ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಅನುಷ್ಠಾನದಲ್ಲೇ ಗೊಂದಲ, ಆರ್‌ಟಿಇ ಅಡಕತ್ತರಿ!

ರಾಜ್ಯದ 85 ಸಾವಿರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ
Last Updated 11 ಜನವರಿ 2020, 22:51 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ರಾಜ್ಯದಲ್ಲಿ ಜಾರಿಗೆ ಬಂದು ಎಂಟು ವರ್ಷಗಳೇ ಕಳೆದಿದ್ದರೂ ಅನುಷ್ಠಾನ ಮಾತ್ರ ಇನ್ನೂ ಗೊಂದಲದ ಗೂಡಾಗಿಯೇ ಉಳಿದಿದೆ.

ಕಾಯ್ದೆ ಪರ-ವಿರೋಧದ ಚರ್ಚೆಗಳು ಇನ್ನೂ ಜೀವಂತವಾಗಿಯೇ ಇವೆ. ಈ ಮಧ್ಯೆ ಆರ್‌ಟಿಇ ಮೀಸಲಿನ ಅಡಿಯಲ್ಲಿ ಪ್ರಾರಂಭಿಕ ವರ್ಷಗಳಲ್ಲಿ ಖಾಸಗಿ ಶಾಲೆಗಳಲ್ಲಿ ಸೀಟು ಪಡೆದ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಲಭ್ಯವಾದ ಸೀಟು 8ನೇ ತರಗತಿಗೆ ಮುಕ್ತಾಯವಾಗುತ್ತದೆ. 2012-13ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕಾಯ್ದೆಯ ಅಡಿ ಮೊದಲ ಬಾರಿಗೆ ಸೀಟು ಪಡೆದ ಸುಮಾರು 85 ಸಾವಿರ ವಿದ್ಯಾರ್ಥಿಗಳು 2019–20ಕ್ಕೆ 8ನೇ ತರಗತಿ ಮುಗಿಸಿ 9ನೇ ತರಗತಿಗೆ ಹೋಗಬೇಕಾಗಿದೆ.

ಆದರೆ ಅದೇ ಶಾಲೆಯಲ್ಲಿ ಮುಂದುವರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಇದೆಯೇ? ಆರ್‌ಟಿಇ ಅಡಿಯಲ್ಲಿ 10ನೇ ತರಗತಿವರೆಗೂ ಮುಂದುವರೆಯಲು ಅವಕಾಶ ಸಿಗುತ್ತದೆಯೇ? ಅಥವಾ ಪೋಷಕರು ತಮ್ಮ ಮಕ್ಕಳಿಗೆ ಬೇರೆ ಶಾಲೆ ಹುಡುಕಿಕೊಳ್ಳಬೇಕೆ? ಅದಕ್ಕಾಗಿ ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲು ಸಿದ್ಧರಾಗಬೇಕೆ? ಎಂಬುದರ ಬಗ್ಗೆ ಸರ್ಕಾರದಿಂದ ಈ ವರೆಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಅತಂತ್ರಗೊಂಡಿದ್ದಾರೆ.

ಆರ್‌ಟಿಇ ಅಡಿಯಲ್ಲಿ 8ನೇ ತರಗತಿವರೆಗೆ ಶಿಕ್ಷಣ ಪಡೆದುಕೊಂಡ ವಿದ್ಯಾರ್ಥಿಗಳು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಸರ್ಕಾರ ಏನೂ ಹೇಳದೇ ಇದ್ದರೂ, ಖಾಸಗಿ ಶಾಲೆಗಳು ಮಾತ್ರ ಶುಲ್ಕಕ್ಕೆ ಸಂಬಂಧಿಸಿದಂತೆ ಪೋಷಕರಿಗೆ ಈಗಾಗಲೇ ನೋಟಿಸ್ ನೀಡುತ್ತಿವೆ. ಮುಂದಿನ ವರ್ಷದ ಶುಲ್ಕ ಕಟ್ಟುವಂತೆ ಈಗಲೇ ಶಾಲಾ ಆಡಳಿತ ಮಂಡಳಿಗಳು ದುಂಬಾಲು ಬಿದ್ದಿವೆ. ಕೆಲ ಶಾಲೆಗಳಂತೂ, ಶುಲ್ಕ ಕಟ್ಟದ ಮಕ್ಕಳಿಗೆ ವರ್ಗಾವಣೆ ಪತ್ರ ನೀಡುವುದಾಗಿ ತಿಳಿಸಿವೆ. ಈ ಬಗ್ಗೆ ನೋಟಿಸ್ ಅನ್ನೂ ನೀಡಿವೆ ಎನ್ನುತ್ತಾರೆ ಪೋಷಕರು.

ಈ ಗೊಂದಲದಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗುವ ಸಂಗತಿ ಸರ್ಕಾರಕ್ಕೆ ಗೊತ್ತಿದ್ದರೂ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ‘ಆರ್‌ಟಿಇ ಅನ್ನು 10 –12ನೇ ತರಗತಿವರೆಗೆ ಮುಂದುವರೆಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಶೀಘ್ರವೇ ಕಳಿಸುವ ಕಾರ್ಯ ಆರಂಭವಾಗಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರೂ, ಮುಂದಿನ ಒಂದು ತಿಂಗಳೊಳಗಾಗಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳದಿದ್ದರೆ ಅಷ್ಟೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ ಎದುರಾಗಲಿದೆ.

‘ಸಾಮಾನ್ಯವಾಗಿ ಯಾವುದೇ ಖಾಸಗಿ ಶಾಲೆಯಲ್ಲೂ 9ನೇ ತರಗತಿಗೆ ಪ್ರವೇಶ ನೀಡುವುದಿಲ್ಲ. ಹೀಗಿರುವಾಗ ಸರ್ಕಾರ ಆರ್‌ಟಿಇ ಕಾಯ್ದೆಯನ್ನು 10ನೇ ತರಗತಿವರೆಗೂ ಮುಂದುವರೆಸದೇ ಹೋದರೆ ಈ ವರ್ಷ 8ನೇ ತರಗತಿ ವ್ಯಾಸಂಗ ಮುಗಿಸುತ್ತಿರುವವರು ಮತ್ತು ಲಕ್ಷಾಂತರ ರೂಪಾಯಿ ಶುಲ್ಕ ಕಟ್ಟಲು ಶಕ್ತರಲ್ಲದ ಮಕ್ಕಳು ಏನು ಮಾಡಬೇಕು,’ ಎಂದು ಕೇಳುತ್ತಾರೆ ಆಟೊ ಚಾಲಕ ವೆಂಕಟೇಶ್

ಈ ನಡುವೆ ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆ ಇತ್ತೀಚೆಗೆ ಬೆಂಗಳೂರು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆರ್‌ಟಿಇ ಕಾಯ್ದೆಯನ್ನು 12ನೇ ತರಗತಿವರೆಗೆ ಮುಂದುವರೆಸಬೇಕು ಎಂಬುದು ಪ್ರತಿಭಟನೆಯ ಮುಖ್ಯ ಬೇಡಿಕೆಯಾಗಿತ್ತು. ಸಂಘಟನೆಯ ಕಾರ್ಯಕರ್ತರು ಈ ಸಂಬಂಧ ಮುಖ್ಯಮಂತ್ರಿಗೆಮನವಿ ಪತ್ರ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಂಘಟನೆಯ ಕಾರ್ಯದರ್ಶಿ ಬಿ.ಎ. ಯೋಗಾನಂದ, ‘ಕಾಯ್ದೆ ಮುಂದುವರಿಕೆ ಅಗತ್ಯದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಪ್ರತಿಭಟನೆ ನಡೆಸಿದ್ದೆವು. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ಶೀಘ್ರ ತೀರ್ಮಾನ ಕೈಗೊಳ್ಳದಿದ್ದರೆ 85 ಸಾವಿರ ವಿದ್ಯಾರ್ಥಿಗಳು ಶಾಲೆ ತೊರೆಯುವ ಪರಿಸ್ಥಿತಿ ಎದುರಾಗು
ವುದರಲ್ಲಿ ಯಾವುದೇ ಅನುಮಾನವಿಲ್ಲ,’ ಎಂದು ಹೇಳಿದ್ದಾರೆ.

‘ಆರ್‌ಟಿಇ ಅಡಿ 8ನೇ ತರಗತಿ ವರೆಗೆ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ನಂತರ ಸರ್ಕಾರಿ ಶಾಲೆಗಳಿಗೆ ಏಕೆ ದಾಖಲಾಗಬಾರದು ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಆದರೆ, ಅದು ಸಾಧ್ಯವಿಲ್ಲ. ಏಕೆಂದರೆ, ಬಹುತೇಕ ಆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಆಂಗ್ಲ ಮಾಧ್ಯಮದಲ್ಲಿ. 9ನೇ ತರಗತಿಯಿಂದ ಅವರನ್ನು ಕನ್ನಡ ಮಾಧ್ಯಮಕ್ಕೆ ಬದಲಿಸಿದರೆ ಅದು ಅವರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಬಹುತೇಕ ಶಾಲೆಗಳು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮವನ್ನು ಬೋಧಿಸಿವೆ. ಈಗ ದಿಢೀರನೆ ಮಕ್ಕಳನ್ನು ರಾಜ್ಯ ಪಠ್ಯಕ್ರಮಕ್ಕೆ ಬದಲಿಸುವುದು ಕಷ್ಟಕರ’ ಎನ್ನುತ್ತಾರೆ ಯೋಗಾನಂದ.

ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡಿರುವ ಪೋಷಕರು ನಿತ್ಯವೂ ‘ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘಟನೆ’ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಮಧ್ಯೆ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆದು 8ನೇ ತರಗತಿ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಶಾಲೆಯಲ್ಲಿ ದಿನ ನಿತ್ಯ ಇತರೆ ವಿದ್ಯಾರ್ಥಿಗಳ ಎದುರು ಅವಮಾನ ಎದುರಿಸುವಂತಾಗಿದ್ದು ಇದರಿಂದ ಮಾನಸಿಕ ಹಿಂಸೆ ಉಂಟಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT