ಶುಕ್ರವಾರ, ಜುಲೈ 1, 2022
27 °C

ಒಳನೋಟ | ವಿದ್ಯುತ್‌ಗಾಗಿ ಹಗಲು–ರಾತ್ರಿ ಕಾಯುತ್ತಾ ರೈತರು ಹೈರಾಣು; ಕೃಷಿಗೆ ಕಂಟಕ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ 7 ತಾಸು ತಡೆರಹಿತ ವಿದ್ಯುತ್‌ ಸರಬರಾಜು ಮಾಡಲು ಸರ್ಕಾರದ ಸೂಚನೆ ಇದ್ದರೂ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಆದೇಶ ಅನುಷ್ಠಾನ ಸಾಧ್ಯವಾಗಿಲ್ಲ. ಇದರಿಂದ ಲಕ್ಷಾಂತರ ಹೆಕ್ಟೇರ್ ತೋಟಗಳು, ಕೃಷಿ ಬೆಳೆಗಳು ಒಣಗುತ್ತಿವೆ. ವಿದ್ಯುತ್‌ಗಾಗಿ ಹಗಲು–ರಾತ್ರಿ ಕಾಯುತ್ತಾ ನಿದ್ದೆಗೆಡುತ್ತಿರುವ ರೈತರು ಹೈರಾಣಾಗಿದ್ದಾರೆ.

ರಾಜ್ಯದಲ್ಲಿರುವ 191 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ಶೇ 65ರಷ್ಟು ಕೃಷಿ ಜಮೀನಿದೆ. ಮಳೆ ಆಶ್ರಿತ ಒಣಭೂಮಿ ರೈತರು ಬಾವಿ, ಬೋರ್‌ವೆಲ್‌ಗಳ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಂಡು ತೋಟಗಳು, ಇತರೆ ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರಾಜ್ಯದಲ್ಲಿ ಅಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ನಾಲ್ಕು ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ಈ ಪಂಪ್‌ಸೆಟ್‌ಗಳಿಗೆ ಎರಡು, ಮೂರು ತಾಸು ತ್ರೀಫೇಸ್‌ ವಿದ್ಯುತ್‌ ಸರಬರಾಜು ಮಾಡಲಾಗುತ್ತಿದೆ. ರಾತ್ರಿ ಸಮಯದಲ್ಲೇ ಹೆಚ್ಚಾಗಿ ವಿದ್ಯುತ್ ನೀಡುವ ಕಾರಣ ರೈತರು ನಿದ್ದೆಗೆಟ್ಟು ಜಮೀನುಗಳಿಗೆ ನೀರು ಹರಿಸಬೇಕಿದೆ. ರಾತ್ರಿ ವೇಳೆ ಹೊಲ, ತೋಟಗಳಿಗೆ ಹೋದ ಹಲವು ರೈತರು ವಿಷಜಂತುಗಳ ಕಡಿತಕ್ಕೆ ಒಳಗಾಗಿ ಜೀವ ಕಳೆದುಕೊಂಡಿರುವ ನಿದರ್ಶನಗಳಿವೆ.

ಹೊಸ ತಂತ್ರಜ್ಞಾನಕ್ಕೆ ಬದಲಾಗದ ನಿಗಮಗಳು: ಇಂದಿಗೂ ವಿದ್ಯುತ್‌ ಸರಬರಾಜು ವಿಧಾನ ಹಳೆಯ ವ್ಯವಸ್ಥೆಯಲ್ಲೇ ಇದೆ. ಅಗತ್ಯ ಇರುವಷ್ಟು ವಿದ್ಯುತ್‌ ಪರಿವರ್ತಕ ಕೇಂದ್ರಗಳು ಇಲ್ಲ. ವಿದ್ಯುತ್‌ ಸರಬರಾಜು ಮಾರ್ಗಗಳು ಉನ್ನತೀಕರಣಗೊಂಡಿಲ್ಲ. ಆಯಾ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯುತ್ ಪಡೆ ಸಾಧನಗಳು, ಮಾರ್ಗ ಬದಲಾವಣೆಯ ಸಾಮಗ್ರಿಗಳನ್ನು ಅಳವಡಿಸಿಲ್ಲ. ಒಂದು ಮಾರ್ಗದಲ್ಲಿ ವಿದ್ಯುತ್‌ ಸಮಸ್ಯೆ ತಲೆ ತೋರಿದರೆ ಇಂದಿಗೂ 20ಕ್ಕೂ ಹೆಚ್ಚು ಹಳ್ಳಿಗಳ ವ್ಯಾಪ್ತಿಯ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ. ಹಳೆಯ ಕಾಲದ ವೈರ್‌ಗಳಲ್ಲೇ ಸರಬರಾಜು ಸಾಗಿದೆ.

ದೂರದವರೆಗೆ ಮಾರ್ಗದ ತಂತಿಗಳು ಸಾಗುತ್ತವೆ. ಇದರಿಂದ ಪದೇ ಪದೇ ವಿದ್ಯುತ್‌ ವ್ಯತ್ಯಯವಾಗುತ್ತದೆ.

‘ಹೊಸ ತಂತ್ರಜ್ಞಾನ ಅಳವಡಿಸಿಕೊಂಡರೆ ಕಚೇರಿಯಲ್ಲೇ ಕುಳಿತು ಯಾವ ಭಾಗದಲ್ಲಿ ಸಮಸ್ಯೆಯಾಗಿದೆ ಎಂದು ಪರಿಶೀಲಿಸಬಹುದು. ಸಮಸ್ಯೆಯಾದ ಒಂದು ಭಾಗ ಹೊರತುಪಡಿಸಿ ಉಳಿದ ಕಡೆಗೆ ವಿದ್ಯುತ್‌ ತಡೆಯಿಲ್ಲದೇ ಹರಿಯುವಂತೆ ಕ್ರಮ ಕೈಗೊಳ್ಳಬಹುದು. ಇಂದಿಗೂ ಓಬಿರಾಯನ ಕಾಲದ ವ್ಯವಸ್ಥೆಯಲ್ಲೇ ಇರುವಂತಾಗಿದೆ’ ಎನ್ನುತ್ತಾರೆ ರೈತ ಮುಖಂಡ ಎಚ್‌.ಆರ್.ಬಸವರಾಜಪ್ಪ.

ರಾಜ್ಯದಲ್ಲಿ ಇರುವ ವಿದ್ಯುತ್‌ ಬೇಡಿಕೆಯಲ್ಲಿ ಕೃಷಿಗೆ ಬಳಕೆಯಾಗುವ ವಿದ್ಯುತ್‌ ಪ್ರಮಾಣ ಅತ್ಯಂತ ಕಡಿಮೆ ಇದೆ. ಆದರೆ, ಸರ್ಕಾರದ ಜನಪ್ರಿಯ ಯೋಜನೆಗಳ ಪಟ್ಟಿಯಲ್ಲಿ ಪಂಪ್‌ಸೆಟ್‌ಗಳಿಗೆ ಪೂರೈಸುವ ವಿದ್ಯುತ್‌ ಸಹ ಸೇರಿದ್ದು, ಉಚಿತವಾಗಿ ನೀಡಲಾಗುತ್ತಿದೆ. ಇದೂ ನಿರ್ಲಕ್ಷ್ಯಕ್ಕೆ ಕಾರಣ ಎನ್ನುವುದು ರೈತರ ಆರೋಪ.

ಖಾಸಗಿಯವರಿಗೆ ವಿದ್ಯುತ್ ಪರಿವರ್ತಕಗಳ ದುರಸ್ತಿ ಹೊಣೆ: ನಿಯಮದ ಪ್ರಕಾರ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಪರಿವರ್ತಕಗಳು (ಟಿಸಿ) ಸುಟ್ಟರೆ 72 ತಾಸುಗಳ ಒಳಗೆ ಬದಲಿಸಿಕೊಡಬೇಕು. ಆದರೆ, ವಾಸ್ತವದಲ್ಲಿ ಒಂದು ವಾರ ಕಳೆದರೂ ಬದಲಿಸಿಕೊಡಲು ಸಾಧ್ಯವಾಗುತ್ತಿಲ್ಲ. ದುರಸ್ತಿ ಹೊಣೆಯನ್ನು ಖಾಸಗಿ ಏಜೆನ್ಸಿಗಳಿಗೆ ವಹಿಸಿಕೊಡಲಾಗಿದೆ. ಅಲ್ಲಿ ಗುಣಮಟ್ಟದ ಪರಿಕರ ಬಳಸದ ಕಾರಣ ಮತ್ತೆ ಮತ್ತೆ ದುರಸ್ತಿಗೆ ಬರುತ್ತಿವೆ. ಇದರಲ್ಲೂ ಸಾಕಷ್ಟು ಹಣದ ಅವ್ಯವಹಾರ ನಡೆಯುತ್ತಿದೆ. ವೋಲ್ಟೇಜ್‌ ವ್ಯತ್ಯಯದಿಂದಲೂ ಅನೇಕ ಕಡೆ ಟಿಸಿಗಳು ಸುಟ್ಟುಹೋಗುತ್ತಿವೆ. ಇದರಿಂದ ಬೆಳೆಗಳು ಒಣಗುವುದು ಸಹಜವಾಗಿದೆ.

‘ಮಲೆನಾಡಿನಲ್ಲಿ ಕಾನು, ತೋಟ, ಅರಣ್ಯ ಪ್ರದೇಶಗಳಿಂದ ಬರುವ ವಿದ್ಯುತ್‌ ಮಾರ್ಗದ ಮೇಲೆ ಮರ, ಸ್ವಾಗೆ ಬೀಳುತ್ತಿರುತ್ತವೆ. ಇದರಿಂದ ವಿದ್ಯುತ್‌ ಸಂಪರ್ಕ ಕಡಿತಗೊಳ್ಳುವುದು ಸಹಜವಾಗಿದೆ. ಟಿಸಿಗಳಿಗೆ ಕಾಲಕಾಲಕ್ಕೆ ಅಗತ್ಯವಾದ ಗ್ರೀಸ್‌, ಆಯಿಲ್‌ಗಳ ನಿರ್ವಹಣೆ ಮಾಡುತ್ತಿಲ್ಲ. ಅಳವಡಿಸಿದ ಟಿಸಿ ಹಾಳಾದ ಮೇಲೆ ಮಾತ್ರ ಬದಲಾವಣೆಯಾಗುತ್ತಿದೆ’ ಎನ್ನುವುದು ತೀರ್ಥಹಳ್ಳಿ ತಾಲ್ಲೂಕಿನ ರೈತ ಶೇಡ್ಗಾರ್ ಪ್ರಫುಲ್ಲ ಅವರ ಆರೋಪ.

ರಾಜ್ಯ ಸರ್ಕಾರ ಹಲವು ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಗುಣಮಟ್ಟದ ವಿದ್ಯುತ್‌ ಪೂರೈಕೆಯ ಭರವಸೆ ನೀಡಿದೆ. ಆದರೂ ರೈತರಿಗೆ ಇದರ ಪ್ರಯೋಜನ ಪರಿಣಾಮಕಾರಿಯಾಗಿ ದೊರೆತಿಲ್ಲ. ಫೀಡರ್‌ನಿಂದ ಬರುವ ವಿದ್ಯುತ್‌, ಪಂಪ್‌ಸೆಟ್‌ಗಳಿಗೆ ತಲುಪುವ ಮೊದಲೇ ಸಾಕಷ್ಟು ಸೋರಿಕೆಯಾಗುತ್ತಿದೆ.

ಮಾಯವಾದ ಮಿತವ್ಯಯದ ಪರಿಕಲ್ಪನೆ: ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀತಿ ಜಾರಿಯಾದ ಮೇಲೆ ವಿದ್ಯುತ್‌ ಕಳವು ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಆದರೆ, ಉಚಿತ ವಿದ್ಯುತ್‌ ಸೌಲಭ್ಯ ಪಡೆದ ರೈತರು ಬೇಕಾಬಿಟ್ಟಿ ಬಳಸುತ್ತಿದ್ದಾರೆ. ಮಿತವ್ಯಯದ ಕಲ್ಪನೆ ಮಾಯಮಾಗಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯವೂ ಆಗುತ್ತಿಲ್ಲ ಎನ್ನುವುದು ರೈತ ಗುಣಶೇಖರ್ ಅವರ ಅಸಮಾಧಾನವಾಗಿದೆ.

ಅಕ್ರಮ ಪಂಪ್‌ಸೆಟ್‌ಗಳ ಹಾವಳಿ
ನದಿ ತೀರ, ರಾಜ್ಯದ ಪ್ರಮುಖ ಜಲಾಶಯಗಳ ನಾಲೆಗಳ ಉದ್ದಕ್ಕೂ ಅಕ್ರಮ ಪಂಪ್‌ಸೆಟ್‌ಗಳ ಹಾವಳಿ ಮಿತಿಮೀರಿದೆ. ರಾಜ್ಯದಲ್ಲಿ ಅಧಿಕೃತ ಪಂಪ್‌ಸೆಟ್‌ಗಳು ನಾಲ್ಕು ಲಕ್ಷ ಇದ್ದರೆ, ಅಕ್ರಮ ಪಂಪ್‌ಸೆಟ್‌ಗಳು ಸುಮಾರು 10 ಲಕ್ಷದಷ್ಟಿವೆ ಎಂದು ಅಂದಾಜಿಸಲಾಗಿದೆ. ಇಂತಹ ಅಕ್ರಮ ಪಂಪ್‌ಸೆಟ್‌ಗಳಿಗೂ ವಿದ್ಯುತ್‌ ಸರಬರಾಜು ಕಂಪನಿಗಳು ಸಕ್ರಮದ ಮುದ್ರೆ ಒತ್ತಿವೆ.

ಉಚಿತ ವಿದ್ಯುತ್‌ ಎಂಬ ರಾಜಕೀಯ ಪ್ರಹಸನ
ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಬಹುತೇಕ ಸರ್ಕಾರಗಳು ರೈತರ ಓಲೈಕೆಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿವೆ. ಅವುಗಳಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಪ್ರಹಸನವೂ ಒಂದು.

ಒಣಭೂಮಿ ಕೃಷಿಯಲ್ಲಿ ಕೃಷಿ ಪಂಪ್‌ಸೆಟ್‌ಗಳ ಬಳಕೆ ಕಡಿಮೆ ಇದ್ದ ಕಾಲದಲ್ಲಿ ವಿದ್ಯುತ್‌ ಕಳವು ಪ್ರಕರಣಗಳು ವರದಿಯಾಗುತ್ತಿದ್ದವು. ವಿದ್ಯುತ್ ಕಳವು ಪ್ರಕರಣ ಗಳಲ್ಲಿ ಕೃಷಿಗಾಗಿ ಮಾಡುತ್ತಿದ್ದ ಕಳವು ಶೇ 24ರಷ್ಟಿತ್ತು. 1980ರಲ್ಲಿ ಆರ್‌.ಗುಂಡೂರಾವ್ ಅವರು ಮುಖ್ಯಮಂತ್ರಿಯಾದ ನಂತರ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಘೋಷಿಸಿದರು. 1998ರಲ್ಲಿ ಅಳವಡಿಸಿದ್ದ ಲಕ್ಷಾಂತರ ಮೀಟರ್‌ಗಳನ್ನು ಕಿತ್ತು ಕೆಇಬಿಗೆ ಹಿಂದಿರುಗಿಸಲಾಗಿತ್ತು. ಅಂದು 5 ಸಾವಿರಕ್ಕೂ ಹೆಚ್ಚು ರೈತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ನಂತರ 1990–92ರಲ್ಲಿ ಎಸ್‌.ಬಂಗಾರಪ್ಪ ಅವರು 10 ಎಚ್‌ಪಿವರೆಗೂ ಉಚಿತ ವಿದ್ಯುತ್‌ ನೀಡಿದರು. ಜೆ.ಎಚ್‌.ಪಟೇಲ್‌, ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ದರಾಮಯ್ಯ ಅವರೂ ಯೋಜನೆ ಮುಂದುವರಿಸಿದರು.

ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ಪ್ರಸ್ತಾವ ಸದ್ಯ ಸಂಸತ್‌ನಲ್ಲಿದೆ. ತಿದ್ದುಪಡಿ ತಂದರೆ ಕೃಷಿ ಪಂಪ್‌ಸೆಟ್‌ಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಸಲು ಅವಕಾಶ ದೊರೆಯಲಿದೆ. ದೇಶದಾದ್ಯಂತ ರೈತರು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ವಿದ್ಯುತ್‌ ಖಾಸಗೀಕರಣದ ಹುನ್ನಾರ ಎಂದು ರೈತರು ದೂರಿದ್ದಾರೆ.

‘ಲೋಪಕ್ಕೆ ಹೊಣೆಗಾರಿಕೆ ನಿಗದಿ’
‘ರೈತರ ಪಂಪ್ ಸೆಟ್ ಗಳಿಗೆ ತ್ರಿಫೇಸ್ ವಿದ್ಯುತ್ ನೀಡಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಾಗಿದ್ದು, ಲೋಪಕ್ಕೆ ಹೊಣೆಗಾರಿಕೆ ನಿಗದಿ ಮಾಡಿದ್ದೇವೆ. ಬೇಸಿಗೆಯಲ್ಲಿ ಮೂರು ತಿಂಗಳು ಕಾಲ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ತೊಂದರೆ ಯಾಗಬಾರದೆಂಬುದು ನಮ್ಮ ಸರಕಾರದ ಆಶಯ. ತಾಂತ್ರಿಕ ದೋಷಗಳಿಂದ ಕೆಲವೆಡೆ ಕಂಡು ಬರುತ್ತಿರುವ ದೋಷಗಳನ್ನು ಸರಿಪಡಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಇಂಧನ ಸಚಿವ ವಿ.ಸುನೀಲ್‌ ಕುಮಾರ್‌ ಹೇಳಿದ್ದಾರೆ.

ವಿದ್ಯುತ್ ಪರಿವರ್ತಕಗಳ ಬದಲಾವಣೆಯಲ್ಲಿ ಅಧಿಕಾರಿಗಳು ಲಂಚದ ಬೇಡಿಕೆ ಇಟ್ಟರೆ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಕ್ರಮದಲ್ಲೂ ವ್ಯಾಪಕ ಭ್ರಷ್ಟಾಚಾರ
ರಾಜ್ಯದಲ್ಲಿ ಅಕ್ರಮ–ಸಕ್ರಮ ಯೋಜನೆ ಅಡಿ ಲಕ್ಷಾಂತರ ರೈತರು ಅರ್ಜಿ ಸಲ್ಲಿಸಿದ್ದಾರೆ. ಕನಿಷ್ಠ ಎರಡು ಪಂಪ್‌ಸೆಟ್‌ ಇದ್ದರೆ ಒಂದು ಟಿಸಿ ಅಳವಡಿಸಲಾಗುತ್ತಿದೆ. ಇದರಲ್ಲೂ ಭ್ರಷ್ಟಾಚಾರ ಮನೆಮಾಡಿದೆ.

ನಿಯಮದ ಪ್ರಕಾರ ಅಕ್ರಮ ಪಂಪ್‌ಸೆಟ್‌ಗಳು ಸಕ್ರಮವಾಗಲು ₹ 10 ಸಾವಿರ ಠೇವಣಿ, ಪ್ರತಿ ಎಚ್‌ಬಿ ಮೋಟರ್‌ಗೆ ₹ 1,773ರಂತೆ ಶುಲ್ಕ ನಿಗದಿ ಮಾಡಲಾಗಿದೆ. ಆದರೆ, ಅದರ ಎರಡು ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಲಂಚ ನೀಡದ ರೈತರು ನಾಲ್ಕು, ಐದು ವರ್ಷಗಳಿಂದಲೂ ಸಕ್ರಮಕ್ಕೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

‘ಎರಡು ಪಂಪ್‌ಸೆಟ್‌ಗಳ ಬಳಕೆಯನ್ನು ಸಕ್ರಮಗೊಳಿಸಲು ₹ 48 ಸಾವಿರ ಕಟ್ಟಿಸಿಕೊಂಡಿದ್ದಾರೆ. ಜಮೀನಿನವರೆಗೆ ಕಂಬ ಹಾಕಿದ್ದಾರೆ. ಮತ್ತೆ ₹ 30 ಸಾವಿರ ಲಂಚ ನೀಡದ ಕಾರಣ ಎರಡು ತಿಂಗಳಿನಿಂದ ವಿದ್ಯುತ್‌ ತಂತಿ ಎಳೆದಿಲ್ಲ. ಪ್ರತಿದಿನ ಕಚೇರಿಗೆ ಅಲೆಯುವುದೇ ಕೆಲಸವಾಗಿದೆ’ ಎನ್ನುತ್ತಾರೆ ದಾವಣಗೆರೆ ಜಿಲ್ಲೆಯ ಕಾಶೀಪುರದ ರೈತ ಮಹಿಳೆ ಸವಿತಾ.

*
ಸರ್ಕಾರದ ನಿಯಮದಂತೆ ಪ್ರತಿ ಭಾಗದಲ್ಲೂ 100 ಕೆ.ವಿ ಟಿಸಿಗಳ ಸಂಗ್ರಹ ಇರಬೇಕು. ಸರ್ಕಾರದಿಂದ ಹೆಚ್ಚುವರಿ ಟಿಸಿಗಳು ಇಲಾಖೆಗೆ ಬಂದರೂ, ಹಣ ನೀಡಿದರೆ ಮಾತ್ರ ತ್ವರಿತವಾಗಿ ನೀಡುತ್ತಾರೆ. ಇಲ್ಲದಿದ್ದರೆ ಅಲೆದಾಡಿಸುತ್ತಾರೆ. 100 ಕೆ.ವಿ ಸಾಮರ್ಥ್ಯದ ಟಿಸಿ ಬಳಕೆಯಾಗುವ ಜಾಗದಲ್ಲಿ 65 ಕೆವಿ ಸಾಮರ್ಥ್ಯದ ಟಿಸಿ ಅಳವಡಿಸಲಾಗಿದೆ. ವಿದ್ಯುತ್‌ ಕಂಬ, ಮಾರ್ಗದ ತಂತಿಗಳೂ ಸಾಮರ್ಥ್ಯ ಕಳೆದುಕೊಂಡಿವೆ. ಇದರಿಂದ ಸರಿಯಾಗಿ ವಿದ್ಯುತ್‌ ಪೂರೈಕೆಯಾಗುತ್ತಿಲ್ಲ.
–ಪೂರ್ಣೇಶ್‌ ಕೆಳಕೆರೆ, ಕೃಷಿಕ

*

ರಾಜ್ಯದಲ್ಲಿ ಹಲವು ಮೂಲಗ ಳಿಂದ ಸಾಕಷ್ಟು ವಿದ್ಯುತ್‌ ಉತ್ಪಾದನೆ ಆದರೂ ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಕೃಷಿ ಕ್ಷೇತ್ರ ಕಡೆಗಣಿಸಲಾಗಿದೆ. ಮಧ್ಯರಾತ್ರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಕೊಡುವುದರಿಂದ ರೈತರ ಪ್ರಾಣಕ್ಕೆ ಅಪಾಯ. ಸರ್ಕಾರ ತಕ್ಷಣ ಸ್ಪಂದಿಸಬೇಕು.
–ಎಚ್‌.ಆರ್.ಬಸವರಾಜಪ್ಪ, ಗೌರವಾಧ್ಯಕ್ಷರು, ರಾಜ್ಯ ರೈತ ಸಂಘ

ಇವನ್ನೂ ಓದಿ


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು