ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಶಾಲೆಗೆ ದಾಖಲು, ಬೇಡ ಅವಸರ

Published 10 ಮೇ 2023, 19:34 IST
Last Updated 10 ಮೇ 2023, 19:34 IST
ಅಕ್ಷರ ಗಾತ್ರ

2023– 24ನೇ ಸಾಲಿನಲ್ಲಿ ಎಲ್‌ಕೆಜಿಗೆ ದಾಖಲಿಸಲು ಮಗುವಿಗೆ ನಾಲ್ಕು ವರ್ಷಗಳಾಗಿರಬೇಕು ಎಂದು ರಾಜ್ಯ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. 2025– 26ನೇ ಸಾಲಿನಿಂದ ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಲು, ಆ ಶೈಕ್ಷಣಿಕ ವರ್ಷಾರಂಭದ ಜೂನ್‌ ಒಂದಕ್ಕೆ ಮಗುವಿಗೆ ಆರು ವರ್ಷ ಪೂರ್ಣಗೊಂಡಿರಬೇಕು ಎಂಬ ಹಿಂದಿನ ಆದೇಶಕ್ಕೆ ಪೂರಕವಾಗಿ ಈ ಆದೇಶ ಹೊರಡಿಸಲಾಗಿದೆ.

ಈ ಕುರಿತು ಅನೇಕ ಪೋಷಕರಲ್ಲಿ ತಳಮಳ ಶುರುವಾಗಿದೆ. ನಿಗದಿತ ವಯಸ್ಸಿಗೆ ಕೆಲವೇ ದಿನ ಅಥವಾ ತಿಂಗಳುಗಳಷ್ಟು ಕಡಿಮೆ ವಯೋಮಾನದವರಾದ ಮಕ್ಕಳು ಎಲ್‌ಕೆಜಿ ಅಥವಾ ಯುಕೆಜಿ ತರಗತಿಯನ್ನು ಪುನರಾವರ್ತಿಸಬೇಕಾಗುತ್ತದೆ. ಇದರಿಂದ ಮಕ್ಕಳಿಗೆ ಒಂದು ವರ್ಷ ನಷ್ಟವಾಗುವುದರ ಜೊತೆಗೆ ಆರ್ಥಿಕ ಹೊರೆಯೂ ಆಗುತ್ತದೆ ಎಂಬ ದೂರು ಕೆಲ ಪೋಷಕರದ್ದಾಗಿದೆ.

ಮಕ್ಕಳನ್ನು ಬೇಗ ಶಾಲೆಗೆ ಸೇರಿಸಬೇಕು ಮತ್ತು ಅವರು ಒಳ್ಳೆಯ ಶಿಕ್ಷಣ ಪಡೆದು, ಚಂದದ ನೌಕರಿಯೊಂದನ್ನು ಹಿಡಿದು, ದೊಡ್ಡ ಮಟ್ಟದ ವೇತನ ಪಡೆಯುವಂತಾಗಬೇಕು ಎಂಬ ತುಡಿತ ನಮ್ಮ ದೇಶದ ಹೆಚ್ಚಿನ ಪೋಷಕರಲ್ಲಿ ಇರುತ್ತದೆ. ಒಂದನೇ ತರಗತಿಗೆ ಮಕ್ಕಳ ದಾಖಲಾತಿಯ ವಯಸ್ಸನ್ನು ಹಲವು ವರ್ಷಗಳ ಕೆಳಗೆ 5.10 ವರ್ಷಕ್ಕೆ ನಿಗದಿ ಮಾಡಲಾಗಿತ್ತು. ಪೋಷಕರ ಪ್ರತಿರೋಧದ ಕಾರಣದಿಂದ ಅದನ್ನು 5.5 ವರ್ಷಕ್ಕೆ ನಿಗದಿ ಮಾಡಲಾಯಿತು. ಈ ಮೊದಲು ಮಕ್ಕಳ ನೈಜ ಜನ್ಮದಿನಾಂಕವನ್ನು ಬದಲಾಯಿಸಿ, ಆತುರದಲ್ಲಿ ಒಂದನೇ ತರಗತಿಗೆ ದಾಖಲಿಸುವ ಪರಿಪಾಟ ಇತ್ತು. ಜನ್ಮದಿನಾಂಕ ಕುರಿತ ದೃಢೀಕೃತ ದಾಖಲೆಗೆ ಒತ್ತಾಯಿಸದೆ, ಪೋಷಕರ ಲಿಖಿತ ಹೇಳಿಕೆಯ ಆಧಾರದ ಮೇಲೆ ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತಿತ್ತು.

ನನಗೆ ನಾಲ್ಕೂವರೆ ವರ್ಷವಾಗಿದ್ದಾಗ ಐದು ವರ್ಷ ಹತ್ತು ತಿಂಗಳೆಂದು ಜನ್ಮದಿನಾಂಕವನ್ನು ಬದಲಿಸಿ ಶಾಲೆಗೆ ಸೇರಿಸಲಾಗಿತ್ತು. ಇದರ ಪರಿಣಾಮವಾಗಿ, ಶಾಲೆಯಲ್ಲಿ ನಿಗದಿಪಡಿಸಿದ ಪಠ್ಯಾಂಶ, ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಲು ನಾನು ಪ್ರಯಾಸಪಡುತ್ತಿದ್ದುದು ನನ್ನ ನೆನಪಿನಲ್ಲಿದೆ. 50, 60ರ ದಶಕಗಳಲ್ಲಿ ಶಾಲೆಗೆ ಸೇರಿದ ಹೆಚ್ಚಿನವರ ಜನ್ಮದಿನಾಂಕವು ಜೂನ್‌ ಅಥವಾ ಜುಲೈ ತಿಂಗಳನ್ನೇ ಒಳಗೊಂಡಿರುತ್ತಿದ್ದುದು ಕಾಕತಾಳೀಯವಲ್ಲ. ಹೆಚ್ಚಿನ ಪೋಷಕರಿಗೆ ಮಕ್ಕಳ ಜನ್ಮದಿನಾಂಕದ ಮಾಹಿತಿ ಇರದಿದ್ದ ಕಾರಣದಿಂದ ಶಿಕ್ಷಕರು ಸ್ವತಃ ದಿನಾಂಕವನ್ನು ಅಂದಾಜಿಸಿ, ಅವರನ್ನು ಶಾಲೆಗೆ ಸೇರಿಸಿಕೊಂಡು ಬಿಡುತ್ತಿದ್ದರು. ತಮ್ಮ ವಯೋಮಾನಕ್ಕೆ ಹೆಚ್ಚಿನದಾದ ಕ್ಲಿಷ್ಟ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದೆ ಶಾಲೆಯನ್ನು ಅರ್ಧಕ್ಕೇ ಬಿಡುತ್ತಿದ್ದ ಮಕ್ಕಳ ಸಂಖ್ಯೆ ದೊಡ್ಡದಿತ್ತು.

ಹಿಂದಿನ ವರ್ಷ ಒಂದನೇ ತರಗತಿಗೆ 6 ವರ್ಷ ವಯಸ್ಸನ್ನು ಕಡ್ಡಾಯ ಮಾಡಿದ್ದ ಕೇಂದ್ರೀಯ ವಿದ್ಯಾಲಯದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದ ಪೋಷಕರಿಗೆ ನ್ಯಾಯಮೂರ್ತಿಗಳು, ‘ಶಾಲೆಗೆ ಮಕ್ಕಳನ್ನು ಕಳುಹಿಸಲು ಒಂದು ರೀತಿಯ ಅವಸರ, ನೂಕುನುಗ್ಗಲು ಇದೆ. ತಮ್ಮ ಮಕ್ಕಳು ಎರಡು ವರ್ಷ ತಲುಪುತ್ತಿದ್ದಂತೆಯೇ ಪೋಷಕರು ಅವರನ್ನು ಶಾಲೆಗಳಿಗೆ ದಾಖಲಿಸಲು ಇಚ್ಛಿಸುತ್ತಾರೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎಂದು ಹೇಳುತ್ತಾ, ಪೋಷಕರ ಅರ್ಜಿಗಳನ್ನು ವಜಾ ಮಾಡಿದ್ದರು.

ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸುವ ವಯಸ್ಸು 6 ವರ್ಷ ಇದೆ. ವಿಶ್ವದಲ್ಲಿ ಅತ್ಯುತ್ತಮವಾದ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ಫಿನ್ಲೆಂಡ್‌ ದೇಶದಲ್ಲಿ ಒಂದನೇ ತರಗತಿಗೆ ದಾಖಲಾಗಲು ಮಕ್ಕಳಿಗೆ ಕನಿಷ್ಠ 7 ವರ್ಷವಾಗಿರಬೇಕು. ಅಮೆರಿಕದ ಹೆಚ್ಚಿನ ರಾಜ್ಯಗಳು ಹಾಗೂ ಚೀನಾದಲ್ಲಿ ಒಂದನೇ ತರಗತಿಯ ದಾಖಲಾತಿಗೆ 6 ವರ್ಷ ವಯಸ್ಸನ್ನು ನಿಗದಿ ಮಾಡಲಾಗಿದೆ. ಮಕ್ಕಳಿಗೆ ‘ಒಂದು ವರ್ಷ ಉಳಿಸುವ ಲೆಕ್ಕಾಚಾರ’ದಲ್ಲಿ ಕೆಲವು ಪೋಷಕರು ಮೂರು ವರ್ಷವಾಗುವ ಮೊದಲೇ ಅವರನ್ನು ಎಲ್‌ಕೆಜಿಗೆ ದಾಖಲಿಸುತ್ತಾರೆ. ಈ ರೀತಿ ಸೂಕ್ತ ವಯಸ್ಸಿಗೆ ಮೊದಲೇ ಆತುರಾತುರವಾಗಿ ಶಾಲೆಗೆ ದಾಖಲಾಗುವ ಮಕ್ಕಳು ಸರಿಯಾದ ವಯೋಮಾನ ಅಥವಾ ಹೆಚ್ಚಿನ ವಯೋಮಾನದವರಾದ ಮಕ್ಕಳಿಗಿಂತ ಅಧ್ಯಯನದಲ್ಲಿ ಹಿಂದೆ ಬೀಳುತ್ತಾರೆ.

ಇಂಗ್ಲೆಂಡ್‌ನ ಇನ್‌ಸ್ಟಿಟ್ಯೂಟ್‌ ಫಾರ್‌ ಫಿಸ್ಕಲ್‌ ಸ್ಟಡೀಸ್‌ನ ಸಂಶೋಧನಾ ವರದಿಯು, ಕಡಿಮೆ ವಯೋಮಾನದ ಮಕ್ಕಳು ಪರೀಕ್ಷೆಗಳಲ್ಲಿ ಕಡಿಮೆ ಸಾಧನೆ ತೋರುತ್ತಾರೆ ಮತ್ತು ತಮ್ಮ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಂತಸದಿಂದ ಪಾಲ್ಗೊಳ್ಳುವುದಿಲ್ಲ. ಕಡಿಮೆ ವಯೋಮಾನದವರನ್ನು ಬೇಗ ಶಾಲೆಗೆ ಸೇರಿಸುವುದು ಅವರ ಭವಿಷ್ಯದ ಹಿತದೃಷ್ಟಿಯಿಂದ ಮಾರಕವಾಗಿ ಪರಿಣಮಿಸುತ್ತದೆ. ಅಂತಹ ಮಕ್ಕಳು ಕ್ರೀಡೆ, ಆಟೋಟಗಳಲ್ಲಿ ತಮ್ಮ ತರಗತಿಯ ಹೆಚ್ಚಿನ ವಯೋಮಾನದ ಮಕ್ಕಳಿಗಿಂತ ಹಿಂದೆ ಬೀಳುತ್ತಾರೆ ಎಂದು ಹೇಳಿದೆ.

ಶೈಕ್ಷಣಿಕ ಚಟುವಟಿಕೆ, ಕ್ರೀಡೆ ಅಥವಾ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಮಕ್ಕಳು ಸೂಕ್ತ ದೈಹಿಕ ಪಕ್ವತೆ ಹೊಂದಿರಬೇಕಾಗುತ್ತದೆ. ವಯೋಮಾನ ಆಧಾರಿತ ದೈಹಿಕ ಪಕ್ವತೆಯ ಮೇಲೆ ಮಕ್ಕಳಲ್ಲಿ ಬುದ್ಧಿಶಕ್ತಿಯ ಬೆಳವಣಿಗೆ ಯಾವ ರೀತಿ ಆಗುತ್ತದೆ ಎಂಬುದನ್ನು ವಿಜ್ಞಾನಿ ಪಿಯಾಜೆ ಹಂತ ಹಂತವಾಗಿ ವಿವರಿಸಿದ್ದಾರೆ. ಮಕ್ಕಳ ವಯೋಮಾನ ಆಧರಿಸಿ ಶೈಕ್ಷಣಿಕ ಮತ್ತು ಮನೋವೈಜ್ಞಾನಿಕ ತತ್ವಗಳಿಗೆ ಪೂರಕವಾಗಿ ಪಠ್ಯಪುಸ್ತಕಗಳನ್ನು ರೂಪಿಸಲಾಗಿರುತ್ತದೆ. ಇಂತಹ ಕಾರಣಗಳಿಂದ, ಮಕ್ಕಳನ್ನು ಶಾಲೆಗೆ ದಾಖಲಿಸಲು ಒಂದಷ್ಟು ತಡವಾದರೆ, ಅವರ ಭವಿಷ್ಯದ ದೃಷ್ಟಿಯಿಂದ ಲಾಭವೆಂಬ ಅಂಶವನ್ನು ಪೋಷಕರು ಮನಗಾಣಬೇಕು.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT