ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಮೈಮರೆತು ಕುಳಿತಿದ್ದೇ ಕಾರಣ

ಎಲ್ಲರ ಬೊಟ್ಟು ಚಾಮರಾಜನಗರ ಜಿಲ್ಲಾಡಳಿತದ ವೈಫಲ್ಯದತ್ತ...
Last Updated 8 ಮೇ 2021, 21:30 IST
ಅಕ್ಷರ ಗಾತ್ರ

ಚಾಮರಾಜನಗರ: ಜೀವ ರಕ್ಷಕ ಆಮ್ಲಜನಕ ಕೊರತೆ ಆಗಬಹುದು ಎಂಬುದು ಗೊತ್ತಿದ್ದರೂ ಉದಾಸೀನ ಮಾಡಿಬಿಟ್ಟರು. ಬೇಜಬಾಬ್ದಾರಿಯಿಂದ ನಡೆದುಕೊಂಡುಜೀವ ತೆಗೆದರು. ಇದು ಎಲ್ಲರೂ ತಲೆತಗ್ಗಿಸುವ ವಿಚಾರ...

–ಮೃತರ ಸಂಬಂಧಿಗಳು ಮಾತ್ರವಲ್ಲ; ಪ್ರತ್ಯಕ್ಷದರ್ಶಿಗಳು, ಅಂದು ರಾತ್ರಿ ಆಸ್ಪತ್ರೆ ಮುಂದೆ ನಿಂತಿದ್ದ ಆಟೊ ಚಾಲಕರು, ಜನಪ್ರತಿನಿಧಿಗಳು, ‘ಡಿ’ ದರ್ಜೆ ನೌಕರರು ಚಾಮರಾಜನಗರದ ಜಿಲ್ಲಾಡಳಿತ ಹಾಗೂ ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪರಿ ಇದು.

ಜಿಲ್ಲಾ ಕೋವಿಡ್‌ ಆಸ್ಪತ್ರೆ ವೈದ್ಯರೊಬ್ಬರು ಹೇಳುವಂತೆ ಅಂದು ಆಸ್ಪತ್ರೆಯಲ್ಲಿ ಇದ್ದದ್ದು 120 ಸಿಲಿಂಡರ್‌. ಸಂಜೆ ವೇಳೆಗೆ ಖಾಲಿಯಾಗಲಿವೆ ಎಂಬುದು ಕೆಲವರಿಗೆ ಗೊತ್ತಿದೆ. ಈ ವಿಚಾರವನ್ನು ಜಿಲ್ಲಾಡಳಿತದ ಗಮನಕ್ಕೂ ತಂದಿದ್ದಾರೆ. ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಉದಾಸೀನ ಮನೋಭಾವ ತೋರಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಆಮ್ಲಜನಕ ಕೊರತೆ ಉಂಟಾಗಿ ಸಾವಿನ ಸರಣಿ ಆರಂಭವಾಗಿದೆ. ಆದರೆ, ಅಧಿಕಾರಿಗಳು ವ್ಯವಸ್ಥೆ ಮಾಡಲು ಆರಂಭಿಸಿದ್ದು ರಾತ್ರಿ 11 ಗಂಟೆ ಬಳಿಕ!

ಜಿಲ್ಲಾಧಿಕಾರಿ ಎಂ.ಆರ್‌.ರವಿ ಹಾಗೂ ಮೈಸೂರಿನ ಸಹಾಯಕ ಔಷಧ ನಿಯಂತ್ರಣಾಧಿಕಾರಿ ಜೊತೆ ರಾತ್ರಿ 11.30ಕ್ಕೆ ಮೈಸೂರು ಸಂಸದ ಪ್ರತಾಪಸಿಂಹ ಕಾಲ್‌ ಕಾನ್ಫರೆನ್ಸ್‌ ನಡೆಸಿ ತಕ್ಷಣವೇ 40 ಸಿಲಿಂಡರ್‌ ವ್ಯವಸ್ಥೆ ಮಾಡಿದ್ದಾರೆ. ಆದರೆ, ಸಿಲಿಂಡರ್‌ಗಳು ಮೈಸೂರಿನಿಂದ ಚಾಮರಾಜನಗರ ತಲುಪಿದ್ದು ಮಾತ್ರ ಮಧ್ಯರಾತ್ರಿ 2 ಗಂಟೆಗೆ!

‘ಮೇ 2ರಂದು ರಾತ್ರಿ 9 ಗಂಟೆಗೆ ಚಾಮರಾಜನಗರ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದಾಗ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಮೊದಲೇ ತಿಳಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು’ ಎಂದು ಬೇಸರದಿಂದಲೇ ನುಡಿಯುತ್ತಾರೆ ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್‌.

ಆದರೆ, ಚಾಮರಾಜನಗರ ಜಿಲ್ಲಾಧಿಕಾರಿಯೊಬ್ಬರ ಮೇಲೆಯೇ ಇದರ ಸಂಪೂರ್ಣ ಹೊಣೆಯನ್ನು ಹಾಕಲು ಅವರು ಸಿದ್ಧವಿಲ್ಲ. ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರತ್ತಲೂ ಬೊಟ್ಟು ಮಾಡುತ್ತಾರೆ.ಅಂದು ಮೈಸೂರಿನಿಂದ ಸಕಾಲಕ್ಕೆ ಆಮ್ಲಜನಕ ಪೂರೈಕೆ ಆಗಲಿಲ್ಲ ಎಂಬಮಾತನ್ನು ಎಂ.ಆರ್.ರವಿ ಕೂಡ ಘಟನೆಯ ದಿನ ಹೇಳಿಕೊಂಡಿದ್ದರು.

ಇದನ್ನು ಒಪ್ಪಲು ಸಿಂಧೂರಿ ಸಿದ್ಧರಿಲ್ಲ. ‘ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಉಂಟಾಗಿರುವ ಸಿಲಿಂಡರ್‌ ಕೊರತೆ ವಿಚಾರದಲ್ಲಿ ನನ್ನ ಪಾತ್ರವೇ ಇಲ್ಲ. ಅದು ಪೂರೈಕೆದಾರರು ಹಾಗೂ ಚಾಮರಾಜನಗರ ಜಿಲ್ಲಾಡಳಿತಕ್ಕೆ ಬಿಟ್ಟ ವಿಚಾರ. ಇಷ್ಟಿದ್ದರೂ ಮಾನವೀಯತೆಯಿಂದ ಪೂರೈಕೆ ಮಾಡಿದ್ದೇವೆ’ ಎಂದು ತಮ್ಮ ನಡೆ ಸಮರ್ಥಿಸಿಕೊಳ್ಳುತ್ತಾರೆ.

ಶನಿವಾರವೇ ಗೊತ್ತಿತ್ತು: ‘ಘಟನೆ ಹಿಂದಿನ ದಿನ ಅಂದರೆ ಮೇ 1ರಂದು ಆಮ್ಲಜನಕ ಕೊರತೆ ಇರುವ ಬಗ್ಗೆ ವೈದ್ಯರೊಬ್ಬರು ನನಗೆ ಮಾಹಿತಿ ನೀಡಿದರು. ತಕ್ಷಣವೇ ರವಿ ಜೊತೆ ಮಾತನಾಡಿದೆ. ವ್ಯವಸ್ಥೆ ಮಾಡುವುದಾಗಿ ಹೇಳಿದರು. ಆದರೆ, ಸಮಸ್ಯೆ ತೀವ್ರಗೊಂಡಿರುವ ಬಗ್ಗೆ ಮಾತನಾಡಲು ಭಾನುವಾರ ಮತ್ತೆ 9.30 ಗಂಟೆಗೆ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದು, ಸ್ವೀಕರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಕರೆ ಸ್ವೀಕರಿಸಲಿಲ್ಲ’ ಎಂದು ಹೇಳುತ್ತಾರೆ ಚಾಮರಾಜನಗರ ಮಾಜಿ ಸಂಸದ ಆರ್‌.ಧ್ರುವನಾರಾಯಣ.

ಮಾನವೀಯತೆ ತೋರಬೇಕಿತ್ತು...

ಮೈಸೂರಿನಲ್ಲಿ ಸಾಕಷ್ಟು ಸಿಲಿಂಡರ್‌ ಇದ್ದು, ಚಾಮರಾಜನಗರದಿಂದ ಬೇಡಿಕೆ ಬಂದಾಗ ಮೈಸೂರು ಜಿಲ್ಲಾಧಿಕಾರಿ ಮಾನವೀಯತೆ ತೋರಬೇಕಿತ್ತು. ವೈಫಲ್ಯ ಆಗಿದ್ದು ನಿಜ. ಯಾರದ್ದು ತಪ್ಪು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕು.

ವಿ.ಶ್ರೀನಿವಾಸಪ್ರಸಾದ್‌,ಸಂಸದ, ಚಾಮರಾಜನಗರ

ಸಚಿವರು ಮಾಹಿತಿ ಪಡೆಯಬೇಕಿತ್ತು...

ಯಾವ ಜಿಲ್ಲೆಯಲ್ಲಿ ಏನು ವ್ಯವಸ್ಥೆ ಇದೆ ಎಂಬುದನ್ನು ಆರೋಗ್ಯ ಸಚಿವರು ನಿತ್ಯ ತಿಳಿದುಕೊಳ್ಳಬೇಕಿತ್ತು. ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯವೇ ಈ ಸಾವಿಗೆ ಪ್ರಮುಖ ಕಾರಣ.

ಆರ್‌.ಧ್ರುವನಾರಾಯಣ, ಮಾಜಿ ಸಂಸದ, ಚಾಮರಾಜನಗರ

ಮೈಸೂರು ಜಿಲ್ಲಾಡಳಿತದ ಲೋಪವಿಲ್ಲ

ಚಾಮರಾಜನಗರ ಜಿಲ್ಲಾಧಿಕಾರಿ ರವಿ, ಮೈಸೂರು ಜಿಲ್ಲಾಧಿಕಾರಿ ಜೊತೆಗೂ ಮಾತನಾಡಿಲ್ಲ. ಈಗ ಅವರತ್ತ ಬೊಟ್ಟು ಮಾಡುತ್ತಿದ್ದಾರೆ. ಮೈಸೂರು ಕಡೆಯಿಂದ ಯಾವುದೇ ಲೋಪವಾಗಿಲ್ಲ. ಆಮ್ಲಜನಕ ಪೂರೈಕೆ ಸಂಬಂಧ ಸರ್ಕಾರ ಮೊದಲು ಆಯಾಯ ಜಿಲ್ಲೆಗಳಿಗೆ ಇಂತಿಷ್ಟು ಕೋಟಾ ನಿಗದಿಪಡಿಸಬೇಕು.

ಪ್ರತಾಪಸಿಂಹ,ಸಂಸದ, ಮೈಸೂರು

ಸರಿಯಾಗಿ ಯೋಜನೆ ರೂಪಿಸಬೇಕಿತ್ತು...

ನಮಗೆ ಬಳ್ಳಾರಿಯಿಂದ ಲಿಕ್ವಿಡ್‌ ಆಮ್ಲಜನಕ ಪೂರೈಕೆ ಆಗುತ್ತದೆ. ಮೈಸೂರಿನಲ್ಲಿ ಏನಾದರೂ ಆದರೆ ಬಳ್ಳಾರಿ ಜಿಲ್ಲಾಡಳಿತವನ್ನು ದೂರಲು ಸಾಧ್ಯವೇ? ಕೊರತೆಯಾದಾಗ ಯೋಜನೆ ರೂಪಿಸಿ ತರಿಸಿಕೊಳ್ಳಬೇಕು. ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಆಮ್ಲಜನಕ ಪೂರೈಸಬೇಕು, ಕೈಗಾರಿಕಾ ಉದ್ದೇಶಕ್ಕೆ ಕೊಡಬಾರದು ಎಂದಷ್ಟೇ ರೀ‌–ಫಿಲ್ಲಿಂಗ್/ಪೂರೈಕಾ ಸಂಸ್ಥೆಗಳಿಗೆ ಸೂಚಿಸಿದ್ದೆ.

ರೋಹಿಣಿ ಸಿಂಧೂರಿ,ಜಿಲ್ಲಾಧಿಕಾರಿ, ಮೈಸೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT