ಬುಧವಾರ, ಮಾರ್ಚ್ 22, 2023
19 °C
2019ರಲ್ಲಿ ಉಂಟಾಗಿದ್ದ ನೆರೆ, ಅತಿವೃಷ್ಟಿಯಿಂದ ಚೇತರಿಕೆಗೆ ಸಂತ್ರಸ್ತರ ಪರದಾಟ

ಒಳನೋಟ: ಪುನರ್ವಸತಿಗೆ ಸರ್ಕಾರದ ನಿರ್ಲಕ್ಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೃಷ್ಣಾ ನದಿ ಪ್ರವಾಹದಿಂದ ಮನೆ ಕುಸಿದಿತ್ತು. ಮಕ್ಕಳೊಂದಿಗೆ ಬಿರುಕು ಬಿಟ್ಟಿರುವ ಗೋಡೆಗಳು ಯಾವಾಗ ಬೀಳುತ್ತವೆಯೋ ಎಂಬ ಆತಂಕದ ನಡುವೆಯೇ ಬದುಕುತ್ತಿದ್ದೇನೆ. ಪರಿಹಾರ ಇನ್ನೂ ದೊರೆತಿಲ್ಲ’

–ಹೀಗೆ ಹೇಳುತ್ತಾ ತಮ್ಮ ಮನೆಯನ್ನು ತೋರಿಸಿದ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮದ ಶಾಲಾ ಗಣಪತಿ ಕುರಣಿ ಅವರ ಕಣ್ಣಾಲಿಗಳು ತುಂಬಿ ಹೋಗಿದ್ದವು.

‘ದಾನಿಗಳು ನೀಡಿದ ಹಣದಿಂದ ಸಾಧ್ಯವಾದಷ್ಟೂ ದುರಸ್ತಿ ಮಾಡಿಸಿದ್ದೇನೆ. ನೆರೆ ಬಂದು ಎರಡು ವರ್ಷಗಳು ಕಳೆಯುತ್ತಿದ್ದರೂ ಸರ್ಕಾರದಿಂದ ನೆರವು ದೊರೆತಿಲ್ಲ. ದಿಕ್ಕೇ ತೋಚದಂತಾಗಿದೆ’ ಎಂದು ಕಣ್ಣೀರಿಟ್ಟರು.

ಹಲವು ಜಿಲ್ಲೆಗಳಲ್ಲಿ: ಇಂತಹ ಹಲವು ಕಣ್ಣೀರ ಕಥೆಗಳು ಪ್ರವಾಹ ಬಾಧಿತ ಜಿಲ್ಲೆಗಳ ಸಂತ್ರಸ್ತರದ್ದಾಗಿವೆ. ಹಲವು ಜಿಲ್ಲೆಗಳಲ್ಲಿ 2019ರಲ್ಲಿ ಉಂಟಾಗಿದ್ದ ನೆರೆ ಮತ್ತು ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರ ಪುನರ್ವಸತಿಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.  ಕೋವಿಡ್ ಕಾರ್ಮೋಡದಿಂದ ಕೆಲಸವಿಲ್ಲದೆ ಜನರ ಬಳಿ ಹಣವಿಲ್ಲದಂತಾಗಿದೆ. ನಿರ್ಮಾಣ ಸಾಮಗ್ರಿಗಳ ಬೆಲೆ ಏರಿಕೆಯಿಂದಾಗಿ ಚಿಂತೆ ಹೆಚ್ಚುತ್ತಲೇ ಇದೆ. ಪರಿಹಾರ ನೀಡಿದರೂ ಸಾಕಾಗದು ಎಂಬ ಆತಂಕ ಸಂತ್ರಸ್ತರದ್ದು. 

ಪ್ರವಾಹದಿಂದಾಗಿ ಮನೆ ಕುಸಿದಾಗ ಸಮುದಾಯ ಭವನ, ವಸತಿಗ್ರಹ, ಮತ್ತಿತರ ಕಡೆಗೆ ಆಶ್ರಯ ನೀಡಲಾಗಿತ್ತು. ಈಗಲೂ ಹಲವುಕಡೆ ಇಲ್ಲಿಯೇ ಬದುಕು ಮುಂದುವರಿದಿದೆ. ದೊಡ್ಡದೊಡ್ಡ ಸಭಾಭವನದಲ್ಲಿ ಸೀರೆ, ಟರ್ಪಾಲಿನ್‌ಗಳನ್ನು ಅಡ್ಡಡ್ಡ ಕಟ್ಟಿಕೊಂಡು ತಮ್ಮ ಖಾಸಗೀತನಕ್ಕೆ ಪರದಾಡುತ್ತಿದ್ದಾರೆ. ಬಯಲು ಶೌಚಾಲಯವೇ ಗತಿಯಾಗಿದೆ. ಇನ್ನೂ ಕೆಲವರು ಬಿದ್ದ ಮನೆಗಳಿಗೇ ಶೀಟ್‌ ಹಾಕಿಸಿ, ಟರ್ಪಾಲಿನ್‌ಗಳ ಹೊದಿಕೆ ಹೊದಿಸಿ, ದಿನ ದೂಡುತ್ತಿದ್ದಾರೆ. ಕೆಲ ಜಿಲ್ಲೆಗಳಲ್ಲಿ ತಾತ್ಕಾಲಿಕ ಶೆಡ್‌ಗಳೇ ಸೂರಾಗಿವೆ. ಮಳೆಬಂದರೆ ಇಂದಿಗೂ ಪಾತ್ರೆಪಗಡಗಳನ್ನು ಹೊದಿಸಬೇಕು. ತಾವೂ ಪ್ಲಾಸ್ಟಿಕ್‌ ಹಾಳೆ ಹೊದ್ದೇ ಇರಬೇಕು. 

ನೆರೆ ಬಂದಾಗ ಹಲವರು ಉಟ್ಟ ಬಟ್ಟೆಯಲ್ಲಿಯೇ ಮನೆಬಿಟ್ಟು ಆಚೆ ಬಂದರು. ದವಸ ಧಾನ್ಯ, ಬಟ್ಟೆ, ಹೀಗೇ ಬದುಕೇ ನೀರಿನಲ್ಲಿ ಕೊಚ್ಚಿಹೋಗಿತ್ತು. ಜೊತೆಗೆ ಅವರ ಇರುವಿಕೆಯ ದಾಖಲೆಗಳೂ ಕೊಚ್ಚಿಹೋಗಿದ್ದವು. ಬಹುತೇಕ ಗ್ರಾಮಗಳಲ್ಲಿ ಹಿರಿಯರಿಂದ ಬಂದ ಮನೆಗಳಿದ್ದವು. ಅವಕ್ಕೂ ಸೂಕ್ತ ದಾಖಲೆಗಳ ಕೊರತೆ ಇದ್ದವು. ಈಗ ದಾಖಲೆಗಳೇ ಇಲ್ಲದಂತಾಗಿದೆ.

ದಾಖಲೆಗಳಿಲ್ಲ, ಪರಿಹಾರವಿಲ್ಲ: ‘ದಾಖಲೆಗಳಿಲ್ಲ’ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಪರಿಹಾರದಿಂದ ವಂಚಿತವಾಗಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಇಂತಹ 11ಸಾವಿರ ಮಂದಿಗೆ ಪರಿಹಾರ ಸಿಕ್ಕಿಲ್ಲ.  ಬೆಳಗಾವಿ ಜಿಲ್ಲೆಯ ಗೋಕಾಕಿನಲ್ಲಿ 300 ಕುಟುಂಬಗಳು ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿವೆ.

ರಾಜ್ಯದ ನೆರೆ ಮತ್ತು ಅತಿವೃಷ್ಟಿ ಪರಿಣಾಮವಾದ ಜಿಲ್ಲೆಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನಲ್ಲಿ ಬಿದ್ದಿದ್ದ 96 ಮನೆಗಳ ಪೈಕಿ ಮರು ನಿರ್ಮಾಣವಾದುದು 18 ಮಾತ್ರ! ಹಾಸನದಲ್ಲಿ 2,152 ಮನೆಗಳಲ್ಲಿ 902 ಮನೆಗಳಷ್ಟೆ ಸಿದ್ಧವಾಗಿವೆ. ಮೈಸೂರಿನ ಎಚ್.ಡಿ. ಕೋಟೆ ತಾಲ್ಲೂಕಿನ ಬಿದರಹಳ್ಳಿ ಜನರಿಗೆ ಸಿಕ್ಕಿದ್ದ ಭರವಸೆ ಈಡೇರಿಲ್ಲ.

ಅಕ್ರಮದ ವಾಸನೆ: ಕೇವಲ ಆಡಳಿತಾತ್ಮಕ ಕಾರಣದಿಂದ ಪರಿಹಾರ ಸಿಗುತ್ತಿಲ್ಲವೆಂದಲ್ಲ, ಭ್ರಷ್ಟಾಚಾರ ಹಾಗೂ ಅಕ್ರಮಗಳು ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ.

ಹಾವೇರಿ ಜಿಲ್ಲೆಯಲ್ಲಿ  ಲಂಚ ಕೊಟ್ಟವರಿಗೆ ಮಾತ್ರ ಪರಿಹಾರಧನ ಎಂಬ ಆರೋಪ ದೇವಗಿರಿ, ಕೂಡಲ ಗ್ರಾಮಗಳ ಸಂತ್ರಸ್ತರದ್ದು.

‘ತಾಲ್ಲೂಕು ಪಂಚಾಯಿತಿ ಸದಸ್ಯರೊಬ್ಬರು ತಮ್ಮ ಕೊಟ್ಟಿಗೆಗೆ ‘ಎ’ ವರ್ಗದ ಲಾಭ ಪಡೆದಿದ್ದಾರೆ. ಅದೇ ಗ್ರಾಮದ ಕುಟುಂಬವೊಂದು ಪರಿಹಾರ ಸಿಗದೆ ಮಸೀದಿಯಲ್ಲಿದೆ’ ಎಂದು ಅಕ್ರಮಕ್ಕೆ ಕನ್ನಡಿ ಹಿಡಿಯುತ್ತಾರೆ ಧಾರವಾಡ ತಾಲ್ಲೂಕಿನ ಯಾದವಾಡದ ಮಡಿವಾಳಪ್ಪ ದಿಂಡಲಕೊಪ್ಪ.

ಉತ್ತರ ಕರ್ನಾಟಕದಲ್ಲಿ ಈ ಅವಸ್ಥೆಯಾದರೆ, ದಕ್ಷಿಣದಲ್ಲಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೊಡಗು ಜಿಲ್ಲೆಯ ಬೆಟ್ಟದಕಾಡು, ಕುಂಬಾರಗುಂಡಿ, ಬರಡಿ, ಗುಹ್ಯ, ಕರಡಿಗೋಡಿನ ನಿವಾಸಿಗಳಿಗೆ ಸೂರು ಸಿಕ್ಕಿಲ್ಲ. ಹಲವರು ನದಿ ಪಕ್ಕವೇ ಶೆಡ್‌ನಲ್ಲಿದ್ದಾರೆ. ಅಭ್ಯತ್‍ಮಂಗಲದ ಅರೆಕಾಡು ವ್ಯಾಪ್ತಿಯಲ್ಲಿ 8 ಎಕರೆ ಒತ್ತುವರಿ ತೆರವುಗೊಳಿಸಿ, ಪುನರ್ವಸತಿಗೆ ಜಾಗ ಗುರುತಿಸಲಾಗಿತ್ತು. ನಂತರ ಪ್ರಗತಿಯಾಗಿಲ್ಲ. ಮಳೆಗಾಲ ಆರಂಭವಾಗಿದ್ದು, ಮತ್ತೆ ಭೀತಿ ಎದುರಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲೇ ಪುನರ್‌ವಸತಿಗೆ ₹ 34 ಕೋಟಿ ಬಾಕಿ ಇದೆ. ಹಲವು ಮನೆಗಳು ಬುನಾದಿ ಹಂತದಲ್ಲೇ ಇವೆ. ಕೆಲವರು ಅರ್ಧಂಬರ್ಧ ಗೋಡೆ ಕಟ್ಟಿಕೊಂಡಿದ್ದಾರೆ. ಕರಾವಳಿ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲೂ ಪರಿಸ್ಥಿತಿಗಳೂ ಇದಕ್ಕಿಂತ ಭಿನ್ನವಾಗಿಲ್ಲ. ನೆರೆ ಮತ್ತು ಅತಿವೃಷ್ಟಿಪೀಡಿತ ಜಿಲ್ಲೆಗಳಲ್ಲಿ ಇಂಥ ಹಲವು ಕಣ್ಣೀರಿನ ಕತೆಗಳು ಸಿಗುತ್ತವೆ. ಕಡತಗಳಲ್ಲಿ ಮನೆ ನಿರ್ಮಾಣ, ಪರಿಹಾರಧನ ವಿಲೇವಾರಿಯಾದ ಪುರಾವೆಗಳಿದ್ದರೂ ಬದುಕು ಬಯಲಿನಲ್ಲಿಯೇ ಸಾಗುತ್ತಿದೆ. 

ಶಾಲೆಗಳದ್ದೂ ಇದೇ ಸ್ಥಿತಿ
ಬದುಕಿಗೆ ಸುರಕ್ಷೆ ನೀಡುವ ಸೂರುಗಳ ಕತೆ ಹೀಗಾದರೆ, ಭವಿಷ್ಯವನ್ನು ಸುರಕ್ಷಿತಗೊಳಿಸುವ ಶಾಲೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನದಿ ದಂಡೆಗಳ ಗ್ರಾಮಗಳಲ್ಲಿರುವ ಸರ್ಕಾರಿ ಶಾಲಾ ಕಟ್ಟಡಗಳು ಎರಡು ವರ್ಷಗಳೇ ಕಳೆದರೂ ದುರಸ್ತಿಯಾಗಿಲ್ಲ.  

ಗುತ್ತಿಗೆದಾರರ ಆಯ್ಕೆಗೆ ವಿಳಂಬ, ಜಾಗದ ಕೊರತೆ, ಜಾಗವಿದ್ದರೂ ಒತ್ತುವರಿ ತೆರವಿಗೆ ಸ್ಥಳೀಯರ ಅಸಹಕಾರ, ನ್ಯಾಯಾಲಯದಲ್ಲಿನ ಪ್ರಕರಣ, ಕೋವಿಡ್‌ ಸಂಕಷ್ಟ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಣವಿದ್ದರೂ ಕಾಮಗಾರಿ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. 

ಶೆಡ್‌ಗಳೇ ಆಸರೆ: ಆಗ ತಾತ್ಕಾಲಿಕವಾಗಿ ಆಶ್ರಯ ನೀಡಿದ್ದ ತಗಡಿನ ಶೆಡ್‌ಗಳಿಂದ ಈಗಲೂ ಶಾಲೆಗೆ ಮುಕ್ತಿ ಸಿಕ್ಕಿಲ್ಲ. ‘ಪ್ರವಾಹಕ್ಕೆ ತುತ್ತಾದ ಮೊದಲ ವರ್ಷ ತಾತ್ಕಾಲಿಕ ಶೆಡ್‌ಗಳಲ್ಲೇ ಮಕ್ಕಳಿಗೆ ಪಾಠ ಮಾಡಿದ್ದೆವು. ಬಳಿಕ ಕೋವಿಡ್‌ನಿಂದಾಗಿ ಶಾಲೆ ತೆರೆದಿಲ್ಲ. ಈ ಅವಧಿಯಲ್ಲಿ ಕಾಮಗಾರಿಯನ್ನಾದರೂ ಪೂರ್ಣಗೊಳಿಸಬೇಕಿತ್ತು’ ಎಂದು ಹುನಗುಂದ ತಾಲ್ಲೂಕಿನ ಬೇವಿನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಬಿ.ಬಿ. ಸಜ್ಜನ ಹೇಳುತ್ತಾರೆ. 

ಕೆಲವೆಡೆ ಶಾಲೆಗಳು ಕಾಳಜಿ ಕೇಂದ್ರಗಳಾಗಿ ಬದಲಾಗಿದ್ದವು. ಆಗ ಹಾಳಾದ ಶೌಚಾಲಯಗಳ ದುರಸ್ತಿಯಾಗಬೇಕಿದೆ. ಬಾಗಲಕೋಟೆ ಜಿಲ್ಲೆಯ ಬೇವಿನಾಳ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರಿಯಾಗಿದೆ. ಗುತ್ತಿಗೆದಾರರು ಮುಂದಾಗುತ್ತಿಲ್ಲ. ನಿಗದಿಯಾದ ಸ್ಥಳ ಒತ್ತುವರಿಯಾಗಿದ್ದು, ತೆರವಿಗೆ ಯಾರೂ ಮುಂದಾಗುತ್ತಿಲ್ಲ.  

ಮಳೆಬಂದು ಬದುಕಿನೊಂದಿಗೆ ಮಕ್ಕಳ ಭವಿಷ್ಯವನ್ನೂ ಕೊಚ್ಚಿಕೊಂಡು ಹೋಗಿದೆ. ಸರಿಪಡಿಸಬೇಕಾದ ವ್ಯವಸ್ಥೆಯ ಮೇಲೆ ನಿಷ್ಕ್ರಿಯೆ ಹಾಗೂ ವಿಳಂಬಗತಿಯ ಪಾಚಿ ಮನೆಮಾಡಿದೆ.

**

ಸರ್ಕಾರದಿಂದ ₹ 5 ಲಕ್ಷ ಸಿಗುತ್ತದೆಂದು ಸಹಕಾರ ಸಂಘದಲ್ಲಿ ₹ 4 ಲಕ್ಷ ಸಾಲ ಪಡೆದಿರುವೆ. ಮೊದಲಿಗೆ ₹25ಸಾವಿರ ದೊರೆತಿದೆ. ₹ 5 ಲಕ್ಷ ಕೊಡದಿದ್ದರೆ ವಿಷ ಕುಡಿಯುವುದೊಂದೆ ದಾರಿ
-ವೆಂಕಟೇಶ್ ಭಟ್‌, ಅಯ್ಯಪ್ಪಸ್ವಾಮಿ ದೇವಸ್ಥಾನದ ಅರ್ಚಕ, ಹಿರೇಬೈಲು, ಚಿಕ್ಕಮಗಳೂರು ಜಿಲ್ಲೆ

**

ಕರಡಿಗೋಡಿನಲ್ಲಿ ನದಿ ದಡ ಬಿಟ್ಟು ಪರ್ಯಾಯ ಸ್ಥಳಕ್ಕೆ ತೆರಳುತ್ತೇವೆ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರೂ ಪುನರ್ವಸತಿ ಕಲ್ಪಿಸಿಲ್ಲ. ಈ ಮಳೆಗಾಲದಲ್ಲಿ ಮತ್ತೆ ಕಾಳಜಿ ಕೇಂದ್ರ ಸೇರಬೇಕಾದ ಸ್ಥಿತಿ ಇದೆ
-ಎಂ.ಎ. ಕೃಷ್ಣ, ಸಂಚಾಲಕ, ನಿವೇಶನ ಹೋರಾಟ ಸಮಿತಿ, ಕೊಡಗು ಜಿಲ್ಲೆ

**

ಮಳೆಯಿಂದ ಮನೆ ಕುಸಿದಾಗ 4 ದಿನ ಕಾಳಜಿ ಕೇಂದ್ರದಲ್ಲಿ ಇದ್ದೆವು. ಬಳಿಕ ಬಾಡಿಗೆ ಮನೆಗೆ ಹೋದೆವು. ಪರಿಹಾರ 2 ಕಂತು ಮಾತ್ರ ಸಿಕ್ಕಿದೆ.ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಪರಿಹಾರ ಸಾಲುತ್ತಿಲ್ಲ
-ಅಶ್ವಿನಿ, ಸುಹೇಬ್‌, ಚಿಪ್ಪಿನಕಟ್ಟೆ, ಹಾಸನ ಜಿಲ್ಲೆ

**

ಪರಿಹಾರ ಸಿಗುತ್ತದೆ ಎಂದು ಹೇಳಿದ್ದರು. ನಂತರ ಪಟ್ಟಿಯಲ್ಲಿ ನಿಮ್ಮ ಹೆಸರು ಡಿಲೀಟ್ ಆಯ್ತು ಎಂದರು. ಬಿದ್ದಿರುವ ಮನೆಯಲ್ಲೇ ಬದಕುತ್ತಿದ್ದೇವೆ.
-ಕಾಂತಾ ಕುರಣಿ, ಮಾಂಜರಿ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ

ಇವನ್ನೂ ಓದಿ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು