ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ‘ಮಾತೃವಂದನಾ’ ಯೋಜನೆ; ಮೈಸೂರಿನಲ್ಲಿ ಸಕಾರಾತ್ಮಕ ಸ್ಪಂದನ

Last Updated 6 ಮಾರ್ಚ್ 2022, 0:58 IST
ಅಕ್ಷರ ಗಾತ್ರ

ಮೈಸೂರು: ‘ಗರ್ಭಿಣಿಯಾಗಿದ್ದಾಗ ₹ 3 ಸಾವಿರ, ಹೆರಿಗೆ ಬಳಿಕ ₹ 2 ಸಾವಿರವನ್ನು ನನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿತ್ತು. ಅಗತ್ಯ ಆಹಾರ ಖರೀದಿಸಿ ಹಣ ಸದ್ಬಳಕೆ ಮಾಡಿಕೊಂಡೆ....’

– ‘ಮಾತೃವಂದನಾ’ ಯೋಜನೆಯ ಫಲಾನುಭವಿಗಳಲ್ಲಿ ಒಬ್ಬರಾದ ತಾಲ್ಲೂಕಿನ ಹಿನಕಲ್‌ನ ರಮ್ಯಾ ಅವರ ಮಾತಿದು.

‘ಹಣ್ಣು, ಸೊಪ್ಪು ಸೇರಿ ಪೌಷ್ಟಿಕ ಆಹಾರ ಖರೀದಿಸಿದೆ. ಹೆರಿಗೆಯ ಬಳಿಕ ಬಂದ ಹಣದಲ್ಲಿ ಶಿಶುವಿಗೆ ಪೂರಕ ಆಹಾರ, ಡೈಪರ್‌ ಖರೀದಿಸಿದೆ. ಪತಿ ಹಾಗೂ ತವರು ಮನೆಯವರನ್ನು ನೆಚ್ಚಿಕೊಳ್ಳ ಬೇಕಾದ ಅವಶ್ಯಕತೆಯೇ ಬರಲಿಲ್ಲ’ ಎಂದರು.

ತಾಯಂದಿರಲ್ಲಿರುವ ಅಪೌಷ್ಟಿಕತೆ ಹೋಗ ಲಾಡಿಸಲು ಆರಂಭಿಸಿರುವ ‘ಮಾತೃವಂದನಾ’ ಯೋಜನೆಯು ಜಿಲ್ಲೆಯಲ್ಲಿ ಇಂಥ ಸಕಾರಾತ್ಮಕ ಪರಿಣಾಮಗಳನ್ನು ಬೀರಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಆರಂಭದಿಂದಲೇ ಅವರ ಆರೋಗ್ಯದ ಮೇಲೆ ನಿಗಾ ವಹಿಸಲು ಸಾಧ್ಯವಾಗಿದೆ.

‘ಫಲಾನುಭವಿಗಳ ನೋಂದಣಿ ವಿಚಾರದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಐದನೇ ಸ್ಥಾನದಲ್ಲಿದೆ. 2017 ರಿಂದ 2021ರ ಡಿಸೆಂಬರ್‌ವರೆಗೆ ಒಟ್ಟು 70,880 ಫಲಾನುಭವಿಗಳನ್ನು ಗುರುತಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಬಸವರಾಜು ತಿಳಿಸಿದರು.

ಮಾತೃವಂದನಾ, ಪೋಷಣ್‌ ಅಭಿಯಾನ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿರುವುದರಿಂದ ತಾಯಿ ಮತ್ತು ಶಿಶು ಮರಣ ಪ್ರಮಾಣವೂ ಇಳಿಮುಖವಾಗಿದೆ.

ಆರೋಗ್ಯ ಇಲಾಖೆ ಪ್ರಕಾರ, ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ (ಜನಿಸುವ ಸಾವಿರ ಮಕ್ಕಳಿಗೆ) 8.2 ರಷ್ಟಿದೆ. ‌ದೇಶ ಮತ್ತು ರಾಜ್ಯದ ಒಟ್ಟಾರೆ ಸರಾಸರಿಗೆ ಹೋಲಿಸಿದರೆ ಇದು ತುಂಬಾ ಕಡಿಮೆ. ರಾಜ್ಯದಲ್ಲಿ ಶಿಶು ಮರಣ ಪ್ರಮಾಣ ಸಾವಿರ ಮಕ್ಕಳಿಗೆ ಸರಾಸರಿ 23 ರಷ್ಟಿದೆ.

2021ರ ಏಪ್ರಿಲ್‌ನಿಂದ 2022ರ ಜನವರಿ ವರೆಗೆ ಒಟ್ಟು 25,976 ಮಕ್ಕಳು ಜನಿಸಿದ್ದಾರೆ. 212 ಶಿಶುಗಳು ಸಾವಿಗೀಡಾಗಿವೆ.

ತಾಯಿ ಮರಣ ಪ್ರಮಾಣವೂ ತಗ್ಗಿದೆ. ಕಳೆದ 10 ತಿಂಗಳಲ್ಲಿ ತಾಯಿ ಮರಣ ಪ್ರಮಾಣ (1 ಲಕ್ಷಕ್ಕೆ) 63 ರಷ್ಟಿದೆ.

‘ಮಾತೃವಂದನಾ ಯೋಜನೆಯು ಬಡ, ಮಧ್ಯಮ ವರ್ಗದ ಕುಟುಂಬದವರಿಗೆ ಹೆಚ್ಚಿನ ನೆರವು ನೀಡಿದೆ. ಈಗ ₹5 ಸಾವಿರ ನೀಡುತ್ತಿದ್ದು, ಮೊತ್ತವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂಬುದು ಇನ್ನೊಬ್ಬ ಫಲಾನುಭವಿ ರಾಧಿಕಾ ಅವರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT