಟರಿ’ ಬೆಳೆಯಿದ್ದಂತೆ. ಬೆಲೆ ಸಿಕ್ಕರೆ ಬಂಪರ್ ಲಾಭ. ಕುಸಿತಗೊಂಡರೆ ರಸ್ತೆ ಬದಿಗೆ ಸುರಿಯಬೇಕಷ್ಟೆ’ ಎನ್ನುತ್ತಾರೆ ಮೈಸೂರಿನರೈತಮಹೇಶ್.

ಬೇರೆ ಆದಾಯವೇ ಇಲ್ಲ:ಬಹುತೇಕ ರೈತರಿಗೆ ಕೃಷಿಯಿಂದ ಬರುವ ಆದಾಯ ಹಾಗೂ ಕೂಲಿಯೇ ಬದುಕಿಗೆ ಆಧಾರ. ವರ್ಷದ ಎಲ್ಲ ತಿಂಗಳಲ್ಲಿ ಕೂಲಿಯೂ ಸಿಗದು. ಆದಾಯವೂ ದೊರಕದು.

ನೆರೆ ರಾಜ್ಯದ ರೈತರಿಂದ ಗುತ್ತಿಗೆ ಕೃಷಿ

ಕೇರಳ, ತಮಿಳುನಾಡಿನ ಕೆಲವರು ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯ ರೈತರ ಜಮೀನು ಗುತ್ತಿಗೆ ಪಡೆದು, ಲಕ್ಷ ಲಕ್ಷ ಸಂಪಾದಿಸಿ ಗುತ್ತಿಗೆ ಪಡೆದ ಜಮೀನನ್ನೇ ಖರೀದಿಸಿದ್ದು ಇದೆ. ಇದೀಗ ಪರಿಸ್ಥಿತಿ ಬದಲಾಗಿದೆ. ಕೃಷಿ ಅವರ ಕೈಯನ್ನೂ ಸುಡುತ್ತಿದೆ.

ಗುತ್ತಿಗೆ ಪಡೆದವರು ಕುಟುಂಬ ಸಮೇತರಾಗಿ ಜಮೀನಿನಲ್ಲೇ ವಾಸಿಸುತ್ತಾರೆ. ಮುಂಜಾನೆಯಿಂದ ಮುಸ್ಸಂಜೆಯವರೆಗೆದುಡಿಯೋದು ಇವರ ಯಶಸ್ಸಿನ ಗುಟ್ಟಿನಲ್ಲೊಂದು. ಇಲ್ಲಿನ ರೈತರೊಟ್ಟಿಗೆ ಮಾಡಿಕೊಂಡ ಕರಾರು ಪತ್ರಕ್ಕೆ ಅಲ್ಲಿನ ಬ್ಯಾಂಕ್‌ಗಳಲ್ಲಿ ಸಾಲ ಸಿಗಲಿದೆ.

‘ಬ್ಯಾಂಕ್‌ನಲ್ಲಿ ಮೊದಲು ಪಡೆದಿದ್ದ ₹ 15 ಲಕ್ಷ ಸಾಲ ತೀರಿಸಿದ್ದೆ. 2020ರಲ್ಲಿ ಪಡೆದ ಸಾಲ ತೀರಿಸಲಾಗಿಲ್ಲ. ರೈತರಿಗೆ ಗುತ್ತಿಗೆಯ ಹಣವನ್ನು ಕೊಟ್ಟಿಲ್ಲ. ಬೆಲೆ ಸಿಕ್ಕರೆ ಮಾತ್ರ ನಮ್ಮ ಬದುಕು ಹಳಿಗೆ ಬರಲಿದೆ’ ಎನ್ನುತ್ತಾರೆ ಕೇರಳದ ಕಣ್ಣೂರಿನ ರೈತ ಜನಾರ್ದನ್‌.

***********


ಆದಾಯ ದ್ವಿಗುಣಗೊಳ್ಳಲಿಲ್ಲ. ಉತ್ಪಾದನಾ ವೆಚ್ಚ ಹೆಚ್ಚಿತಷ್ಟೇ. ಸ್ವಾಮಿನಾಥನ್‌ ವರದಿ ಜಾರಿಗೊಳಿಸಿ. ಕೃಷಿ ಪೂರಕ ಚಟುವಟಿಕೆಗೆ ಉತ್ತೇಜನ, ಸಹಾಯಧನ, ತರಬೇತಿ ಕೊಡಿ.

- ಬಡಗಲಪುರ ನಾಗೇಂದ್ರ, ರೈತ ಮುಖಂಡ

*****

ರೈತರಿಗೆ ನಿಶ್ಚಿತ ಆದಾಯವೇ ಇಲ್ಲ. ಬೆಳೆ ನಷ್ಟವಾದರೆ ಬದುಕಿಗಾಗಿ ಸಾಲ ಮಾಡಲೇಬೇಕಾದ ಅನಿವಾರ್ಯ. ಹಳ್ಳಿಗಳಲ್ಲಿ ಕೃಷಿ ಕೇಂದ್ರೀತ ಕೈಗಾರಿಕೆ ಆರಂಭಿಸಿ

-ಕುರುಬೂರು ಶಾಂತಕುಮಾರ್, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT