ಒಳನೋಟ | ವಿದ್ಯುತ್ ಸಮಸ್ಯೆ; ಟಿಸಿ ಸುಟ್ಟರೂ ಆಗದು ಬದಲು!

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಸಮಸ್ಯೆ ನಿವಾರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮೊರೆಯಿಡುವ ರೈತರಿಗೆ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ.
‘ಸುಟ್ಟ ಟ್ರಾನ್ಸ್ಫಾರ್ಮರ್ಗಳನ್ನು (ಟಿಸಿ) ತಕ್ಷಣ ಬದಲಿಸಲು ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರ ಸೂಚಿಸಿದೆ. ಆದರೆ, ತಿಂಗಳಾದರೂ ಟಿಸಿ ಬದಲಿಸುವುದಿಲ್ಲ. ರೈತರೆಲ್ಲ ಸೇರಿ ಇಂತಿಷ್ಟು ಹಣ ಹಾಕಿ ಸೆಕ್ಷನ್ ಎಂಜಿನಿಯರ್, ಹಿರಿಯ ಅಧಿಕಾರಿಗಳಿಗೆ ‘ಕಾಣಿಕೆ’ ಸಲ್ಲಿಸಿದರೆ ಮಾತ್ರ ಟಿಸಿ ಬದಲಾವಣೆ ಆಗುತ್ತದೆ’ ಎಂಬುದು ಬಹುಪಾಲು ರೈತರು ಮಾಡುವ ಆರೋಪ.
‘ಟಿಸಿ ಬ್ಯಾಂಕ್ ಆರಂಭಿಸುವುದಾಗಿ ಹೇಳಿದ್ದ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ರೈತ ಕೃಷಿ ಕಾರ್ಮಿಕ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಮಹೇಶ ಎಸ್.ಬಿ.
‘ಕೊಪ್ಪಳ ಜಿಲ್ಲೆಯಲ್ಲಿ ಕಾಲುವೆ ಉದ್ದಕ್ಕೂ ಅಕ್ರಮ ಪಂಪ್ಸೆಟ್ಗಳಿವೆ. ಅಲ್ಲಿ ಹಾಯ್ದು ಹೋಗಿರುವ ಹೆವಿ ಲೈನ್ಗಳಿಂದ ಅಕ್ರಮವಾಗಿ ವಿದ್ಯುತ್ ಪಡೆಯಲಾಗುತ್ತಿದೆ. ಇದರ ಪರಿಣಾಮ ಟಿಸಿಗಳು ಸುಟ್ಟುಹೋಗುತ್ತಿವೆ‘ ಎಂಬುದು ಕೆಲ ರೈತರು ಮಾಡುವ ಆರೋಪ.
‘ಅಕ್ರಮ ಪಂಪ್ಸೆಟ್ಗಳಿಗೆ ಕಡಿವಾಣ ಹಾಕಿ, ತಪ್ಪಿತಸ್ಥ ರೈತರಿಗೆ ದಂಡ ವಿಧಿಸುವ ಬದಲು ಅವರಿಂದ ಲಂಚ ಪಡೆದು ವಿದ್ಯುತ್ ಅಕ್ರಮಕ್ಕೆ ಜೆಸ್ಕಾಂ ಸಹಕರಿಸುತ್ತದೆ’ ಎಂದು ರೈತರು ಹೇಳುತ್ತಾರೆ.
‘ಬೀದರ್ ಜಿಲ್ಲೆಯಲ್ಲಿ ಮಾಂಜ್ರಾ ನದಿ ದಂಡೆ ಹಾಗೂ ಒಣಭೂಮಿಯಲ್ಲಿ ಬಾವಿಗಳನ್ನು ಹೊಂದಿರುವ ರೈತರಲ್ಲಿ ಕೆಲವರು ರಾತ್ರಿ ವೇಳೆ ವಿದ್ಯುತ್ ಲೈನ್ಗಳಿಗೆ ಕೊಕ್ಕೆ ಹಾಕಿ ವಿದ್ಯುತ್ ಕಳ್ಳತನ ಮಾಡುವುದು ಸಾಮಾನ್ಯವಾಗಿದೆ. ಲೈನ್ಮನ್ಗಳು ರೈತರಿಂದ ‘ಮಾಮೂಲು’ ಪಡೆದು ಏನೂ ಗೊತ್ತೇ ಇಲ್ಲ ಎಂಬಂತೆ ಮೌನ ವಹಿಸುತ್ತಾರೆ’ ಎನ್ನುತ್ತಾರೆ ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬರು.
(ಪೂರಕ ಮಾಹಿತಿ: ಸಿದ್ದನಗೌಡ ಪಾಟೀಲ, ಚಂದ್ರಕಾಂತ ಮಸಾನಿ)
ಇವನ್ನೂ ಓದಿ
* ಒಳನೋಟ | ವಿದ್ಯುತ್ ಸಮಸ್ಯೆ; ಗೋಳು ತಪ್ಪಿಸದ ಸೌರವಿದ್ಯುತ್
* ಒಳನೋಟ | ವಿದ್ಯುತ್ ಸಮಸ್ಯೆ; 12 ಗಂಟೆ ‘ತ್ರೀ ಫೇಸ್’ ಅರೆಬರೆ ಕಾರ್ಯಗತ
* ಒಳನೋಟ | ವಿದ್ಯುತ್ಗಾಗಿ ಹಗಲು–ರಾತ್ರಿ ಕಾಯುತ್ತಾ ರೈತರು ಹೈರಾಣು; ಕೃಷಿಗೆ ಕಂಟಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.