ಶುಕ್ರವಾರ, ಜನವರಿ 27, 2023
17 °C
ಪಶುಸಂಗೋಪನೆ ಎಂಬುದು ಲಾಭದಾಯಕ ಕಸುಬಾಗಬೇಕಿದ್ದರೆ ಉತ್ತಮ ಪಾಲನೆ, ಪೋಷಣೆ ಕ್ರಮಗಳ ಜೊತೆಗೆ ರಾಸುಗಳ ಒತ್ತಡ ನಿರ್ವಹಣೆಯೂ ಆದ್ಯತೆಯಾಗಬೇಕು

ಸಂಗತ| ಯಶಸ್ವಿ ಗೋಪಾಲನೆಗೆ ಭಾವಸ್ಪಂದನ

ಡಾ. ಮುರಳೀಧರ ಕಿರಣಕೆರೆ Updated:

ಅಕ್ಷರ ಗಾತ್ರ : | |

Prajavani

ಆ ರೈತರ ಮನೆಯಲ್ಲಿ ನಾಲ್ಕೈದು ಹಸುಗಳಿವೆ. ಮೈಕೈ ತುಂಬಿಕೊಂಡ ಅವುಗಳನ್ನು ನೋಡುವುದೇ ಆನಂದ. ಸಾಮಾನ್ಯವಾಗಿ ಸ್ಥಳೀಯ ತಳಿಯ ಆಕಳುಗಳಲ್ಲಿ ಹಾಲಿನ ಇಳುವರಿ ಕಮ್ಮಿ. ಆದರೆ ಇವು ಮಾತ್ರ ಚೆನ್ನಾಗಿ ಹಾಲು ಕರೆಯುತ್ತವೆ. ಕಾಯಿಲೆ ಕಸಾಲೆ ಅಂತೆಲ್ಲ ಚಿಕಿತ್ಸೆ ನೀಡಿದ್ದೇ ಅಪರೂಪ. ಅವರ ಈ ರೀತಿಯ ಸಾಕಾಣಿಕೆಯ ರಹಸ್ಯ ಕೆದಕಿದಾಗ ಆಶ್ಚರ್ಯವಾಗಿತ್ತು.

ಪಶುಆಹಾರ ವಿಪರೀತ ಎನಿಸುವಷ್ಟು ದುಬಾರಿ ಯಾಗಿರುವಾಗ ಅವರೇನು ತುಂಬಾ ಹಿಂಡಿ ಕೊಡುವುದಿಲ್ಲ. ಮನೆಯ ಪಕ್ಕದಲ್ಲಿನ ಸ್ವಲ್ಪ ಜಾಗದಲ್ಲಿ ಬೆಳಿಗ್ಗೆ ಮೂರ್ನಾಲ್ಕು ಗಂಟೆ ದನಕರುಗಳನ್ನು ಅಡ್ಡಾಡಲು ಬಿಡುತ್ತಾರೆ. ಗದ್ದೆ, ತೋಟದಿಂದ ತರುವ ಹಸಿಹುಲ್ಲನ್ನು ಹಾಕುತ್ತಾರೆ. ಪ್ರತಿನಿತ್ಯ ಮೈ ತೊಳೆಯಲು ಸಾಧ್ಯವಾಗದಿದ್ದರೂ ಹುಲ್ಲಿನ ಚಂಡೆಯಿಂದ ಪ್ರತಿಯೊಂದರ ಮೈ ಉಜ್ಜುತ್ತಾ ಪ್ರೀತಿಯಿಂದ ಮಾತನಾಡಿಸುವರು. ಹಿಂಡಿ ಮಿಶ್ರಣ ಕೊಡುವಾಗಲೂ ಅಷ್ಟೇ, ತಲೆ ನೇವರಿಸುವರು.

ಪ್ರತಿಯೊಂದನ್ನೂ ಅವುಗಳ ಹೆಸರಿನಿಂದ ಕರೆದಾಗ ತಲೆಯೆತ್ತಿ ಪ್ರತಿಕ್ರಿಯಿಸುತ್ತವೆ. ಕೊಟ್ಟಿಗೆಯಲ್ಲಿ ಗಾಳಿ, ಬೆಳಕು ಧಾರಾಳ. ಆ ರಾಸುಗಳ ಆರೋಗ್ಯದ ಗುಟ್ಟು ಅಡಗಿರುವುದು ಇಲ್ಲಿಯೇ. ದನಕರುಗಳಿಗೂ ಭಾವನೆ
ಗಳಿವೆ ಎಂದರಿತಿರುವ ಅವರು ತುಂಬಾ ಮುತುವರ್ಜಿ ಯಿಂದ ಸಲಹುತ್ತಿದ್ದಾರೆ. ತಮ್ಮ ಯಜಮಾನ ತೋರುವ ಪ್ರೀತಿ, ಕಾಳಜಿಗೆ ಅವೂ ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಚೆನ್ನಾಗಿ ಹಾಲು ಕೊಡುತ್ತಿವೆ!

ಹೌದು, ಮನುಜನಂತೆ ಪ್ರಾಣಿಗಳಿಗೂ ‘ಮನಸ್ಸು’ ಇದೆ. ಮಾತು ಬಾರದ್ದರಿಂದ ತಮ್ಮ ಭಾವನೆ, ಒತ್ತಡವನ್ನು ವಿಶಿಷ್ಟ ಧ್ವನಿ, ಆಂಗಿಕ ಭಾಷೆಯ ಮೂಲಕ ವ್ಯಕ್ತಪಡಿಸುತ್ತವೆ. ಮೆದುಳು ಮಾನವನಷ್ಟು ಬೆಳವಣಿಗೆ ಹೊಂದಿರದಿದ್ದರೂ ಅವುಗಳಿಗೂ ಸಂತಸ, ಸಿಟ್ಟು, ನೋವು-ನಲಿವುಗಳುಂಟು.  ಭಯ, ಆಘಾತ, ಒತ್ತಡವೂ ಉಂಟು. ತಲೆ ಕುಣಿಸುವುದು, ಕಣ್ಣುಗಳನ್ನು ಅಗಲಿಸುವುದು, ಕಿವಿಗಳ ಚಲನೆ, ಮೂಸುವುದು, ನೆಕ್ಕುವುದು, ವಿಶಿಷ್ಟ ಧ್ವನಿಯಲ್ಲಿ ಕೂಗುವುದು, ಬಾಲದಿಂದ ಹೊಡೆಯುವುದು, ಹಾಯುವುದು, ಒದೆಯುವುದು... ಹೀಗೆ ಹತ್ತಾರು ರೀತಿಯಲ್ಲಿ ತಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕುತ್ತವೆ. ಪಶುಪಾಲಕರಿಗೆ ಇದರ ಅರಿವಿದ್ದಾಗ ಪಾಲನೆ- ಪೋಷಣೆಯಲ್ಲಿ ಮಾನವೀಯತೆ ತೋರಲು ಸಾಧ್ಯ. ಆಗ ಉತ್ಪಾದನೆಯಲ್ಲೂ ಹೆಚ್ಚಳ ನಿಶ್ಚಯ.

ನಮ್ಮಲ್ಲಿ ಬಹುತೇಕ ರೈತರು ವೈಜ್ಞಾನಿಕ ರೀತಿಯಲ್ಲಿ ರಾಸುಗಳನ್ನು ಸಾಕುತ್ತಿಲ್ಲ. ಸಾಂಪ್ರದಾಯಿಕ ಕೊಟ್ಟಿಗೆ
ಗಳಲ್ಲಿ ಗಾಳಿ, ಬೆಳಕು ತೀರಾ ಕಮ್ಮಿ. ಹಲವರು ಹಗಲು ಹೊತ್ತಿನಲ್ಲೂ ಹೊರಗೆ ಕಟ್ಟುವುದಿಲ್ಲ. ಸದಾ ಕತ್ತಲೆಯ ವಾತಾವರಣದಲ್ಲಿ ದನಕರುಗಳನ್ನು ಕಟ್ಟುವುದರಿಂದ ಸಹಜವಾಗಿಯೇ ಅವು ಒತ್ತಡ ಅನುಭವಿಸುತ್ತವೆ. ಚರ್ಮರೋಗ ಬಾಧಿಸುತ್ತದೆ. ಹಾಲಿನ ಇಳುವರಿ ಕುಸಿಯುತ್ತದೆ. ನಿಯಮಿತವಾಗಿ ಬೆದೆಗೂ ಬಾರವು. ಗರ್ಭ ಕಟ್ಟುವಲ್ಲಿಯೂ ಸೋಲು. ಗಾಳಿ, ಬೆಳಕು ಕೊರತೆಯಿರುವ ಕೊಟ್ಟಿಗೆಯು ಉಣ್ಣೆ, ಸೊಳ್ಳೆ, ಹೇನುಗಳಂಥ ಪರಾವಲಂಬಿ ಜೀವಿಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಜಾಗ. ಈ ಪೀಡೆಗಳು ಜಾನುವಾರುಗಳ ರಕ್ತ ಹೀರುವುದಷ್ಟೇ ಅಲ್ಲ ವಿವಿಧ ಗಂಭೀರ ಕಾಯಿಲೆಗಳನ್ನೂ ಹರಡಿಸುತ್ತಾ ಹೈನುಗಾರಿಕೆಗೆ ಸವಾಲಾಗುತ್ತವೆ.

ರಾಸುಗಳನ್ನು ಬೆಳಿಗ್ಗೆ ಬಿಸಿಲಿಗೆ ಕಟ್ಟುವುದರಿಂದ ಸೂರ್ಯರಶ್ಮಿಯಿಂದ ದೇಹದಲ್ಲಿ ವಿಟಮಿನ್ ‘ಡಿ’ ಉತ್ಪತ್ತಿ
ಯಾಗುತ್ತದೆ. ಆಹಾರದಿಂದ ಕ್ಯಾಲ್ಸಿಯಂ ಅಂಶವನ್ನು ಹೀರಿಕೊಳ್ಳಲು ಈ ಜೀವಸತ್ವ ಅತಿ ಅಗತ್ಯ. ಇದರಿಂದ ಹಾಲಿನ ಇಳುವರಿ ಸುಧಾರಿಸುತ್ತದೆ, ಮೂಳೆಗಳು ಗಟ್ಟಿಯಾಗುತ್ತವೆ. ಚರ್ಮದ ಆರೋಗ್ಯ ಉತ್ತಮ
ವಾಗುತ್ತದೆ. ಬಿಸಿಲು ಹೆಚ್ಚಾದಾಗ ನೆರಳಲ್ಲಿ ಕಟ್ಟುವ ವ್ಯವಸ್ಥೆ ಮಾಡಬೇಕು. ಹೊರಗಡೆ ಅಡ್ಡಾಡಿಸಲು, ಮೇಯಿಸಲು ಜಾಗವಿದ್ದರೆ ಇನ್ನೂ ಅನುಕೂಲ. ಇಂತಹ ಮುಕ್ತ ವಾತಾವರಣದಲ್ಲಿದ್ದಾಗ ಅವುಗಳ ಮಾನಸಿಕ ಒತ್ತಡ ಕಡಿಮೆಯಾಗಿ ಲವಲವಿಕೆಯಿಂದ ಇರುತ್ತವೆ. ಅಧಿಕ ಉತ್ಪಾದನೆಯ ಜೊತೆಗೆ ರೋಗನಿರೋಧಕ ಸಾಮರ್ಥ್ಯ ವೃದ್ಧಿಗೂ ಇದು ಸಹಕಾರಿ.

ಕೊಟ್ಟಿಗೆಯಲ್ಲೂ ಅಷ್ಟೆ. ಇಕ್ಕಟ್ಟಾಗಿ ಕಟ್ಟುವುದು, ಅವುಗಳಿಗೆ ತಿರುಗಲು, ಮಲಗಲು ಸರಿಯಾಗಿ ಜಾಗ ಇಲ್ಲದಿರುವುದು, ಹಾಯುವ ದನ, ಎಮ್ಮೆಯನ್ನು ಹತ್ತಿರದಲ್ಲಿ ಕಟ್ಟುವುದು, ಕುಡಿಯುವ ನೀರಿಗೆ ವ್ಯವಸ್ಥೆ ಮಾಡದಿರುವುದು, ಕಡಿಮೆ ಆಹಾರ ನೀಡುವುದು ಎಲ್ಲವೂ ಒತ್ತಡಕಾರಕಗಳೆ. ಸ್ವಚ್ಛವಾಗಿಲ್ಲದ ಜಾಗದಲ್ಲಿ ಜಾನುವಾರುಗಳನ್ನು ಕಟ್ಟುವುದರಿಂದಲೂ ಅವು ಹಿಂಸೆ ಅನುಭವಿಸುತ್ತವೆ. ಸ್ವಚ್ಛತೆಯಿಲ್ಲದೆಡೆ ಕೆಚ್ಚಲು ಬಾವು, ಚರ್ಮದ ಕಾಯಿಲೆ ಸೇರಿದಂತೆ ರೋಗ ರುಜಿನಗಳ ಬಾಧೆ ಹೆಚ್ಚು.

ವಾತಾವರಣದಲ್ಲಿ ಹಠಾತ್ ಬದಲಾವಣೆ ಯಾದಾಗ, ಗರ್ಭಾವಸ್ಥೆಯಲ್ಲಿ, ಕರು ಹಾಕಿದಾಗ, ಹಿಂಡಿನಿಂದ ಅಗಲಿಸಿದಾಗ, ಬೇರೆಡೆ ಸಾಗಣೆ ಮಾಡಿದಾಗಲೂ ಜಾನುವಾರುಗಳು ಒತ್ತಡವನ್ನು ಅನುಭವಿಸುತ್ತವೆ. ಆಗ ರಸದೂತಗಳ ಮಟ್ಟದಲ್ಲಿ ಏರುಪೇರಾಗುತ್ತದೆ. ಹಾಲಿನ ಇಳುವರಿ ಕುಸಿಯುತ್ತದೆ. ದೇಹದ ರೋಗನಿರೋಧಕ ಶಕ್ತಿ ಕುಂಠಿತ ಗೊಳ್ಳುತ್ತದೆ. ಹೀಗಾದಾಗ ಶರೀರದಲ್ಲಿ ತಟಸ್ಥ ವಾಗಿರುವ ಅವಕಾಶವಾದಿ ರೋಗಾಣುಗಳು ಒಮ್ಮೆಲೇ ಸಂಖ್ಯೆಯಲ್ಲಿ ವೃದ್ಧಿಗೊಂಡು ಕಾಯಿಲೆಗಳನ್ನು ಹುಟ್ಟು ಹಾಕುತ್ತವೆ. 

ಹೌದು, ಪಶುಸಂಗೋಪನೆ ಎಂಬುದು ಲಾಭದಾಯಕ ಕಸುಬಾಗಬೇಕಿದ್ದರೆ ಉತ್ತಮ ಪಾಲನೆ, ಪೋಷಣೆ ಕ್ರಮಗಳ ಜೊತೆಗೆ ರಾಸುಗಳ ಒತ್ತಡ ನಿರ್ವಹಣೆಯೂ ಆದ್ಯತೆಯಾಗಬೇಕು.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ಸರ್ಕಾರಿ ಪಶು ಆಸ್ಪತ್ರೆ, ತೀರ್ಥಹಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು