ಬುಧವಾರ, ಏಪ್ರಿಲ್ 1, 2020
19 °C

ಒಳನೋಟ | ಕಾರ್ಮಿಕ ನಿಧಿ ಮೇಲೆ ಕಳ್ಳಗಣ್ಣು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕೆ ಮೀಸಲಾಗಿರುವ ಕಾರ್ಮಿಕ ಕಲ್ಯಾಣ ನಿಧಿಯು ಅನಕ್ಷರಸ್ಥರು ಹಾಗೂ ಅನ್ಯಭಾಷಿಕರೇ ಹೆಚ್ಚಿರುವ ಈ ವಲ ಯದ ಅಸಂಘಟಿತರ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿದೆ. ಬಳಕೆಯಾಗದೇ ಉಳಿದಿರುವ ಸಾವಿರಾರು ಕೋಟಿ ರೂಪಾಯಿ ಗಂಟಿನ ಮೇಲೆ ಸರ್ಕಾರವೇ ಕಳ್ಳಗಣ್ಣು ನೆಟ್ಟಿದೆ.

2006–07ರಿಂದ ಈವರೆಗೆ ಕಟ್ಟಡಗಳ ಮಾಲೀಕರಿಂದ ಸೆಸ್‌ (ಕರ) ರೂಪದಲ್ಲಿ ₹8,538 ಕೋಟಿ ನಿಧಿ ಸಂಗ್ರಹವಾಗಿದೆ. ಆದರೆ, ಆ ಹಣವನ್ನು ಸದಾ ಅಪಾಯದ ನಡುವೆಯೇ ದುಡಿಯುವ ಕಾರ್ಮಿಕರ ಕಲ್ಯಾಣಕ್ಕೆ ಬಳಸುವಲ್ಲಿ ಕಾರ್ಮಿಕ ಇಲಾಖೆ ಸೋತಿದೆ ಎಂಬುದು ಇಲಾಖೆಯ ಅಂಕಿ–ಅಂಶಗಳಿಂದಲೇ ಸ್ಪಷ್ಟವಾಗುತ್ತದೆ.

14 ವರ್ಷಗಳಲ್ಲಿ ಖರ್ಚಾಗದೇ ಉಳಿದ ಈ ನಿಧಿಯು ಬೆಳೆದಂತೆ ಸರ್ಕಾರದ ಕಣ್ಣು ಇದರ ಮೇಲೆ ಬೀಳತೊಡಗಿತು. ಅನ್ಯ ಉದ್ದೇಶಕ್ಕೆ ನಿಧಿ ಬಳಕೆ ಮಾಡಿಕೊಳ್ಳುವ ಪ್ರಯತ್ನಕ್ಕೆ ಆಗಾಗ ಸರ್ಕಾರ ಕೈ ಹಾಕುತ್ತಲೇ ಬಂತು. ಸದ್ಯದ ಬಿಜೆಪಿ ನೇತೃತ್ವದ ಸರ್ಕಾರ ಕೂಡ ಈ ಪ್ರಯತ್ನಕ್ಕೆ ಮುಂದಾಯಿತು. ಅದಕ್ಕೆ ಒಪ್ಪದ ಕಾರಣಕ್ಕೆ, ಕಾರ್ಮಿಕ ಇಲಾಖೆಯ ಆಯುಕ್ತರ ಹುದ್ದೆಯಿಂದ ರೋಹಿಣಿ ಸಿಂಧೂರಿ ಯವರ ಎತ್ತಂಗಡಿಯೂ ಆಯಿತು.

ಈ ನಿಧಿಯನ್ನು ಸರ್ಕಾರ ನೆರೆ ಪರಿಹಾರದಂತಹ ಕಾಮಗಾರಿಗೆ ಬಳಸಿಕೊಂಡರೆ ತಪ್ಪೇನು ಎಂಬ ಪ್ರಶ್ನೆ ಉದ್ಭವಿಸಬಹುದು. ಆದರೆ, ಅಸಲಿಗೆ ಇದು ಸರ್ಕಾರದ ಹಣ ಅಲ್ಲವೇ ಅಲ್ಲ. ಏಕೆಂದರೆ, ಅದು ಕಟ್ಟಡಗಳ ಮಾಲೀಕರು ಸೆಸ್‌ ರೂಪದಲ್ಲಿ ಕಾರ್ಮಿಕರು ಮತ್ತವರ ಮಕ್ಕಳ ಕಲ್ಯಾಣಕ್ಕಾಗಿ ನೀಡಿದ ಹಣ. ಇದರ ನಿರ್ವಹಣೆಗೆ ತ್ರಿಸದಸ್ಯ ಸಮಿತಿ ಇದೆ. ನಿಧಿಯನ್ನು ಸೌಲಭ್ಯಗಳ ರೂಪದಲ್ಲಿ ಕಾರ್ಮಿಕರಿಗೇ ತಲುಪಿಸುವ ಹೊಣೆ ಸರ್ಕಾರದ್ದು. 

ಅಸುರಕ್ಷಿತ ಹಾಗೂ ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ ನಿರ್ದೇ‌ಶನದಂತೆ ಕಟ್ಟಡ ಕಾರ್ಮಿಕ ಕಾನೂನಿನ (1996) ಮೂಲಕ ಸೆಸ್ ಆಕರಣೆ ಜಾರಿಗೆ ಬಂದಿದೆ. ಈ ಕಾನೂನು ಜಾರಿಯಾಗಿ 10 ವರ್ಷಗಳ ಬಳಿಕ (2006ರಲ್ಲಿ) ಕರ್ನಾಟಕದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದೆ. ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡ ಕಾರ್ಮಿಕರಿಗೆ ಸವಲತ್ತುಗಳನ್ನು ನೀಡಲಾಗುತ್ತಿದೆ.

ನೋಂದಣಿಗೆ ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕಾರ್ಮಿಕ ಸಂಘಟನೆಗಳ ಹೋರಾಟದ ಬಳಿಕ ಈಗ ನೇರ ಅರ್ಜಿ ಸಲ್ಲಿಸಲೂ ಅವಕಾಶ ಕಲ್ಪಿಸಲಾಗಿದೆ. ನೋಂದಾಯಿತ ಕಾರ್ಮಿಕರಿಗೆ ಮಂಡಳಿ ನೀಡುತ್ತಿರುವ 19 ಸವಲತ್ತುಗಳನ್ನು ಪಡೆಯಲು ನೂರೆಂಟು ಷರತ್ತುಗಳಿವೆ. ಹೀಗಾಗಿ ಒಂದೆಡೆ ‘ನಿಧಿ’ ಬೆಳೆಯುತ್ತಿದ್ದರೆ, ಇನ್ನೊಂದೆಡೆ ಕಾರ್ಮಿಕರು ಕನಿಷ್ಠ ಸೌಲಭ್ಯಗಳಿಲ್ಲದೆ ದುಡಿಯುತ್ತಿದ್ದಾರೆ. ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಬಂದು ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ‌ನ್ನು ಬಿಲ್ಡರ್‌ಗಳು, ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದಾರೆ. ಅವರ ಮಕ್ಕಳು ಶಿಕ್ಷಣ, ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ.

ಗಗನಚುಂಬಿ ಕಟ್ಟಡಗಳಲ್ಲಿ ಹಗ್ಗವೊಂದಕ್ಕೆ ಜೋತು ಬಿದ್ದು ಕೆಲಸ ನಿರ್ವಹಿಸುವ ಕಾರ್ಮಿಕರು ಆಯ ತಪ್ಪಿದರೆ ತಲೆಯಲ್ಲಿರುವ ಹೆಲ್ಮೆಟ್ ಜೀವ ಕಾಪಾಡದು. ರಸ್ತೆ ಬದಿಯಲ್ಲಿ ಕೆಲಸ ಮಾಡುವಾಗ ವಾಹನ ಡಿಕ್ಕಿ ಹೊಡೆದು ಅದೆಷ್ಟೋ ಮಂದಿ ಸಾವನ್ನಪ್ಪಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೇಸರಿ ಅಥವಾ ಹಸಿರು ಬಣ್ಣದ ಸುರಕ್ಷಾ ಜಾಕೆಟ್‌ಗಳನ್ನು ಧರಿಸಿರುವ ಕಾರ್ಮಿಕರು ಕಾಣುತ್ತಾರೆ. ವಾಹನ ಸವಾರರ ಕಣ್ಣಿಗೆ ದೂರದಿಂದಲೇ ಕಾಣುವ ಕಾರ್ಮಿಕರಿಗೆ ಸದ್ಯಕ್ಕೆ ಇವುಗಳೇ ಕರ್ಣ ಕವಚ. ಇಷ್ಟು ಬಿಟ್ಟರೆ ಕಾರ್ಮಿಕರ ಸುರಕ್ಷತೆಗೆ ಬೇರಾವ ಕ್ರಮವೂ ಕಾಣದು.

ಕಾರ್ಮಿಕ ಕಲ್ಯಾಣ ನಿಧಿ ಬಳಕೆಯಾಗದೆ ಉಳಿದಿರುವುದು ಕರ್ನಾಟಕದಲ್ಲಿ ಮಾತ್ರವಲ್ಲ; ಇಡೀ ದೇಶದಲ್ಲಿ ಇದೇ ಸ್ಥಿತಿ ಇದೆ. ದೇಶದಾದ್ಯಂತ ಸುಮಾರು 10 ಕೋಟಿ ಕಾರ್ಮಿಕರಿದ್ದಾರೆ. 30 ಕಾರ್ಮಿಕ ಮಂಡಳಿಗಳಿದ್ದು, ಒಟ್ಟಾರೆ ಸುಮಾರು ₹50 ಸಾವಿರ ಕೋಟಿ ಕೊಳೆಯುತ್ತಿದೆ. ಈ ನಿಧಿಗೆ ಕನ್ನ ಹಾಕುವ ಕಳ್ಳದಾರಿಗಳನ್ನು ಸರ್ಕಾರಗಳು ಹುಡುಕಿಕೊಂಡಿವೆ.

1996ರ ಕಟ್ಟಡ ಕಾರ್ಮಿಕ ಕಾನೂನು ಮತ್ತು ಸೆಸ್ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಸಾಮಾಜಿಕ ಸುರಕ್ಷಾ (ಸಂಹಿತೆ) ಕಲ್ಯಾಣ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಮಂಡಳಿಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಈ ಮಂಡಳಿಗಳ ಅಡಿಯಲ್ಲಿ ನೀಡುವ ಸವಲತ್ತುಗಳಿಗೆ ಕಾರ್ಮಿಕರ ಕಲ್ಯಾಣ ನಿಧಿಯ ಹಣವನ್ನು ಬಳಸುತ್ತಿಲ್ಲ. ಬದಲಿಗೆ ಸರ್ಕಾರವೇ ಅನುದಾನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ನಿಧಿಯನ್ನು ಸರ್ಕಾರ ಕಬ್ಜಾ ಮಾಡಿಕೊಳ್ಳಲಿದೆ ಎಂಬುದು ಕಾರ್ಮಿಕರ ಆತಂಕ.

ದೇವಸ್ಥಾನಗಳ ‘ನಿಧಿ’ಯನ್ನು ಕಾಳಿಂಗ ಸರ್ಪಗಳು ಕಾಯುತ್ತವೆ ಎಂಬುದು ನಂಬಿಕೆ. ಅದೇ ರೀತಿ ಬಡ ಕಾರ್ಮಿಕರ ಕಲ್ಯಾಣ ‘ನಿಧಿ’ಗೆ ಕಾನೂನುಗಳ ರಕ್ಷಣೆ ಇತ್ತು. ತಿದ್ದುಪಡಿ ತರುವ ಮೂಲಕ ಅವುಗಳನ್ನು ಹಲ್ಲಿಲ್ಲದ ಹಾವುಗಳನ್ನಾಗಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಎರಡು ಹೊಸ ಮಂಡಳಿ ಉಳಿಸಿಕೊಂಡು 2007ರಿಂದ ಅಸ್ತಿತ್ವದಲ್ಲಿರುವ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಮುಚ್ಚುವ ಉದ್ದೇಶ ಸರ್ಕಾರಕ್ಕಿದೆ ಎಂಬುದು ಕಾರ್ಮಿಕ ಸಂಘಟನೆಗಳ ಅನುಮಾನ.

ಹೋರಾಟದಿಂದ ಸಿಕ್ಕಿದ ಸೌಲಭ್ಯ
‘1996ರ ಕಟ್ಟಡ ಕಾರ್ಮಿಕ ಕಾನೂನು ಮತ್ತು ಸೆಸ್ ಕಾನೂನುಗಳು ಹಾಗೆಯೇ ಸಿಕ್ಕಿದ್ದಲ್ಲ. 1985ರಲ್ಲಿ ಕಾರ್ಮಿಕರೇ ಕಾನೂನಿನ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಕೊಟ್ಟಿದ್ದರು. ಅವರ ನಿರಂತರ ಹೋರಾಟದಿಂದ ಗಳಿಸಿಕೊಂಡ ಕಾನೂನು ಅದು. ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳ ಇಚ್ಛಾಶಕ್ತಿ ಇಲ್ಲದ ಕಾರಣ ಕಾರ್ಮಿಕರಿಗೆ ಸೌಲಭ್ಯಗಳು ದೊರಕದಾಗಿವೆ ಎಂಬುದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಅಭಿಪ್ರಾಯ.

‘ನೋಂದಾಯಿತ ಕಾರ್ಮಿಕರಿಗೆ ಕೆಲ ಸವಲತ್ತುಗಳನ್ನು ನೀಡುತ್ತಿದ್ದರೂ ಅವುಗಳನ್ನು ಪಡೆಯಲು ಇರುವ ಷರತ್ತುಗಳನ್ನು ದಾಟುವುದೇ ಕಷ್ಟ. ಹೀಗಾಗಿ ಕಾರ್ಮಿಕ ನಿಧಿ ಖರ್ಚಾಗದೇ ಉಳಿದಿದೆ. ಇದು ಒಂದು ಭಾಗವಾದರೆ, ಇನ್ನೊಂದೆಡೆ ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಲು ಮುಂದಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಅವರಿಗೇ ಬಳಕೆಯಾಗಲು ಇದು ಅಡ್ಡಿಯಾಗುವ ಸಾಧ್ಯತೆ ಇದೆ. ಕಟ್ಟಡ ಕಾರ್ಮಿಕರಿಗೆ ಮತ್ತಷ್ಟು ಹಕ್ಕುಗಳನ್ನು ನೀಡಬೇಕೇ ಹೊರತು, ಇರುವ ಹಕ್ಕುಗಳನ್ನೂ ಕಸಿಯುವ ಪ್ರಯತ್ನ ಸರಿಯಲ್ಲ. ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಎಲ್ಲಾ ಸಂಸದರಿಗೂ ಪತ್ರ ಬರೆಯಲಾಗುವುದು ಎಂದು ಅವರು ಹೇಳಿದ್ದಾರೆ.

19 ಸೌಲಭ್ಯಗಳು
* ಮೂರು ವರ್ಷ ಸದಸ್ಯತ್ವದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗಳಿಗೆ ತಿಂಗಳಿಗೆ ₹2 ಸಾವಿರ ಪಿಂಚಣಿ

* ಮೃತ ಪಿಂಚಣಿದಾರರ ಪತಿ/ಪತ್ನಿಗೆ ತಿಂಗಳಿಗೆ ₹1 ಸಾವಿರ ಪಿಂಚಣಿ

* ನೋಂದಾಯಿತ ಫಲಾನುಭವಿಯು ಕಾಯಿಲೆ ಅಥವಾ ಕಟ್ಟಡ ಕಾಮಗಾರಿಗಳ ಅಘಾತದಿಂದ ಶಾಶ್ವತ/ಭಾಗಶಃ ಅಂಗವೈಕಲ್ಯ ಹೊಂದಿದರೆ ತಿಂಗಳಿಗೆ ₹2 ಸಾವಿರ ಪಿಂಚಣಿ ಹಾಗೂ ಶೇಕಡವಾರು ದುರ್ಬಲತೆ ಆಧರಿಸಿ ₹ 2 ಲಕ್ಷದವರೆಗೆ ಸಹಾಯಧನ

* ಕನ್ನಡಕ, ಶ್ರವಣಯಂತ್ರ, ಕೃತಕ ಕೈಕಾಲು ಮತ್ತು ಕುರ್ಚಿ ಸೌಲಭ್ಯ

* ತರಬೇತಿ ಮತ್ತು ಟೂಲ್ ಕಿಟ್ ಸೌಲಭ್ಯಕ್ಕೆ ₹30 ಸಾವಿರದವರೆಗೆ ನೆರವು

* ನೋಂದಾಯಿತ ಫಲಾನುಭವಿಯ ಅವಲಂಬಿತರಿಗೆ ಶ್ರಮ ಸಂಸಾರ ಸಾಮರ್ಥ್ಯ ತರಬೇತಿ

* ವಸತಿ ಸೌಲಭ್ಯದ ಅಡಿಯಲ್ಲಿ ₹2 ಲಕ್ಷದವರೆಗೆ ಮುಂಗಡ ಹಣ ನೀಡುವ ಸೌಲಭ್ಯ

* ಹೆರಿಗೆ ಸೌಲಭ್ಯ: ಮಹಿಳಾ ಫಲಾನುಭವಿಯ ಮೊದಲ ಎರಡು ಹೆಣ್ಣು ಮಕ್ಕಳಿಗೆ ₹30 ಸಾವಿರ ಮತ್ತು ಗಂಡು ಮಗುವಿಗೆ ₹20 ಸಾವಿರ

* ಶಿಶುಪಾಲನಾ ಸೌಲಭ್ಯ

* ಅಂತ್ಯಕ್ರಿಯೆ ವೆಚ್ಚ: ₹4 ಸಾವಿರ ಹಾಗೂ ₹50 ಸಾವಿರ ಸಹಾಯಧನ

* ಶೈಕ್ಷಣಿಕ ಸಹಾಯಧನ: ಫಲಾನುಭವಿಯ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ₹2 ಸಾವಿರದಿಂದ ₹30 ಸಾವಿರದವರೆಗೆ ಸಹಾಯಧನ

* ವೈದ್ಯಕೀಯ ಸಹಾಯಧನ: ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ₹300ರಿಂದ ₹10 ಸಾವಿರದವರೆಗೆ

* ಅಪಘಾತ ಪರಿಹಾರ: ಮರಣ ಹೊಂದಿದ್ದಲ್ಲಿ ₹5 ಲಕ್ಷ, ಸಂಪೂರ್ಣ ಶಾಶ್ವತ ದೌರ್ಬಲ್ಯ ಉಂಟಾದಲ್ಲಿ ₹2 ಲಕ್ಷ, ಭಾಗಶಃ ಶಾಶ್ವತ ದೌರ್ಬಲ್ಯ ಉಂಂಟಾದಲ್ಲಿ ₹1 ಲಕ್ಷ

* ಪ‍್ರಮುಖ ವೈದ್ಯಕೀಯ ವೆಚ್ಚ ಸಹಾಯಧನ: ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾರ್ಶ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಆಸ್ತಮಾ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿತ ಚಿಕಿತ್ಸೆ, ಮೂತ್ರಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ತ್ರಾವ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆಗಳಿಗೆ ₹2 ಲಕ್ಷ ನೆರವು

* ಮದುವೆ ಸಹಾಯಧನ: ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ತಲಾ ₹50 ಸಾವಿರ

* ಎರಡು ಬರ್ನರ್, ಸ್ಟವ್ ಜತೆಗೆ ಎಲ್‌ಪಿಜಿ ಸಂಪರ್ಕ

* ಬಿಎಂಟಿಸಿ ಬಸ್ ಪಾಸ್ ಸೌಲಭ್ಯ

* ಕೆಎಸ್‌ಆರ್‌ಟಿಸಿ ಬಸ್ ಪಾಸ್‌ ಸೌಲಭ್ಯ: ವಿದ್ಯಾಭ್ಯಾಸದಲ್ಲಿ ತೊಡಗಿರುವ ಕಟ್ಟಡ ಕಾರ್ಮಿಕರ ಇಬ್ಬರು ಮಕ್ಕಳಿಗೆ

* ತಾಯಿ ಮಗು ಸಹಾಯ ಹಸ್ತ: ಕಾರ್ಮಿಕ ಮಹಿಳೆಯು ಮಗುವಿನ ಶಾಲಾ ಪೂರ್ವ ಶಿಕ್ಷಣ, ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷ ತುಂಬುವ ತನಕ ₹6 ಸಾವಿರದವರೆಗೆ ಸಹಾಯಧನ

**
ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಅದರ ಅಡಿಯಲ್ಲಿ ನೀಡುತ್ತಿರುವ 19 ಸೌಲಭ್ಯಗಳೂ ಮುಂದಿನ ದಿನಗಳಲ್ಲಿ ರದ್ದಾಗುವ ಆತಂಕವಿದೆ. ಕಾರ್ಮಿಕ ಕಾನೂನನ್ನು ಉಳಿಸಬೇಕು
-ಕೆ. ಮಹಾಂತೇಶ್,  ಪ್ರಧಾನ ಕಾರ್ಯದರ್ಶಿ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ 

*
ಕಟ್ಟಡ ಕಾರ್ಮಿಕ ನಿಧಿಯನ್ನು ಅನ್ಯ ಉದ್ದೇಶಕ್ಕೆ ಬಳಸದೆ ಅವರ ಕಲ್ಯಾಣಕ್ಕೆ ಖರ್ಚು ಮಾಡಬೇಕೆಂದು ಕಾನೂನಿದೆ. ಹೀಗಾಗಿ ಅವರ ಕಲ್ಯಾಣಕ್ಕಾಗಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲಾಗುತ್ತಿದೆ.
-ಶಿವರಾಂ ಹೆಬ್ಬಾರ್, ಕಾರ್ಮಿಕ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು