ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ; ಶುಶ್ರೂಷೆ: ಬೇಕು ಸಹನೆ, ಸ್ಪಂದನೆ

Published : 11 ಮೇ 2023, 19:32 IST
Last Updated : 11 ಮೇ 2023, 19:32 IST
ಫಾಲೋ ಮಾಡಿ
Comments

ಅದೊಂದು ಹೆರಿಗೆ ಆಸ್ಪತ್ರೆ. ನಾನು ಅಲ್ಲಿ ಸಹಾಯಕ ವೈದ್ಯಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಅಲ್ಲಿನ ಸ್ತ್ರೀರೋಗ ತಜ್ಞೆಯದ್ದು ಬಿಡುವಿಲ್ಲದ ದಿನಚರಿ. ದಿನವೊಂದರಲ್ಲಿ ಆಕೆ ಎರಡು ಮೂರು ಹೆರಿಗೆ, ಶಸ್ತ್ರಚಿಕಿತ್ಸೆಗಳಷ್ಟೇ ಅಲ್ಲದೆ ಹೊರರೋಗಿಗಳೊಂದಿಗೆ ಸಮಾಲೋಚನೆ, ಒಳರೋಗಿಗಳ ಕಾಳಜಿ ಎಲ್ಲವನ್ನೂ ಬಹಳ ಕ್ಷಮತೆಯಿಂದ ನಿರ್ವಹಿಸುತ್ತಿದ್ದರು.

ನಾನು ಒಮ್ಮೆ ಅಚ್ಚರಿಯಿಂದ ಅವರನ್ನು ‘ಮೇಡಂ, ಎಲ್ಲವನ್ನೂ ಹೇಗೆ ಒಬ್ಬರೇ ಎಷ್ಟು ಪರಿಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ನಿಭಾಯಿಸುತ್ತೀರಿ?’ ಎಂದು ಕೇಳಿದ್ದೆ. ಅದಕ್ಕೆ ಆಕೆ ‘ಅದರ ಸಂಪೂರ್ಣ ಕೀರ್ತಿ ನನ್ನ ಶುಶ್ರೂಷಕರಿಗೆ ಸಲ್ಲಬೇಕು. ಅವರ ಸಮಯಪ್ರಜ್ಞೆ, ಕರ್ತವ್ಯಪರತೆ, ಅಂದರೆ ರೋಗಿಗಳನ್ನು ಪ್ರತಿ ಹಂತದಲ್ಲಿ ಗಮನಿಸಿ, ಸರಿಯಾದ ಕ್ಷಣದಲ್ಲಿ ನನಗೆ ಕರೆ ಕಳಿಸುವುದು, ನಾನು ಸೂಚಿಸಿದ ಎಲ್ಲ ಚಿಕಿತ್ಸೆಗಳನ್ನು ಸಮರ್ಪಕವಾಗಿ ಕೊಡುವಂತಹ ಕೆಲಸಗಳನ್ನು ಯಾವುದೇ ಲೋಪವಿಲ್ಲದೆ ನಿರ್ವಹಿಸುತ್ತಿರುವುದರಿಂದಲೇ ಇದು ಸಾಧ್ಯವಾಗಿದೆ’ ಎಂದಿದ್ದರು.

ಆ ವೈದ್ಯೆಯ ಅಂದಿನ ಮಾತುಗಳು ಎಂದೆಂದಿಗೂ ಪ್ರಸ್ತುತ. ಆರೋಗ್ಯವಲಯದಲ್ಲಿ ವೈದ್ಯರಷ್ಟೇ ಮಹತ್ತರವಾದ ಜವಾಬ್ದಾರಿಯನ್ನು ನಿರ್ವಹಿಸುವವರು ಶುಶ್ರೂಷಕರು. ವೈದ್ಯರು ರೋಗಿಯ ತಪಾಸಣೆ ಮಾಡಿ, ಚಿಕಿತ್ಸೆಯನ್ನು ಸೂಚಿಸಿ ಮುಂದಿನ ಕೆಲಸಕ್ಕೆ ತೆರಳಿಬಿಡುತ್ತಾರೆ. ಆದರೆ ಆ ಚಿಕಿತ್ಸಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವವರು ಮತ್ತು ಅಲ್ಲಿ ಎದುರಾಗುವ ಎಲ್ಲ ಬಗೆಯ ಪ್ರಾಯೋಗಿಕ ಎಡರುತೊಡರುಗಳನ್ನು ಸಂಭಾಳಿಸುವವರು ಶುಶ್ರೂಷಕರು. ಹೊರರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆಗೆ ಮಾರ್ಗದರ್ಶನ ಮಾಡುವುದು, ಒಳರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಔಷಧ, ಮಾತ್ರೆ, ಚುಚ್ಚುಮದ್ದು ಕೊಡುವುದು, ಅವರ ಎಲ್ಲ ಸಣ್ಣ ಪುಟ್ಟ ಅನುಮಾನ, ಗೊಂದಲಗಳನ್ನು ಪರಿಹರಿಸುವುದು, ಪ್ರತಿ ಹಂತದ ಗುಣಲಕ್ಷಣಗಳನ್ನು ಗಮನಿಸಿ, ಅಸಹಜ ಸ್ಥಿತಿ ಕಂಡುಬಂದಾಗ ವೈದ್ಯರಿಗೆ ಕರೆ ಕಳಿಸುವುದು, ತಕ್ಷಣವೇ ತುರ್ತುಚಿಕಿತ್ಸೆಯನ್ನು ಆರಂಭಿಸುವುದು, ರೋಗಿಗೆ ಬೇಕಾದ ವಿಶೇಷ ಔಷಧಗಳು, ರಕ್ತದ ಲಭ್ಯತೆಯ ಬಗ್ಗೆ ಮಾಹಿತಿ ಕೊಡುವಂತಹ ಎಲ್ಲ ಕೆಲಸಗಳೂ ಅವರದ್ದೆ. ತುರ್ತು ಚಿಕಿತ್ಸಾ ಘಟಕಗಳಲ್ಲಿ ಅವರ ಜವಾಬ್ದಾರಿ ಇನ್ನೂ ಹೆಚ್ಚು. ಹಗಲು ರಾತ್ರಿಯೆನ್ನದೆ, ಮೈಯೆಲ್ಲಾ ಕಣ್ಣು, ಕಿವಿಯಾಗಿಸಿಕೊಂಡು ರೋಗಿಯ ಆರೋಗ್ಯ ಸ್ಥಿತಿಯನ್ನು ಗಮನಿಸುತ್ತಾ, ಚಿಕಿತ್ಸೆಯಲ್ಲಿ ಸೂಕ್ತ ಬದಲಾವಣೆಯನ್ನು ಮಾಡುವವರು ಅವರೇ.

ಹಾಗೆ ನೋಡಿದರೆ, ವೈದ್ಯರಿಗಿಂತ ಹೆಚ್ಚು ಸಮಯ ರೋಗಿಗಳೊಂದಿಗೆ ಕಳೆಯುವವರು ಶುಶ್ರೂಷಕರೇ. ಹಾಗಾಗಿಯೇ ಯಾವುದೇ ಆಸ್ಪತ್ರೆಯಲ್ಲಿ ರೋಗಿಗಳಿಗೆ ಗರಿಷ್ಠ ಮಟ್ಟದ ಆರೈಕೆ ಲಭಿಸಬೇಕೆಂದರೆ ಮತ್ತು ವೈದ್ಯರ ಆದೇಶಗಳು ಸರಿಯಾಗಿ ಪಾಲನೆಯಾಗಬೇಕೆಂದರೆ ಅಲ್ಲಿ ಶುಶ್ರೂಷಕರ ಉತ್ತಮ ತಂಡವೊಂದು ಇರಲೇಬೇಕು. ಇದನ್ನು ಮನಗಂಡ ರಾಷ್ಟ್ರೀಯ ಆಸ್ಪತ್ರೆಗಳ ಮಾನ್ಯತಾ ಮಂಡಳಿ, ಉತ್ತಮ ಹಾಗೂ ಗುಣಮಟ್ಟದ ಆರೈಕೆಗಾಗಿ ಆಸ್ಪತ್ರೆಯ ಹಾಸಿಗೆ ಸಂಖ್ಯೆಯ ಆಧಾರದ ಮೇಲೆ ಇಂತಿಷ್ಟೇ ಶುಶ್ರೂಷಕರು ಇರಬೇಕೆಂಬ ನಿಯಮವನ್ನೂ ಹಾಕಿದೆ.

ರೋಗಿಗಳನ್ನು ಆರೈಕೆ ಮಾಡುವ ಈ ಕಾಯಕಕ್ಕೆ ವ್ಯಾಸಂಗದ ರೂಪು ಕೊಟ್ಟು ಆಧುನಿಕ ಶುಶ್ರೂಷಾ ಶಿಕ್ಷಣವನ್ನು ಸಂಸ್ಥಾಪಿಸಿದ ಕೀರ್ತಿ ಬ್ರಿಟಿಷ್ ಶುಶ್ರೂಷಕಿ ಫ್ಲಾರೆನ್ಸ್ ನೈಟಿಂಗೇಲ್‍ ಅವರಿಗೆ ಸಲ್ಲಬೇಕು. ಈಕೆ 1853ರಿಂದ 1856ರವರೆಗೆ ನಡೆದ ರಷ್ಯಾದ ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡ ಸೈನಿಕರ ಆರೈಕೆಗೆಂದು ನಿಯೋಜಿತರಾದವರು. ಕರ್ತವ್ಯಪರತೆ, ಸಮರ್ಪಣಾ ಮನೋಭಾವ ಮತ್ತು ಪರಿಶ್ರಮದಿಂದಾಗಿ ಸಹಸ್ರಾರು ಗಾಯಾಳುಗಳಿಗೆ ಮರುಜೀವ ಕೊಟ್ಟರು. ಆಕೆಯ ಅವಿರತ ಪರಿಶ್ರಮದಿಂದಾಗಿ, ಲಂಡನ್ನಿನ ಸೇಂಟ್‌ ಥಾಮಸ್ ಆಸ್ಪತ್ರೆಗೆ ಹೊಂದಿಕೊಂಡಂತೆ ಮೊತ್ತಮೊದಲ ನೈಟಿಂಗೇಲ್ ಶುಶ್ರೂಷಕರ ಶಾಲೆ ಆರಂಭವಾಯಿತು. ಅಲ್ಲಿ ಮೊದಲ ಬಾರಿಗೆ, ವೈಜ್ಞಾನಿಕ ವಿಧಾನಗಳನ್ನು ಬಳಸಿ ರೋಗಿಯ ಆರೈಕೆ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡಲಾಯಿತು. ಶುಶ್ರೂಷಾ ಕ್ಷೇತ್ರದಲ್ಲಿ ಇದೊಂದು ಮಹತ್ತರವಾದ ಮೈಲುಗಲ್ಲು. ಆಕೆಯ ಗೌರವಾರ್ಥ ಆಕೆಯ ಜನ್ಮದಿನವಾದ ಮೇ 12ರಂದು ಅಂತರರಾಷ್ಟ್ರೀಯ ಶುಶ್ರೂಷಕರ ದಿನವನ್ನು ಆಚರಿಸಲಾಗುತ್ತದೆ.

ಈ ದಿನಗಳಲ್ಲಿ ನರ್ಸಿಂಗ್ ವ್ಯಾಸಂಗವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಅಪಾರ ಉದ್ಯೋಗಾವಕಾಶ, ಆರ್ಥಿಕ ಸ್ವಾವಲಂಬನೆ, ಹೊರದೇಶಗಳಲ್ಲಿ ಬೇಡಿಕೆಯಂತಹ ಕಾರಣಗಳಿಗಾಗಿ ವಿದ್ಯಾರ್ಥಿಗಳು ಈ ವ್ಯಾಸಂಗವನ್ನು ಇಷ್ಟಪಡುತ್ತಿದ್ದಾರೆ. ಹಿಂದೆ ಬಹುತೇಕ ಕೇರಳದ ಹೆಣ್ಣು ಮಕ್ಕಳಿಗಷ್ಟೇ ಸೀಮಿತವಾಗಿದ್ದ ನರ್ಸಿಂಗ್ ಶಿಕ್ಷಣವನ್ನು ಪಡೆಯಲು ಈಗ ಎಲ್ಲ ರಾಜ್ಯಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಬೇಡಿಕೆ ಹೆಚ್ಚಾದಂತೆ ನರ್ಸಿಂಗ್ ಶಾಲೆ ಮತ್ತು ಕಾಲೇಜುಗಳೂ ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ಗುಣಮಟ್ಟದ ಶಿಕ್ಷಣವನ್ನು ಕೊಡಬೇಕಾದರೆ ಈ ಕಾಲೇಜುಗಳು ಸುಸಜ್ಜಿತ ಆಸ್ಪತ್ರೆಗಳೊಂದಿಗೆ ಹೊಂದಿಕೊಂಡಿರುವುದು ಬಹಳ ಮುಖ್ಯ. ಏಕೆಂದರೆ ನರ್ಸಿಂಗ್ ಶಿಕ್ಷಣ ಬರೀ ಸಿದ್ಧಾಂತದ ರೂಪದಲ್ಲಿದ್ದರೆ ಸಾಲದು. ಇಲ್ಲಿ ಪ್ರಾಯೋಗಿಕ ಕಲಿಕೆಗೆ ಹೆಚ್ಚು ಮಹತ್ವ. ವಿದ್ಯಾರ್ಥಿಗಳಿಗೆ ರೋಗಿಯ ಆರೈಕೆಯ ವಿವಿಧ ಆಯಾಮಗಳಲ್ಲಿ ಅನುಭವ ಸಿಗಬೇಕು. ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ನುರಿತ ತಜ್ಞರ ನೇತೃತ್ವದಲ್ಲಿ ಅವರಿಗೆ ತರಬೇತಿ ಕೊಡಬೇಕು. ಆಗ ಮಾತ್ರ ಉತ್ತಮ ಗುಣಮಟ್ಟದ ಕಲಿಕೆ ಸಾಧ್ಯ ಹಾಗೂ ಅಂತಹ ಶುಶ್ರೂಷಕರಿಂದ ಮಾತ್ರ ರೋಗಿಯ ಪರಿಪೂರ್ಣ ಆರೈಕೆ ಸಾಧ್ಯ.

ಈ ವೃತ್ತಿ ಇತರ ವೃತ್ತಿಗಳಂತಲ್ಲ, ಭಿನ್ನವಾದದ್ದು ಎನ್ನುವ ಪರಿಕಲ್ಪನೆ ವಿದ್ಯಾರ್ಥಿಗಳಿಗೆ ಇರಬೇಕು. ಯಾವುದೋ ಕಚೇರಿಯಲ್ಲಿ ಕುಳಿತು ಒಂದಿಷ್ಟು ಕಡತಗಳನ್ನು ಅವಲೋಕಿಸುವಂತಹ ಯಾಂತ್ರಿಕ ಉದ್ಯೋಗ ಇದಲ್ಲ. ಅಲ್ಲದೆ, ಒಮ್ಮೆ ತಪ್ಪಾದರೆ ಸರಿಪಡಿಸುವ ಅವಕಾಶಗಳಿವೆ ಎನ್ನುವ ನೌಕರಿಯೂ ಇದಲ್ಲ. ಸೇವಾ ಮತ್ತು ಸಮರ್ಪಣಾ ಮನೋಭಾವವನ್ನು ಅಪೇಕ್ಷಿಸುವ ವೃತ್ತಿ ಇದು. ಇಲ್ಲಿ ಮತ್ತೊಂದು ಜೀವದೊಂದಿಗೆ ಸ್ಪಂದಿಸಬೇಕಾದ ಅಗತ್ಯ ಇದೆ. ಈ ಕ್ಷೇತ್ರದಲ್ಲಿ ಕಾರ್ಯವನ್ನು ನಿರ್ವಹಿಸುವವರಿಗೆ ಸಹನೆ, ಸಮಾಧಾನ ಬಹು ಮುಖ್ಯ.

ಈ ವೃತ್ತಿಗೆ ಇಳಿದ ಎಲ್ಲರೂ, ಬರೀ ಚಿಕಿತ್ಸೆ ಕೊಡುವುದಷ್ಟೇ ಅಲ್ಲದೆ, ರೋಗಿಯ ಇತರ ಸಮಸ್ಯೆಗಳನ್ನೂ ಆಲಿಸುವ ಕಿವಿಯಾಗಬೇಕು. ಮುಖ್ಯವಾಗಿ ಒಳ್ಳೆಯ ಮನಸ್ಸಿನಿಂದ ಕರ್ತವ್ಯ ಮಾಡಬೇಕು. ಕರ್ತವ್ಯದಲ್ಲಿರುವ ಶುಶ್ರೂಷಕರ ಸಮವಸ್ತ್ರ, ಹಾವಭಾವ, ನಡೆನುಡಿ ಎಲ್ಲವೂ ಪರೋಕ್ಷವಾಗಿ ರೋಗಿ ಗುಣಮುಖವಾಗುವಲ್ಲಿ ಪಾತ್ರ ವಹಿಸುತ್ತವೆ ಎಂದರೆ ಪ್ರಾಯಶಃ ತಪ್ಪಾಗಲಾರದೇನೊ. ಕರ್ತವ್ಯದ ಸಮಯದಲ್ಲಿದ್ದಾಗ ಮೊಬೈಲ್‍ನಲ್ಲಿ ಕಾಡುಹರಟೆ, ಅನಗತ್ಯ ವಿಡಿಯೊ ವೀಕ್ಷಣೆ, ಸಹೋದ್ಯೋಗಿಗಳೊಂದಿಗೆ ಜೋರಾಗಿ ನಗುವಂತಹ ಚಟುವಟಿಕೆಗಳನ್ನು ಆದಷ್ಟು ಕಡಿಮೆ ಮಾಡಬೇಕು. ರೋಗಿಗಳ ಸಂಬಂಧಿಕರ ಕರೆಗೆ ತಕ್ಷಣ ಸ್ಪಂದಿಸಬೇಕು. ಎಷ್ಟೋ ಬಾರಿ ಶುಶ್ರೂಷಕರ ಒಳ್ಳೆಯ ಮಾತುಗಳೇ ರೋಗಿಯ ಕಾಯಿಲೆಯನ್ನು ಅರ್ಧ ಮಟ್ಟಿಗೆ ಗುಣಪಡಿಸಬಲ್ಲವು. ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ದಾಖಲಾದ ರೋಗಿಗಳೊಡನೆ ಸಕಾರಾತ್ಮಕವಾಗಿ ಮಾತನಾಡುತ್ತಾ ಅವರು ಶೀಘ್ರ ಗುಣಮುಖರಾಗುವುದಕ್ಕೆ ನೆರವಾಗಬೇಕು. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಈ ವೃತ್ತಿ ಸಫಲವಾದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT