ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ದಿಕ್ಕುತಪ್ಪಿದ ಎತ್ತಿನಹೊಳೆ, ಕರಗುತ್ತಿದೆ ಹಣ

ಹರಿಯದ ನೀರು * ಆರು ವರ್ಷದಲ್ಲೇ ದುಪ್ಪಟ್ಟಾದ ಯೋಜನಾ ವೆಚ್ಚ
Last Updated 7 ಮಾರ್ಚ್ 2020, 20:39 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಬಾಯಾರಿ ಬಳಲಿದ ಬರದ ಜಿಲ್ಲೆಗಳಿಗೆ, ದಿನದಿನಕ್ಕೂ ನೀರಿನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಲೇ ಇರುವ ಬೆಂಗಳೂರಿಗೆ ಕುಡಿಯುವ ನೀರು ಕೊಟ್ಟು ದಾಹ ಇಂಗಿಸುವ ಕನಸಿನಿಂದ ಹುಟ್ಟಿಕೊಂಡ ‘ಎತ್ತಿನಹೊಳೆ’ ಯೋಜನೆ ಕೆಲವು ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಧನದಾಹದಿಂದ ದಿಕ್ಕು ತಪ್ಪಿ ಹೋಗಿದೆ.

2012ರಲ್ಲಿ ರೂಪುಗೊಂಡು 2014ರ ಫೆಬ್ರುವರಿಯಲ್ಲಿ ಸರ್ಕಾರವು ಆಡಳಿತಾತ್ಮಕ ಒಪ್ಪಿಗೆ ನೀಡಿದ ಈ ಯೋಜನೆ ಹಿಂದಿನ ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳಜಂಟಿ ಕೂಸು. ಅನುಷ್ಠಾನಕ್ಕೆ ಒಪ್ಪಿಗೆ ಸಿಕ್ಕಿ ಆರು ವರ್ಷಗಳು ಕಳೆದರೂ ಯೋಜನೆ ಪ್ರಗತಿ ಆರಕ್ಕೇರಲಿಲ್ಲ; ಮೂರಕ್ಕಿಳಿಯಲಿಲ್ಲ ಎಂಬ ರೀತಿಯಲ್ಲಿ ಕುಂಟುತ್ತಾ, ಎಡುವುತ್ತಾ, ತೊಳಲುತ್ತಾ ಹಾಗೂ ಮುಗ್ಗರಿಸುತ್ತಲೇ ಇದೆ. ಸದ್ಯಕ್ಕೆ ನೀರು ಹರಿಯುವ ಲಕ್ಷಣಗಳು ಕಾಣಿಸದೇ ಇದ್ದರೂ ಜನರ ತೆರಿಗೆಯ ಹಣ ಮಾತ್ರ ಎತ್ತಿನಹೊಳೆ ಹಾಗೂ ಅದರ ಉಪಹೊಳೆಗಳಲ್ಲಿ ಆರು ವರ್ಷ ಹರಿದ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಕಂಡವರ ಪಾಲಾಗಿದೆ.

ಯೋಜನೆಗೆ ಚಾಲನೆ ನೀಡಿದ ವರ್ಷದಲ್ಲಿ ₹12,912 ಕೋಟಿ ಇದ್ದ ಮೊತ್ತ ಈಗ ₹24,982 ಕೋಟಿ ತಲುಪಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಡಿಸಿರುವ ಬಜೆಟ್‌ನಲ್ಲಿ ₹1,500 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಆದರೆ, ಈವರೆಗೆ ಕಾಮಗಾರಿ ಮಾಡಿದವರಿಗೆ ಕೊಡಬೇಕಾದ ಬಾಕಿ ಬಿಲ್ ಮೊತ್ತವೇ ₹967 ಕೋಟಿಯಷ್ಟಿದ್ದು, ಈಗ ಕೊಟ್ಟಿರುವ ಅನುದಾನದಿಂದ ಎತ್ತಿನಹೊಳೆ ಪೂರ್ವದ ಕಡೆಗೆ ಹರಿದು ಬಯಲುಸೀಮೆಗೆ ನೀರಿನ ಪಸೆ ತಲುಪಿಸುವುದು ಅಸಾಧ್ಯ.

ವೆಚ್ಚ ಹೆಚ್ಚಾಗಿದ್ದು ಏಕೆ: 2013ರ ವಿಧಾನಸಭೆ ಚುನಾವಣೆಗೆ ಮುನ್ನವೇ ಯೋಜನೆ ಘೋಷಣೆ ಮಾಡಬೇಕು ಎಂಬ ಅವಸರದಲ್ಲಿ 2012ರಲ್ಲಿ ಅಂದಿನ ಬಿಜೆಪಿ ಸರ್ಕಾರ ಎತ್ತಿನಹೊಳೆ ಯೋಜನೆಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿತು. ಆಗ ತರಾತುರಿ ಮಾಡಿದ್ದರಿಂದಾಗಿ ಯೋಜನೆಗೆ ಎಷ್ಟು ಎಕರೆ ಭೂಮಿ ಬೇಕು ಎಂಬ ಅಂದಾಜನ್ನೇ ಮಾಡಿರಲಿಲ್ಲ. ಯೋಜನೆಗೆ ಅನುಮೋದನೆ ನೀಡಿದಾಗ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ನೀಡಬೇಕಾದ ಪರಿಹಾರ ಮೊತ್ತ ₹460.25 ಕೋಟಿ ಎಂದು ಅಂದಾಜು ಮಾಡಲಾಗಿತ್ತು. ಎತ್ತಿನಹೊಳೆ ಯೋಜನಾ ಪ್ರದೇಶಕ್ಕೆ ಬೇಕಾದ ಭೂಮಿಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು.

ಕಾಲುವೆ, ಬೈರಗೊಂಡ್ಲು ಜಲಾಶಯಕ್ಕೆ ಬೇಕಾದ ಲೆಕ್ಕವನ್ನೇ ಹಾಕಿರಲಿಲ್ಲ. ಅದರ ಜತೆಗೆ ಅಂದು ಇದ್ದ ಭೂಪರಿಹಾರ ಕಾಯ್ದೆ ಅನ್ವಯ ಮಾರ್ಗಸೂಚಿ ದರದಷ್ಟು ಪರಿಹಾರ ನೀಡಿದರೆ ಸಾಕಾಗಿತ್ತು. 2013ರಲ್ಲಿ ಹೊಸ ಭೂ ಪರಿಹಾರ ಕಾಯ್ದೆ ಬಂದ ಮೇಲೆ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪರಿಹಾರ ನೀಡಬೇಕಾದ ಅನಿವಾರ್ಯ ಎದುರಾಯಿತು. 2018ರಲ್ಲಿ ಮರು ಡಿಪಿಆರ್ ಸಿದ್ಧಪಡಿಸಿದಾಗ ಈ ವೆಚ್ಚ ₹2,923.57 ಕೋಟಿ ಏರಿಕೆಯಾಗಿ, ₹3,383.82 ಕೋಟಿಗೆ ತಲುಪಿತು ಎಂದು ವಿವರ ನೀಡುತ್ತಾರೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು.

ನೀರು ಹರಿಯುವ ಉದ್ದಕ್ಕೂ ಬರುವ ಮೇಲ್ಗಾಲುವೆಗಳ ಸಂಖ್ಯೆಯನ್ನು 12 ಎಂದು ಅಂದಾಜಿಸಲಾಗಿತ್ತು. ಪರಿಷ್ಕೃತ ಡಿಪಿಆರ್‌ನಲ್ಲಿ ಇದು 31ಕ್ಕೆ ಏರಿಕೆಯಾಯಿತು. ಇದರಿಂದಾಗಿ ಯೋಜನಾವೆಚ್ಚ ₹1,415.64 ಕೋಟಿ ಇದ್ದದ್ದು, ₹3,549.54 ಕೋಟಿ ಹೆಚ್ಚಳವಾಗಿ, ₹4,965.17 ಕೋಟಿಗೆ ಮುಟ್ಟಿತು. ನಿರ್ಮಾಣ ಸಾಮಗ್ರಿ ಬೆಲೆ ಏರಿಕೆಯೂ ಸೇರಿದಂತೆ ಪ್ರತಿವರ್ಷ ಗುತ್ತಿಗೆ ಮೊತ್ತವನ್ನು ಶೇ 5ರಿಂದ ಶೇ 10ರಷ್ಟು ಹೆಚ್ಚಿಸಲು ಇರುವ ಅವಕಾಶವನ್ನು ಬಳಸಿಕೊಂಡ ಕೆಲವಷ್ಟು ಮಂದಿ ಅಧಿಕಾರಿಗಳು, ರಾಜಕಾರಣಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ, ಒಟ್ಟಾರೆ ವೆಚ್ಚವನ್ನು ಸರಿಸುಮಾರು ಶೇ 50ರಷ್ಟು ಹೆಚ್ಚಿಸಿದರು. ಈ ಅವಧಿಯಲ್ಲಿ ಸರ್ಕಾರ ನಡೆಸುವ ಪಕ್ಷಗಳು, ಶಾಸಕರು ಬದಲಾಗಿದ್ದರಿಂದಾಗಿ ‘ಒಳವ್ಯವಹಾರ’ದ ಮೊತ್ತವೂ ‘ಸಹಜ’ವಾಗಿ ಅವರ ಮನೆಗೆ ಹರಿದಿದೆ.

ಹಣ ಹರಿವ ಪೈಪ್‌: ಯೋಜನೆಯ ಆರಂಭದಲ್ಲಿ ತೆರೆದ ಕಾಲುವೆಗಳ ಮೂಲಕ ನೀರನ್ನು ಹರಿಸುವ ಪ್ರಸ್ತಾವನೆ ಇತ್ತು. ಕಾಲುವೆ ಹರಿಯುವ ಪ್ರದೇಶದಲ್ಲಿ ರೈತರು ನೀರನ್ನು ದುರ್ಬಳಕೆ ಮಾಡಿಕೊಳ್ಳಬಹುದು ಹಾಗೂ ನೀರು ಆವಿಯಾಗುವುದನ್ನು ತಪ್ಪಿಸಲು ಪೈಪ್‌ಲೈನ್ ಮೂಲಕ ನೀರು ಹರಿಸುವ ನೆಪ ಮುಂದಿಟ್ಟು ಹೊಸ ‘ದಾರಿ’ಯನ್ನು ರಾಜಕಾರಣಿಗಳು, ಅಧಿಕಾರಿಗಳು ಮುಂದಿಟ್ಟರು. ಇದರಿಂದಾಗಿ ಕೆಲವು ಕಡೆಗಳಲ್ಲಿ ಭೂಸ್ವಾಧೀನ ವೆಚ್ಚ ಇಳಿಕೆಯಾಯಿತು. ಕಾಲುವೆ ಮೂಲಕ ನೀರು ಹರಿಸಿದ್ದರೆ ಒಂದು ಕಿ.ಮೀ ಉದ್ದ ಕಾಮಗಾರಿ ₹3 ಕೋಟಿಯಲ್ಲಿ ಮುಗಿಯುತ್ತಿತ್ತು. ಪೈಪ್‌ಲೈನ್‌ ‘ಉತ್ತಮ’ ಗುಣಮಟ್ಟದ್ದು ಇರಬೇಕು ಎಂಬ ನೆಪವೊಡ್ಡಿ ಪ್ರತಿ ಕಿ.ಮೀ.ಗೆ ₹11 ಕೋಟಿ ವೆಚ್ಚ(ಕಿ.ಮೀಗೆ ₹8 ಕೋಟಿ ಹೆಚ್ಚಳ) ನಿಗದಿ ಮಾಡಿ ಟೆಂಡರ್ ಕರೆಯಲಾಯಿತು. ಇದೊಂದೇ ಬಾಬ್ತಿನಲ್ಲಿ ₹1,910 ಕೋಟಿಯಿದ್ದ ವೆಚ್ಚ ₹6,601 ಕೋಟಿಗೆ ಏರಿಕೆಯಾಗಿದ್ದು ‘ಪವಾಡ’ದಂತೆ ನಡೆದುಹೋಯಿತು. ಕರ್ನಾಟಕದ ಇಬ್ಬರು ‘ಪ್ರಭಾವಿ’ ಗುತ್ತಿಗೆದಾರರು ಹಾಗೂ ಆಂಧ್ರದ ಮೂವರು ಗುತ್ತಿಗೆದಾರರಿಗೆ ನೀಡುವ ಸಲುವಾಗಿ ಇಂತಹದೇ ಕಾಮಗಾರಿ ಮಾಡಿರಬೇಕು ಎಂದು ಟೆಂಡರ್ ಷರತ್ತು ಒಡ್ಡಿ ನೀಡಲಾಯಿತು. ಈ ಟೆಂಡರ್‌ ಹಿಂದೆ ‘ವ್ಯವಹಾರ’ದ ವಾಸನೆ ದಟ್ಟವಾಗಿ ಕಾಣುತ್ತದೆ ಎನ್ನುತ್ತವೆ ಇಲಾಖೆ ಮೂಲಗಳು.

ಭೂಸ್ವಾಧೀನವಿಲ್ಲದೇ ಟೆಂಡರ್‌: ಯೋಜನೆಗೆ ಬೇಕಾಗಿರುವ ಒಟ್ಟು ಭೂಮಿ 12,607 ಎಕರೆ. ಆದರೆ, ಈವರೆಗೆ ಸ್ವಾಧೀನಪಡಿಸಿಕೊಂಡಿರುವುದ ಕೇವಲ 347 ಎಕರೆ (ಎತ್ತಿನಹೊಳೆ ಪ್ರದೇಶ ಬಿಟ್ಟು). ಬೈರಗೊಂಡ್ಲು ಜಲಾಶಯಕ್ಕೆ ಬೇಕಾದ ಭೂಮಿಯ ಪರಿಹಾರದ ಮೊತ್ತ ಎಷ್ಟು ಎಂದು ಇನ್ನೂ ಇತ್ಯರ್ಥವಾಗಿಲ್ಲ. ಜಲಾಶಯ ನಿರ್ಮಾಣದ ₹592 ಕೋಟಿ ಮೊತ್ತದ ಕಾಮಗಾರಿಯೂ ಸೇರಿದಂತೆ ಎಲ್ಲ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಮುಗಿದು ಹೋಗಿದೆ. ಕಾಲಕಾಲಕ್ಕೆ ಇದ್ದ ಸರ್ಕಾರದಲ್ಲಿ ಸಚಿವರಾಗಿದ್ದವರು, ಶಾಸಕರಾಗಿದ್ದವರು ಇದರಲ್ಲಿ ಪಾಲು ಪಡೆದಿರುವುದು ಗುಟ್ಟಾಗಿ ಉಳಿದಿಲ್ಲ.

ನಾಲ್ಕೈದು ವರ್ಷದ ಹಿಂದೆಯೇ ಟೆಂಡರ್ ನೀಡಿ, ‘ಪರ್ಸಂಟೇಜ್‌’ ಪಡೆದು ಅಧಿಕಾರಸ್ಥರು ಕೈತೊಳೆದುಕೊಂಡಿದ್ದಾರೆ. ಕಾರ್ಯಾದೇಶವನ್ನೂ ಗುತ್ತಿಗೆದಾರರಿಗೆ ನೀಡಲಾಗಿದೆ. ಭೂಸ್ವಾಧೀನವಾಗದೇ ಇರುವುದರಿಂದ ಕಾಮಗಾರಿ ನಡೆಸುವಂತಿಲ್ಲ. ವರ್ಷದಿಂದ ವರ್ಷಕ್ಕೆ ಟೆಂಡರ್‌ ಮೊತ್ತದ ಶೇ 5ರಿಂದ ಶೇ 10ರಷ್ಟು ಮೊತ್ತವನ್ನು (ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಳ ಆಧರಿಸಿ) ಹೆಚ್ಚಳ ಮಾಡಲೇಬೇಕಾಗಿದೆ. ಗರಿಷ್ಠ ಮೊತ್ತವಾದ ಶೇ 10ರಷ್ಟು ಹೆಚ್ಚಳ ಮಾಡಿರುವುದರಿಂದಾಗಿ, ಕಾರ್ಯಾದೇಶವನ್ನು ₹1,000 ಕೋಟಿಗೆ ನೀಡಿದ್ದರೆ ಐದು ವರ್ಷದಲ್ಲಿ ಮೊತ್ತ ₹1,500 ಕೋಟಿಗೆ ಏರಿಕೆಯಾದಂತಾಗಿದೆ. ಹೀಗೆ ಯೋಜನೆಯಲ್ಲಿ ಗುತ್ತಿಗೆದಾರರು, ಕೆಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ದುಂಡಗಾಗುತ್ತಲೇ ಇದ್ದಾರೆ ಎನ್ನುತ್ತಾರೆ ಹಿಂದೆ ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿಯೊಬ್ಬರು.

ವಿದ್ಯುತ್‌ ವೆಚ್ಚದ ಲೆಕ್ಕವೇ ಇಲ್ಲ: ಎತ್ತಿನಹೊಳೆ ಯೋಜನೆಯನ್ನು ಎಷ್ಟು ನಿರ್ಲಕ್ಷ್ಯದಿಂದ ರೂಪಿಸಲಾಗಿದೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ. ಯೋಜನೆಯ ಆರಂಭಿಕ ಹಂತದಲ್ಲಿ ಐದು ಕಿರು ಅಣೆಕಟ್ಟೆಗಳಲ್ಲಿ ಸಂಗ್ರಹವಾಗುವ ನೀರನ್ನು ವರ್ಷದ 135 ದಿನ 940 ಅಡಿ ಎತ್ತರ ಪಂಪ್‌ ಮಾಡಿ ಕಾಲುವೆಗೆ ಬಿಡಬೇಕು. ಬೈರಗೊಂಡ್ಲು ಜಲಾಶಯದಿಂದ ಕೋಲಾರ–ಚಿಕ್ಕಬಳ್ಳಾಪುರಕ್ಕೆ ಹರಿಯುವ ಕಾಲುವೆಗೆ ಸುಮಾರು 300 ಅಡಿ ಎತ್ತಿ ಪಂಪ್ ಮಾಡಬೇಕು. ಇಷ್ಟು ಎತ್ತರಕ್ಕೆ ನೀರೆತ್ತಲು ಎಷ್ಟು ಪ್ರಮಾಣದ ವಿದ್ಯುತ್ ಬೇಕಾಗಲಿದೆ, ವಾರ್ಷಿಕ ನಿರ್ವಹಣಾ ವೆಚ್ಚ ಎಷ್ಟು, ಅದನ್ನು ವಿಶ್ವೇಶ್ವರಯ್ಯ ಜಲ ನಿಗಮ ಭರಿಸುತ್ತದೆಯೇ ಅಥವಾ ಕುಡಿಯುವ ನೀರು ಬಳಸುವ ಸ್ಥಳೀಯ ಸಂಸ್ಥೆಗಳು ಭರಿಸುತ್ತವೆಯೇ ಎಂಬ ಲೆಕ್ಕಾಚಾರವನ್ನೇ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT