ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಿದ್ದರೂ ಹೆಣ್ಣೆಂದು ಹತ್ಯೆ!

ಮುಚ್ಚಿದ ಎರಡು ಖಾಸಗಿ ನರ್ಸಿಂಗ್‌ ಹೋಂಗಳು, 5ನೇ ಸ್ಥಾನದಲ್ಲಿ ಮಂಡ್ಯ ಜಿಲ್ಲೆ
Last Updated 13 ಜುಲೈ 2019, 20:00 IST
ಅಕ್ಷರ ಗಾತ್ರ

ಮಂಡ್ಯ: ಎರಡು ಹೆಣ್ಣು ಹೆತ್ತಿದ್ದ ಆ ಮಹಿಳೆಗೆ ಮೂರನೇ ಬಾರಿ ಗಂಡುಮಗುವನ್ನೇ ಹೆರಬೇಕು ಎಂಬ ಆಸೆ. ಜೊತೆಗೆ ಪತಿ ಹಾಗೂ ಕುಟುಂಬ ಸದಸ್ಯರ ಒತ್ತಡವೂ ಇತ್ತು.

ಮತ್ತೆ ಬಸುರಿಯಾದಾಗ, ರಹಸ್ಯ ವಾಗಿ ಸ್ಕ್ಯಾನಿಂಗ್‌ ಮಾಡಿ, ಲಿಂಗ ತಿಳಿಸಿ ಹಣ ಪೀಕಿಸುತ್ತಿದ್ದ, ನಗರದ ಆಸ್ಪತ್ರೆ ರಸ್ತೆಯಲ್ಲಿದ್ದ ನರ್ಸಿಂಗ್‌ ಹೋಂ ಅನ್ನು ಸಂಪರ್ಕಿಸಿದರು. ಸ್ಕ್ಯಾನಿಂಗ್‌ ಮಾಡಿಸಿಕೊಂಡ ಮಹಿಳೆಗೆ ಮೂರನೇ ಮಗುವೂ ಹೆಣ್ಣು ಎಂಬುದು ಗೊತ್ತಾಯಿತು. ವಿಚಿತ್ರ ಎಂದರೆ, ಅಬಾರ್ಷನ್‌ ಮಾಡಿಸಿಕೊಂಡಾಗ ಆ ತಾಯಿ ಕುತೂಹಲಕ್ಕಾಗಿ ಭ್ರೂಣವನ್ನು ನೋಡಿದರು. ಆಕೆಯ ಹೃದಯ ಹೋಳಾಯಿತು, ಅದು ಹೆಣ್ಣಲ್ಲ; ಗಂಡು ಭ್ರೂಣವಾಗಿತ್ತು!

ಅದು ಹೆಣ್ಣು ಭ್ರೂಣವಾಗಿದ್ದರೆ ಈ ಪ್ರಕರಣ ಹೊರಜಗತ್ತಿಗೆ ತಿಳಿಯುತ್ತಲೇ ಇರಲಿಲ್ಲ. ಗಂಡಾಗಿದ್ದ ಕಾರಣ ವೈದ್ಯರ ವಿರುದ್ಧ ಹೋರಾಟಕ್ಕೆ ನಿಂತರು, ಹಲ್ಲೆಗೆ ಮುಂದಾದರು. ಅದು ರಾಜ್ಯದಾದ್ಯಂತ ಸುದ್ದಿಯೂ ಆಯಿತು. 2005ರಲ್ಲಿ ನಡೆದ ಈ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ಹೆಣ್ಣು ಭ್ರೂಣ ಹತ್ಯೆಯ ಚಿತ್ರಣವನ್ನು ಅನಾವರಣಗೊಳಿಸಿತ್ತು. ಈ ಪ್ರಕರಣಕ್ಕಿಂತ, ಘಟನೆಯ ನಂತರ ನಡೆದ ಕಾನೂನು ಹೋರಾಟ ಸತ್ತು ಬಿದ್ದ ಕತೆ ಮತ್ತಷ್ಟು ಕುತೂಹಲ ಮೂಡಿಸುತ್ತದೆ. ಇದು ‘ಗರ್ಭಧಾರಣೆ ಪೂರ್ವ ಹಾಗೂ ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ’ (ಪಿಸಿ ಅಂಡ್‌ ಪಿಎನ್‌ಡಿಟಿ)ಯ ಸೋಲು ಎನ್ನಲೂ ಅಡ್ಡಿ ಇಲ್ಲ. ಹಣದಾಸೆಗೆ ಬಲಿಯಾದ ಆ ಮಹಿಳೆಯ ಪತಿ, ಕೋರ್ಟ್‌ನಲ್ಲಿ ವಿರುದ್ಧ ಸಾಕ್ಷ್ಯ ನುಡಿದಿದ್ದ. ಇದೇ ವ್ಯಕ್ತಿ ಮೊದಲು ‘ಲಿಂಗ ಪತ್ತೆ ವೇಳೆ ಸುಳ್ಳು ಹೇಳಿ ವೈದ್ಯರು ಅಬಾರ್ಷನ್ ಮಾಡಿದ್ದಾರೆ’ ಎಂದು ಆರೋಪಿಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ದೂರು ಕೊಟ್ಟಿದ್ದ. ಆದರೆ ಕೋರ್ಟ್‌ಗೆ ತೆರಳುವಷ್ಟರಲ್ಲಿ ಪ್ರಕರಣದ ಸ್ವರೂಪ ಬದಲಾಗಿತ್ತು. ರಕ್ತಸ್ರಾವ ಹೆಚ್ಚಾಗಿದ್ದ ಕಾರಣ ತಾಯಿಯ ಪ್ರಾಣ ರಕ್ಷಣೆಗಾಗಿ ಅಬಾರ್ಷನ್‌ ಮಾಡಿಸಬೇಕಾಯಿತು ಎಂದಿದ್ದ. ಅಲ್ಲಿಗೆ ಪ್ರಕರಣದ ಕತೆ ಮುಗಿದು ಹೋಗಿತ್ತು.

ಈ ಘಟನೆ ನಡೆದಾಗ ಮಂಡ್ಯ ಜಿಲ್ಲೆ ಹೆಣ್ಣು ಭ್ರೂಣ ಹತ್ಯೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿತ್ತು. ನಂತರ ಮಹಿಳಾ ಸಂಘಟನೆಗಳು ಖಾಸಗಿ ನರ್ಸಿಂಗ್‌ ಹೋಂಗಳ ವಿರುದ್ಧ ಹೋರಾಟ ನಡೆಸಿ ದವು. ಏಜೆಂಟರ ಮೂಲಕ ವಿವಿಧ ಜಿಲ್ಲೆ ಗಳಿಂದ ಮಹಿಳೆಯರನ್ನು ಕರೆತಂದು ಹೆಣ್ಣು ಭ್ರೂಣ ಕತ್ತರಿಸುತ್ತಾರೆ ಎಂಬ ಆರೋಪ ಹೊತ್ತಿದ್ದ ಜ್ಯೋತಿ ಹಾಗೂ ಸ್ಪಂದನಾ ನರ್ಸಿಂಗ್‌ ಹೋಂಗಳಿಗೆ ಬೀಗ ಹಾಕಿಸಿದರು. ಹೆಣ್ಣು ಭ್ರೂಣ ಹತ್ಯೆಯಲ್ಲಿ 2ನೇ ಸ್ಥಾನದಲ್ಲಿದ್ದ ಜಿಲ್ಲೆ, 2011ರ ಸಮೀಕ್ಷೆಯಲ್ಲಿ 5 ಸ್ಥಾನಕ್ಕೆ ಬಂದಿತು.

ಆಸ್ತಿ ಕೇಳುತ್ತಾರೆಂದು ಹೆಣ್ಣುಭ್ರೂಣ ಹತ್ಯೆ! ‘ಈಗಲೂ ಹೆಣ್ಣು ಭ್ರೂಣ ಹತ್ಯೆ ನಿಂತಿಲ್ಲ, ಏಜೆಂಟರ ಜಾಲವೇ ಇದೆ. ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಮದುವೆಗೆ ವಿಪರೀತ ಖರ್ಚು ಮಾಡುತ್ತಾರೆ, ಹೀಗಾಗಿ ಇಲ್ಲಿಯ ವರೆಗೆ ಹೆಣ್ಣೆಂದರೆ ಅಲರ್ಜಿ. ವಿವಾಹ ಮಾಡಿಕೊಟ್ಟ ನಂತರ ಹೆಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳುತ್ತಾರೆ ಎಂಬ ಕಾರಣಕ್ಕೂ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಾರೆ ಎಂಬ ಸಂಗತಿ ಅಧ್ಯಯನದಿಂದ ತಿಳಿದು ಬಂದಿದೆ’ ಎನ್ನುತ್ತಾರೆ ಮಹಿಳಾ ಪರ ಹೋರಾಟಗಾರರಾದ ಗೌರಿ ವೆಂಕಟೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT