ಮಂಗಳವಾರ, ಜುಲೈ 5, 2022
26 °C
ನಮ್ಮ ಆತ್ಮದ ಭಾಷೆ ಸಂಸ್ಕೃತದ ಬಗೆಗೇಕೆ ಕೆಲವರಿಗೆ ಸೀಮಿತ ಆಲೋಚನೆ?

ಸಂಗತ: ‘ತ್ರಿಭಾಷಾ’ ಸಮನ್ವಯ ಸೂತ್ರ

ಡಾ. ಸಿ.ಎನ್ ಅಶ್ವತ್ಥನಾರಾಯಣ Updated:

ಅಕ್ಷರ ಗಾತ್ರ : | |

‘ದೇಶವಾಸಿಗಳನ್ನೆಲ್ಲ ಬೆಸೆಯುವ ಒಂದು ರಾಷ್ಟ್ರಭಾಷೆ ನಮಗೆ ಬೇಕಿದ್ದು, ಇದಕ್ಕೆ ಸಂಸ್ಕೃತ ಸೂಕ್ತವಾಗಿದೆ’ ಎಂದು ಹೇಳಿದ್ದರು ಡಾ. ಬಿ.ಆರ್.ಅಂಬೇಡ್ಕರ್. ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಸಂಸ್ಕೃತ ವಿಶ್ವವಿದ್ಯಾಲಯ’ಕ್ಕೆ 100 ಎಕರೆ ವಿಸ್ತೀರ್ಣದಲ್ಲಿ ಕ್ಯಾಂಪಸ್ ನಿರ್ಮಿಸಲು ಇತ್ತೀಚೆಗೆ ಶಂಕುಸ್ಥಾಪನೆ ನೆರವೇರಿಸಿದ ಬೆನ್ನಲ್ಲೇ ಕೆಲವರು, ‘ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಬೇಡ’ ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಒಂದು ಮಾತನ್ನಿಲ್ಲಿ ಹೇಳಬೇಕು. ಕನ್ನಡ ನಮ್ಮ ಹೃದಯದ ಭಾಷೆ. ಅದು ನಮ್ಮ ಚೈತನ್ಯ, ಚಿಂತನೆ ಮತ್ತು ಕರ್ತವ್ಯಗಳ ಅವಿಭಾಜ್ಯ ಅಂಗ. ಭಾರತೀಯ ಭಾಷೆಗಳಲ್ಲೇ ಮಕ್ಕಳ ಕಲಿಕೆ ನಡೆಯಬೇಕು ಎಂಬ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಕ್ಕೆ ತಕ್ಕಂತೆ ನಾವು ಎಂಜಿನಿಯರಿಂಗ್‌ನಲ್ಲೂ ಕನ್ನಡ ಮಾಧ್ಯಮ ತಂದಿದ್ದೇವೆ. ಡಿಪ್ಲೊಮಾ, ಪಾಲಿಟೆಕ್ನಿಕ್‌ನಲ್ಲೂ ಕನ್ನಡದಲ್ಲಿ ಸಹ ಬೋಧಿಸುವಂತೆ ಸೂಚಿಸಿದ್ದೇವೆ. ಕನ್ನಡದಲ್ಲೇ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದ್ದೇವೆ (ಪದವಿಯಲ್ಲೂ ಕನ್ನಡ ಕಲಿಕೆ ಕಡ್ಡಾಯ
ಗೊಳಿಸಿದ್ದೇವೆ. ಇದು ಸದ್ಯಕ್ಕೆ ನ್ಯಾಯಾಲಯದ ಅಂತಿಮ ತೀರ್ಪಿನ ವಿವೇಚನೆಗೆ ಒಳಪಟ್ಟಿದೆ).

ಅಂದಮಾತ್ರಕ್ಕೆ ನಾವು ಸಂಸ್ಕೃತವನ್ನು ನಿರಾಕರಿಸಬೇಕೆ? ಗಾಂಧೀಜಿ ತಮ್ಮ ‘ಹಿಂದ್ ಸ್ವರಾಜ್’ ಕೃತಿಯಲ್ಲಿ ‘ಬ್ರಿಟಿಷರ ಇಂಗ್ಲಿಷ್ ಶಿಕ್ಷಣವನ್ನು ಬಿಸುಡಬೇಕು. ಅದು ನಮ್ಮನ್ನು ಗುಲಾಮರನ್ನಾಗಿಯೇ ಇಡುತ್ತದೆ. ನಮಗೆ ಆತ್ಮಾಭಿಮಾನವಿದ್ದರೆ ಸಂಸ್ಕೃತವನ್ನೇ ಎಲ್ಲೆಡೆ
ಅಳವಡಿಸಿಕೊಳ್ಳಬೇಕು’ ಎಂದಿದ್ದಾರೆ.

ದೇಶದಲ್ಲಿರುವ 4,000ಕ್ಕೂ ಹೆಚ್ಚಿನ ಭಾಷೆಗಳಿಗೆ ಮಾತೃಸ್ಥಾನದಲ್ಲಿ ಇರುವುದು ಸಂಸ್ಕೃತವೇ. ಲಿಪಿ, ಕಾಗುಣಿತ, ವ್ಯಾಕರಣ ಶಾಸ್ತ್ರ, ಕಾವ್ಯಮೀಮಾಂಸೆ ಇವೆಲ್ಲವನ್ನೂ ಕನ್ನಡದಂಥ ಭಾಷೆಗಳು ಸಂಸ್ಕೃತದಿಂದ ಸ್ವೀಕರಿಸಿವೆ. ವೇದೋಪನಿಷತ್ತುಗಳು, ಆಯುರ್ವೇದ, ಮಹಾಕಾವ್ಯಗಳು, ವಿಜ್ಞಾನ, ಯೋಗಶಾಸ್ತ್ರ, ಜ್ಯೋತಿ ರ್ವಿಜ್ಞಾನಗಳ ಮೂಲಗ್ರಂಥಗಳೆಲ್ಲವೂ ಇರುವುದು ಸಂಸ್ಕೃತದಲ್ಲೇ. ನಮ್ಮ ಪ್ರಾದೇಶಿಕ ನುಡಿಗಳ ಒಕ್ಕೂಟ ವನ್ನು ಆಳದಲ್ಲಿ ಭಾಷಿಕವಾಗಿ ಬೆಸೆದಿರುವುದು ಇದೇ ಭಾಷೆ. ಹೀಗೆ ನೋಡಿದರೆ, ಇದು ನಮ್ಮ ಆತ್ಮದ ಭಾಷೆ!

ಕನ್ನಡದ ಮೇರುಪ್ರತಿಭೆಗಳಾದ ಪಂಪ, ರನ್ನ, ಜನ್ನ, ರತ್ನಾಕರವರ್ಣಿ, ಕುಮಾರವ್ಯಾಸ, ಲಕ್ಷ್ಮೀಶ, ಮುದ್ದಣ, ಕುವೆಂಪು, ಡಿವಿಜಿ, ಗೋಪಾಲಕೃಷ್ಣ ಅಡಿಗರ ಕಾವ್ಯಗಳನ್ನೆಲ್ಲ ನೋಡಿದರೆ, ಇವರೆಲ್ಲ ಸಂಸ್ಕೃತದಿಂದ ಎಷ್ಟೊಂದು ಪ್ರಭಾವಿತರಾಗಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅವರೆಲ್ಲ ಸಂಸ್ಕೃತವನ್ನು ಕಲಿತಿದ್ದರಿಂದ ಕನ್ನಡಕ್ಕೆ ಲಾಭವೇ ಆಗಿದೆ.

ಸಂಸ್ಕೃತವು ವಿಯೆಟ್ನಾಂ, ಇಂಡೊನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ಕಾಂಬೋಡಿಯಾಗಳ ಸಂಸ್ಕೃತಿಯನ್ನು ಹೇಗೆ ರೂಪಿಸಿದೆ ಎನ್ನುವುದನ್ನು ಅದನ್ನು ವಿರೋಧಿಸುತ್ತಿರುವವರು ಯಾರೂ ಅರಿತಿಲ್ಲ. ಜಪಾನ್‌ ಅನ್ನೂ ಧಾರ್ಮಿಕವಾಗಿ ರೂಪಿಸಿರುವುದು ಇದೇ ಭಾಷೆ! ಅರಬ್ ದೇಶಗಳು ಮತ್ತು ಚೀನಾವು ಸಂಸ್ಕೃತ ಗ್ರಂಥಗಳನ್ನು ತೆಗೆದುಕೊಂಡು ಹೋಗಿ, ಅವೆಲ್ಲವನ್ನೂ ತಮ್ಮ ಭಾಷೆಗೆ ಅನುವಾದಿಸಿಕೊಂಡು ಇವತ್ತು ಗಣಿತ, ಯಂತ್ರವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಬೆಳೆದಿವೆ. ಯುರೋಪ್ ಕೂಡ ಇದಕ್ಕೆ ಹೊರತಲ್ಲ.

ಕೆಲ ವರ್ಷಗಳ ಹಿಂದೆ ಭಾರತೀಯರಾದ ಮಂಜುಳ್ ಭಾರ್ಗವ ಅವರು ‘ಗಣಿತ ಕ್ಷೇತ್ರದ ನೊಬೆಲ್’ ಎನಿಸಿರುವ ಫೀಲ್ಡ್ ಮೆಡಲ್ ಪುರಸ್ಕಾರಕ್ಕೆ ಪಾತ್ರರಾದರು. ಆಗ ಅವರು ‘ಪೂರ್ವಸೂರಿಗಳಾದ ಪಿಂಗಳ, ಹೇಮಚಂದ್ರ, ಬ್ರಹ್ಮಗುಪ್ತ ಮುಂತಾದವರು ಗಣಿತವನ್ನು ಕುರಿತು ಸಂಸ್ಕೃತದಲ್ಲಿ ಬರೆದಿಟ್ಟು ಹೋಗಿರುವ ಗ್ರಂಥಭಂಡಾರವೇ ನನ್ನ ಸಾಧನೆಗೆ ಕಾರಣ. ಇವುಗಳ ಅನುಸಂಧಾನದ ಮೂಲಕ ಎಂತಹ ಕ್ಲಿಷ್ಟ ಸಮಸ್ಯೆಗಳನ್ನಾದರೂ ಸುಲಭವಾಗಿ ಬಿಡಿಸಬಹುದು’ ಎಂದಿದ್ದರು. ಇಂತಹ ಅಪಾರವಾದ ಜ್ಞಾನಸಂಪತ್ತು ಕರ್ನಾಟಕದ ಯುವಜನರಿಗೂ ಸಿಗಬೇಕು ಎನ್ನುವುದೇ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಯ ಆಶಯಗಳಲ್ಲಿ ಪ್ರಮುಖವಾಗಿದೆ.

ಕನ್ನಡಿಗರಾಗಿ ನಾವು ಕನ್ನಡವನ್ನೂ ಭಾರತೀಯ ರಾಗಿ ಸಂಸ್ಕೃತವನ್ನೂ ಕಲಿಯಬೇಕು. ಜೊತೆಗೆ ಹೊಸ ಜಾಗತಿಕ ವ್ಯವಸ್ಥೆಯಲ್ಲಿ ಇಂಗ್ಲಿಷಿಗೂ ತೆರೆದುಕೊಳ್ಳಬೇಕು. ಹೃದಯದ ಭಾಷೆ (ಕನ್ನಡ)+ ಆತ್ಮದ ಭಾಷೆ (ಸಂಸ್ಕೃತ)+ ಮಿದುಳಿನ ಭಾಷೆ (ಇಂಗ್ಲಿಷ್) ನಮ್ಮ ಉಳಿವಿಗೂ ಬೆಳವಿಗೂ ಸೂಕ್ತವೆನ್ನುವುದರಲ್ಲಿ ಎರಡು ಮಾತಿಲ್ಲ.

ಕುವೆಂಪು ತಮ್ಮ ‘ಸಂಸ್ಕೃತ ಮಾತೆ’ ಕವನದಲ್ಲಿ ‘ಆರ್ಯರಾಗಿಹ ನಾವು ನಿನ್ನ ಮೊಲೆವಾಲ ಸವಿಯಿಲ್ಲ ದೆಯೆ ಬದುಕುವೆವೆ?/ ನೀನಿಲ್ಲದೆಲ್ಲಿಯದು ಭರತ ಖಂಡದ ಬದುಕು, ಸಂಪತ್ತು, ಸಂಸ್ಕೃತಿ/... ಹೇ ದಿವ್ಯ ಸಂಸ್ಕೃತ ಹಿಮಾಚಲವೇ... ಬೆಳೆಯುತಿಹ ನಿನ್ನೀ ಹಸುಳೆಗಳಿಗೆ ತಾವ ಕೊಡು, ಹರಕೆಗೈ; ಸ್ತನ್ಯಪಾನವ ನೀಡು, ಹೇ ಜನನಿ!’ ಎಂದು ಪ್ರಾರ್ಥಿಸಿದ್ದಾರೆ. ನಮ್ಮ ಸರ್ಕಾರದ ಆಶಯವೂ ಇದೇ ಆಗಿದೆ.

ಸಂಸ್ಕೃತ ವಿಶ್ವವಿದ್ಯಾಲಯವನ್ನು ಹೊಸದಾಗಿ ಆರಂಭಿಸಲಾಗುತ್ತಿದೆ ಎಂದು ಕೆಲವರು ತಪ್ಪು ತಿಳಿದಿ ದ್ದಾರೆ. ವಾಸ್ತವವಾಗಿ ಇದು ಅಸ್ತಿತ್ವಕ್ಕೆ ಬಂದು 13-14 ವರ್ಷಗಳೇ ಆಗಿವೆ. ಇದಕ್ಕೊಂದು ಒಳ್ಳೆಯ ಕ್ಯಾಂಪಸ್ ಇರಬೇಕಾಗಿತ್ತು. ಹಿಂದಿನ ಸರ್ಕಾರಗಳು ಅದನ್ನು ಮಾಡಲಿಲ್ಲ. ನಮ್ಮ ಸರ್ಕಾರ ಈ ದಿಸೆಯಲ್ಲಿ ಮುಂದಡಿ ಇಟ್ಟಿದೆ. ಪ್ರಜಾಪ್ರಭುತ್ವದಲ್ಲಿ ಪರ-ವಿರೋಧಗಳಿಗೆಲ್ಲ ಜಾಗ ಇದ್ದೇಇದೆ. ಇದೇ ಈ ವ್ಯವಸ್ಥೆಯ ಸೌಂದರ್ಯ. ಆದರೆ, ತಿಕ್ಕಾಟದ ಸ್ವಪ್ರತಿಷ್ಠೆಯಲ್ಲಿ ಸಂಸ್ಕೃತವನ್ನು ಬಲಿಪೀಠದ ಮೇಲೆ ಕೂರಿಸಬಾರದಷ್ಟೆ.

ಲೇಖಕ: ಉನ್ನತ ಶಿಕ್ಷಣ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು