ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಯೋಜನೆ ಸಾಕಾರಕ್ಕೆ ಇಚ್ಛಾಶಕ್ತಿಯ ಕೊರತೆ

Last Updated 2 ಜನವರಿ 2021, 19:53 IST
ಅಕ್ಷರ ಗಾತ್ರ

ಧಾರವಾಡ: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕೇಂದ್ರ ಮತ್ತು ರಾಜ್ಯಗಳ ನಡುವಿನ ಜಟಾಪಟಿಯಿಂದಾಗಿ ಉತ್ತರ ಕರ್ನಾಟಕದ ಬಹಳಷ್ಟು ರೈಲ್ವೆ ಯೋಜನೆಗಳು ಸೊರಗಿವೆ.

ಶತಮಾನದ ಬೇಡಿಕೆಗಳು ಒಂದೆಡೆಯಾದರೆ, ದಶಕಗಳ ಹಿಂದೆ ಆರಂಭಗೊಂಡ ಬಹಳಷ್ಟು ಕಾಮಗಾರಿಗಳು ಇಂದಿಗೂ ಆರಂಭಗೊಂಡಿಲ್ಲ. ವಿಳಂಬ ಧೋರಣೆ ಅನುಸರಿಸುವ ಮೂಲಕ ಮತ್ತಷ್ಟು ಕಾಮಗಾರಿಗಳ ಯೋಜನಾ ವೆಚ್ಚದ ಗಾತ್ರವನ್ನು ಹಿರಿದಾಗಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂಬ ಆರೋಪಗಳೂ ಇವೆ.

ಕುಡಚಿ–ಬಾಗಲಕೋಟೆ (141 ಕಿ.ಮೀ.) ರೈಲು ಮಾರ್ಗ ಯೋಜನೆ 2010ರಲ್ಲಿ ಆರಂಭಗೊಂಡಿತು. ಯೋಜನಾ ವೆಚ್ಚ ₹816 ಕೋಟಿಯಿಂದ ಆರಂಭಗೊಂಡಿದ್ದು 2016ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ, 33 ಕಿ.ಮೀ. ಕಾಮಗಾರಿ ಮಾತ್ರ ಪೂರ್ಣಗೊಂಡಿದೆ! ಈಗ ಇದರ ಯೋಜನಾ ಗಾತ್ರವು ₹2,200 ಕೋಟಿಗೆ ಏರಿದೆ.ಆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಕೃಷ್ಣಾ ತೀರದಿಂದ ಮಡಗಾಂವ್ ಬಂದರು ಹಾಗೂ ಮುಂಬೈಗೆ ನೇರ ಸಂಪರ್ಕ ಕಲ್ಪಿಸುವ ಮಾರ್ಗದ ಪ್ರಸ್ತಾವ ಮರುಜೀವ ಪಡೆದು ಬರೋಬ್ಬರಿ 30 ವರ್ಷ ಕಳೆದಿದೆ. ವಿಶೇಷವೆಂದರೆ 142 ಕಿ.ಮೀ ದೂರದ ಈ ಮಾರ್ಗದಲ್ಲಿ ಇಲ್ಲಿಯವರೆಗೆ ಬರೀ 40 ಕಿ.ಮೀ ಮಾತ್ರ ಪೂರ್ಣಗೊಂಡಿದೆ. ನಾಲ್ಕು ಬಾರಿ ಸಮೀಕ್ಷೆ ಹಾಗೂ ವಿನ್ಯಾಸ ಬದಲಾವಣೆಗೆ ಒಳಗಾಗಿಯೂ ಯೋಜನೆ ಕುಂಟುತ್ತಾ ಸಾಗಿದೆ.

1998ರಲ್ಲಿ ಹುಬ್ಬಳ್ಳಿ–ಅಂಕೋಲಾ ಮಾರ್ಗವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. 168 ಕಿ.ಮೀ. ಉದ್ದದ ಈ ಮಾರ್ಗ ಉತ್ತರ ಕರ್ನಾಟಕ ಹಾಗೂ ಕರಾವಳಿ ನಡುವಿನ ಸಂಪರ್ಕ ಸೇತುವಾಗಿತ್ತು. ಹಸಿರುಪೀಠ ಇದಕ್ಕೆ ತಡೆ ನೀಡಿತು. ಆದರೆ ಇದರಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಇತ್ತು ಎನ್ನುವುದು ಹೋರಾಟಗಾರರ ಆರೋಪ.

ಮುನಿರಾಬಾದ್– ಮೆಹಬೂಬನಗರ ನಡುವಿನ 210 ಕಿ.ಮೀ. ದೂರದ ಮಾರ್ಗವೂ ಇದೇ ಅವಧಿಯಲ್ಲಿ ಘೋಷಣೆಯಾಗಿತ್ತು. ಗಂಗಾವತಿಯವರೆಗೆ 60 ಕಿ.ಮೀ. ಮಾರ್ಗವಷ್ಟೇ ಪೂರ್ಣಗೊಂಡಿದೆ. ಗದಗ–ವಾಡಿ ನಡುವಿನ 220 ಕಿ.ಮೀ. ದೂರದ ರೈಲು ಯೋಜನೆಯು ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಮಂತ್ರಿಯಾಗಿದ್ದಾಗ ಘೊಷಣೆಯಾಗಿತ್ತು. ನಂತರ ಗದಗ ಬದಲು ಅದನ್ನು ಕೊಪ್ಪಳದಿಂದ ಎಂದು ಬದಲಿಸಲಾಯಿತು.

ಗದಗ ಹಾಗೂ ಯಲೋಗಿ ನಡುವಿನ ರೈಲ್ವೆ ಸಂಪರ್ಕ ಮಾರ್ಗದಿಂದಾಗಿ 70 ಕಿ.ಮೀ. ದೂರದ ಪ್ರಯಾಣ (3 ಗಂಟೆಯಷ್ಟು) ತಗ್ಗುತ್ತಿತ್ತು. ಹಾಗೆಯೇ ಕೂಡಲಿ–ಬಾಗಲಕೋಟೆ–ರಾಯಚೂರು ಮಾರ್ಗದ ಘೊಷಣೆಯಾದರೂ ಯಾವುದೇ ಕೆಲಸ ಆಗಿಲ್ಲ.

‘ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ರೈಲ್ವೆ ಕಾಮಗಾರಿಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಜೋಡಿ ರೈಲು ಮಾರ್ಗ, ವಿದ್ಯುದೀಕರಣದ ಕೆಲಸಗಳು 2010ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ, 2021ರ ಹೊಸ್ತಿಲಲ್ಲಿದ್ದರೂ ಇನ್ನೂ ಬಹಳಷ್ಟು ಮಾರ್ಗಗಳು ಬಾಕಿ ಉಳಿದಿವೆ. ಸಾಕಷ್ಟು ಮೇಲ್ಸೇತುವೆಗಳು ಘೋಷಣೆಯಾಗಿದ್ದರೂ ಅವುಗಳು ಇನ್ನೂ ಕಾಮಗಾರಿ ಹಂತ ತಲುಪಿಲ್ಲ. ಇನ್ನೂ ಕೆಲವೆಡೆ ಸಾರ್ವಜನಿಕರಿಗೆ ಉಪಯೋಗವಾಗಬೇಕಾದ ಇಂಥ ಓವರ್‌ ಬ್ರಿಜ್‌ ಮತ್ತು ಲೆವೆಲ್ ಕ್ರಾಸಿಂಗ್‌ಗಳು ಇಲಾಖೆಯವರ ಅನುಕೂಲಕ್ಕೆ ಆಗಿವೆಯೇ ಹೊರತು, ಸ್ಥಳೀಯರ ಪ್ರಯೋಜನಕ್ಕೆ ಬಂದಿಲ್ಲ’ ಎಂದು ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಖುತ್ಬುದ್ದೀನ್ ಖಾಜಿ ಬೇಸರ ವ್ಯಕ್ತಪಡಿಸಿದರು.

‘ಇಷ್ಟು ಮಾತ್ರವಲ್ಲ, ಇಲಾಖೆಯಲ್ಲಿ 15 ವರ್ಷಗಳ ಹಿಂದಿನ ಬಹಳಷ್ಟು ನಿರುಪಯುಕ್ತ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಹರಾಜು ಹಾಕಿ ಬಂದ ಹಣವನ್ನು ಇಲಾಖೆಯ ಖಜಾನೆಗೆ ಕಳುಹಿಸದ ಕಾರಣ ಬಹಳಷ್ಟು ಹಳಿಗಳು, ಲೆವೆಲ್ ಕ್ರಾಸಿಂಗ್ ವಸ್ತುಗಳು ಮಣ್ಣಿನಡಿ ಸೇರಿವೆ. ಇಲಾಖೆಗೆ ಸೇರಿದ ನೂರಾರು ಕೋಟಿ ರೂಪಾಯಿ ಮಣ್ಣುಪಾಲಾಗುತ್ತಿರುವುದು ಅಧಿಕಾರಿಗಳ ನಿಷ್ಕಾಳಜಿಗೆ ಹಿಡಿದ ಕನ್ನಡಿ’ ಎಂದು ಆರೋಪಿಸಿದರು.

*
ಬಳ್ಳಾರಿ ಗಣಿ, ಬಾಗಲಕೋಟೆಯ ಸಕ್ಕರೆ ಕಾರ್ಖಾನೆ ಸೇರಿದಂತೆ ನೈರುತ್ಯ ರೈಲ್ವೆಯಿಂದ ಕೇಂದ್ರಕ್ಕೆ ಸುಮಾರು ₹4ಸಾವಿರ ಕೋಟಿಯಷ್ಟು ಲಾಭವಿದೆ. ಆದರೆ ಈ ಆದಾಯಕ್ಕೆ ತಕ್ಕಂತೆ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಬೇಕಿದೆ.
– ಖುತ್ಬುದ್ದೀನ್ ಖಾಜಿ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT