ಗುರುವಾರ , ಏಪ್ರಿಲ್ 9, 2020
19 °C

ಒಳನೋಟ | ‘10 ದಿನದಿಂದ ಅಂಗಡಿ ಇಟ್ಟಿಲ್ಲ...’

ಜಯಸಿಂಹ ಆರ್‌. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು–ತುಮಕೂರು ನಡುವಣ ಹೆದ್ದಾರಿಯಲ್ಲಿ ಬರುವ ಡಾಬಸ್‌ಪೇಟೆಯಲ್ಲಿ ಕೊರೊನಾವೈರಸ್‌ ಲಾಕ್‌ಡೌನ್‌ನ ಬಿಸಿ ಜೋರಾಗಿಯೇ ತಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಡಾಬಸ್‌ಪೇಟೆ ತಕ್ಕಮಟ್ಟಿಗೆ ದೊಡ್ಡ ಪಟ್ಟಣವೇ ಹೌದು. ರಾಮನಗರ–ಪಾವಗಡ ರಾಜ್ಯ ಹೆದ್ದಾರಿಯು, ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಹಾದುಹೋಗುವ ಜಂಕ್ಷನ್ ಇದು. ಹೀಗಾಗಿ ಇದು ದೊಡ್ಡ ವ್ಯಾಪಾರ ಕೇಂದ್ರ.

ಬೆಂಗಳೂರು–ಪುಣೆ ಹೆದ್ದಾರಿಯು ಈ ಪಟ್ಟಣವನ್ನು ಮೇಲುಸೇತುವೆ ಮೂಲಕ ಹಾದುಹೋಗುತ್ತದೆ. ಈ ಮೇಲುಸೇತುವೆ ಕಳೆಗೆ ಎರಡು ದೊಡ್ಡ ಅಂಡರ್‌ಪಾಸ್‌ಗಳಿವೆ. ಸೇತುವೆ ಕೆಳಗಿನ ಉಳಿದ ಜಾಗಗಳು, ಇಲ್ಲಿನ ಬಹುಡೊಡ್ಡ ಬೀದಿಬದಿ ತಿಂಡಿ ಅಂಗಡಿಗಳ ಜಂಕ್ಷನ್‌. ಇಲ್ಲಿ 50ಕ್ಕೂ ಹೆಚ್ಚು ತಳ್ಳುಗಾಡಿಗಳಲ್ಲಿ ಬೆಳಿಗ್ಗೆ 7ರಿಂದ ತಡರಾತ್ರಿ 11ರವೆರಗೂ ಊಟ, ತಿಂಡಿ ಲಭ್ಯ. ಇಡ್ಲಿವಡೆ, ಪೂರಿಸಾಗು, ರೈಸ್‌ಬಾತ್, ಎಗ್‌ರೈಸ್, ಬಿರಿಯಾನಿ, ಚಿಕನ್ ಕಬಾಬ್, ಮೀನಿನ ಕಬಾಬ್‌, ಬೇಯಿಸಿದ ಮೊಟ್ಟೆ, ಆಮ್ಲೆಟ್‌, ಬಜ್ಜಿ–ಬೋಂಡ... ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.   

ಸದಾ ಗಿಜಿಗಿಡುತ್ತಿದ್ದ ಈ ಸ್ಥಳ, 10 ದಿನಗಳಿಂದ ಸಂಪೂರ್ಣ ಸ್ತಬ್ಧವಾಗಿದೆ. ಕೊರೊನಾವೈರಸ್‌ ಮತ್ತು ಕಾಲರಾದ ಕಾರಣದಿಂದ ಇಲ್ಲಿ ಒಂದೂ ಅಂಗಡಿ ಇಡದಂತೆ ಆದೇಶಿಸಲಾಗಿದೆ.

‘ಸರ್‌, 10 ದಿನ ಆಯ್ತು ಅಂಗಡಿ ತೆಗ್ಸಿ. ಈಗ ಸುಮ್ಮನೆ ಮನೇಲಿ ಮಲ್ಗಿದೀನಿ. ವ್ಯಾಪಾರ ಮಾಡಂಗಿಲ್ಲ. ಬೇರೆ ಕೆಲಸ ಗೊತ್ತಿಲ್ಲ. ಇರೋಬರೋ ದುಡ್ಡೆಲ್ಲಾ ಖಾಲಿ ಆಯ್ತು. ಮುಂದೆ ಏನ್ ಮಾಡೋದು ಅಂತ ಗೊತ್ತಿಲ್ಲ’ ಎನ್ನುತ್ತಾರೆ ಇಲ್ಲಿ ಮೀನಿನ ಕಬಾಬ್ ವ್ಯಾಪಾರ ಮಾಡುತ್ತಿದ್ದ ಜುಬೇದ್ ಖಾನ್‌.

‘ದಿನಾ ವ್ಯಾಪಾರ ಮಾಡಿ, ಖರ್ಚು ಎಲ್ಲಾ ಕಳ್ದು ₹500–600 ಉಳೀತಿತ್ತು. 10 ದಿನ ವ್ಯಾಪಾರ ಇಲ್ಲ ಅಂದ್ರೆ
₹6,000 ಲಾಸ್. ಅಷ್ಟು ದುಡ್ಡು ಎಲ್ಲಿಂದ ತರೋದು, ಸಂಸಾರ ಮಾಡೋದು ಹೆಂಗೆ’ ಎಂದು ಜುಬೇದ್ ಪ್ರಶ್ನಿಸುತ್ತಾರೆ.

‘10 ದಿನದಲ್ಲಿ ಏಳೆಂಟು ಸಾವಿರ ಲಾಸ್ ಆಗಿದೆ. ಹಿಂಗೆ ಅಂಗಡಿ ತೆಗ್ಸೋ ಮೊದ್ಲು ನಮ್‌ ಜೀವನಕ್ಕೆ ಏನಾದ್ರೂ ಸಹಾಯ ಮಾಡಬೇಕಲ್ವಾ? ಉಳ್ಸಿಟ್ಟಿರೋ ದುಡ್ಡೂ ಖರ್ಚಾದ್ರೆ, ಅಂಗಡಿ ಹಾಕೋಕೆ ಬಂಡವಾಳ ತರೋದು ಎಲ್ಲಿಂದ’ ಎಂಬುದು ಇಲ್ಲಿ ಮೊಟ್ಟೆ ಬೋಂಡದ ವ್ಯಾಪಾರ ಮಾಡುವ ಲಕ್ಷ್ಮಮ್ಮ ಅವರ ಪ್ರಶ್ನೆ.

ಜೀವನೋಪಾಯಕ್ಕಾಗಿ ಈ ಅಂಗಡಿಯನ್ನೇ ನಂಬಿಕೊಂಡಿದ್ದ ಈ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಈ ನಿರ್ಬಂಧ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಅನಿಶ್ಚಿತವಾಗಿರುವುದು ಇಲ್ಲಿನ ವ್ಯಾಪಾರಿಗಳು ಮತ್ತು ಅವರ ಕುಟುಂಬಗಳ ದಿಕ್ಕುಗೆಡಿಸಿದೆ.

ಟಿಪ್ಸ್ ಆಧಾರಿತ ಜೀವನ ಬೀದಿಗೆ ಬಂತು

ಪಬ್, ಕ್ಲಬ್, ಡ್ಯಾನ್ಸ್ ಬಾರ್‌ಗಳನ್ನು ನಗರದಲ್ಲಿ ಬಂದ್ ಮಾಡಲಾಗಿದೆ. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವನಕ್ಕೆ ಗ್ರಾಹಕರು ನೀಡುವ ಟಿಪ್ಸ್ ಆಧಾರ.

ಡ್ಯಾನ್ಸ್‌ಬಾರ್‌ಗಳಲ್ಲಿನ ನರ್ತಕಿಯರು, ಅಲ್ಲಿನ ಕಾರ್ಮಿಕರ ಜೀವನ ಈಗ ಅಕ್ಷರಶಃ ಬೀದಿಗೆ ಬಿದ್ದಿದೆ. 

‘ಬೆಂಗಳೂರಿನಲ್ಲಿ ನಾನು ಏನು ಕೆಲಸ ಮಾಡುತ್ತಿದ್ದೇನೆ ಎಂಬುದು ತಂದೆ–ತಾಯಿಗೆ ಗೊತ್ತಿಲ್ಲ. ಹೋಟೆಲ್‌ ಕೆಲಸ ಎಂದಷ್ಟೇ ಹೇಳಿದ್ದೇನೆ. ಡ್ಯಾನ್ಸ್ ಬಾರ್‌ಗಳಲ್ಲಿ ಸ‍ಪ್ಲೆಯರ್ ಕೆಲಸ ಮಾಡುವ ನನಗೆ ಮಾಲೀಕರು ಸಂಬಳ ನೀಡಲ್ಲ, ಗ್ರಾಹಕರು ನೀಡುವ ಟಿಪ್ಸ್ ಮಾತ್ರ ನಮ್ಮ ದುಡಿಮೆ’ ಎಂದು ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಕಿರಣ್, ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

‘ಈ ದುಡಿಮೆ ನಂಬಿ ತಂಗಿ ಮದುವೆಗೆ ಸಾಲ ಮಾಡಿದ್ದೆ. 15 ದಿನಗಳಿಂದ ದುಡಿಮೆ ಇಲ್ಲದೆ ಹೊಟ್ಟೆಗೂ ಇಲ್ಲವಾಗಿದೆ. ಊರಿಗೆ ವಾಪಸ್ ಹೋದರೆ ಸಾಲ ಕೊಟ್ಟವರು ಮನೆ ಬಾಗಿಲಿಗೆ ಬರುತ್ತಾರೆ. ಏನು ಮಾಡಬೇಕೋ ತೋಚುತ್ತಿಲ್ಲ. ಬೇರೆ ಕೆಲಸ ಮಾಡೋಣ ಎಂದರೆ ಎಲ್ಲೂ ಕೆಲಸ ಹುಟ್ಟುತ್ತಿಲ್ಲ’ ಎಂದು ನೊಂದುಕೊಡರು.

ಇಂದು ಸಭೆ

ಅಸಂಘಟಿತ ಕಾರ್ಮಿಕರನ್ನು ಸಂಕಷ್ಟದಿಂದ ಪಾರು ಮಾಡಲು ಏನು ಮಾಡಬಹುದು ಎಂಬುದರ ಕುರಿತು ಚರ್ಚಿಸಲು ಕಾರ್ಮಿಕ ಸಚಿವರ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಿಗದಿಯಾಗಿದೆ.

ಕಲ್ಯಾಣ ಸುರಕ್ಷಾ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು, ಮಾಲೀಕರು, ವಿವಿಧ ಇಲಾಖೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇಲ್ಲಿ ಕೈಗೊಂಡ ನಿರ್ಣಯಗಳನ್ನು ಸರ್ಕಾರಕ್ಕೆ ಕಳುಹಿಸಿ ಹಣಕಾಸಿನ ನೆರವು ಕೇಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಆಧಿಕಾರಿಗಳು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು