ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ದತ್ತು: ಎಚ್ಚರ... ಕಾನೂನುಬಾಹಿರವಾದೀತು

ಕೋವಿಡ್‌ ಕಾರಣದಿಂದ ಅನಾಥರಾಗುವ ಅಥವಾ ತೊಂದರೆಗೊಳಗಾಗುವ ಮಕ್ಕಳನ್ನು ಏಕಾಏಕಿ ದತ್ತು ಕೊಡುವ ಅಥವಾ ಯಾವುದೋ ಸಂಸ್ಥೆಗೆ ಸೇರಿಸಿಬಿಡುವ ಯೋಚನೆ ಸಲ್ಲದು
Last Updated 9 ಮೇ 2021, 19:31 IST
ಅಕ್ಷರ ಗಾತ್ರ

‘ಕೋವಿಡ್‍ನಿಂದ ಮೃತಪಟ್ಟ ಪೋಷಕರ ಮಕ್ಕಳನ್ನು ದತ್ತು ತೆಗೆದುಕೊಳ್ಳುವವರು ಬೇಕಾಗಿದ್ದಾರೆ’, ‘ಕೋವಿಡ್ ಅನಾಥರಿಗೆ ನೆಲೆ ಕೊಡುವವರು ಮುಂದೆ ಬಂದಲ್ಲಿ ನೀಡಲಾಗುವುದು’– ಇಂತಹ ಸಂದೇಶಗಳು ಎರಡು ವಾರಗಳಿಂದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇಂತಹ ಸಂದೇಶ ಹೊರಡಿಸಿರುವವರದ್ದು ಸದುದ್ದೇಶವಾಗಿದ್ದರೂ ದತ್ತು ಕಾಯ್ದೆಯ ನಿಯಮಗಳಾಚೆ ಹೀಗೆ ಮಾಡುವುದು ಕಾನೂನುಬಾಹಿರ. ಸ್ವಂತ ಪೋಷಕರೊಡನೆ ಇರಬೇಕು ಇಲ್ಲವೇ ಪರ್ಯಾಯ ಕುಟುಂಬಗಳಲ್ಲಿ ನೆಲೆ ಕಂಡುಕೊಳ್ಳಬೇಕು ಎನ್ನುವುದು ಮಕ್ಕಳ ಹಕ್ಕು. ಹೀಗಾಗಿ ಮಕ್ಕಳು ಅನಾಥರಾದರೆ, ನೆಲೆ ಕಳೆದುಕೊಂಡರೆ ಅಥವಾ ತೊಂದರೆಯಲ್ಲಿದ್ದರೆ ಅಂತಹ ಪರಿಸ್ಥಿತಿಗಳತ್ತ ಗಮನಹರಿಸಲು ‘ರಾಷ್ಟ್ರೀಯ ಮಕ್ಕಳ ನೀತಿ– 2013’ ಮತ್ತು ‘ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ– 2015’ ಸ್ಪಷ್ಟವಾದ ವಿಧಿವಿಧಾನಗಳನ್ನು ಸೂಚಿಸಿವೆ. ಇವನ್ನು ಜಾರಿ ಮಾಡಲು ರಾಜ್ಯದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳು ನಿರತವಾಗಿವೆ.

‘ಮಕ್ಕಳು ಕೋವಿಡ್‍ನಿಂದ ನೇರವಾಗಿ ಹಾನಿಗೊಳಗಾಗುತ್ತಿಲ್ಲ, ಬದಲಿಗೆ ಅವರು ಕೋವಿಡ್‍ನ ಪರಿಣಾಮಗಳಿಗೆ ತುತ್ತಾಗಿದ್ದಾರೆ’ ಎಂದು ಕಳೆದ ವರ್ಷ ಕೋವಿಡ್– 19ರ ದಾಳಿ ಸಂದರ್ಭದಲ್ಲಿ ವಿಶ್ವಸಂಸ್ಥೆ ಹೇಳಿತ್ತು. ಕೋವಿಡ್ ಸೋಂಕು ಹೆಚ್ಚು ಮಕ್ಕಳನ್ನು ಬಾಧಿಸಿರಲಿಲ್ಲ. ಆದರೆ ಶಾಲೆಗಳು ಮುಚ್ಚಿದ್ದವು, ಆನ್‍ಲೈನ್ ಶಿಕ್ಷಣ ಎಲ್ಲ ಮಕ್ಕಳಿಗೆ ಸಮಾನವಾಗಿ ದೊರಕಿರಲಿಲ್ಲ, ಉದ್ಯೋಗ ಕಳೆದುಕೊಂಡು ಅಥವಾ ವ್ಯಾಪಾರವಿಲ್ಲದೆ ನಲುಗಿದ ಬಡ ಮತ್ತು ಅಸಂಘಟಿತ ಕಾರ್ಮಿಕರ ಕುಟುಂಬಗಳ ಮಕ್ಕಳ ಬದುಕು ಅತಂತ್ರವಾಗಿತ್ತು. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸ್‌ ಹೊರಟಾಗ ಮಕ್ಕಳ ಆರೋಗ್ಯ, ಪೌಷ್ಟಿಕಾಂಶ, ರಕ್ಷಣೆ ದೊಡ್ಡ ಪ್ರಶ್ನೆಯಾಗಿ ಕಾಡಿತ್ತು. ಇವೆಲ್ಲದರ ಜೊತೆಯಲ್ಲಿ ಬಾಲ್ಯವಿವಾಹದ ಪ್ರಕರಣಗಳು, ಮಕ್ಕಳ ದುಡಿಮೆ, ವ್ಯಾಪಾರದಲ್ಲಿ ತೊಡಗಿಕೊಂಡದ್ದು ಸುದ್ದಿಯಾಗಿದ್ದವು.

ಈ ಕಾರಣದಿಂದ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳು ನಡೆಸುವ ಮಕ್ಕಳ ನಿಲಯಗಳಲ್ಲಿದ್ದ ಸಾವಿರಾರು ಮಕ್ಕಳ ಆರೋಗ್ಯ, ಬದುಕು, ರಕ್ಷಣೆಗಾಗಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ನಿರ್ದೇಶನಗಳನ್ನು ನೀಡಿತ್ತು. ತೊಂದರೆಗೀಡಾದ ಮಕ್ಕಳಿಗೆ ನೆರವಾಗಲು ಅನೇಕ ಸ್ವಯಂಸೇವಾ ಸಂಸ್ಥೆಗಳು ಮತ್ತು ಸರ್ಕಾರದ ಅಂಗಸಂಸ್ಥೆಗಳು ಮುಂದಾಗಿದ್ದವು. ಯುನಿಸೆಫ್, ಚೈಲ್ಡ್‌ಲೈನ್ 1098 ಮತ್ತು ನಿಮ್ಹಾನ್ಸ್ ಜೊತೆಗೂಡಿ, ಕೊರೊನಾದಿಂದ ಭಯಭೀತರಾದ ಮಕ್ಕಳಿಗೆ ಸಾಂತ್ವನ ಹೇಳಲು ಬೇಕಾದ ವಿಧಿವಿಧಾನಗಳ ಮಾಹಿತಿಯ ಕೈಪಿಡಿಗಳನ್ನು ಪೋಷಕರು ಮತ್ತು ಪಾಲಕರಿಗಾಗಿ ಹೊರತಂದಿದ್ದವು. ಅವು ಈಗಲೂ ಬಳಸಲು ಯೋಗ್ಯವಾಗಿವೆ.

ಈಗ ಮತ್ತೊಮ್ಮೆ ನಾವು ಕೋವಿಡ್‍ನ ಪಿಡುಗನ್ನು ಮಕ್ಕಳ ಹಿತದ ದೃಷ್ಟಿಕೋನದಿಂದ ಎದುರಿಸಲು ಸಜ್ಜಾಗಬೇಕಿದೆ. ಈ ಬಾರಿ ಮಕ್ಕಳಿಗೂ ಕೋವಿಡ್ ಸೋಂಕುಂಟಾಗಿದೆ ಮತ್ತು ಮಕ್ಕಳ ಸಾವಿನ ಪ್ರಕರಣಗಳು ವರದಿಯಾಗುತ್ತಿವೆ. ಜೊತೆಗೆ ಕೋವಿಡ್‍ನಿಂದಾಗಿ ಪೋಷಕರ ಸಾವು ಅಥವಾ ಪೋಷಕರು ಆಸ್ಪತ್ರೆಯಲ್ಲಿದ್ದು ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದಂತಹ ಪರಿಸ್ಥಿತಿಗಳು ಹೆಚ್ಚಾಗುತ್ತಿವೆ.

ಯಾರಿಗೇ ಆಗಲಿ ಪೋಷಣೆ ಮತ್ತು ರಕ್ಷಣೆ ಅವಶ್ಯಕತೆಯಿರುವ ಮಕ್ಕಳ ಪರಿಸ್ಥಿತಿ ಕುರಿತು ತಿಳಿದಲ್ಲಿ, ಅವರು ತಕ್ಷಣ ಚೈಲ್ಡ್‌ಲೈನ್ 1098ಕ್ಕೆ ಕರೆ ಮಾಡಿ ತಿಳಿಸಬೇಕು. ಚೈಲ್ಡ್‌ಲೈನ್ ಸಿಬ್ಬಂದಿಯು ಮಕ್ಕಳ ವಯೋಮಾನ, ಅವರ ‍ಸ್ಥಿತಿಗತಿ ಎಲ್ಲವನ್ನೂ ಗಮನಿಸಿ, ಅವರಿಗೆ ಬೇಕಿರುವ ಸಹಾಯದ ಕುರಿತು ವರದಿ ಮಾಡುತ್ತಾರೆ. ಆ ಮಕ್ಕಳಿಗೆ ಶೀಘ್ರವಾಗಿ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಗಳು (ಡಿಸಿಪಿಯು) ಮುಂದಾಗುತ್ತವೆ.

ಬಹಳಷ್ಟು ಬಾರಿ ಚಿಕ್ಕಪುಟ್ಟ ಸಹಾಯ, ಆಪ್ತ ಸಮಾಲೋಚನೆ ನೀಡಿ ಮಕ್ಕಳ ಸಮಸ್ಯೆ ಬಗೆಹರಿಸಬಹುದು. ಎಲ್ಲ ಮಕ್ಕಳನ್ನೂ ದತ್ತು ನೀಡಬೇಕಿಲ್ಲ ಅಥವಾ ಸಂಸ್ಥೆಗಳಲ್ಲಿ ಇರಿಸಬೇಕಿಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ಮಕ್ಕಳು ಕೇವಲ ಆಹಾರ, ಶಿಕ್ಷಣ, ಆಟೋಟಗಳಿಂದ ವಂಚಿತರಾಗಿಲ್ಲ. ಮೊದಮೊದಲು ಬಹಳಷ್ಟು ಮಕ್ಕಳು ದೀರ್ಘವಾದ ರಜೆ ಎಂದುಕೊಂಡರೂ ಸಹವರ್ತಿಗಳು, ಸ್ನೇಹಿತರು ಇಲ್ಲದ ಒಂಟಿತನ ಎದುರಿಸಲಾರಂಭಿಸಿದರು. ಪಾಠದ ಸಮಯ, ಅಧ್ಯಯನ ಮತ್ತು ಪರೀಕ್ಷೆಗಳ ಆವರ್ತನಗಳ ಪ್ರಾಮುಖ್ಯವನ್ನು ಕಳೆದುಕೊಂಡ ಒತ್ತಡವನ್ನು ಅನುಭವಿಸಲಾರಂಭಿಸಿದರು.

ಕಳೆದ ಒಂದು ವರ್ಷದಲ್ಲಿ ಬಹಳಷ್ಟು ಪೋಷಕರು ದುಡಿಮೆ, ಸಂಪಾದನೆ ಕಳೆದುಕೊಂಡಿದ್ದಾರೆ. ಒಂದಷ್ಟು ಕುಟುಂಬಗಳಲ್ಲಿ ಮನಸ್ತಾಪ, ಜಗಳ, ಹೊಡೆದಾಟಗಳು, ಕೆಲವು ಕುಟುಂಬಗಳಲ್ಲಿ ತಂದೆಯೋ ತಾಯಿಯೋ ಕುಟುಂಬ ತೊರೆದು ಹೋಗಿರಬಹುದು, ಇಲ್ಲವೇ ಮಕ್ಕಳನ್ನೇ ಎಲ್ಲಿಯೋ ಬಿಟ್ಟು ಹೋಗಿರಬಹುದು. ಇವೆಲ್ಲ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನು ಹಿಂದೆ ಮುಂದೆ ನೋಡದೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ, ಕುಟುಂಬಗಳಿಗೆ ಅಥವಾ ಯಾವುದೋ ಸಂಸ್ಥೆಗೆ ಸೇರಿಸಿಬಿಡುವುದು ಸೂಕ್ತವಲ್ಲ. ಅದು ಮಕ್ಕಳನ್ನು ಇನ್ನಷ್ಟು ಸಂಕಷ್ಟಗಳಿಗೆ ದೂಡುವ ಅಪಾಯವಿರುತ್ತದೆ. ಬದಲಿಗೆ ಚೈಲ್ಡ್‌ಲೈನ್ 1098 ಮತ್ತು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಗಳನ್ನು ಸಂಪರ್ಕಿಸುವುದು ವಿಹಿತ.

ಲೇಖಕ: ಕಾರ್ಯಕಾರಿ ನಿರ್ದೇಶಕ, ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ (ಸಿಆರ್‌ಟಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT