ಶುಕ್ರವಾರ, ಮೇ 27, 2022
21 °C
ಸಿನಿಮಾ ಸಂಕಷ್ಟ

ಒಳನೋಟ: ಚೇತರಿಸೀತೇ ಚಿತ್ರರಂಗ?

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani Photo

ದಾವಣಗೆರೆ: ಹತ್ತೊಂಬತ್ತು ವರ್ಷಗಳ ಹಿಂದೆ ಲೈಟ್‌ ಬಾಯ್ ಆಗಿ ಸಿನಿಮಾ ಕಾರ್ಮಿಕರಾದವರು ಪ್ರಕಾಶ್‌. ಬೆಂಗಳೂರಿನ ರಾಜ್‌ಕುಮಾರ್ ಸಮಾಧಿಗೆ ಹೊಂದಿಕೊಂಡ ಬಡಾವಣೆಯಲ್ಲಿ ತಿಂಗಳ ಹಿಂದೆ ಅವರು ಪ್ರಾವಿಷನ್‌ ಸ್ಟೋರ್ಸ್ ಪ್ರಾರಂಭಿಸಿದ್ದಾರೆ. ಮಗನ ಭವಿಷ್ಯಕ್ಕೆ ಅದು ದಾರಿಯಾಗಲಿ ಎನ್ನುವುದು ಅವರ ಸಂಕಲ್ಪ.

ಲಗ್ಗೆರೆಯಲ್ಲಿ ಬಾಡಿಗೆ ಕಟ್ಟಲಾಗದೇ ಮನೆ ಖಾಲಿ ಮಾಡಿ, ಹೆಂಡತಿ–ಮಕ್ಕಳನ್ನು ಹಾಸನದ ತವರಿಗೆ ಕಳುಹಿಸಿದ್ದ ಲೈಟ್‌ ಯೂನಿಟ್‌ನ ಪ್ರದೀಪ್ ಈಗ ಮತ್ತೆ ತಮ್ಮವರನ್ನು ಕರೆಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಕಳೆದ ಶುಕ್ರವಾರ ತೆರೆಕಂಡ ‘ಟಾಮ್ ಅಂಡ್ ಜೆರ್ರಿ’ ಅವರ ಕೆಲಸ ಇರುವ ಚಿತ್ರ.

ದಾವಣಗೆರೆಯ ಪದ್ಮಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕ ರಾಜೇಂದ್ರ ಇನ್ನು ಏಕಪರದೆಯ ಚಿತ್ರಮಂದಿರಗಳು ಮೊದಲಿನಂತೆ ಉಸಿರಾಡುವುದು ಅನುಮಾನವೆನ್ನುತ್ತಾ ನಿಡುಸುಯ್ದರು.

ಈ ಚದುರಿದ ವಾಸ್ತವಗಳನ್ನೆಲ್ಲ ಜೋಡಿಸಿಕೊಂಡರೆ, ಕನ್ನಡ ಚಿತ್ರೋದ್ಯಮದ ಏದುಸಿರು ಕಿವಿಯೊಳಗೆ ಇಳಿದೀತು.

‘ಸಲಗ’, ‘ಕೋಟಿಗೊಬ್ಬ 3’ ತರಹದ ದೊಡ್ಡ ಕನ್ನಡ ಚಿತ್ರಗಳು ಆಯುಧ ಪೂಜೆಯ ಹೊತ್ತಿನಲ್ಲಿ ಚಿತ್ರರಂಗಕ್ಕೆ ಜೀವಾನಿಲವಾದಾವು ಎಂಬ ನಂಬಿಕೆ ಇತ್ತು. ಅದು ಪೂರ್ಣಪ್ರಮಾಣದಲ್ಲಿ ಕೈಗೂಡಲಿಲ್ಲ.

‘ದುನಿಯಾ ವಿಜಿ ಸಿನಿಮಾಗೆ ಫ್ಯಾಮಿಲಿ ಆಡಿಯೆನ್ಸ್‌ ಇಲ್ಲ. ಪಡ್ಡೆಗಳು ನೋಡುವ ಹಿಂದೆ, ಡಬ್ಬಲ್‌ ಮೀನಿಂಗ್ ಮಾತಿನ ಚಿತ್ರ ಅದು. ಹೀಗಾಗಿ ಅದರ ಕಲೆಕ್ಷನ್‌ ನೋಡಿಕೊಂಡು ಚಿತ್ರರಂಗದ ಭವಿಷ್ಯ ನಿರ್ಧರಿಸಲು ಆಗದು. ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಕುರಿತು ನಿರೀಕ್ಷೆ ಇತ್ತು. ಅದೂ ಹುಸಿಯಾಯಿತು’ ಎನ್ನುತ್ತಾರೆ ಪದ್ಮಾಂಜಲಿ ಚಿತ್ರಮಂದಿರದ ರಾಜೇಂದ್ರ.

ರಜನೀಕಾಂತ್‌ ನಟಿಸಿದ ‘ಅಣ್ಣಾತ್ತೆ’ ಚಿತ್ರ ಇತ್ತೀಚೆಗೆ ತೆರೆಕಂಡಿತು. ಬಿಡುಗಡೆಯ ದಿನ ಮೊದಲ ಪ್ರದರ್ಶನಕ್ಕೆ ದಾವಣಗೆರೆಯ ಚಿತ್ರಮಂದಿರಕ್ಕೆ ಹತ್ತು ಹನ್ನೆರಡು ಪ್ರೇಕ್ಷಕರು ಬಂದದ್ದನ್ನು ಕಂಡು ಅವರು ದಂಗಾದರು. ‘ಸ್ಟಾರ್‌ ನಟನ ಚಿತ್ರಕ್ಕೆ ಇಷ್ಟು ನೀರಸ ಪ್ರತಿಕ್ರಿಯೆ ಇರುತ್ತಿರಲಿಲ್ಲ. ಜನರಿಗೆ ಮನೆಯಲ್ಲೇ ಸಿಗುವ ಮನರಂಜನೆ ಈಗ ಸಾಕೆನಿಸುತ್ತಿದೆಯೋ ಏನೋ’ ಎಂದು ಇನ್ನೊಂದು ಪ್ರಶ್ನೆಯನ್ನು ರಾಜೇಂದ್ರ ಹಾಕಿದರು.

ಹರಪನಹಳ್ಳಿ, ಜಗಳೂರಿನಂತಹ ತಾಲ್ಲೂಕು ಕೇಂದ್ರಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚುತ್ತಿರುವುದು ಭವಿಷ್ಯದ ದಿಕ್ಸೂಚಿ ಎಂದೂ ಉದಾಹರಿಸಿದರು. ಕಾಸ್ಟ್ಯೂಮರ್ ಆಗಿ ಕೆಲಸ ಮಾಡುವ ಬೆಂಗಳೂರಿನ ಎಚ್.ರಾಜು ಕೋವಿಡ್ ಸಂಕಷ್ಟದ ಕಾಲದಲ್ಲಿ ಮಾಸ್ಕ್ ಹೊಲಿದು, ಬಟ್ಟೆ ಆಲ್ಟರ್‌ ಮಾಡಿಕೊಟ್ಟು ಬದುಕು ನಡೆಸಿದ್ದರು. ಚಿತ್ರಮಂದಿರಗಳಿಗೆ ಜನ ಬಂದರೆ ತಮಗೂ ಹಿಂದಿನಂತೆ ಕೆಲಸ ಸಿಗಲಿದೆ ಎನ್ನುವ ಅವರ ನಿರೀಕ್ಷೆ ಗರಿಗೆದರತೊಡಗಿದೆ.

ತಮ್ಮದೇ ಲೈಟಿಂಗ್ ಯೂನಿಟ್ ಇಟ್ಟುಕೊಂಡಿರುವ ಪ್ರದೀಪ್ ಪ್ರಕಾರ ಮುಂದಿನ ವರ್ಷ ಜನವರಿ ಹೊತ್ತಿಗೆ ಪರಿಸ್ಥಿತಿ ಸುಧಾರಿಸಬಹುದು.

ಲೈಟಿಂಗ್ ಬಾಯ್ ಆಗಿ 2002ರಲ್ಲಿ ಚಿತ್ರರಂಗ ಪ್ರವೇಶಿಸಿದ ಪ್ರಕಾಶ್, ಈಗ ಇದೊಂದೇ ಕೆಲಸವನ್ನು ನೆಚ್ಚಿಕೊಂಡಿಲ್ಲ. ಮನೆಗಳಿಗೆ ಪೇಂಟಿಂಗ್ ಮಾಡುವವರೊಟ್ಟಿಗೆ ಕೆಲಸಕ್ಕೆ ಹೋಗುತ್ತಾರೆ. ತಿಂಗಳ ಹಿಂದೆ ಪ್ರಾವಿಷನ್ ಸ್ಟೋರ್ಸ್ ಇಟ್ಟಿದ್ದರೂ ಈಗಲೂ ಅವಕಾಶ ಸಿಕ್ಕರೆ ಲೈಟಿಂಗ್ ಕೆಲಸಕ್ಕೂ ಒಲ್ಲೆ ಎನ್ನುವುದಿಲ್ಲ. ಚಿತ್ರರಂಗದಲ್ಲಿ ಬಹುತೇಕರು ಅದೊಂದೇ ಕೆಲಸವನ್ನು ನೆಚ್ಚಿ ಜೀವನ ಮಾಡಲಾಗದು ಎನ್ನುವುದು ಅವರ ಅನುಭವದ ಮಾತು.

‘ಭಜರಂಗಿ 2’ ಚಿತ್ರದ ಬಗ್ಗೆ ನೋಡಿದವರಿಂದ ಸಕಾರಾತ್ಮಕ ವಿಶ್ಲೇಷಣೆ ವ್ಯಕ್ತವಾಯಿತು. ಆದರೆ, ಅದು ತೆರೆಕಂಡ ದಿನವೇ ಪುನೀತ್ ರಾಜ್‌ಕುಮಾರ್‌ ಮೃತಪಟ್ಟಿದ್ದು ಹೊಡೆತ ಕೊಟ್ಟಿತು. ‘ನಮ್ಮಲ್ಲಿದ್ದ ಬೆರಳೆಣಿಕೆಯಷ್ಟು ಸ್ಟಾರ್‌ಗಳಲ್ಲಿ ಪವರ್‌ ಸ್ಟಾರ್ ಹೊರಟುಹೋದರು. ಅದರೊಟ್ಟಿಗೇ ಫ್ಯಾಮಿಲಿ ಆಡಿಯೆನ್ಸನ್ನೂ ಕಳೆದುಕೊಂಡೇವೋ ಏನೋ’ ಎಂಬ ರಾಜೇಂದ್ರ ಅವರ ಅನುಮಾನಕ್ಕೂ ಕಾರಣವಿದೆ. ಇನ್ನು ಚಿತ್ರರಂಗದ ಉದ್ಧಾರಕ್ಕೆ ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂಬ ನಿರ್ಮಾಪಕ ಜಾಕ್‌ ಮಂಜು ಅವರ ಆಗ್ರಹದ ಮೇಲಿನ ದೂಳು ಹಾಗೆಯೇ ಉಳಿದಿದೆ. ಅದನ್ನು ಕೊಡವಿದರಷ್ಟೆ ಉಳಿಗಾಲ ಎನ್ನುವುದಂತೂ ಸತ್ಯ.


ಸಿನಿಮಾ ಕಾರ್ಮಿಕರಲ್ಲಿ ಎಷ್ಟೋ ಜನ ತರಕಾರಿ ಮಾರುತ್ತಿದ್ದಾರೆ. ಕೋವಿಡ್‌ನಿಂದಾಗಿ, ಚಿತ್ರರಂಗದ ಮೇಲೆ ಕವಿದ ಮೋಡ ಕರಗಲು ಇನ್ನೂ ಒಂದೂವರೆ ವರ್ಷ ಬೇಕು.

- ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ

ಸ್ಟಾರ್‌ ನಟರು ವರ್ಷಕ್ಕೆ ಮೂರ್ನಾಲ್ಕು ಸಿನಿಮಾಗಳನ್ನಾದರೂ ಮಾಡಿದರಷ್ಟೇ ಉದ್ಯಮಕ್ಕೆ ಉಳಿಗಾಲ ಎಂದು, ಈಗಿನ ನಟರನ್ನು ಉದ್ದೇಶಿಸಿ ಅಂಬರೀಷ್ ಹೇಳಿದ್ದರು. ಅದು ಜಾರಿಗೆ ಬರಬೇಕಷ್ಟೆ.

- ರಾಜೇಂದ್ರ, ದಾವಣಗೆರೆ ಪದ್ಮಾಂಜಲಿ ಚಿತ್ರಮಂದಿರದ ವ್ಯವಸ್ಥಾಪಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು