ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಉತ್ತರ ಕರ್ನಾಟಕದ 17 ಕಡೆ ಇನ್ನೂ ಆರಂಭವಾಗಿಲ್ಲ ಇಂದಿರಾ ಕ್ಯಾಂಟೀನ್ ಸೇವೆ

Last Updated 4 ಏಪ್ರಿಲ್ 2021, 1:24 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ 8 ಜಿಲ್ಲೆಗಳಿಗೆ 56 ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿವೆ. ಈ ಪೈಕಿ 17 ಆರಂಭವಾಗಿಲ್ಲ. ಕೆಲವು ಕ್ಯಾಂಟೀನ್‌ಗಳ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿ‌ದ್ದರೆ, ಉಳಿದವು ಉದ್ಘಾಟನೆಯಾಗಿಲ್ಲ. ಕೋವಿಡ್ ಸಂದರ್ಭದಲ್ಲಿ ಸುಮಾರು ಎರಡು ತಿಂಗಳು ಮುಚ್ಚಿದ್ದ ಕ್ಯಾಂಟೀನ್‌ಗಳು ಪುನರಾರಂಭಗೊಂಡಿವೆ.

ಧಾರವಾಡದ 15ರ ಪೈಕಿ 6 ಕ್ಯಾಂಟೀನ್‌ಗಳು ಇನ್ನೂ ಆರಂಭಗೊಂಡಿಲ್ಲ. ಹುಬ್ಬಳ್ಳಿ–ಧಾರವಾಡದಲ್ಲಿ 3 ಹಾಗೂ ಕುಂದಗೋಳ, ಕಲಘಟಗಿ, ನವಲಗುಂದ ತಾಲ್ಲೂಕುಗಳಿಗೆ ಮಂಜೂರಾಗಿದ್ದ ಒಂದೊಂದು ಕ್ಯಾಂಟೀನ್‌ಗಳ ನಿರ್ಮಾಣಕಾರ್ಯ ಪೂರ್ಣಗೊಂಡಿಲ್ಲ. ಬಾಗಲಕೋಟೆಯ 7 ಕ್ಯಾಂಟೀನ್‌ಗಳ ಪೈಕಿ ಬೀಳಗಿ, ಮುಧೋಳ ಹಾಗೂ ಹುನಗುಂದದ ಕ್ಯಾಂಟೀನ್‌ಗಳು ಉದ್ಘಾಟನೆಯಾಗಬೇಕಿದೆ.

ವಿಜಯಪುರದ 6 ಕ್ಯಾಂಟೀನ್‌ಗಳ ಪೈಕಿ ಸಿಂದಗಿ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳಲ್ಲಿ ತೆರೆದಿಲ್ಲ. ಗದಗದಲ್ಲಿ 6ರ ಪೈಕಿ ಜಿಲ್ಲಾ ಕೇಂದ್ರದಲ್ಲಿ 2 ಕ್ಯಾಂಟೀನ್‌ ಜಾಗದ ಸಮಸ್ಯೆಯಿಂದ ನಿರ್ಮಾಣವಾಗಿಲ್ಲ. ನರಗುಂದ ತಾಲ್ಲೂಕಿನಲ್ಲಿ ಕಟ್ಟಡ ಸಿದ್ಧವಾಗಿದ್ದರೂ ಕ್ಯಾಂಟೀನ್‌ ಆರಂಭಗೊಂಡಿಲ್ಲ. ಹಾವೇರಿಗೆ ಮಂಜೂರಾದ ಮೂರರ ಪೈಕಿ ಜಿಲ್ಲಾ ಕೇಂದ್ರದಲ್ಲಿ ಒಂದು ಚಾಲ್ತಿಯಲ್ಲಿದೆ. ರಾಣೆಬೆನ್ನೂರು ತಾಲ್ಲೂಕಿನ 2 ಕ್ಯಾಂಟೀನ್‌ಗಳ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ.

‘ನಿರ್ಮಾಣಗೊಳ್ಳದ ಕ್ಯಾಂಟೀನ್‌ಗಳಿಗೆ ಅನುದಾನದ ಕೊರತೆಯಾದರೆ, ನಿರ್ಮಾಣವಾಗಿರುವ ಕ್ಯಾಂಟೀನ್‌ಗಳ ಉದ್ಘಾಟನೆಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣವಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.

ಗ್ರಾಹಕರ ಇಳಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಬಹುತೇಕ ವಲಸೆ ಕಾರ್ಮಿಕರು ಕೋವಿಡ್ ಲಾಕ್‌ಡೌನ್‌ ಪರಿಣಾಮ ತವರಿಗೆ ತೆರಳಿದ್ದು, ಇಂದಿರಾ ಕ್ಯಾಂಟೀನ್‌ಗಳಲ್ಲೂ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ನಗರದಲ್ಲಿ ಐದು ಕ್ಯಾಂಟೀನ್‌ಗಳು ತೆರೆದಿವೆ. ಪುತ್ತೂರು, ಬೆಳ್ತಂಗಡಿ, ಸುಳ್ಯದಲ್ಲಿ ಬಂದ್ ಆಗಿದ್ದ ಕ್ಯಾಂಟೀನ್‌ಗಳು ಆರಂಭಗೊಂಡಿವೆ.

‌ಚಿಕ್ಕಮಗಳೂರಿನಲ್ಲಿ ಏಳು ಕ್ಯಾಂಟೀನ್‌ಗಳು ನಡೆಯುತ್ತಿವೆ. ಆದರೆ, ‘ಕಳೆದ ಆಗಸ್ಟ್‌ನಿಂದ ಸುಮಾರು ₹1 ಕೋಟಿ ಅನುದಾನ ಬಿಡುಗಡೆಯಾಗಿಲ್ಲ’ ಎಂದು ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳ ವ್ಯವಸ್ಥಾಪಕ ಸುಹಾಸ್‌ ಗೌಡ ಹೇಳಿದರು.

ಅನುದಾನ ಬರದಿದ್ದರೂ ಕೈಂಕರ್ಯ

ದಾವಣಗೆರೆ: ಆರ್ಥಿಕ ಸಂಕಷ್ಟದಲ್ಲಿರುವ ಆಟೊ ಚಾಲಕರು, ಕಟ್ಟಡ ಕಾರ್ಮಿಕರು, ಬೀದಿ ಬದಿಯ ವ್ಯಾಪಾರಿಗಳ ಪಾಲಿಗೆ ಕೋವಿಡ್‌ ಕಾಲದಲ್ಲೂ ತೆರೆದಿದ್ದ ಇಂದಿರಾ ಕ್ಯಾಂಟೀನ್‌ಗಳು ಕೈಹಿಡಿದಿವೆ. ದುಡಿದು ತಿನ್ನಬೇಕಾದ ಶ್ರಮಿಕ ವರ್ಗದವರ ಹಸಿವನ್ನು ಇಂದಿರಾ ಕ್ಯಾಂಟೀನ್‌ಗಳು ನೀಗಿಸುತ್ತಿವೆ.

ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 11 ಇಂದಿರಾ ಕ್ಯಾಂಟೀನ್‌ಗಳಿದ್ದು, ನಗರದಲ್ಲಿಯೇ ಎಂಟು ಇವೆ. ಎಲ್ಲವೂ ಕಾರ್ಯನಿರ್ವಹಿಸುತ್ತಿವೆ.

‘ನಗರದ ಎಂಟು ಕ್ಯಾಂಟೀನ್‌ಗಳ ನಿರ್ವಹಣೆಗೆ ಪಾಲಿಕೆ ಶೇ 70 ಹಾಗೂ ಜಿಲ್ಲಾಡಳಿತ ಶೇ 30ರಷ್ಟು ಅನುದಾನ ನೀಡುತ್ತಿದೆ. ಜಿಲ್ಲಾಡಳಿತದಿಂದ ₹ 2 ಕೋಟಿ ಅನುದಾನ ಬರುವುದು ಬಾಕಿ ಇದೆ’ ಎನ್ನುತ್ತಾರೆ ಕ್ಯಾಂಟೀನ್‌ಗಳ ನಿರ್ವಹಣೆ ಹೊಣೆ ಹೊತ್ತಿರುವ ಉಮೇಶ್ ಶೆಟ್ಟಿ.

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ಏಳು ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿವೆ. ಮೊಳಕಾಲ್ಮುರಿನಲ್ಲಿ ಮಾತ್ರ ಇನ್ನೂ ಆರಂಭಗೊಂಡಿಲ್ಲ. ಶಿವಮೊಗ್ಗ ನಗರದಲ್ಲಿ ನಾಲ್ಕು, ಭದ್ರಾವತಿ ನಗರದಲ್ಲಿ ಎರಡು ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಶಿವಮೊಗ್ಗದ ಪ್ರತಿ ಕ್ಯಾಂಟೀನ್‌ಗಳಿಗೆ ದಿನಕ್ಕೆ 1,500 ಜನರಿಗೆ ಊಟ ನೀಡಲು ಅವಕಾಶ ನೀಡಲಾಗಿದ್ದರೂ ಕೋವಿಡ್‌ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬರುತ್ತಿಲ್ಲ. ಸಾಗರದಲ್ಲಿ ಒಂದು ವರ್ಷದ ಹಿಂದೆಯೇ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದ್ದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಒಟ್ಟು 36 ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆಯಲ್ಲಿ ಎರಡು ಕ್ಯಾಂಟೀನ್‌ಗಳ ಪೈಕಿ ಒಂದು ಸ್ಥಗಿತಗೊಂಡಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ತೆರವಿನ ಬಳಿಕ ವಹಿವಾಟು ಚೇತರಿಸಿಕೊಂಡಿದೆ. ನಗರದಲ್ಲಿ ಏಳು, ತಾಲ್ಲೂಕು ಕೇಂದ್ರಗಳಾದ ಚಿಂಚೋಳಿ ಮತ್ತು ಚಿತ್ತಾಪುರದಲ್ಲಿ ತಲಾ ಒಂದೊಂದು ಕ್ಯಾಂಟೀನ್‌ಗಳಿವೆ. ಇನ್ನುಳಿದ ತಾಲ್ಲೂಕುಗಳಲ್ಲಿ ಆರಂಭವಾಗಿಲ್ಲ.

ಒಂದು ದಿನಕ್ಕೆ ಎರಡು ಊಟ, ಒಂದು ಉಪಾಹಾರ ಸೇರಿ ಪಾಲಿಕೆಯಿಂದ ₹ 27 ನೆರವು ಕೊಡಬೇಕು ಎಂಬುದು ನಿಯಮ. ಆದರೆ, ಮಾಸಿಕ ಟೆಂಡರ್‌ನಲ್ಲಿ ಗರಿಷ್ಠ ₹ 500ರಿಂದ ಕನಿಷ್ಠ ₹ 250ರವರೆಗೆ ನೀಡುವುದಾಗಿ ಒಪ್ಪಂದವಾಗಿದೆ. ಸರ್ಕಾರದಿಂದ ಹಣ ನೀಡದ ಕಾರಣ 12 ತಿಂಗಳಿಂದ ಅದು ಕೂಡ ನಿಂತುಹೋಗಿದೆ.ಆದರೂ ಗುತ್ತಿಗೆದಾರರು ಕ್ಯಾಂಟೀನ್‌ ಬಂದ್‌ ಮಾಡಿಲ್ಲ.

‘ಪ್ರತಿದಿನ ಬೆಳಿಗ್ಗೆ 6ರಿಂದಲೇ ತರಕಾರಿ ಮಾರಲು ಬರುತ್ತೇನೆ. ಬೆಳಿಗ್ಗೆಯ ನಾಷ್ಟಾ ಹಾಗೂ ಮಧ್ಯಾಹ್ನ ಊಟವನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಮಾಡುತ್ತೇನೆ. ₹ 25ರಲ್ಲಿ ಹೊಟ್ಟೆ ತುಂಬುತ್ತದೆ. ಆದರೆ, ಬಹಳಷ್ಟು ದಿನ ಅನ್ನ–ಬೇಳೆ ಸಾರು ಮಾತ್ರ ಇರುತ್ತದೆ. ದಿನಾಲೂ ರೊಟ್ಟಿ ಕೊಟ್ಟರೆ ಅನುಕೂಲ’ ಎನ್ನುತ್ತಾರೆ ರೈಲುನಿಲ್ದಾಣ ರಸ್ತೆಯ ತರಕಾರಿ ವ್ಯಾಪಾರಿ ಮಹಾಂತಮ್ಮ ಗಡದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT