ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆ್ಯಂಟಿಬಯಾಟಿಕ್: ಇರಲಿ ಎಚ್ಚರ

Published 25 ಫೆಬ್ರುವರಿ 2024, 23:30 IST
Last Updated 25 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

‘ಎರಡು ದಿನಗಳಿಂದ ಹಲ್ಲುನೋವು. ಹಿಂದಿನ ವರ್ಷ ನೀವೇ ಮಗಳಿಗೆ ಕೊಟ್ಟಿದ್ದ ಆ್ಯಂಟಿಬಯಾಟಿಕ್ ಸ್ವಲ್ಪ ಉಳಿದಿತ್ತು, ಅದನ್ನೇ ತಗೊಂಡೆ. ಮುಂಚೆ ಎರಡು ಸಲ ಕೆಲಸ ಮಾಡಿತ್ತು. ಈ ಸಲ ಯಾಕೋ ನೋವು ಕಡಿಮೆ ಆಗುತ್ತಿಲ್ಲ, ಏನು ಮಾಡೋದು ಡಾಕ್ಟ್ರೇ?’ ಇದು ವಾರದ ಹಿಂದೆ ಬಂದ ರೋಗಿಯೊಬ್ಬರ ಅಳಲು. ಪರೀಕ್ಷಿಸಿ ನೋಡಿದರೆ, ಅವರ ನೋವಿಗೆ ಕಾರಣ ವಸಡಿನಲ್ಲಿ ಸಿಕ್ಕಿಕೊಂಡಿದ್ದ ಆಹಾರದ ತುಣುಕು. ಆ್ಯಂಟಿಬಯಾಟಿಕ್ ಅಗತ್ಯವೇ ಇರಲಿಲ್ಲ, ಆದರೂ ತೆಗೆದುಕೊಂಡಿದ್ದರು!

ಇದು ಅವರೊಬ್ಬರ ಕಥೆಯಲ್ಲ. ಯಾವುದೇ ರೀತಿಯ ನೋವು, ಕೆಮ್ಮು, ಗಾಯ, ಜ್ವರ ಇದ್ದರೂ ಔಷಧಿ ಅಂಗಡಿಯಿಂದ ಒಳ್ಳೆಯ ಆ್ಯಂಟಿಬಯಾಟಿಕ್ ಪಡೆದು ಸೇವಿಸಿದರೆ ಬೇಗ ಗುಣವಾಗುತ್ತದೆ, ಖರ್ಚು ಕಡಿಮೆಯಾಗುತ್ತದೆ, ವೈದ್ಯರ ಭೇಟಿ ತಪ್ಪಿಸಬಹುದು ಎನ್ನುವುದು ನಮ್ಮಲ್ಲಿರುವ ನಂಬಿಕೆ.

1928ರಲ್ಲಿ ಪ್ರಸಿದ್ಧ ವಿಜ್ಞಾನಿ ಅಲೆಗ್ಸಾಂಡರ್ ಫ್ಲೆಮಿಂಗ್‌ ಆಕಸ್ಮಿಕವಾಗಿ ಕಂಡುಹಿಡಿದ ಪೆನ್‌ಸಿಲಿನ್ ಜಗತ್ತಿನ ಪ್ರಪ್ರಥಮ ಆ್ಯಂಟಿಬಯಾಟಿಕ್. ವೈದ್ಯವಿಜ್ಞಾನ ಮುಂದುವರಿದಂತೆ ಇಂದು ಹತ್ತು ಹಲವು
ಆ್ಯಂಟಿಬಯಾಟಿಕ್‍ಗಳು ಸೋಂಕು ನಿಯಂತ್ರಿಸಿ ರೋಗ ಗುಣಪಡಿಸುವ, ಜೀವ ಉಳಿಸುವ ಮಾಂತ್ರಿಕ ಔಷಧಗಳಾಗಿವೆ, ನಿಜ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಶೇಕಡ 30ರಿಂದ 50ರಷ್ಟು ಸಂದರ್ಭಗಳಲ್ಲಿ ಇವುಗಳ ಬಳಕೆ ಅನಗತ್ಯ ಮತ್ತು ಅಸಮರ್ಪಕವಾಗಿರುತ್ತದೆ!

ಸೂಕ್ಷ್ಮಾಣುಜೀವಿಗಳಲ್ಲಿ ಅತಿ ಹೆಚ್ಚಿನ ತೊಂದರೆಯನ್ನುಂಟು ಮಾಡುವುದು ರೋಗಕಾರಕ ಬ್ಯಾಕ್ಟೀರಿಯಾಗಳು. ಹಾಗಾಗಿ, ಸೂಕ್ಷ್ಮಜೀವಿಗಳನ್ನು ನಿಯಂತ್ರಿಸುವ ಔಷಧಿಗಳಲ್ಲಿ ಪ್ರಮುಖ ಭಾಗವೆಂದರೆ ಪ್ರತಿಜೈವಿಕಗಳು ಅಂದರೆ ಆ್ಯಂಟಿಬಯಾಟಿಕ್. ರೋಗಕಾರಕ ಬ್ಯಾಕ್ಟೀರಿಯಾಕ್ಕೆ ಸೂಕ್ತವಾಗಿದ್ದು, ನಿಗದಿತ ಪ್ರಮಾಣ, ನಿಯಮಿತ ಕಾಲ ಬಳಕೆಯಾದಲ್ಲಿ ಅವು ಜೀವರಕ್ಷಕಗಳಾಗಿ ಕಾರ್ಯ ನಿರ್ವಹಿಸಬಲ್ಲವು. ಆದರೆ ಕಳೆದೊಂದು ದಶಕದಲ್ಲಿ ಇವುಗಳ ವಿವೇಚನೆ ಇಲ್ಲದ ಬಳಕೆಯಿಂದ ದೇಹದ ಮೇಲೆ ನಾನಾ ರೀತಿಯ ಅಡ್ಡಪರಿಣಾಮಗಳಾಗುತ್ತಿವೆ. ಹೊಟ್ಟೆಉರಿ, ಯಕೃತ್ತು ಮತ್ತು ಮೂತ್ರಪಿಂಡಕ್ಕೆ ಹಾನಿ ಜತೆಗೆ ಅತಿಯಾದ ಬಳಕೆಯಿಂದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಖರ್ಚು ಹೆಚ್ಚುತ್ತದೆ, ಅಗತ್ಯವಿರುವವರಿಗೆ ಔಷಧದ ಕೊರತೆಯೂ ಕಾಡುತ್ತದೆ. ಎಲ್ಲಕ್ಕಿಂತ ಗಂಭೀರ ಪರಿಣಾಮ, ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಹೊಸದೊಂದು ಆರೋಗ್ಯ ಸಮಸ್ಯೆ, ಆ್ಯಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್ (ಪ್ರತಿಜೈವಿಕಗಳ ಪ್ರತಿರೋಧಕತೆ)! ಅಂದರೆ ರೋಗ ಉಂಟು ಮಾಡುವ ಬ್ಯಾಕ್ಟೀರಿಯಾಗಳು ಆ್ಯಂಟಿಬಯಾಟಿಕ್‍ಗಳ ಅಸಮರ್ಪಕ ಬಳಕೆಯಿಂದಾಗಿ ಕ್ರಮೇಣ ಅವುಗಳಿಗೆ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಇಂತಹ ಬ್ಯಾಕ್ಟೀರಿಯಾ ಗಳ ಮೇಲೆ ಆ್ಯಂಟಿಬಯಾಟಿಕ್‍ಗಳು ನಿಷ್ಕ್ರಿಯವಾಗುತ್ತವೆ. ಹೀಗಾದಾಗ, ಎಂತಹದ್ದೇ ಅತ್ಯಾಧುನಿಕ ವ್ಯವಸ್ಥೆ ಇದ್ದರೂ ಬ್ಯಾಕ್ಟೀರಿಯಾದ ಎದುರು ಕೆಲಸ ಮಾಡುವ ಔಷಧಿ ಇಲ್ಲದೆ ಸೋಲುವುದು ಅನಿವಾರ್ಯ.

2019ರಲ್ಲಿ ಭಾರತದಲ್ಲಿಯೇ ಮೂರು ಲಕ್ಷಕ್ಕೂ ಹೆಚ್ಚು ಜನರು ಇದರಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ಸಮಯದಲ್ಲಿ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲದೇ ಇದ್ದಾಗ ಜನರು ಹೆದರಿಕೆಯಿಂದಲೇ ಅತಿಯಾದ ಪ್ರಮಾಣದಲ್ಲಿ ಆ್ಯಂಟಿಬಯಾಟಿಕ್ ಸೇವಿಸಿದ್ದರು ಎನ್ನುವ ಅಂಶ ಸಂಶೋಧನೆಗಳಿಂದ ಸಾಬೀತಾಗಿದೆ. ಇದರಿಂದಾಗಿ ದೀರ್ಘಕಾಲೀನ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಬಗ್ಗೆ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ, ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ ಈ ಕುರಿತಾಗಿ ಮಾರ್ಗಸೂಚಿಯನ್ನು ಹೊರಡಿಸಿರುವುದು ನಿಜಕ್ಕೂ ಮಹತ್ವದ್ದು.

ಆ್ಯಂಟಿಬಯಾಟಿಕ್ ಜೊತೆ ಸೂಕ್ಷ್ಮಾಣುನಿರೋಧಕ ಔಷಧಗಳನ್ನು ಬರೆಯುವಾಗ ವೈದ್ಯರು ಅದಕ್ಕೆ ಲಕ್ಷಣ, ಕಾರಣ ಮತ್ತು ಸಮರ್ಥನೆಯನ್ನು ಉಲ್ಲೇಖಿಸಬೇಕು, ಔಷಧಿ ಅಂಗಡಿಯವರು ವೈದ್ಯರ ಶಿಫಾರಸಿನ ಮೇಲೆ ಮಾತ್ರ ಇವುಗಳನ್ನು ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.

ವೈದ್ಯರು ಅನೇಕ ಸಂದರ್ಭಗಳಲ್ಲಿ ರೋಗಿಗಳ ಒತ್ತಡ, ಕೊಡದಿದ್ದರೆ ಬೇರೆಡೆ ಹೋಗುತ್ತಾರೆ ಎನ್ನುವ ವ್ಯಾವಹಾರಿಕ ದೃಷ್ಟಿ, ಔಷಧ ಕಂಪನಿಗಳ ಜತೆಗಿನ ಒಪ್ಪಂದ, ರೋಗಕಾರಕ ಬ್ಯಾಕ್ಟೀರಿಯಾ ಕಂಡುಹಿಡಿಯಲು ಅಗತ್ಯವಾದ ಪ್ರಯೋಗಾಲಯದ ಕೊರತೆ, ರೋಗಿಗೆ ಹೆಚ್ಚುಕಡಿಮೆಯಾದರೆ ಎಂಬ ಆತಂಕ ಇವುಗಳಿಂದ ಆ್ಯಂಟಿಬಯಾಟಿಕ್‍ಗಳನ್ನು ತೆಗೆದು
ಕೊಳ್ಳುವಂತೆ ಬರೆದುಕೊಡುವ ಸಾಧ್ಯತೆ ಇರುತ್ತದೆ. ಇದು ಬದಲಾಗಬೇಕು.

ನಮ್ಮ ಸುತ್ತಮುತ್ತ ರೋಗಕಾರಕವಾದ ನೂರಾರು ಬ್ಯಾಕ್ಟೀರಿಯಾಗಳಿದ್ದು ಅವುಗಳಿಂದ ಉಂಟಾಗುವ ಸೋಂಕುಗಳು ಬಹಳಷ್ಟಿವೆ. ಜತೆಗೇ ಹೊಸ ರೂಪವನ್ನು ತಾಳಿ ಬೆದರಿಸುತ್ತಲೂ ಇವೆ. ಇವುಗಳನ್ನು ನಿಯಂತ್ರಿಸಲು ಸದ್ಯಕ್ಕೆ ಇರುವಂತಹ ಆ್ಯಂಟಿಬಯಾಟಿಕ್‍ಗಳು ಕೆಲವೇ ಕೆಲವು! ಮತ್ತಷ್ಟನ್ನು ಹುಡುಕಬಹುದಲ್ಲ ಎಂದರೆ, ಸಂಶೋಧನೆಗಳು ನಡೆಯುತ್ತಿದ್ದರೂ ಅದು ಅಷ್ಟು ಸುಲಭವಲ್ಲ. ಅಪಾರ ಖರ್ಚು, ಸತತ ಪ್ರಯತ್ನ ಮತ್ತು ಸುರಕ್ಷಿತವಾದುದನ್ನು ಕಂಡುಹಿಡಿಯುವ ದೊಡ್ಡ ಜವಾಬ್ದಾರಿಯ ಕೆಲಸವದು. ಸದ್ಯದ ಪರಿಸ್ಥಿತಿಯಲ್ಲಂತೂ
ಆ ರೀತಿಯ ಹೊಸದಾದ ಆ್ಯಂಟಿಬಯಾಟಿಕ್ ಮಾರುಕಟ್ಟೆಗೆ ಬರುವ ಯಾವುದೇ ಲಕ್ಷಣವಿಲ್ಲ. ಹೀಗಾಗಿ, ಇರುವಂತಹ ಜೀವರಕ್ಷಕ ಆ್ಯಂಟಿಬಯಾಟಿಕ್‌
ಗಳನ್ನು ಕಟ್ಟೆಚ್ಚರದಿಂದ ಉಪಯೋಗಿಸಬೇಕಾದದ್ದು
ಅನಿವಾರ್ಯ. ಆ ದಿಸೆಯಲ್ಲಿ ಈ ಮಾರ್ಗಸೂಚಿ
ಅನುಷ್ಠಾನಗೊಳ್ಳಬೇಕಾದದ್ದು ತುರ್ತು ಅಗತ್ಯ!

ಲೇಖಕಿ: ದಂತ ವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT