ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಸಮೂಹಕ್ಕೆ ದಲಿತರಿಂದ ವಂಚನೆ: ಪ್ರೋತ್ಸಾಹಧನಕ್ಕೆ ಅಮಾಯಕರಿಗೆ ‘ವಿಧವೆ’ ಪಟ್ಟ!

Last Updated 19 ಅಕ್ಟೋಬರ್ 2019, 19:35 IST
ಅಕ್ಷರ ಗಾತ್ರ

ಮೈಸೂರು: ಇವರು ವಿಧವೆಯರೇ ಅಲ್ಲ. ದಶಕದಿಂದಲೂ ಪತಿಯೊಟ್ಟಿಗೆ ಸಂಸಾರದ ನೊಗ ಹೊತ್ತವರು. ಮಕ್ಕಳನ್ನು ಹಡೆದವರು. ಇಷ್ಟಿದ್ದರೂ ಪ್ರೋತ್ಸಾಹ ಧನಕ್ಕಾಗಿಯೇ, ಸರ್ಕಾರಿ ದಾಖಲೆಯಲ್ಲಿ ‘ವಿಧವೆ’ ಎಂಬ ಹಣೆಪಟ್ಟಿ ಹೊತ್ತಿದ್ದಾರೆ. ಮತ್ತೊಬ್ಬರನ್ನು ಮದುವೆಯಾಗಿ, ಮೊದಲ ಗಂಡನನ್ನು ಕಳೆದುಕೊಂಡವರಾಗಿದ್ದಾರೆ!

ಹೌದು. ವಿಚಿತ್ರವಾದರೂ ಇದು ಸತ್ಯ. ಗಂಡ ಮೃತಪಟ್ಟ ಪರಿಶಿಷ್ಟ ಜಾತಿಯ ಮಹಿಳೆಯರಿಗಾಗಿ, ರಾಜ್ಯ ಸರ್ಕಾರ ಸದುದ್ದೇಶದಿಂದ ಜಾರಿಗೊಳಿಸಿದ ‘ಪರಿಶಿಷ್ಟ ಜಾತಿಯ ವಿಧವಾ ಮರು ವಿವಾಹ ಯೋಜನೆ’ಯ ದುರ್ಬಳಕೆಯಾಗಿರುವುದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.

₹ 3 ಲಕ್ಷ ಪ್ರೋತ್ಸಾಹ ಧನಕ್ಕಾಗಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ಪ್ರಕರಣದ ಸೂತ್ರಧಾರಿ ಸೇರಿಕೊಂಡು ದಲಿತ ಮಹಿಳೆಯರನ್ನು ವಂಚಿಸಿದ್ದಾರೆ.

ಅಕ್ರಮ ಜಾಲದ ಕಾರ್ಯವೈಖರಿ: ಮೃತ ಪಟ್ಟ ವ್ಯಕ್ತಿಯೊಬ್ಬರ ಮರಣ ಪ್ರಮಾಣ ಪತ್ರವನ್ನು ಪಡೆಯುವುದರಿಂದ ಆರಂಭವಾಗುವ ಅಕ್ರಮದ ಜಾಲ, ಅಂತಿಮವಾಗಿ ಫಲಾನುಭವಿಯ ಬ್ಯಾಂಕ್‌ ಖಾತೆಯಿಂದ ಪ್ರೋತ್ಸಾಹಧನ ಪಡೆದುಕೊಳ್ಳುವ ತನಕ ಪ್ರತಿ ಹಂತದಲ್ಲೂ ವ್ಯವಸ್ಥಿತವಾಗಿ ತನ್ನ ಕರಾಮತ್ತು ತೋರಿರುವುದು ಬೆಳಕಿಗೆ ಬಂದಿದೆ.

ಪ್ರಕರಣದ ಸೂತ್ರಧಾರಿ ತನ್ನೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಮೃತಪಟ್ಟ ಪುರುಷರ ಮರಣ ಪ್ರಮಾಣ ಪತ್ರವನ್ನು ಪಿರಿಯಾಪಟ್ಟಣ ತಹಶೀಲ್ದಾರ್ ಕಚೇರಿ ಯಲ್ಲಿ ಒಂದೇ ದಿನ (ನ.19, 2018) ಪಡೆದಿದ್ದಾನೆ ಎಂಬ ಮಾಹಿತಿ ದಾಖಲೆ ಸಮೇತ ಲಭ್ಯವಾಗಿದೆ.

ಮರಣ ಪ್ರಮಾಣಪತ್ರಗಳು ಕೈ ಸೇರುತ್ತಿದ್ದಂತೆ ಮಧ್ಯವರ್ತಿಯು ತನ್ನ ಸಂಬಂಧಿಕರು, ಒಡನಾಡಿಗಳನ್ನೇ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದಾನೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದರಿಂದ ಹಿಡಿದು, ಎಲ್ಲ ದಾಖಲೆಗಳನ್ನು ಹೊಂದಿಸಿಕೊಂಡಿದ್ದಾನೆ.

ಇದಕ್ಕೆ ಪೂರಕವಾಗಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪತಿ–ಪತ್ನಿಗೂ ಮತ್ತೊಮ್ಮೆ ವಿವಾಹ ಮಾಡಿಸಿದ್ದಾನೆ. ಇದಕ್ಕಾಗಿ ಲಗ್ನ ಪತ್ರಿಕೆಯನ್ನು ಪ್ರಿಂಟ್ ಹಾಕಿಸಿದ್ದಾನೆ. ಫಲಾನುಭವಿಗೆ ಯಾವ ಹಣಕಾಸಿನ ಯೋಜನೆಯಡಿ ನೆರವು ಸಿಗುತ್ತಿದೆ ಎಂಬುದನ್ನು ಗೋಪ್ಯವಾಗಿಟ್ಟಿದ್ದಾನೆ. ಇದರ ಜತೆಗೆ ಮರಣ ಪ್ರಮಾಣ ಪತ್ರ ಪಡೆದ ಕುಟುಂಬಕ್ಕೂ ಈ ವಿಷಯ ತಿಳಿಯದಂತೆ ರಹಸ್ಯ ಕಾಪಾಡಿಕೊಂಡಿದ್ದಾನೆ. ಈ ಅಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೂ ಸಾಥ್ ನೀಡಿದ್ದಾರೆ.

ಈ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಊರವರ ಹೇಳಿಕೆ ದಾಖಲು ಮಾಡಿಕೊಳ್ಳಲು ಫಲಾನುಭವಿಗಳ ಹಳ್ಳಿಗೆ ಭೇಟಿ ನೀಡಬೇಕಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು (ಗ್ರೇಡ್‌–2) ಅತ್ತ ಸುಳಿದೇ ಇಲ್ಲ. ಕಚೇರಿಯಲ್ಲೇ ಕುಳಿತು ಸಹಾಯಕ ಸಿಬ್ಬಂದಿ ಮೂಲಕ ಟಿಪ್ಪಣಿ ಸಿದ್ಧಗೊಳಿಸಿ, ದಾಖಲೆಗಳಿಗೆ ಸೇರಿಸಿಕೊಂಡು ಮೇಲಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ. ಈ ಹಂತದಲ್ಲೂ ಮಧ್ಯವರ್ತಿ ಸಹಕರಿಸಿದ್ದಾನೆ ಎಂಬುದು ಕಚೇರಿ ಸಿಬ್ಬಂದಿಯಿಂದಲೇ ಬಹಿರಂಗಗೊಂಡಿದೆ.

ಊರವರ ಹೇಳಿಕೆಯ ಪ್ರತಿ ‘ಪ್ರಜಾವಾಣಿ’ಗೆ ದೊರೆತಿದ್ದು, ಕೊಪ್ಪದ ಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥೆ ಮೀನಾಕ್ಷಿ ಅವರನ್ನು ಪ್ರಶ್ನಿಸಿದಾಗ,‘ನಮ್ಮೂರಿನಲ್ಲಿ ಈ ಹೆಸರಿನವರು ಸತ್ತು ಹಲವು ವರ್ಷಗಳಾಗಿವೆ’ ಎಂದು ತಿಳಿಸಿದರು.

‘ಫಲಾನುಭವಿಯ ಬ್ಯಾಂಕ್‌ ಪಾಸ್‌ ಪುಸ್ತಕ, ಇನ್ನಿತರ ದಾಖಲೆಗಳನ್ನು ವಿವಾಹ ನೋಂದಣಿ ಸಮಯದಲ್ಲೇ ತನ್ನ ವಶಕ್ಕೆ ಪಡೆಯುವ ಮಧ್ಯವರ್ತಿ ಹೊನ್ನೇನಹಳ್ಳಿಯ ಲೋಕೇಶ್‌, ಖಾತೆಗೆ ಹಣ ಜಮೆಯಾಗುತ್ತಿದ್ದಂತೆ ₹ 2.5 ಲಕ್ಷದವರೆಗೆ ಮಹಿಳೆ ಮೂಲಕವೇ ಬಿಡಿಸಿಕೊಂಡು, ಉಳಿದ ಮೊತ್ತವನ್ನು ಖಾತೆಯಲ್ಲೇ ಬಿಡುವ ಮೂಲಕ ಅಕ್ರಮವನ್ನು ಸುಸೂತ್ರವಾಗಿ ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ’ ಎಂದು ವಂಚನೆಗೊಳಗಾದ ಫಲಾನುಭವಿಗಳು ಅಕ್ರಮ ಜಾಲದ ಕಾರ್ಯವೈಖರಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

‘ನಮ್ಮ ಚಿಕ್ಕಪ್ಪನ ಮರಣ ಪ್ರಮಾಣ ಪತ್ರವನ್ನು ಲೋಕೇಶ್ ದುರ್ಬಳಕೆ ಮಾಡಿಕೊಂಡಿರುವುದು ಗೊತ್ತಾಗಿರಲಿಲ್ಲ. ವಾರದ ಹಿಂದಷ್ಟೇ ತಿಳಿಯಿತು. ಆತನನ್ನು ಕ್ಷಮಿಸಲ್ಲ’ ಎಂದು ಹೊನ್ನೇನಹಳ್ಳಿಯ ಚೆಲುವಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸೂತ್ರಧಾರನ ಹಲವು ಪಾತ್ರ..!

ಹಗರಣದ ಸೂತ್ರಧಾರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿಧವಾ ವಿವಾಹ ನೋಂದಣಿ ಮಾಡಿಸುವಾಗ, ಹುಡುಗ–ಹುಡುಗಿಯ ರಕ್ತ ಸಂಬಂಧಿಯಾಗಿ ಒಂದೊಂದು ಪ್ರಕರಣದಲ್ಲೂ, ಒಂದೊಂದು ಪಾತ್ರ ನಿಭಾಯಿಸಿ ಸಾಕ್ಷಿಯಾಗಿ ಸಹಿ ಹಾಕಿರುವುದು ಬೆಳಕಿಗೆ ಬಂದಿದೆ.

ಹಲವು ಪ್ರಕರಣದಲ್ಲಿ ವಧುವಿನ ಅಣ್ಣ ಎಂದು ಸಾಕ್ಷಿ ಹಾಕಿದರೆ, ಮತ್ತೊಂದರಲ್ಲಿ ಭಾವ, ಇನ್ನೊಂದರಲ್ಲಿ ಮೈದುನ...ಹೀಗೆ ನಾನಾ ಸಂಬಂಧಗಳನ್ನು ನಮೂದಿಸಿ ಸಾಕ್ಷಿ ಹಾಕಿದ್ದಾನೆ. ಕೆಲವೊಂದು ಪ್ರಕರಣದಲ್ಲಿ ಫಲಾನುಭವಿಗಳನ್ನೇ ಪರಸ್ಪರ ಸಹಿ ಹಾಕಿಸಿದ್ದಾನೆ.

ಈತ ಹೊನ್ನೇನಹಳ್ಳಿಯಲ್ಲಿ ವಾಸವಿದ್ದ ಸಂದರ್ಭ ಹಣಕಾಸಿನ ವಿಷಯದಲ್ಲಿ ಜನರಿಗೆ ಮೋಸ ಮಾಡಿದ್ದಾನೆ ಎಂಬ ದೂರು ಇವೆ. ತನ್ನ ಮೈಮೇಲೆ ದೇವರು ಬರುವುದಾಗಿ ಜನರನ್ನು ನಂಬಿಸಿದ್ದ. ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ಬಳಿಕ ಊರು ತೊರೆದು ಪಟ್ಟಣ ಸೇರಿದ ಎಂಬುದು ಗ್ರಾಮಸ್ಥರ ಹೇಳಿಕೆ.

ಅಕ್ರಮ ಜಾಲಕ್ಕೆ ತನ್ನ ಪರಿಚಿತರು, ಸಂಬಂಧಿಗಳನ್ನೇ ನಕಲಿ ಫಲಾನುಭವಿಗಳನ್ನಾಗಿ ಬಳಸಿಕೊಂಡಿರುವ ಹೊನ್ನೇನಹಳ್ಳಿಯ ಲೋಕೇಶ್, ಅಂತರ್ಜಾತಿ ಯೋಜನೆಯ ಪ್ರಯೋಜನ ಕೊಡಿಸಿ ಎಂದು ಕೇಳಿಕೊಂಡು ಬಂದವರಿಗೂ ವಿಧವಾ ಪುನರ್‌ ವಿವಾಹ ಯೋಜನೆಯಡಿ ಪ್ರೋತ್ಸಾಹಧನ ಕೊಡಿಸಿದ್ದಾನೆ. ಇದಕ್ಕೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ.

ಹೇಳಿಕೊಳ್ಳಲಾಗದ ನೋವು...

ನಾನು ಮಾದಿಗ. ಹೆಂಡತಿ ಹೊಲೆಯ ಜಾತಿಯವಳು. ಪರಸ್ಪರ ಪ್ರೀತಿಸಿ 2006ರಲ್ಲೇ ಮದುವೆಯಾಗಿದ್ದೆವು. ನಮಗಿಬ್ಬರು ಗಂಡು ಮಕ್ಕಳಿದ್ದಾರೆ. ದೊಡ್ಡವ ಐದನೇ ಇಯತ್ತೆ. ಸಣ್ಣವ ಎರಡನೇ ಇಯತ್ತೆ.

ಆಗಾಗ್ಗೆ ಪಿರಿಯಾಪಟ್ಟಣಕ್ಕೆ ಹೋಗಿ ಬರುತ್ತಿದ್ದೆ. ವರ್ಷದ ಹಿಂದಷ್ಟೇ ಹೊನ್ನೇನಹಳ್ಳಿ ಲೋಕೇಶ್‌ ಪರಿಚಯನಾದ. ಸರ್ಕಾರದಿಂದ ಅಂತರ್‌ಜಾತಿ ವಿವಾಹಕ್ಕೆ ಪ್ರೋತ್ಸಾಹಧನ ಕೊಡಿಸುವುದಾಗಿ ತಿಳಿಸಿದ. ನಾವೂ ಖುಷಿಯಿಂದ ಒಪ್ಪಿಕೊಂಡೆವು. ಅವನೇ ಎಲ್ಲ ದಾಖಲೆ ಸಂಗ್ರಹಿಸಿದ.

ಅವ ಹೇಳಿದ ದಿನ ಉಪನೋಂದಣಾಧಿಕಾರಿ ಕಚೇರಿಗೆ ಹೋಗಿ ಮತ್ತೊಮ್ಮೆ ಮದುವೆಯಾದೆವು. ಅಂದೇ ನನ್ನ ಹೆಂಡತಿಯ ಬ್ಯಾಂಕ್‌ ದಾಖಲೆ ಪಡೆದ. ಅಕೌಂಟ್‌ಗೆ ದುಡ್ಡು ಜಮೆಯಾಗುತ್ತಿದ್ದಂತೆ, ನಮ್ಮನ್ನು ಕರೆದುಕೊಂಡು ಹೋಗಿ ₹ 2.5 ಲಕ್ಷ ಡ್ರಾ ಮಾಡಿಕೊಂಡಿದ್ದ.

ಎಂಟತ್ತು ದಿನದ ಹಿಂದೆ ಫೋನ್ ಮಾಡಿ ನಿಮ್ಮ ಮನೆಗೆ ಅಧಿಕಾರಿಗಳು ಬರ್ತಾರೆ. ಅವರು ನಿಮ್ಮದು ವಿಧವಾ ವಿವಾಹವಾ ? ಎಂದು ಕೇಳಿದರೆ ಒಪ್ಕೊಳ್ಳಿ ಎಂದೆಲ್ಲಾ ಗಿಣಿಪಾಠ ಹೇಳಿಕೊಟ್ಟ. ನನ್ನೆಂಡ್ತಿ ಹೆದರಿದಳು. ಮನೆಗೆ ಬೀಗ ಹಾಕ್ಕೊಂಡು ಹೋಗಿದ್ವೀ. ಆದರೂ ಅಧಿಕಾರಿಗಳು ಬಂದು ಕೇಳಿದರು. ನಾನು ಅವ ಹೇಳಿಕೊಟ್ಟ ಪಾಠ ಒಪ್ಪಿಸಿದೆ.

ಈಗ ವಿಷಯ ಊರಲ್ಲಿ ಗೊತ್ತಾಗಿದೆ. ಹಣಕ್ಕಾಗಿ ಹೆಂಡ್ತಿನಾ ವಿಧವೆ ಮಾಡ್ದ ಅನ್ತ್ವಾರೆ. ಕೇಳಿದಾಗ ತುಂಬಾ ನೋವಾಗುತ್ತೆ. ನಮ್ಮಂಗೆ ಚಂದ್ರಶೇಖರ–ಕಮಲ ದಂಪತಿಗೂ ಮಾಡಿದ್ದಾನೆ. ಕೂಲಿ ಮಾಡ್ಕೊಂಡು ತಿನ್ನೋರು ನಾವು. ನಮಗೆ ಯಾರಿಂದಲೂ ತೊಂದರೆ ಆಗದಂತೆ ಮಾಡಿಕೊಡಿ ಎಂದು ಕೊಪ್ಪದ ಯೋಗೇಶ ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡರು.

ದಲಿತರೇ ಹಳ್ಳ ಹಿಡಿಸಿದ್ದು ಬೇಸರವಾಯ್ತು..

ಜಿಲ್ಲೆಯಲ್ಲಿ ಹಗರಣದ ವಾಸನೆ ಮೊದಲು ಬಡಿದಿದ್ದು, ದಲಿತ ಸಂಘರ್ಷ ಸಮಿತಿಯ ಮುಖಂಡ, ನಿವೃತ್ತ ಪ್ರಾಧ್ಯಾಪಕ ಆರ್.ಎಸ್.ದೊಡ್ಡಣ್ಣ ಅವರಿಗೆ. ಅದನ್ನು ಅವರು ಬಿಡಿಸಿಟ್ಟಿದ್ದು ಹೀಗೆ...

ರಾವಂದೂರು ಎಸ್‌.ಕೊಪ್ಪಲು ನನ್ನೂರು. ನನ್ನಕ್ಕನ ಊರಾದ ಭೋಗನಹಳ್ಳಿಗೆ ಹಬ್ಬಕ್ಕೆಂದು ಹೋಗಿದ್ದೆ. ಮನೆ ಮುಂದೆ ಶಾಲೆ ಬಿಟ್ಟ ಬಾಲಕ ಆಟವಾಡೋದನ್ನು ಕಂಡು ಬೇಸರವಾಯ್ತು. ಆತನನ್ನು ಶಾಲೆಗೆ ಸೇರಿಸಲು ಮುಂದಾದೆ. ಆಗ ಶಾಲೆ–ಹಾಸ್ಟೆಲ್ ವ್ಯವಸ್ಥೆ ಕಂಡು ಸುಧಾರಣೆಗೆ ಮುಂದಾದೆ.

ಎರಡೂ ಸುಧಾರಣೆಗೊಂಡವು. ಆಗ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ರಾಮೇಗೌಡ ಪರಿಚಯವಾಗಿದ್ದರು. ಕಚೇರಿಗೆ ಹೋದಾಗ ಯೋಜನೆಗಳ ಬಗ್ಗೆ ವಿಚಾರಿಸಿದೆ. ವಿಧವಾ ಪುನರ್ ವಿವಾಹ ಯೋಜನೆ ಪ್ರಸ್ತಾಪಿಸಿದರು. ಎಷ್ಟು ಜನ ಅನುಕೂಲ ಪಡೆದಿದ್ದಾರೆ ಅಂದಾಗ 13 ಮಂದಿ ಅಂದರು.

ನನಗೆ ಬಹಳ ಸಂತಸವಾಯ್ತು. ಕ್ರಾಂತಿಕಾರಿ ಬೆಳವಣಿಗೆ ಎಂದು ವಿಧವೆಯರನ್ನು ಮದುವೆಯಾದವರನ್ನು ಸನ್ಮಾನಿಸಬೇಕು ಎಂದು ನಿಶ್ಚಯಿಸಿ ಮಾಹಿತಿ ಕೊಡುವಂತೆ ಬೆನ್ನು ಹತ್ತಿದೆ. ಕೊಡಲಿಲ್ಲ. ಕೊನೆಗೆ ಜಿಲ್ಲಾ ಕಚೇರಿಯಲ್ಲಿ ಮಾಹಿತಿ ಹಕ್ಕಿನಡಿ ಕೇಳಿದೆ. ಕೊಟ್ಟರು. ಎಲ್ಲಾ ಸಂದರ್ಭವೂ ನಿಮ್ಮದು ಇದ್ದರೆ ಮಾಡಿಕೊಡ್ತೇವೆ ಎಂದವರೇ ಹೆಚ್ಚು.

ಕುತೂಹಲದಿಂದ ದಾಖಲೆ ಮೇಲೆ ಕಣ್ಣಾಡಿಸಿದೆ. ನಮ್ಮೂರ ಸುತ್ತಲಿನವರೇ ಫಲಾನುಭವಿಗಳಾಗಿದ್ದರು. ವಿಚಾರಿಸಿದಾಗ ಯಾರೊಬ್ಬರೂ ವಿಧವೆಯರಾಗಿರಲಿಲ್ಲ. ಆಳಕ್ಕಿಳಿದಷ್ಟು ಹಗರಣ ಬಿಚ್ಚಿಕೊಂಡಿತು. ದಲಿತರ ಉದ್ಧಾರಕ್ಕಾಗಿರುವ ಯೋಜನೆಯನ್ನು ದಲಿತರೇ, ಅಧಿಕಾರಿಗಳೊಟ್ಟಿಗೆ ಸೇರಿ ಹಳ್ಳ ಹಿಡಿಸಿದ್ದು ಕಂಡು ಬೇಸರವಾಯ್ತು ಎಂದು ಹಗರಣ ಪತ್ತೆ ಹಚ್ಚಿದಆರ್.ಎಸ್.ದೊಡ್ಡಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಎಷ್ಟೋ ಫಲಾನುಭವಿಗಳಿಗೆ ಯಾವ ಯೋಜನೆಯಡಿ ಹಣ ಪಡೆದಿದ್ದೇವೆ ಎಂಬುದೇ ಗೊತ್ತಿಲ್ಲ. ನಾನು ಮಾಹಿತಿ ಹಕ್ಕಿನಡಿ ದಾಖಲೆ ಪಡೆದ ಬಳಿಕ ಇಲಾಖೆಯ ಜಿಲ್ಲಾ ಅಧಿಕಾರಿಗಳು ಎಚ್ಚೆತ್ತು ವಿಚಾರಣೆಗೆ ಮುಂದಾಗಿದ್ದಾರೆ. ಅಮಾಯಕರು ಬಲಿಪಶುಗಳಾಗುವುದು ಬೇಡ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂಬ ಆಗ್ರಹ ಅವರದ್ದು.

ತಂಡ ಕಳುಹಿಸಿ ತನಿಖೆ

‘ಮೈಸೂರು ಜಿಲ್ಲೆಯಲ್ಲಿ ಪರಿಶಿಷ್ಟ ವಿಧವೆಯರ ವಿವಾಹ ಪ್ರೋತ್ಸಾಹ ಧನ ಪಡೆಯುವಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ದೂರುಗಳು ಬಂದಿವೆ. ಬೆಂಗಳೂರಿನಿಂದ ಅಧಿಕಾರಿಗಳ ತಂಡ ಕಳುಹಿಸಿ, ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಹಣ ಬಿಡುಗಡೆ ಮಾಡುವ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿ ಮಹಜರು ನಡೆಸಬೇಕು. ಊರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಫಲಾನುಭವಿಗಳ ಅಕ್ಕಪಕ್ಕದ ಮನೆಯವರಿಂದ ವಿವರ ಪಡೆದುಕೊಂಡು ದಾಖಲಿಸಿಕೊಳ್ಳಬೇಕು. ಆ ನಂತರ ಹಣ ಮಂಜೂರು ಮಾಡಬೇಕು. ಇದನ್ನು ಕಡ್ಡಾಯ ಮಾಡಲಾಗುವುದು. ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು’

ಆರ್.ಎಸ್.ಪೆದ್ದಪ್ಪಯ್ಯ,ಆಯುಕ್ತ, ಸಮಾಜ ಕಲ್ಯಾಣ ಇಲಾಖೆ

***

ಹೊನ್ನೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಈ ಯೋಜನೆಯ ಫಲಾನುಭವಿಗಳು ಮೂವರಿದ್ದಾರೆ. ಆದರೆ, ಅವರ್‍ಯಾರೂ ವಿಧವೆಯರಾಗಿ ಮರುಮದುವೆ ಆದವರಲ್ಲ. ಜನರು ದುಡ್ಡಿನಾಸೆಗೆ ಏನೇನೋ ಮಾಡುತ್ತಾರೆ ಎಂದುಕೊಳ್ಳೋಣ. ಹಾಗಿದ್ದರೆ ಅಧಿಕಾರಿಗಳ ಕೆಲಸ ಏನು?

–ಕೃಷ್ಣಕುಮಾರ್‌, ಗ್ರಾ. ಪಂ. ಸದಸ್ಯ, ಹೊನ್ನೇನಹಳ್ಳಿ

***

ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂವರು ಫಲಾನುಭವಿಗಳು ವಿಧವೆಯರಲ್ಲ. ಅವಿದ್ಯಾವಂತರೂ ಅಲ್ಲ. ಸುಶಿಕ್ಷಿತರೇ ಭ್ರಷ್ಟರೊಂದಿಗೆ ಕೈಜೋಡಿಸಿ, ನಿಜವಾದ ಫಲಾನುಭವಿಗಳ ಹಕ್ಕನ್ನು ಕಸಿದುಕೊಳ್ಳುವುದು ಅಪರಾಧವಲ್ಲವೇ? ಈ ಬಗ್ಗೆ ಸಮಗ್ರ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು</p>

–ದೊಡ್ಡಯ್ಯ, ಗ್ರಾ.ಪಂ. ಸದಸ್ಯ, ಮುಮ್ಮಡಿ ಕಾಲೊನಿ

***
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದು, ಈ ಬಗ್ಗೆ ತನಿಖೆ ಆರಂಭವಾಗಿದೆ

–ಶ್ವೇತಾ ರವೀಂದ್ರ, ತಹಶೀಲ್ದಾರರು, ಪಿರಿಯಾಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT