ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಎಂಬ ‘ಜೆಸಿಬಿ’!

ಬಜೆಟ್ ಮತ್ತು ಜನಸಾಮಾನ್ಯರು
Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಬಜೆಟ್, ದೇಶದ ಜನರಲ್ಲಿ ಹುಟ್ಟಿ ಸುವ ನಿರೀಕ್ಷೆ, ಆತಂಕ, ಭರವಸೆ ಅಪಾರ. ಸರ್ಕಾರವು ಮುಂದಿನ ಒಂದು ವರ್ಷ ತನ್ನ ಆದಾಯ, ವೆಚ್ಚವನ್ನು ಹೇಗೆ ಸರಿದೂಗಿಸುತ್ತದೆ, ಅಭಿವೃದ್ಧಿ ಕೊರತೆಯಿರುವ ಕ್ಷೇತ್ರಗಳನ್ನು ಹೇಗೆ ಪ್ರಗತಿಯ ಮಾರ್ಗಕ್ಕೆ ತರುತ್ತದೆ, ದೇಶದ ಅರ್ಥವ್ಯವಸ್ಥೆಯನ್ನು ಮಾರುಕಟ್ಟೆ ಆರ್ಥಿಕತೆಯ ಚೌಕಟ್ಟಿನಲ್ಲಿ ಹೇಗೆ ಸುಸ್ಥಿರವಾಗಿ ಇರಿಸುತ್ತದೆ... ಹೀಗೆ ಹಲವು ಆಯಾಮಗಳ ಗೋಜಲು ಈ ಬಜೆಟ್ ಎನ್ನುವ ಪ್ರಕ್ರಿಯೆ.

ಇದರ ಕಂತೆಯನ್ನು ಬ್ರೀಫ್‌ಕೇಸಿನಲ್ಲಿ ತಂದರೇನು, ನಾರುಮಡಿಯಲ್ಲಿ ಕಟ್ಟಿ ತಂದರೇನು? ಅಂತಿಮವಾಗಿ ಇದು ಬಾಧಿಸುವುದು ಜನಸಾಮಾನ್ಯರನ್ನು. ತರಕಾರಿ ಮಾರುವವನ ಬಳಿ ‘ಬಜೆಟ್ ಬಗ್ಗೆ ಏನನ್ನಿಸುತ್ತದೆ’ ಎಂದು ಕೇಳಿದರೆ ಏನು ಹೇಳಿಯಾನು? ಅವನಿಗೆ ಇದರ ಗೊಡವೆಯೇ ಬೇಕಿರುವುದಿಲ್ಲ.ಆದರೆ, ಎಲ್ಲರ ಬದುಕಿನ ಮೇಲೆ ಪ್ರಭಾವ ಬೀರುವ ಬಜೆಟ್ ಕುರಿತಂತೆ ಪಂಡಿತರು ಅಭಿಪ್ರಾಯ ಮಂಡಿಸುತ್ತಾರೆ. ಅವರ ಗಮನ ಇರುವುದು ಷೇರು ಮಾರುಕಟ್ಟೆ, ವಿದೇಶಿ ಬಂಡವಾಳ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಮೇಲೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ವಾಸ್ತವದ ಗ್ರಹಿಕೆ ಇದೆ. ಹಾಗಾಗಿಯೇ ತಮ್ಮ 127 ನಿಮಿಷದ ಹರಿಕಥೆಯಲ್ಲಿ 115 ನಿಮಿಷಗಳನ್ನು, ಕಳೆದ ಐದು ವರ್ಷಗಳ ಸಾಧನೆಯನ್ನು ಹೇಳಲು ಬಳಸಿದ್ದಾರೆ. ಉಳಿದದ್ದನ್ನು ‘ನಿಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಓದಿಕೊಳ್ಳಿ’ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ. 2024ರ ವೇಳೆಗೆ ಭಾರತದ ಅರ್ಥವ್ಯವಸ್ಥೆ ವಿಶ್ವದಲ್ಲೇ ಅಗ್ರಸ್ಥಾನದಲ್ಲಿರುತ್ತದೆ ಎಂಬ ಭರವಸೆಯೊಂದಿಗೆ ನರೇಂದ್ರ ಮೋದಿಯವರ ಎರಡನೇ ಪಾಳಿ ಆರಂಭವಾಗಿದೆ.

ಇದರ ಅರ್ಥ ಏನು? ಭಾರತದಲ್ಲಿ ಜಾಗತಿಕ ಬಂಡವಾಳದ ಹರಿವು ಹೆಚ್ಚಾಗಲಿದೆ, ಸರ್ಕಾರದ ಎಲ್ಲ ಔದ್ಯಮಿಕ ಮತ್ತು ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅನುಕೂಲ ಮಾಡಿಕೊಡುವ ಮೂಲಕ, ದೇಶದ ಶ್ರಮಜೀವಿಗಳಿಗೆ ಹೊಸ ಲೋಕವೊಂದನ್ನು ತೋರಿಸಲು ವೇದಿಕೆ ಸಜ್ಜಾಗುತ್ತಿದೆ. ವಿಮೆ, ಸಾರಿಗೆ, ಚಿಲ್ಲರೆ ವ್ಯಾಪಾರ, ಬ್ಯಾಂಕಿಂಗ್ ಮತ್ತಿತರ ಪ್ರಮುಖ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹರಿದುಬರುತ್ತಿರುವಂತೆಯೇ, ಈ ಕ್ಷೇತ್ರಗಳಲ್ಲಿ ತಾನು ಹೂಡಿರುವ ಬಂಡ ವಾಳವನ್ನು ಸರ್ಕಾರ ಹಿಂತೆಗೆಯಲು ಆರಂಭಿಸುತ್ತದೆ. 20 ಬ್ಯಾಂಕುಗಳ ಸ್ಥಾನದಲ್ಲಿ 8 ಇರುತ್ತವೆ. ವಿಮಾ ಕ್ಷೇತ್ರದಲ್ಲಿ ಕೆಲವೇ ಸಂಸ್ಥೆಗಳು ಉಳಿಯಬಹುದು. ಚಿಲ್ಲರೆ ವ್ಯಾಪಾರಿಗಳಿಗೂ ಸರ್ಕಾರ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ನಮ್ಮಲ್ಲಿ ಇರುವುದನ್ನು ಕಳೆದುಕೊಂಡು, ಅಳಿದುಳಿದ ಆದಾಯದಲ್ಲಿ ಕೊಂಚ ಸರ್ಕಾರಕ್ಕೆ ಸಲ್ಲಿಸಿ, ಅದಕ್ಕೆ ಪ್ರತಿಯಾಗಿ ತಿಂಗಳಿಗಿಷ್ಟು ಪಿಂಚಣಿ ಪಡೆಯುವ ಪ್ರಕ್ರಿಯೆಗೆ ಆಡು ಮಾತಿನಲ್ಲಿ ‘ನಮ್ಮ ಕಾಲಿಗೆ ನಾವೇ ಮೊಳೆ ಹೊಡೆದುಕೊಳ್ಳುವುದು’ ಎಂದು ಹೇಳಲಾಗುತ್ತದೆ.

ವಿವಿಧ ಕ್ಷೇತ್ರಗಳಲ್ಲಿ ಖಾಸಗಿ– ವಿದೇಶಿ ಬಂಡವಾಳ ಹೆಚ್ಚಾಗುತ್ತಾ ಹೋದಂತೆ ಶ್ರಮಿಕರಹಿತ ಅಭಿವೃದ್ಧಿಯ ವೇದಿಕೆ ಸೃಷ್ಟಿಯಾಗುತ್ತದೆ. ಒಮ್ಮೊಮ್ಮೆ ಕೇಂದ್ರ ಬಜೆಟ್, ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಬಳಸುವ ಜೆಸಿಬಿ ಯಂತ್ರದಂತೆ ಕಾಣುತ್ತದೆ. ‘ನಾವು ಒಡೆದು ಹಾಕುತ್ತೇವೆ, ಅಲ್ಲಿ ಹೋಗಿ ಪರಿಹಾರ ಪಡೆಯಿರಿ’ ಎಂದು ಮುನ್ನುಗ್ಗುವ ಈ ಯಂತ್ರಕ್ಕೆ ನಾವು ಈಗಾಗಲೇ ಶರಣಾಗಿಬಿಟ್ಟಿದ್ದೇವೆ. ‘ದೇಶದ ಅಭಿವೃದ್ಧಿಗಾಗಿ ಇಷ್ಟೂ ಮಾಡದಿದ್ರೆ ಹೇಗೆ’ ಎನ್ನುವ ಔಪಚಾರಿಕ ಮಾತುಗಳ ನಡುವೆ, ನಮ್ಮ ಸುತ್ತಲಿನ ಜಗತ್ತು ಐಷಾರಾಮಿ ಜಗತ್ತಿನ ಸುಂದರ ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುವುದನ್ನು ಆನಂದದಿಂದ ಸ್ವಾಗತಿಸುತ್ತಿದ್ದೇವೆ. ಜೆಸಿಬಿ ಯಂತ್ರವು ರಸ್ತೆಗಳಲ್ಲಿ ಮಾಡುವ ಕೆಲಸವನ್ನು, ಬಜೆಟ್ ಎನ್ನುವ ಬ್ರೀಫ್‌ಕೇಸ್ ಅಥವಾ ನಾರುಮಡಿಯೊಳಗಿನ ಕಂತೆಯು ಸಂಸತ್ತಿನಲ್ಲಿ ಬೌದ್ಧಿಕ ನೆಲೆಯಲ್ಲಿ ಮಾಡುತ್ತದೆ. ನಮಗೆ ಇದು ಅರಿವಾಗುವುದೇ ಇಲ್ಲ.

44 ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ, ನಾಲ್ಕು ಸಂಹಿತೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಮಿಕ ವರ್ಗದ ಘಟಶ್ರಾದ್ಧ ಮಾಡಲು ಗಂಗಾನದಿಯ ತಟದಲ್ಲಿ ವೇದಿಕೆ ನಿರ್ಮಿಸಲಾಗುತ್ತಿದ್ದರೂ ಸಂಘಟಿತ ಕಾರ್ಮಿಕರು ಮಗುಮ್ಮಾಗಿ ಹೊದ್ದು ಮಲಗಿಬಿಡುತ್ತಾರೆ. ಮುಷ್ಕರದ ಕರೆ ಬಂದಾಗ ನಿದ್ರೆಯಿಂದ ಎಚ್ಚೆತ್ತು ಜಿಂದಾಬಾದ್, ಮುರ್ದಾಬಾದ್, ಧಿಕ್ಕಾರ ಕೂಗುತ್ತಾರೆ. ಆನಂತರ ಬಾವುಟಗಳನ್ನು ಮಡಚಿಟ್ಟು ಮತ್ತೆ ನಿದ್ರೆಗೆ ಜಾರಿಬಿಡುತ್ತಾರೆ.

ನಾವು ಏನು ಮಾಡಬೇಕು? ಮೊದಲು ಈ ‘ನಾವು’ ಎಂದರೆ ಯಾರು ಎಂದು ಸ್ಪಷ್ಟಪಡಿಸಿಕೊಳ್ಳಬೇಕು. ಬಜೆಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವರೆಲ್ಲರೂ ಈ ಗುಂಪಿಗೆ ಸೇರುವುದಿಲ್ಲ. ಏಕೆಂದರೆ ವಾಣಿಜ್ಯ ಮಂಡಳಿಗಳಿಗೆ ಅಸಮಾಧಾನ ಇನ್ನೂ ಹೆಚ್ಚಾಗಿರುತ್ತದೆ. ಕಾರ್ಪೊರೇಟ್ ವಲಯದವರು ಇನ್ನೂ ಹೆಚ್ಚಿನ ತೆರಿಗೆ ವಿನಾಯಿತಿ ನಿರೀಕ್ಷಿಸಿರುತ್ತಾರೆ. ಇಲ್ಲಿ ನಾವು ಎಂದರೆ, ನಾಳಿನ ಬದುಕಿನ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿರುವ ಜನಸಾಮಾನ್ಯರು. ಕೃಷಿ ಕಾರ್ಮಿಕರು, ಭೂಹೀನರು, ರಸ್ತೆಬದಿ ವ್ಯಾಪಾರಿಗಳು, ತಳ್ಳುಗಾಡಿಯ ವರ್ತಕರು, ದಿನಗೂಲಿ ನೌಕರರು ಇತ್ಯಾದಿ. ನಾವು ಈ ಜಾಗತಿಕ ಬಂಡವಾಳದ ಪ್ರಹಾರವನ್ನು ವೀಳ್ಯದೆಲೆ ನೀಡಿ ಸ್ವಾಗತಿಸಿ ತಲೆಯ ಮೇಲೆ ಚಪ್ಪಡಿ ಎಳೆದುಕೊಳ್ಳಬೇಕೋ ಅಥವಾ ನಮಗೂ ಒಂದು ಬದುಕಿದೆ ಎಂದು ಅರಿತು ಬದುಕನ್ನು ಹಸನಾಗಿಸುವ ಮಾರ್ಗಗಳಿಗಾಗಿ ತಡಕಾಡಬೇಕೋ? ಈ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳುತ್ತಾ ಮುನ್ನಡೆಯೋಣ. ಜೆಸಿಬಿ ಯಂತ್ರವು ಕದಲುವುದಿಲ್ಲ. ನಾವು ಕದಲಿಸಬೇಕಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT