ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಜೋಕೆ... ಬೌದ್ಧಿಕ ಜಾಲಕ್ಕೆ ಬಿದ್ದೀರಿ!

ಕಳಪೆ ಗುಣಮಟ್ಟದ ಪುಸ್ತಕಗಳು ಸ್ವಚಿಂತನೆಗೆ ಹಾನಿಕಾರಕ
Last Updated 27 ಜುಲೈ 2021, 1:32 IST
ಅಕ್ಷರ ಗಾತ್ರ

ಪುಸ್ತಕ ಓದಿದಷ್ಟೂ ನಮ್ಮ ಜ್ಞಾನ ವೃದ್ಧಿಸುತ್ತದೆ ಎನ್ನುವುದು ಸಾಮಾನ್ಯ ಗ್ರಹಿಕೆ. ಅದರಂತೆಯೇ, ಪುಸ್ತಕಗಳ ಬೇಟೆ ಮತ್ತು ಸಂಗ್ರಹ ಕೂಡ ಹೆಚ್ಚಿನ ಬುದ್ಧಿಜೀವಿಗಳ ನೆಚ್ಚಿನ ಹವ್ಯಾಸ. ಒಬ್ಬ ವಿದ್ಯಾವಂತನ ಪುಸ್ತಕ ಸಂಗ್ರಹದ ಹುಚ್ಚು, ಅವನ ಜ್ಞಾನ ಸಂಪತ್ತಿ ಗಿರುವ ನಂಟು ಹಾಗೂ ಸಾಮಾನ್ಯ ಓದುವ ಪ್ರಕ್ರಿಯೆಯ ಕುರಿತಾಗಿ 19ನೇ ಶತಮಾನದ ಜರ್ಮನ್ ತತ್ವಶಾಸ್ತ್ರಜ್ಞ ಆರ್ಥರ್ ಸ್ಕೋಪೆನ್‌ಹಾವರ್ ಅವರ ನಿಲುವುಗಳಲ್ಲಿ ಸ್ವಾರಸ್ಯಕರ ಅಂಶಗಳು ನಮಗೆ ಕಾಣಸಿಗುತ್ತವೆ.

ಓದುವ ಕಾಯಕದ ಕುರಿತ ತಮ್ಮ ಅನಿಸಿಕೆಗಳನ್ನು ಸ್ಕೋಪೆನ್‌ಹಾವರ್ ಆರು ಅಂಶಗಳ ಮೂಲಕ ವಿವರಿಸುತ್ತಾರೆ. ಅವುಗಳೆಂದರೆ: ಅತಿಯಾದ ಓದು ಒಂದು ಅರ್ಥಹೀನ ಕ್ರಿಯೆ, ಓದಿನ ಜೊತೆಯಾಗಿ ನಿಖರ ಸ್ವಚಿಂತನೆ ಕೂಡ ಅಗತ್ಯ, ಓದಿಗೆ ಅತ್ಯುತ್ಕೃಷ್ಟ ಪುಸ್ತಕಗಳನ್ನಷ್ಟೇ ಆರಿಸಿಕೊಳ್ಳುವುದು ಮುಖ್ಯ, ಪೂರಕ ಪಠ್ಯಗಳ ಬದಲಾಗಿ ಮೂಲ ಪುಸ್ತಕಗಳನ್ನು ಓದುವುದು ನಿಜವಾದ ಓದು, ಶ್ರೇಷ್ಠ ಕೃತಿಗಳ ಮರುಓದು ಸ್ವಚಿಂತನೆಗೆ ಪ್ರೇರಕ ಹಾಗೂ ಕಳಪೆ ಗುಣಮಟ್ಟದ ‘ಜನಪ್ರಿಯ’ ಪುಸ್ತಕಗಳು ನಮ್ಮ ಆಲೋಚನೆಗಳಿಗೆ ಹಾನಿಕಾರಕ.

ಸ್ಕೋಪೆನ್‌ಹಾವರ್ ಪ್ರಕಾರ, ಅತಿಯಾದ ಓದು ನಮ್ಮ ಸ್ವಚಿಂತನ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಯಾಕೆಂದರೆ, ಇನ್ನೊಬ್ಬರ ಕೃತಿಗಳನ್ನು ಓದುವಾಗ ನಮ್ಮ ಮನಸ್ಸು ಆ ಕೃತಿಕಾರನ ಯೋಚನಾಲಹರಿಯ ಹಾದಿಯಲ್ಲಿಯೇ ಸಾಗುತ್ತದೆ. ಅಲ್ಲಿ, ಚಿಂತನೆಯನ್ನು ನಮಗಾಗಿ ಮೊದಲೇ ಸಿದ್ಧಪಡಿಸಲಾಗಿರುತ್ತದೆ. ಅತಿಯಾಗಿ ಇನ್ನೊಬ್ಬರ ಗ್ರಂಥಗಳಲ್ಲಿ ಸಮಯ ಕಳೆಯುವವನು, ಸ್ವಚಿಂತನ ಸಾಮರ್ಥ್ಯವನ್ನು ಕ್ರಮೇಣವಾಗಿ ಕಳೆದುಕೊಳ್ಳುತ್ತಾನೆ ಹಾಗೂ ಅನ್ಯರ ಹೇಳಿಕೆಗಳನ್ನು ಉರು ಹೊಡೆ ಯುವುದನ್ನೇ ತನ್ನ ಅಸ್ಮಿತೆಯನ್ನಾಗಿಸಿಕೊಳ್ಳುತ್ತಾನೆ. ಆದುದರಿಂದ, ಓದಿನೊಂದಿಗೆ ಸಮಾನಾಂತರವಾದ ಸ್ವಚಿಂತನೆಯೂ ಮುಖ್ಯ.

ಒಂದು ಪುಸ್ತಕದಲ್ಲಿ ಪ್ರಕಟವಾಗಿರುವ ಆಲೋಚನೆ, ಮರಳಿನ ಮೇಲೆ ಮೂಡಿದ ಹೆಜ್ಜೆ ಗುರುತುಗಳಿಗೆ ಸಮಾನ. ಅಂದರೆ, ಕವಿ ಕಂಡದ್ದನ್ನು ಓದುಗ ಕೂಡ ಕಾಣಲು ಅವನ ದೃಷ್ಟಿಕೋನದ ಅಗತ್ಯವೂ ಇದೆ. ಆದ್ದರಿಂದ, ಲೇಖಕನ ಯೋಚನೆಯನ್ನು ಅರ್ಥ ಮಾಡಿ ಕೊಳ್ಳಬೇಕಾದರೆ, ಅದನ್ನು ನಾವು ಸ್ವತಃ ಸಂಶ್ಲೇಷಿಸಿ ಜೀರ್ಣಿಸಿಕೊಳ್ಳಬೇಕಾಗು ತ್ತದೆ.

ಸ್ಕೋಪೆನ್‌ಹಾವರ್ ಹೇಳುವಂತೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಸ್ತಕಗಳಲ್ಲಿ ಹೆಚ್ಚಿನವುಗಳನ್ನು ಹಣ, ಪ್ರಸಿದ್ಧಿ, ಪ್ರಶಸ್ತಿ ಮತ್ತು ಗಮನ ಸೆಳೆಯುವ ಉದ್ದೇಶದಿಂದಷ್ಟೇ ಬರೆಯಲಾಗಿದೆ. ಆದ್ದರಿಂದ ಪುಸ್ತಕಗಳನ್ನು ಖರೀದಿಸುವಾಗ ಮತ್ತು ಓದುವಾಗ ಸೂಕ್ತ ಆಯ್ಕೆ ಬಹಳ ಮುಖ್ಯ. ಮೌಲಿಕವಾದ ಸಮಯ ಹಾಗೂ ಅನಿಶ್ಚಿತ ಜೀವನವನ್ನು ಕಳಪೆ ಪುಸ್ತಕಗಳನ್ನು ಓದುವುದರಲ್ಲಿಯೇ ಕಳೆಯಬಾರದು.

ಪ್ರಸಕ್ತ, ಪುಸ್ತಕ ವ್ಯಾಪಾರ ಕೂಡ ಒಂದು ರಾಜಕಾರಣವೇ. ಅದನ್ನು ಲೇಖಕ, ಪ್ರಕಾಶಕ ಮತ್ತು ವಿಮರ್ಶಕ ಎಲ್ಲ ಸೇರಿ ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ಬಿಟ್ಟಿರುತ್ತಾರೆ. ಹಾಗಾಗಿ, ಓದುಗನು ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಈ ಬೌದ್ಧಿಕ ಜಾಲಕ್ಕೆ ಸಿಕ್ಕಿಹಾಕಿಕೊಳ್ಳದಂತೆ ಎಚ್ಚರ ವಹಿಸುವುದು ಮುಖ್ಯ. ಹಾಗೆಯೇ, ಯಾವುದೇ ವಿಷಯವನ್ನು ಓದುವಾಗ, ಮೂಲಕೃತಿಯನ್ನು ಓದುವುದು ಬಹಳ ಮುಖ್ಯ. ಆದರೆ, ನಾವು ಸಾಮಾನ್ಯವಾಗಿ ಆ ಕೃತಿಯ ಕುರಿತಾದ ಅನ್ಯರ ಪ್ರತಿಕ್ರಿಯೆಗಳ ಮೂಲಕ ಪ್ರವೇಶಿಸುತ್ತೇವೆ. ಇದು ಪೂರ್ವಗ್ರಹಪ್ರೇರಿತ ಓದಾಗುತ್ತದೆ.

ಅದೇ ರೀತಿ, ಶ್ರೇಷ್ಠ ಪ್ರಾಚೀನ ಕೃತಿಗಳ ಮರುಓದು ಕೂಡ ಅಗತ್ಯ. ಅವುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕಾಗುವುದಿಲ್ಲ. ಬದಲಾಗಿ, ಅವುಗಳನ್ನು ಏಕಾಗ್ರತೆ ಮತ್ತು ಕಾಳಜಿಯಿಂದ ಪುನರಾವರ್ತನೆ ಮಾಡಿದಷ್ಟೂ ಹೊಸ ಹೊಳಹುಗಳು, ವ್ಯಾಖ್ಯಾನಗಳು ನಮಗೆ ಸಿಗುತ್ತವೆ.

ಕಳಪೆ ಗುಣಮಟ್ಟದ ಪುಸ್ತಕಗಳು ಬೌದ್ಧಿಕ ವಿಕಾಸಕ್ಕೆ ಹಾನಿಕಾರಕ. ‘ಜನಪ್ರಿಯ’ವೆಂಬ ಕಾರಣಕ್ಕಷ್ಟೇ ಪುಸ್ತಕವನ್ನು ಓದಿದರೆ, ನಾವು ಕೂಡ ಸಾಮಾನ್ಯರಂತೆ ಚಿಂತಿಸಲಾರಂಭಿಸುತ್ತೇವೆ. ಈ ಮೂಲಕ ವಿಭಿನ್ನ ಚಿಂತನಾ ಮಾರ್ಗವನ್ನು ಕಳೆದುಕೊಂಡು ಬಿಡುತ್ತೇವೆ. ಸಾಮಾನ್ಯವಾಗಿ, ಇಂತಹ ಕೃತಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚು.

ಇಲ್ಲಿ ಸ್ಕೋಪೆನ್‌ಹಾವರ್ ಅವರ ಮುಖ್ಯ ಆಪಾದನೆಯೆಂದರೆ, ಇಂದಿನ ಜನರು ವರ್ತಮಾನ ಕಾಲಘಟ್ಟದಲ್ಲಿ ಪ್ರಕಟವಾಗುತ್ತಿರುವ ಪುಸ್ತಕಗಳತ್ತ ಮಾತ್ರ ಧ್ಯಾನ ಹರಿಸುತ್ತಿದ್ದಾರೆ. ಅದು ಕೂಡ ತಮ್ಮ ವ್ಯವಹಾರ ಜ್ಞಾನ ಮತ್ತು ವಿದ್ವತ್ತನ್ನು ಪ್ರದರ್ಶಿಸಲು ಮಾತ್ರವೇ ವಿನಾ ತಮ್ಮ ಬುದ್ಧಿವಂತಿಕೆಯನ್ನು ಉದ್ದೀಪನಗೊಳಿಸಲು ಅಲ್ಲ. ಅಂದರೆ, ಓದಿನ ನಂಟು ಕೇವಲ ಹಣ ಮತ್ತು ಹೆಸರು ಗಳಿಸುವುದಕ್ಕಷ್ಟೇ ಸೀಮಿತವಾಗಿದೆ. ಈ ಬಾಹ್ಯ ತೋರಿಕೆಗಳ ನಡುವೆ, ಸ್ಕೋಪೆನ್‌ಹಾವರ್ ನಮಗೆ ಪ್ರಾಚೀನ ಶ್ರೇಷ್ಠ ಕೃತಿಗಳ ನಿಧಾನಗತಿಯ ಮರುಓದಿನ ಅಗತ್ಯವನ್ನು ಒತ್ತಿ ಹೇಳುತ್ತಾರೆ.

ಕೊನೆಯದಾಗಿ, ಓದುವ ಹವ್ಯಾಸ ಆಧುನಿಕ ಜಗತ್ತಿನ ಒತ್ತಡಗಳಿಂದ ನಮ್ಮನ್ನು ಪಾರು ಮಾಡಲು ಸಹಾಯಕ. ಆದರೆ, ಇಂದಿನ ತೋರಿಕೆಯ ಜಗತ್ತಿನಲ್ಲಿ, ಪುಸ್ತಕ ಸಂಗ್ರಹ ಕೂಡ ಒಂದು ಸಾಮಾಜಿಕ ಪ್ರತಿಷ್ಠೆಯ ಸಂಕೇತವಾಗಿಯಷ್ಟೇ ಉಳಿದಿದೆ. ಹಾಗಾಗದಂತೆ, ಯಾವುದೇ ಪುಸ್ತಕವನ್ನು ಖರೀದಿಸುವಾಗ, ಅದನ್ನು ಓದಲು ಬೇಕಾಗುವ ಸಮಯದ ಲಭ್ಯತೆಯನ್ನು ಕೂಡ ಪರಿಗಣಿಸುವುದು ಅಷ್ಟೇ ಮಹತ್ವದ ಅಂಶ. ಯಾಕೆಂದರೆ, ಕೇವಲ ಪುಸ್ತಕ ಖರೀದಿಯಿಂದ ಅದರಲ್ಲಿರುವ ಜ್ಞಾನ ನಮ್ಮ ಸ್ವಾಧೀನವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT