ಭಾನುವಾರ, ಸೆಪ್ಟೆಂಬರ್ 20, 2020
21 °C
ದಮನಿತ‌ ಮಹಿಳೆಯರ ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡಬೇಕು

‘ಅಧಿಕಾರಿಗಳ ಮನಸ್ಥಿತಿಯ ಸಮಸ್ಯೆ’

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ದಮನಿತ ಮಹಿಳೆಯರಿಗಾಗಿ ಸರ್ಕಾರ ನೀಡುವ ಸೌಲಭ್ಯಗಳಿಗೆ ಕೊರತೆ ಇಲ್ಲ. ಆದರೆ, ಅವುಗಳನ್ನು ಅವರಿಗೆ ತಲುಪಿಸುವ ಇಲಾಖೆ ಮತ್ತು ಅಧಿಕಾರಿಗಳ ಮನಸ್ಥಿತಿಯಲ್ಲಿ ಸಮಸ್ಯೆ ಇದೆ. ಈ ಕಾರಣಕ್ಕಾಗಿಯೇ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಬದುಕು ಹಸನಾಗುತ್ತಿಲ್ಲ...’

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ‘ವಿಮೋಚನಾ’ ಸಂಸ್ಥೆಯ ಬಿ.ಎಲ್‌.ಪಾಟೀಲ ಅವರ ನೇರ ಮಾತಿದು.

‘ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಘಟ ನೆಗಳ ಮೂಲಕ, ಹಲವಾರು ದಮನಿತರಿಗೆ ಸರ್ಕಾರದ ಸೌಲಭ್ಯಗಳು ಸಿಕ್ಕಿವೆ. ಆದರೆ, ನೇರವಾಗಿ ವಿವಿಧ ಇಲಾಖೆಗಳ ಬಾಗಿಲು ಬಡಿದವರಿಗೆ ಯೋಜನೆಗಳ ಪ್ರಯೋಜನ ಮರೀಚಿಕೆಯಾಗಿದೆ. ದಮನಿತ ಮಹಿಳೆಯರ ಪರ ಕೆಲಸ ಮಾಡುವ ಸಂಘಟನೆಗಳಲ್ಲೂ ಈಗ ಏಜೆಂಟ್‌ಗಳು ಹುಟ್ಟಿಕೊಂಡಿದ್ದಾರೆ. ಯೋಜನೆಗಳನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವವರೂ ಇದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ’ ಎಂಬುದು ಅವರಿಗಿರುವ ಬೇಸರ.

ಶಿಕ್ಷಣ ಕೊಡಿ: ದಮನಿತ ಮಹಿಳೆಯರ ಮಕ್ಕಳಿಗೆ ಏನೂ ಸೌಲಭ್ಯ ಸಿಗುತ್ತಿಲ್ಲ. ಸರ್ಕಾರ ಅವರಿಗೆ ಶಿಕ್ಷಣ ಒಂದನ್ನು ಕೊಡಿಸಲಿ. ಬೇರೇನೂ ಬೇಡ. ಮಕ್ಕಳಿಗೆ ಶಿಕ್ಷಣ ಸಿಕ್ಕಿದರೆ ಎಲ್ಲ ದಂಧೆಗಳಿಗೂ ಕೊನೆ ಬೀಳಲಿದೆ. ಒಂದು ಕುಟುಂಬದಲ್ಲಿ ಮಗ ಅಥವಾ ಮಗಳು ಶಿಕ್ಷಣ ಪಡೆದರೆ, ಎಲ್ಲವೂ ಸರಿಯಾಗುತ್ತದೆ ಎಂದು ಅವರು ಬಲವಾಗಿ ಪ್ರತಿಪಾದಿಸುತ್ತಾರೆ.

‘ವ್ಯವಸ್ಥೆಯನ್ನು ಸುಧಾರಿಸಲು ಶಿಕ್ಷಣ ಅತ್ಯಂತ ಮುಖ್ಯ. ಹಾಗಾಗಿ, ನಮ್ಮ ಸಂಸ್ಥೆ ದೇವದಾಸಿಯರ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಹೆಚ್ಚು ಒತ್ತು ನೀಡಿದೆ. 1990ರಲ್ಲಿ ಮೊತ್ತ ಮೊದಲ ಬಾರಿಗೆ ನಾವು ವಸತಿ ಶಾಲೆ ಆರಂಭಿಸಿದೆವು. 1997ರಲ್ಲಿ ನಮ್ಮ ಪ್ರಯತ್ನಕ್ಕೆ ರಾಷ್ಟ್ರೀಯ ಪುರಸ್ಕಾರವೂ ಬಂತು. ಶಿಕ್ಷಣ ಪಡೆದ ಮಕ್ಕಳ ಕುಟುಂಬದಲ್ಲಿ ದೇವದಾಸಿ ಪದ್ಧತಿ, ವೇಶ್ಯಾವಾಟಿಕೆ ಎಲ್ಲವೂ ನಿಂತಿದೆ. ಸಾಮಾನ್ಯವಾಗಿ ಪೋಷಕರು ಹೊರಗಿನವರ ಮಾತನ್ನು ಕೇಳುವುದಿಲ್ಲ. ಆದರೆ, ಮಕ್ಕಳ ಮಾತನ್ನು ಕೇಳುತ್ತಾರೆ. ಶಿಕ್ಷಣ ಪಡೆದ ಮಕ್ಕಳು ತಮ್ಮ ತಾಯಂದಿರನ್ನು ಮತ್ತೆ ದಂಧೆಯ ಭಾಗವಾಗಲು ಬಿಡುವುದಿಲ್ಲ’ ಎನ್ನುತ್ತಾರೆ.

ಸಕಾರಾತ್ಮಕವಾಗಿ ಸ್ಪಂದಿಸಬೇಕು: ದೌರ್ಜನ್ಯಕ್ಕೆ ಒಳಗಾಗದವರಿಗೆ ನಿವೇಶನ, ಮನೆಗಳನ್ನು ನೀಡಬೇಕು ಎಂದು ಸರ್ಕಾರ ಹೇಳುತ್ತದೆ. ಅರ್ಹರಿಂದ 100 ಅರ್ಜಿಗಳು ಬಂದರೆ, ಅರ್ಜಿದಾರರು ನಿವೇಶನ ಹೊಂದಿಲ್ಲ ಎಂದು 50–60 ಅರ್ಜಿಗಳನ್ನು ತಿರಸ್ಕ ರಿಸುತ್ತಾರೆ. ವಾಸ್ತವದಲ್ಲಿ ಫಲಾನುಭವಿಗಳಿಗೆ ನಿವೇ ಶನ ಕೊಡುವುದಕ್ಕೂ ಅವಕಾಶ ಇದೆ. ಆದರೆ, ಅಧಿಕಾರಿಗಳು ಈ ಬಗ್ಗೆ ಯೋಚಿಸುವುದಿಲ್ಲ. ದಮನಿತರ ಬಗೆಗಿನ ಧೋರಣೆ ಯನ್ನು ಬದಲಾಯಿಸಿಕೊಳ್ಳಬೇಕು. ಆಂಧ್ರ ಮತ್ತು ತೆಲಂಗಾಣಗಳಲ್ಲಿ ಲೈಂಗಿಕ ಕಾರ್ಯಕರ್ತರ ಹಿತರಕ್ಷಣೆ ಗಾಗಿ ಸ್ವಯಂ ಸೇವಾ ಸಂಸ್ಥೆಗಳ ನೆರವು ಪಡೆಯಲಾಗಿದೆ. ನಮ್ಮಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒಗಳನ್ನು ಸರ್ಕಾರ ಬೆಂಬಲಿಸುತ್ತಿಲ್ಲ’ ಎಂದು ಬಿ.ಎಲ್‌. ಪಾಟೀಲ ಬೇಸರ ವ್ಯಕ್ತಪಡಿಸಿದರು. 

ಸೌಲಭ್ಯಗಳನ್ನು ಕಲ್ಪಿಸಲಿ: ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದಮನಿತ ಮಹಿಳೆಯರಿಗಾಗಿ ಸಾಕಷ್ಟು ಕಾರ್ಯಕ್ರಮಗಳಿವೆ. ಆದರೆ, ಅಧಿಕಾರಿಗಳ ಉದಾಸೀನ ಧೋರಣೆಯಿಂದಾಗಿ ಫಲಾನುವಿಗಳಿಗೆ ತಲುಪುತ್ತಿಲ್ಲ’ ಎಂದು ಬಾಗಲಕೋಟೆಯಲ್ಲಿ ಕಾರ್ಯನಿ ರ್ವಹಿ ಸುತ್ತಿರುವ ‘ರೀಚ್‌’ ಸಂಸ್ಥೆಯ ಸಂಯೋಜಕ ಜಿ.ಎನ್‌.ಕುಮಾರ್ ತಿಳಿಸಿದರು. 

‘ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ದಮನಿತ ಮಹಿಳೆಯರ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಇದರಿಂದಾಗಿ ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳನ್ನು ಮನೆಯಲ್ಲೇ ಇರಿಸುವ ಪೋಷಕರು ಬಾಲ್ಯ ವಿವಾಹ ಮಾಡುತ್ತಾರೆ ಅಥವಾ ಕೂಲಿಗೆ ಕಳಿಸುತ್ತಾರೆ. ಹೀಗಾಗಿ ಅವರು ಮುಖ್ಯವಾಹಿನಿಗೆ ಬರುವುದೇ ಇಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕು. ದಮನಿತ ಮಹಿಳೆ ಮತ್ತು ಕುಟುಂಬ ಸದಸ್ಯರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯ ಪ್ರವೃತವಾಗಬೇಕು ಎನ್ನುತ್ತಾರೆ ಅವರು.

ಶಿಕ್ಷಣ ವಂಚಿತರು ದಂಧೆಯಲ್ಲಿ...

‘ಶಿಕ್ಷಣ ಪಡೆದ ದಮನಿತ ಮಹಿಳೆಯರ ಮಕ್ಕಳು ಉನ್ನತ ಹುದ್ದೆಗೆ ಏರಿದ್ದಾರೆ. ಕೆಎಎಸ್‌ ಅಧಿಕಾರಿ ಆಗಿದ್ದಾರೆ. ಪಿಎಚ್‌ಡಿ ಮಾಡಿದವರಿದ್ದಾರೆ. ಉಪನ್ಯಾಸಕರಾಗಿದ್ದಾರೆ, ಪ್ರಾಧ್ಯಾಪಕರಾಗಿದ್ದಾರೆ. ಹಲವರು ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೇನೆಗೆ ಸೇರಿದವರ ಸಂಖ್ಯೆಯೂ ಕಡಿಮೆ ಏನಿಲ್ಲ’  ಎಂದು ವಿವರಿಸುವ ಬಿ.ಎಲ್‌. ಪಾಟೀಲ, ಶಿಕ್ಷಣವೊಂದೇ ಎಲ್ಲ ಸಮಸ್ಯೆಗಳಿಗೂ ಮದ್ದಾಗಬಲ್ಲದು ಎನ್ನುತ್ತಾರೆ. ‘ಶಿಕ್ಷಣ ಪಡೆಯದ ಮಕ್ಕಳು ಅವಕಾಶದಿಂದ ವಂಚಿತರಾಗಿ, ಮರಳಿ ಮಣ್ಣಿಗೆ ಎನ್ನುವಂತೆ ಮತ್ತೆ ದಂಧೆಗೆ ಇಳಿಯುತ್ತಾರೆ’ ಎಂದು ಅವರು ಹೇಳಿದರು.

‘ನನ್ನ ಕಾಲಿನ ಮೇಲೆ ನಿಂತಿದ್ದೇನೆ; ಉಳಿದವರು...?’

‘ವಿಮೋಚನಾ ಸಂಸ್ಥೆಯ ನೆರವಿನಿಂದ ಒಂದು ಪುಟ್ಟ ಕಿರಾಣಿ ಅಂಗಡಿ ಹಾಕಿದ್ದೆ. ಎರಡು ವರ್ಷಗಳ ಹಿಂದೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಸಾಲ ಪಡೆದು ಅಂಗಡಿಯನ್ನು ಮತ್ತಷ್ಟು ವಿಸ್ತರಿಸಿದೆ. ಚೆನ್ನಾಗಿ ವ್ಯಾಪಾರ ಆಗುತ್ತಿದೆ. ಈಗ ನನ್ನ ಕಾಲಿನ ಮೇಲೆ ನಿಂತಿದ್ದೇನೆ. ಆದರೆ, ದೌರ್ಜನ್ಯಕ್ಕೆ ಒಳಗಾದ ಎಲ್ಲ ಮಹಿಳೆಯರಿಗೂ ಈ ರೀತಿ ಅನುಕೂಲ ಆಗಿಲ್ಲ’ ಎನ್ನುತ್ತಾರೆ ಎಂದು ಬೆಳಗಾವಿ ಜಿಲ್ಲೆಯ ದಮನಿತ ಮಹಿಳೆಯೊಬ್ಬರು. ‘ಪ್ರಜಾವಾಣಿ’ಯೊಂದಿಗೆ ಮನದಾಳವನ್ನು ಹಂಚಿಕೊಂಡ ಅವರು, ‘ನನಗೆ ಇಬ್ಬರು ಹೆಣ್ಣುಮಕ್ಕಳು, ಒಬ್ಬಳಿಗೆ ಮದುವೆ ಮಾಡಿದ್ದೇನೆ. ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾಳೆ. ಇನ್ನೊಬ್ಬಳು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಳೆ. ಐಎಎಸ್‌ ಅಧಿಕಾರಿ ಆಗಬೇಕು ಎನ್ನುವುದು ಆಕೆಯ ಕನಸು. ಅವಳ ಓದಿದಾಗಿ ಪ್ರತಿ ತಿಂಗಳು ₹6,000 ಕಳಿಸುತ್ತಿದ್ದೇನೆ. ಸರ್ಕಾರ ನೀಡಿದ ಸಾಲದಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು.

‘ನಾನು ಸಂತೋಷವಾಗಿದ್ದೇನೆ. ಆದರೆ, ನನ್ನಂತಹ ಹಲವಾರು ಮಹಿಳೆಯರು ಇನ್ನೂ ಮುಖ್ಯವಾಹಿನಿಗೆ ಬಂದಿಲ್ಲ. ಮನೆ ಕೊಡುವುದಾಗಿ ಸರ್ಕಾರದವರು ಹೇಳುತ್ತಾರೆ. ಮನೆ ಮಾತ್ರ ಇದ್ದರೆ ಜೀವನ ಸಾಗುತ್ತದೆಯೇ? ದಮನಿತರಿಗೆ ಕೆಲಸ ಬೇಕು ಅಥವಾ ಸ್ವಂತ ವ್ಯಾಪಾರ ಮಾಡಲು ಅನುಕೂಲ ಕಲ್ಪಿಸಬೇಕು. ಆಗ ಮಾತ್ರ ಅವರ ಬದುಕು ಬಂಗಾರವಾಗುತ್ತದೆ’ ಎಂದು ಹೇಳಿದರು.

ದೂರ ಬಂದರೂ ಬಿಡಲಾರರು..!

ಲೈಂಗಿಕ ವೃತ್ತಿಯಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಳ್ಳುವವರಿಗಾಗಿ ಬಸವನಬಾಗೇವಾಡಿಯಲ್ಲಿ ರೇಣುಕಾದೇವಿ ಸಹಕಾರಿ ಸಂಘವಿದೆ. ಲೈಂಗಿಕ ಕಾರ್ಯಕರ್ತೆಯರೇ ದಂಧೆಯಿಂದ ಮುಕ್ತರಾಗಿ ಸ್ವಾವಲಂಬಿ, ಸ್ವತಂತ್ರ ಬದುಕಿಗಾಗಿ ರೂಪಿಸಿಕೊಂಡ ಸಹಕಾರಿ ಬ್ಯಾಂಕಿದು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಹಳ್ಳಿಯೊಂದರ ಲೈಂಗಿಕ ವೃತ್ತಿನಿರತೆಯೊಬ್ಬರು, ವೃತ್ತಿ ತೊರೆದು ಈ ಸಂಘದಿಂದ ಸಾಲ ಪಡೆದರು. ನಿಗದಿತ ಅವಧಿಯಲ್ಲಿ ಸಾಲ ತೀರಿಸಿ, ಮತ್ತೊಮ್ಮೆ ಹೆಚ್ಚಿನ ಸಾಲ ಪಡೆದು ಎಮ್ಮೆ ಖರೀದಿಸಿದರು. ಈ ಎಮ್ಮೆಯು ಹೊಸ ಬದುಕಿಗೆ ಆಸರೆಯಾಗುವುದರ ಬದಲಿಗೆ ಮುಳುವಾಯ್ತು. ಜಮೀನಿಲ್ಲದ ಆಕೆ ಎಮ್ಮೆ ಮೇಯಿಸಲು ಊರ ಗೌಡರು, ಬೇರೆಯವರ ಹೊಲಕ್ಕೆ ಹೋದೊಡನೆ ಎಲ್ಲರೂ ಆಕೆಯನ್ನು ಹಿಂದಿನ ವೃತ್ತಿಗೆ ಒತ್ತಾಯಿಸಿದವರೇ. ಕೆಲ ದಿನಗಳಲ್ಲಿ ಆಕೆ ಮತ್ತೆ ಲೈಂಗಿಕ ಕಾರ್ಯಕರ್ತೆಯಾಗಿದ್ದು ದುರಂತ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ರಮೇಶ ಸೊಲ್ಲಾಪುರ.

ಬ್ಯಾಂಕ್‌ಗಳಿಂದ ಸಾಲ ನಿರಾಕರಣೆ

ಲೈಂಗಿಕ ವೃತ್ತಿನಿರತರು ಹಾಗೂ ಸಾಮಾಜಿಕ ಕಳಕಳಿಯ ಸಂಘಟನೆಗಳ ಮನವಿಯಿಂದಾಗಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಯೋಜನೆಯೊಂದು ಅನುಷ್ಠಾನಗೊಂಡಿತು. ಲೈಂಗಿಕ ವೃತ್ತಿನಿರತರಿಗೆ ನೆರವು ಒದಗಿಸುವುದಕ್ಕಾಗಿ ಮಹಿಳಾ ಅಭಿವೃದ್ಧಿ ನಿಗಮ ಅರ್ಜಿ ಆಹ್ವಾನಿಸಿತು. ಅರ್ಜಿ ಸಲ್ಲಿಕೆಯ ಆರಂಭದಲ್ಲೇ ಅಧಿಕಾರಿಗಳಿಂದ ಹತ್ತೆಂಟು ಕಿರಿಕಿರಿ ಶುರುವಾಯ್ತು. ಬಹುತೇಕರು ಸಾಲ ಸೌಲಭ್ಯದ ಸಹವಾಸವೇ ಬೇಡ ಎಂದು ಹಿಂದೆ ಸರಿದರು. ಸ್ಚಯಂಸೇವಾ ಸಂಸ್ಥೆಯೊಂದು ಲೈಂಗಿಕ ವೃತ್ತಿನಿರತರ ಚಿಕ್ಕ ಗುಂಪು ರಚಿಸಿ, ಅರ್ಜಿಗಳನ್ನು ಸಲ್ಲಿಸಿತು. ಒಟ್ಟು 125 ಅರ್ಜಿ ಸಲ್ಲಿಕೆಯಾದವು. ಇವರಿಗೆ ಸಾಲ ಕೊಡುವಂತೆ ಸಿಡಿಪಿಒ, ಲೀಡ್ ಬ್ಯಾಂಕ್ ಮ್ಯಾನೇಜರ್ ಸೂಚಿಸಿದರೂ ಯಾವೊಂದೂ ಬ್ಯಾಂಕ್‌ ಕೂಡ ಇವರಿಗೆ ಸಾಲ ಕೊಡಲಿಲ್ಲ. ಅದಕ್ಕೆ ಅವರು ನೀಡಿದ ಕಾರಣ ‘ಇವರು ಮರಳಿಸಲ್ಲ’ ಎಂಬುದಾಗಿತ್ತು. ಆಗಿನ ಸಚಿವೆ ಉಮಾಶ್ರೀ, ಜಯಮಾಲಾ ಅವರ ವಿಶೇಷ ಆಸಕ್ತಿಯಿಂದ, ವರ್ಷದ ಬಳಿಕ ಮತ್ತೊಮ್ಮೆ ಅರ್ಜಿ ಆಹ್ವಾನಿಸಲಾಯ್ತು. 30ಮಂದಿ ಸಾಲ ಸೌಲಭ್ಯಕ್ಕೆ ಆಯ್ಕೆಯಾಗಿ ಸಾಲ ಪಡೆದರು. ಉಳಿದವರು ಯಾವೊಂದು ನೆರವು ದೊರಕದೆ ತಮ್ಮ ವೃತ್ತಿಯಲ್ಲೇ ಮುಂದುವರಿದಿದ್ದಾರೆ ಎನ್ನುತ್ತಾರೆ ರಮೇಶ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು