ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಪತಿಯೇ ಸ್ಫೂರ್ತಿ, ರೋಹಿಣಿ ಸಾಧನೆ ಏನೂ ಇಲ್ಲ: ಭವಾನಿ ರೇವಣ್ಣ

ಎಸ್ಸೆಸ್ಸೆಲ್ಸಿ ಫಲಿತಾಂಶ: ಹಾಸನಕ್ಕೆ ಪ್ರಥಮ ಸ್ಥಾನ
Last Updated 3 ಮೇ 2019, 17:15 IST
ಅಕ್ಷರ ಗಾತ್ರ

* ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ನೀವು ಕೂಡ ಕಾರಣ ಎಂದು ಪತಿ, ಸಚಿವ ಎಚ್‌.ಡಿ.ರೇವಣ್ಣ ಹೇಳಿದ್ದಾರೆ. ಇದಕ್ಕೆ ಏನು ಹೇಳುವಿರಿ?
ಹೌದು, ಅವರು ಹೇಳಿರುವುದರಲ್ಲಿ ಸತ್ಯ ಇದೆ. ಜಿಲ್ಲಾ ಪಂಚಾಯಿತಿ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆಯಾದಾಗ ಜಿಲ್ಲೆ 31ನೇ ಸ್ಥಾನದಲ್ಲಿತ್ತು. ಪ್ರತಿ ತಿಂಗಳು ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ, ಫಲಿತಾಂಶ ಸುಧಾರಣೆಗೆ ಕಾರ್ಯಕ್ರಮ ರೂಪಿಸಲಾಗಿತ್ತು.

*ಈ ಸಾಧನೆ ಮಾಡಲು ಹೇಗೆ ಸಾಧ್ಯವಾಯಿತು?
ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ರೇವಣ್ಣ ಅವರೇ ಸಾಧನೆಗೆ ಸ್ಫೂರ್ತಿ. ಹೊಳೆನರಸೀಪುರ ತಾಲ್ಲೂಕಿನ ಮೂರು ಕಾಲೇಜುಗಳಿಗೆ ಅಭಿವೃದ್ಧಿ ಸಮಿತಿ ಅಧ್ಯಕ್ಷೆಯಾಗಿದ್ದೇನೆ. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ಅರಿವು ಇತ್ತು. ಹಾಗಾಗಿ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ, ಮಕ್ಕಳ ಪ್ರಗತಿ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು. ಶಿಕ್ಷಕರು ಭಾನುವಾರವೂ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದರು.

*ಆದರೆ, ರೇವಣ್ಣ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರಲ್ಲಾ?
ಎಲ್ಲಾ ನನ್ನಿಂದಲೇ ಅಂಥ ಎಲ್ಲೂ ಹೇಳಿಕೊಂಡಿಲ್ಲ. ಮೊದಲ ಸ್ಥಾನ ಬರಲು ಶಿಕ್ಷಣ ಇಲಾಖೆ, ಮಕ್ಕಳ ಪರಿಶ್ರಮವೂ ಕಾರಣ ಎಂದು ರೇವಣ್ಣ ಹೇಳಿದ್ದಾರೆ. ಶಾಲೆಗಳಿಗೆ ಪೀಠೋಪಕರಣ, ಶಿಕ್ಷಕರ ನೇಮಕ, ತರಬೇತಿ ಹಾಗೂ ಇತರ ಸೌಲಭ್ಯ ನೀಡಿದ ಪರಿಣಾಮವಾಗಿ ಸಾಧನೆ ಮಾಡಲು ಸಾಧ್ಯವಾಗಿದೆ.

* ಹಾಗಾದರೆ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸಾಧನೆ ಏನೂ ಇಲ್ಲವೇ?
ಖಂಡಿತ ಇಲ್ಲ. ಒಂದೂವರೆ ವರ್ಷದಲ್ಲಿ ಡಿ.ಸಿ ಮೇಡಂ ಯಾವುದೇ ಮೀಟಿಂಗ್‌ ನಡೆಸಿರಲಿಲ್ಲ. ಸುಮ್ಮನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

*ನಿಮ್ಮನ್ನೇ ಯಾಕೆ ಎಂಎಲ್‌ಸಿ ಮಾಡಿ ಶಿಕ್ಷಣ ಸಚಿವರಾಗಿ ಮಾಡಬಾರದು?
ವಿಧಾನ ಪರಿಷತ್ ಸದಸ್ಯೆ ಆಗಬೇಕೆಂಬ ಆಸೆಯಂತೂ ಇಲ್ಲ. ಯಾವಾಗ ಏನು ಆಗಬೇಕು ಎಂಬುದನ್ನ ಭಗವಂತ ಬರೆದಿರುತ್ತಾನೆ. ಸಮಯ ವ್ಯರ್ಥ ಮಾಡದೆ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತೇನೆ ಅಷ್ಟೆ.

*ಮಂತ್ರಿ ಆಗುವ ಆಸೆ ಇಲ್ಲವೇ?
ನಮ್ಮ ಕುಟುಂಬದಲ್ಲಿಯೇ ಸಂಸದರು, ಮುಖ್ಯಮಂತ್ರಿ, ಸಚಿವರು ಇದ್ದಾರೆ. ಸದ್ಯದಲ್ಲಿಯೇ ಮಗ ಎಂ.ಪಿ ಆಗುತ್ತಾನೆ. ಕೆಲಸ ಮಾಡಿಸಲು ನನಗೆ ಪ್ರತ್ಯೇಕ ಬೋರ್ಡ್‌ ಬೇಕಿಲ್ಲ. ನನಗೆ ಸಿಕ್ಕಿರುವ ಅಧಿಕಾರದಲ್ಲಿ ಶಿಕ್ಷಣಕ್ಕೆ ಎಷ್ಟು ಸಾಧ್ಯವೋ ಅಷ್ಟು ಒತ್ತು ಕೊಡುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT