ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ದ್ವೀಪಸಮೂಹದಲ್ಲೊಂದು ‘ನಂದನ’

ಅತ್ಯಪರೂಪದ ಜೀವಸಂಕುಲವನ್ನು ಹೊಂದಿರುವ ದಕ್ಷಿಣ ಆಫ್ರಿಕಾದ ‘ದ್ವೀಪಸಮೂಹ’ವನ್ನು ಪ್ರತ್ಯೇಕ ಜೀವಿ ಆವಾಸ ಎಂದು ಘೋಷಿಸಬೇಕೆಂಬ ಒತ್ತಾಯ ಕೇಳಿಬಂದಿದೆ
Published 24 ಮೇ 2024, 21:30 IST
Last Updated 24 ಮೇ 2024, 21:30 IST
ಅಕ್ಷರ ಗಾತ್ರ

ನಾವು ಇದುವರೆಗೂ ಕಂಡಿರದ ಜೀವಿ ಪ್ರಭೇದ, ಅಸಂಖ್ಯ ವರ್ಷಗಳಿಂದಲೂ ನಮ್ಮಿಂದ ಕಣ್ಮರೆ ಆಗಿದ್ದು
ಕೊಂಡು ಇಲ್ಲಿ ಸುಭದ್ರ ಆವಾಸವನ್ನು ಕಲ್ಪಿಸಿಕೊಂಡಿದೆ. ಇಲ್ಲಿನ ಜೀವಿಗಳಿಗೆ ಮನುಷ್ಯನೆಂಬುವ ನೊಬ್ಬ ಇದ್ದಾನೆ ಎಂಬುದೇ ಗೊತ್ತಿಲ್ಲ. ಇಲ್ಲಿ ದಟ್ಟ ಕಾಡೇನೂ ಇಲ್ಲ. ಗ್ರ್ಯಾನೈಟ್ ಶಿಲೆಗಳ ಮೇಲೆ ನಿಂತಿರುವ ಪರ್ವತದ ಸಾಲುಗಳ ಸಾಧಾರಣ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಹಲವಾರು ಅಪರೂಪದ ಜೀವಿ ಪ್ರಭೇದಗಳು ನೆಮ್ಮದಿಯಿಂದ ನೆಲೆ ಕಂಡುಕೊಂಡಿವೆ. ದಕ್ಷಿಣ ಆಫ್ರಿಕಾದ ಆಗ್ನೇಯ ಭಾಗದ ಮೊಜಾಂಬಿಕ್ ಮತ್ತು ಮಲಾವಿ ದೇಶಗಳ ಗಡಿಗೆ ಹೊಂದಿಕೊಂಡಿರುವ ಈ ಭಾಗವನ್ನು ವಿಜ್ಞಾನಿಗಳು ಇನ್‌ಲ್ಯಾಂಡ್ ಆರ್ಕಿಪೆಲಗೊ (ಒಳನಾಡಿನ ದ್ವೀಪಸಮೂಹ) ಎಂದು ಕರೆಯುತ್ತಾರೆ. ಅತಿ ಎತ್ತರದ ಜಾಗದಲ್ಲಿ ಇರುವುದರಿಂದ ಆಕಾಶದ್ವೀಪ ಎಂಬ ಹೆಸರೂ ಇದಕ್ಕಿದೆ.

ಪ್ರಾಣಿಗಳಷ್ಟೇ ಅಲ್ಲ ನಮಗೆ ಗೊತ್ತಿರದ ಅನೇಕ ಮರಗಳು, ಸಸ್ಯ ಸಂಪತ್ತು ಇಲ್ಲಿರುವುದರಿಂದ
ಈ ಭಾಗವನ್ನು ಪ್ರತ್ಯೇಕ ಜೀವಿ ಆವಾಸ ಎಂದು ಘೋಷಿಸಬೇಕೆಂದು ವಿಜ್ಞಾನಿಗಳು ಒತ್ತಾಯಿಸುತ್ತಿ ದ್ದಾರೆ. ಭೂಮಿಯ ಯಾವ ಭಾಗದಲ್ಲೂ ಕಾಣಿಸದ ಜೀವಸಂಕುಲ ಇಲ್ಲಿದೆ ಎಂಬ ವಿಜ್ಞಾನಿಗಳ ಮಾತಿಗೆ ಪುಷ್ಟಿ ನೀಡುವಂತೆ, ಅಪರೂಪದ ಪಕ್ಷಿ, ಹಾವು, ಮುಂಗುಸಿ, ಚಿಟ್ಟೆ, ಜಿಂಕೆ ಜಾತಿಗಳಿಗೆ ಸೇರಿದ ಪ್ರಾಣಿಗಳು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. 

ಜೀವಿ ಪರಿಸರ ಸಂಶೋಧಕ ಜೂಲಿಯನ್ ಬೇಲಿಸ್ ಅವರು ಹೇಳುವಂತೆ, ಒಮ್ಮೆ ಅವರು ಈ ಕಾಡನ್ನು ಸುತ್ತುವಾಗ ಅಕಸ್ಮಾತ್ತಾಗಿ ಒಂದು ಹಾವಿನ ಮೇಲೆ ಕಾಲಿಟ್ಟರಂತೆ. ಹಾವಿನಿಂದ ಇವರಿಗೆ ಯಾವ ಹಾನಿಯೂ ಆಗಲಿಲ್ಲ, ಇವರಿಂದ ಹಾವಿಗೂ ತೊಂದರೆಯಾಗಲಿಲ್ಲ. ಆದರೆ ಅದು ಸಾಮಾನ್ಯ ಹಾವಲ್ಲ ಎಂದು ನೋಡಿದ ತಕ್ಷಣ ಗುರುತಿಸಿದ ಜೂಲಿಯನ್, ಅದನ್ನು ಹುಷಾರಾಗಿ ಒಂದು ಡಬ್ಬಿಯೊಳಗೆ ತುಂಬಿಕೊಂಡು ಬಂದು ಪ್ರಯೋ ಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದರು. ಆಗ, 20 ವರ್ಷದ ತಮ್ಮ ಕಾಡಿನ ಸುತ್ತಾಟದಲ್ಲಿ ಆವರೆಗೂ ಅಂತಹ ಹಾವನ್ನು ತಾವು ಎಲ್ಲಿಯೂ ಕಂಡಿರಲಿಲ್ಲ ಎಂಬ ಅರಿವಾಯಿತು.

ಆ ಹಾವು ಮಾಬು ಎಂಬ ಪರ್ವತದಲ್ಲಿ ದೊರೆತಿದ್ದರಿಂದ ಅದಕ್ಕೆ ‘ಮಾಬು ಬುಶ್ ವೈಪರ್’ ಎಂದು ನಾಮಕರಣ ಮಾಡಿದ ಜೂಲಿಯನ್, ಒಂದೂವರೆ ಅಡಿ ಉದ್ದದ ಹಾವಿನ ಬಗ್ಗೆ ಭರಪೂರ ಮಾಹಿತಿ ಕಲೆಹಾಕಲು ಶುರು ಮಾಡಿದರು. ಹಾವಿನ ಡಿಎನ್ಎ ವರ್ಣತಂತುವನ್ನು ಪರೀಕ್ಷಿಸಿದ ಸಂಶೋಧಕರು, ಇಡೀ ಆಫ್ರಿಕಾದ ಕಾಡುಗಳಲ್ಲಿ ದೊರಕಿರುವ ಹಾವುಗಳ ವರ್ಣತಂತು ಸಂರಚನೆಗಿಂತ ಇದು ತುಂಬಾ ಭಿನ್ನವಾಗಿದೆ ಮತ್ತು 15 ದಶಲಕ್ಷ ವರ್ಷಗಳ ಹಿಂದೆ ಇದರ ಸಂತತಿ ಭೂಮಿಯಲ್ಲಿ ಸೃಷ್ಟಿ
ಆಗಿರಬಹುದು ಎಂದು ಅಂದಾಜಿಸಿದ್ದಾರೆ.

ತಮ್ಮ ಸಂಶೋಧನಾ ಸಂಸ್ಥೆಯ 25 ಸಂಶೋಧಕ ರೊಂದಿಗೆ ಇಲ್ಲಿನ ಪರ್ವತಶ್ರೇಣಿಗಳ ಕಾಡಿನಲ್ಲಿ ನಿರಂತರವಾಗಿ ಹುಡುಕಾಡಿ, ಇದುವರೆಗೂ ಯಾವ ಪುಸ್ತಕದಲ್ಲೂ ದಾಖಲಾಗದ ಅಪರೂಪದ ಸಸ್ಯಪ್ರಭೇದ ಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಅವುಗಳನ್ನು ಸಂರಕ್ಷಿಸಲೇಬೇಕು ಎಂದು ಒತ್ತಾಯಿಸಿದ್ದಾರೆ. ಅರ್ಧ ಡಜನ್‌ನಷ್ಟು ಪಿಗ್ಮಿ ಊಸರವಳ್ಳಿಗಳನ್ನು ಪತ್ತೆ ಮಾಡಿರುವ ತಂಡವು ಇಲ್ಲಿನ ಪರ್ವತಶ್ರೇಣಿಗಳನ್ನು
ಸೌತ್ ಈಸ್ಟ್ ಆಫ್ರಿಕಾ ಮೌಂಟನ್ ಆರ್ಕಿಪೆಲಗೊ (ಎಸ್‌ಇಎಎಂಎ– ‘ಸೀಮಾ’) ಎಂಬ ಹೆಸರಿನಿಂದ ಕರೆದು, ಅದನ್ನು ಪ್ರತ್ಯೇಕ ಜೀವಿ ಪರಿಸರ ಎಂದು ಘೋಷಿಸಿ ಸಂರಕ್ಷಿಸಬೇಕು ಎಂದು ಸರ್ಕಾರಕ್ಕೆ ಹಲವು ಬಾರಿ ವಿನಂತಿಸಿಕೊಂಡಿದೆ.

ಇಲ್ಲಿನ 30 ಪರ್ವತಗಳ ಪೈಕಿ ಒಂದಾದ ಮೌಂಟ್ ನಲುಮೆಯಲ್ಲಿ ಭಾರಿ ಪ್ರಮಾಣದ ಮರಗಳನ್ನು ಕಡಿಯ
ಲಾಗುತ್ತಿದ್ದು, ಅದನ್ನು ತಕ್ಷಣವೇ ನಿಲ್ಲಿಸಬೇಕು ಎಂಬುದು ಸಂರಕ್ಷಣಾ ತಂಡಗಳ ಒತ್ತಾಯವಾಗಿದೆ. ಅರಣ್ಯ ಕಡಿತ ಮತ್ತು ಬೆಂಕಿ ಪ್ರಕರಣಗಳು ಹೆಚ್ಚುತ್ತಿದ್ದು, ಅಪರೂಪದ ಜೀವಿ ಪ್ರಭೇದ ಒತ್ತಡಕ್ಕೆ ಸಿಲುಕುತ್ತಿದೆ. ಮಾನವ ಹಸ್ತಕ್ಷೇಪದಿಂದಾಗಿ ಈಗಾಗಲೇ ಈ ಭಾಗದಲ್ಲಿ ಶೇಕಡ 18ರಷ್ಟು ಅರಣ್ಯ ನಾಶವಾಗಿದೆ. ಕೆಲವು ಜಾಗಗಳಲ್ಲಿ ನಾಶದ ಪ್ರಮಾಣ ಶೇಕಡ 45ರಷ್ಟಿದೆ. ಥೈಲೋ ಪರ್ವತದ ಅರಣ್ಯದಲ್ಲಿ ಇದಕ್ಕೂ ಮುಂಚೆ ‘ಥೈಲೋ ಅಲೆತೆ’ ಎಂಬ ಹಾಡುಗಾರ ಪಕ್ಷಿ ಸಂಕುಲವು ದೊಡ್ಡ ಸಂಖ್ಯೆಯಲ್ಲಿತ್ತು. ಅರಣ್ಯ ನಾಶದಿಂದಾಗಿ ಈಗ ಅವುಗಳನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ. ಹುತ್ತ ಕಟ್ಟುವ ಗೆದ್ದಲುಗಳನ್ನು ತಿಂದು ಬದುಕುವ ಈ ಹಕ್ಕಿಯು ಇದೇ ಜೀವಿ ಪರಿಸರದ ಬೇರೆ ಭಾಗಗಳಲ್ಲಿ ಇರುವುದು ಪತ್ತೆಯಾಗಿದ್ದು, ಅದನ್ನು ರಕ್ಷಿಸಲೇಬೇಕಾದ ಅನಿವಾರ್ಯ ಇದೆ. 

ಮಲಾವಿ ಭಾಗದ ಮುಲಾಂಜೆ ಪರ್ವತ ಸಂರಕ್ಷಣಾ ಟ್ರಸ್ಟ್‌ನ ನಿರ್ದೇಶಕ ಕಾರ್ಲ್‌ಬ್ರಸೋ, ‘ಮುಲಾಂಜೆ ಪರ್ವತದ ಸಂರಕ್ಷಣಾ ಕಾರ್ಯದಲ್ಲಿ ಸಮುದಾಯಗಳು ಭಾಗವಹಿಸಬೇಕು. ಆಗ ಅದಕ್ಕೆ ಬೇಕಾದ ತಯಾರಿ ಹಾಗೂ ಅದರಿಂದ ದೊರಕುವ ಸುಸ್ಥಿರ ಜೀವನೋಪಾಯದ ಮಾರ್ಗಗಳನ್ನು ನಾವು ಕಂಡುಕೊಳ್ಳಬಹುದು’ ಎಂದಿದ್ದಾರೆ.

ದಕ್ಷಿಣ ಪೆಸಿಫಿಕ್ ಸಾಗರದ ಬಳಿಯ ನ್ಯೂಗಿನಿ ದ್ವೀಪ ವ್ಯಾಪ್ತಿಯ ಫೋಯಾ ಪರ್ವತದಲ್ಲಿನ ಕಾಡಿನಲ್ಲಿ ಕನ್ಸರ್ವೇಷನ್ ಇಂಟರ್‌ನ್ಯಾಷನಲ್ ತಂಡದ ಪರಿಸರ ವನ್ಯಜೀವಿ ಸಂಶೋಧಕರು 2006ರಲ್ಲಿ ಅಧ್ಯಯನ ಕೈಗೊಂಡಿದ್ದರು. ಮೂರು ಲಕ್ಷ ಹೆಕ್ಟೇರ್ ವಿಸ್ತೀರ್ಣದ ಆ ಕಾಡಿನಲ್ಲಿ ತಾವು ಹಿಂದೆಂದೂ ಕಂಡಿರದ 550 ಬಗೆಯ ಸಸ್ಯಗಳು, 150 ಬಗೆಯ ಕೀಟಗಳು, ಅಸಂಖ್ಯ ಚಿಟ್ಟೆಗಳು, 60ಕ್ಕೂ ಹೆಚ್ಚು ಬಗೆಯ ಕಪ್ಪೆಗಳು, ಸುಮಾರು ಒಂದು ಅಡಿಗಿಂತಲೂ ದೊಡ್ಡದಾಗಿರುವ ರೋಡೋಡೆಂಡ್ರಾನ್ ಹೂವು, 14 ಮಿ.ಮೀ.ಗಿಂತ ಚಿಕ್ಕದಾದ ಕಪ್ಪೆಯನ್ನು ಕಂಡಿದ್ದಾಗಿ ವರದಿ ಮಾಡಿದ್ದರು. ಈಗ ಅಂಥದ್ದೇ ನಂದನದ ತುಣುಕೊಂದು ಕಾಣಿಸಿಕೊಂಡಿದೆ. ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT