ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ| ಕ್ಷಮಿಸಿ, ಮೀಮ್‌ ಹೇಳೋದೆಲ್ಲ ತಮಾಷೆಗಾಗಿ!

ಮೀಮ್‌ಗಳನ್ನೇ ನಿಜವೆಂದು ನಂಬಿ, ಅದರ ಆಧಾರದ ಮೇಲೇ ಜನಪ್ರಿಯ ವ್ಯಕ್ತಿಗಳ ನಡತೆಯನ್ನು ಅಳೆಯಲು ಮುಂದಾಗುವುದು ದುರದ
Last Updated 21 ಮಾರ್ಚ್ 2023, 21:57 IST
ಅಕ್ಷರ ಗಾತ್ರ

ರಾಜಕೀಯ ಮುಖಂಡರೊಬ್ಬರು ಸಾರ್ವಜನಿಕ ಸಮಾರಂಭವೊಂದರಲ್ಲಿ ವೇದಿಕೆಯಿಂದ ನಿರ್ಗಮಿಸುವಾಗ, ಮೈಕಿನ ಮುಂದೆ ನಿಂತಿದ್ದ ನಿರೂಪಕಿಯನ್ನು ನೋಡಿದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಮಸಾಲೆ ಭರಿತವಾಗಿ ಕೆಲವು ದಿನಗಳ ಕಾಲ ಹರಿದಾಡಿತು. ಇದನ್ನು ನೋಡಿದವರು ಸಹಜವಾಗಿಯೇ ಆ ಮುಖಂಡರನ್ನು ಟೀಕಿಸಲು ಮುಂದಾದರು. ಇದರ ಜೊತೆಗೆ ಹೆಣ್ಣುಮಕ್ಕಳ ಕುರಿತಾದ ಗೇಲಿ ಮತ್ತು ಲಿಂಗತ್ವ ಸೂಕ್ಷ್ಮತೆ ಕುರಿತ ಚರ್ಚೆ ಕೂಡ ಆರಂಭವಾಯಿತು.

ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ರೂಪದಲ್ಲಿ ವಿಡಿಯೊಗಳನ್ನೊಳಗೊಂಡ ‘ರೀಲ್ಸ್ ಆ್ಯಂಡ್ ಶಾರ್ಟ್ ವಿಡಿಯೋಸ್‌’ ಎಂಬ ಭಾಗವೊಂದು ಇರುತ್ತದೆ. ಇಲ್ಲಿ ಎರಡು ರೀತಿಯ ವಿಡಿಯೊ ತುಣುಕುಗಳಿರುತ್ತವೆ. ಮೊದಲನೆಯದಾಗಿ, ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಂ ಬಳಕೆದಾರರು ಸೃಷ್ಟಿಸುವ ಸ್ಕಿಟ್ ರೂಪದ ಮನರಂಜನಾ ವಿಡಿಯೊಗಳು. ಇವನ್ನು ಹೊರತು ಪಡಿಸಿದರೆ ರಾಜಕೀಯ ನಾಯಕರು, ಚಿತ್ರನಟರು ಅಥವಾ ಕ್ರೀಡಾಪಟುಗಳು ಸಾರ್ವಜನಿಕ ಸಭೆ ಅಥವಾ ಸಂದರ್ಶನಗಳಲ್ಲಿ ಆಡಿರುವ ಮಾತುಗಳ ಸಣ್ಣ ಸಣ್ಣ ವಿಡಿಯೊ ತುಣುಕುಗಳ ಮಿಶ್ರಣವು ‘ಮೀಮ್‌’ ಎಂದು ಕರೆಸಿಕೊಳ್ಳುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಗಮನವನ್ನು ಥಟ್ಟನೆ ಸೆಳೆಯುತ್ತದೆ.

ಈ ಮೀಮ್‌ಗಳ ವಿಶೇಷವೆಂದರೆ, ಜನರು ಅವುಗಳನ್ನು ನೋಡುವ ವೇಳೆಗೆ ಅವನ್ನು ಬಹಳಷ್ಟು ಎಡಿಟ್ ಮಾಡಲಾಗಿರುತ್ತದೆ. ಅಂದರೆ, ಒಬ್ಬ ರಾಜಕೀಯ ನಾಯಕ ಅಥವಾ ಸಿನಿಮಾ ತಾರೆ ಹಲವಾರು ಕಡೆ ಆಡಿರುವ ಮಾತುಗಳ ಕೆಲವು ಭಾಗಗಳನ್ನು ಆಯ್ದು, ಅವುಗಳನ್ನೆಲ್ಲ ಒಟ್ಟುಗೂಡಿಸಿ ಒಂದೇ ವಿಡಿಯೊ ತುಣುಕು ಮಾಡಿ ಹರಿಯಬಿಡಲಾಗು ತ್ತದೆ. ಹಿನ್ನೆಲೆಯಲ್ಲಿ ಯಾವುದಾದರೂ ಹಾಡು ಅಥವಾ ಆ ವಿಡಿಯೊ ತುಣುಕುಗಳನ್ನು ನಿರ್ಮಿಸಿದವರ ನಿರೂಪಣೆ ಇರುತ್ತದೆ. ಕೆಲವೊಮ್ಮೆ ಈ ವಿಡಿಯೊಗಳನ್ನು ಬಹಳ ವಿಡಂಬನಾತ್ಮಕವಾಗಿ ಯಾವುದಾದರೂ ಜನಪ್ರಿಯ ಹಾಡಿಗೆ ಹೊಂದಾಣಿಕೆಯಾಗುವಂತೆ ಮಾಡಿರುತ್ತಾರೆ.

ಈ ರೀತಿ ‘ಟೈಲರಿಂಗ್’ ಆಗಿರುವ ಮೀಮ್ ಮೂಲತಃ ನೋಡುಗರಿಗೆ ನವಿರಾದ ಹಾಸ್ಯದ ಮೂಲಕ ಸೂಕ್ಷ್ಮ ಸಂದೇಶ ರವಾನೆ ಮಾಡುವ ಉದ್ದೇಶ ಹೊಂದಿರುತ್ತದೆ. ಆದರೆ ದುರದೃಷ್ಟವಶಾತ್‌ ಹಾಸ್ಯದ ನೆಪದಲ್ಲಿ ಯಾರನ್ನಾದರೂ ಗುರಿಯಾಗಿಸಿಕೊಳ್ಳುವ ಕೆಲಸವೂ ಈ ಮೀಮ್‌ಗಳಲ್ಲಿ ಆಗುತ್ತದೆ. ಹೀಗಾಗಿ ಮೀಮ್‌ಗಳು ಎಷ್ಟು ಸತ್ಯಾಂಶವನ್ನು ಒಳಗೊಂಡಿರು ತ್ತವೆ ಎಂಬುದನ್ನು ತಿಳಿಯಬೇಕಿರುವುದು ಬಹಳ ಮುಖ್ಯ.

ಬಹಳಷ್ಟು ಬಾರಿ ಈ ಮೀಮ್‌ಗಳು ಅರ್ಧ ಸತ್ಯವನ್ನು ಮಾತ್ರ ಒಳಗೊಂಡಿರುತ್ತವೆ. ಮನರಂಜನೆಯ ನೆಪದಲ್ಲಿ ಸೃಷ್ಟಿಯಾಗುವ ಇವುಗಳ ಉದ್ದೇಶವು ಸತ್ಯವನ್ನು ಬಿಂಬಿಸುವುದೇ ಆಗಿರಬೇಕೆಂದು ಇಲ್ಲ. ಆದರೆ ಅವುಗಳಲ್ಲಿ ಇರುವುದು ಪೂರ್ಣ ಸತ್ಯ ಎಂಬ ಭಾವನೆ ಜನರಲ್ಲಿ ಬೇರೂರುತ್ತಿರುವುದು ಆತಂಕಕಾರಿ ಬೆಳವಣಿಗೆ.

ರಾಜಕೀಯ ಉದ್ದೇಶಗಳಿಂದ ಮತ್ತು ಜನರನ್ನು ಪ್ರಭಾವಿಸುವ ದೃಷ್ಟಿಯಿಂದ ಒಬ್ಬ ವ್ಯಕ್ತಿಯನ್ನು ಹೀಗೇ ತೋರಿಸಬೇಕು ಎಂದು ಪ್ರಯತ್ನಿಸುವವರಿಗೆ ಮೀಮ್ ಸಂವಹನ ಬಹಳ ಪರಿಣಾಮಕಾರಿ. ನೋಡಿದ ಮೀಮನ್ನು ಪುನಃ ಪುನಃ ನೋಡುವ ಜನರ ಮನಸ್ಸಿನಲ್ಲಿ ಅದೇ ಸತ್ಯ ಎಂಬ ಅಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ. ತಾವು ನೋಡುತ್ತಿರುವ ಮೀಮ್ ಎಡಿಟ್ ಆಗಿದೆ ಎಂಬ ಅಂಶವನ್ನೇ ಅವರು ಗಮನಿಸದೆ ಹೋಗಬಹುದು.

ಸಂಶೋಧನಾ ಪರಿಧಿಯಲ್ಲಿ ಹೇಳುವುದಾದರೆ ಇದನ್ನು ‘ಚೆರ್‍ರಿ ಪಿಕಿಂಗ್‌’ ಎನ್ನುತ್ತಾರೆ. ಹೇಳಬೇಕಾದ ವಿಷಯವನ್ನು ಆಮೂಲಾಗ್ರವಾಗಿ ಪರಿಗಣಿಸದೆ, ತಮಗೆ ಯಾವ ಅಂಶ ಅನುಕೂಲಕರವೋ ಅಷ್ಟನ್ನು ಮಾತ್ರ ಬೆಳಕಿಗೆ ತರುವುದು ಇದರ ಉದ್ದೇಶ. ಈ ರೀತಿಯ ಬರವಣಿಗೆಯನ್ನು ಕುತರ್ಕ ಎಂದಷ್ಟೇ ಕರೆಯಬಹುದು ವಿನಾ ತಾರ್ಕಿಕ ಚಿಂತನೆ ಎಂದಲ್ಲ.

ಆ ರಾಜಕೀಯ ಮುಖಂಡರು ನಿರೂಪಕಿಯನ್ನು ನೋಡಿದ ಭಾಗವನ್ನು ಮಾತ್ರ ರೀಲ್ಸ್‌ನಲ್ಲಿ ಹಾಕಿ, ಅದಕ್ಕೆ ಒಂದಷ್ಟು ಮಸಾಲೆ ಬೆರೆಸಿ ಜನರಿಗೆ ಉಣಬಡಿಸಿದ್ದನ್ನು ಕೇವಲ ತಮಾಷೆಗಾಗಿ ಎಂದು ಅರ್ಥೈಸಲಾಗದು. ಇದರ ಹಿಂದೆ ರಾಜಕೀಯ ಮತ್ತು ದುರುದ್ದೇಶ ಇದ್ದಿರಬಹುದು ಎಂಬುದನ್ನು ಗಮನಿಸಬೇಕು ಮತ್ತು ಹೇಗೆ ಮೀಮ್ ಸಂಸ್ಕೃತಿಯೇ ಸಹಜ ಸಂವಹನವಾಗಿ ಪರಿವರ್ತನೆಗೊಂಡಿದೆ ಎಂಬುದನ್ನೂ ಅರಿಯಬೇಕು.

ಇಂದಿನವರ ಪ್ರಮುಖ ಗುಣಲಕ್ಷಣ ವೆಂದರೆ, ಯಾವುದೇ ವಿಷಯ ತ್ವರಿತವಾಗಿ ಅವರನ್ನು ತಲುಪಬೇಕು. ಹಾಗಾಗಿ ಅತಿ ಕಡಿಮೆ ಸಮಯದಲ್ಲಿ ಮನರಂಜನಾತ್ಮಕವಾಗಿ ಸಂದೇಶ ನೀಡುವ ಮೀಮ್‌ಗಳು ಸಹಜವಾಗಿಯೇ ಬಹುತೇಕರ ಅಚ್ಚುಮೆಚ್ಚು. ಒಂದು ಮೀಮ್ ನೋಡಿದಾಗ, ಅದು ಘಟಿಸಿದ ಸಂದರ್ಭ ಯಾವುದು ಎಂದು ತಿಳಿಯುವ ಸಹನೆ, ಕುತೂಹಲ ಅಥವಾ ಸಮಯ ಜನರಿಗೆ ಕೆಲವೊಮ್ಮೆ ಇರುವುದಿಲ್ಲ.

ಮೀಮ್ ಇರುವುದು ಬರೀ ತಮಾಷೆಗಾಗಿ ಎಂಬ ಸತ್ಯವನ್ನು ಮರೆತು, ಅದರ ಆಧಾರದ ಮೇಲೇ ಜನಪ್ರಿಯ ವ್ಯಕ್ತಿಗಳ ನಡತೆಯನ್ನು ಅಳೆಯಲಾಗುತ್ತದೆ. ಆದ್ದರಿಂದ ಡಿಜಿಟಲ್ ಸಾಕ್ಷರರು ತಮ್ಮ ಕೌಶಲವನ್ನು ದುರುದ್ದೇಶಪೂರಿತ ಮೀಮ್‌ಗಳ ಸೃಷ್ಟಿಗೆ ವ್ಯಯಿಸಿ ಜನರ ದಿಕ್ಕುತಪ್ಪಿಸಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT