ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛವಾಗಬೇಕಾದ್ದು ಬಹಳಷ್ಟಿದೆ

ಭಾರತದಲ್ಲಿ ಸ್ವಚ್ಛವಿಲ್ಲದಿರುವುದು ರಾಜಕೀಯದ ಮಂದಿಯ ನಾಲಿಗೆ ಮಾತ್ರ. ಇದನ್ನು ಸ್ವಚ್ಛಗೊಳಿಸಬೇಕಾದ್ದು ಯಾರು?
Last Updated 8 ಅಕ್ಟೋಬರ್ 2018, 20:14 IST
ಅಕ್ಷರ ಗಾತ್ರ

ಪುಣ್ಯ ಭೂಮಿ ಭಾರತ ಶೇ 90ರಷ್ಟು ಸ್ವಚ್ಛವಾಯಿತು, ಇನ್ನೇನು, ಸಂಪೂರ್ಣ ಸ್ವಚ್ಛ ಆಗುವುದರಲ್ಲಿದೆ. ಅದಕ್ಕಾಗಿ ಸಲ್ಲಬೇಕು ಅಭಿನಂದನೆ ನರೇಂದ್ರ ಮೋದಿಗೆ. ಭಾರತದ ಯೋಗ, ಜಗತ್ತಿನ ಉದ್ದಗಲದಲ್ಲಿ ಸ್ವೀಕೃತವಾಗಿ ಯುಎನ್‌ಒ ಆಲಿಂಗನಕ್ಕೆ ಕೂಡ ಪಾತ್ರವಾಯಿತು. ಸಲ್ಲಬೇಕು ಅಭಿನಂದನೆ ಮೋದಿಗೆ...

ಆದರೆ ಸ್ವಚ್ಛ ಆಗಲು ಇನ್ನೂ ಬಹಳಷ್ಟಿದೆ. ಭಾರತದ ದ್ರವ್ಯರೂಪದ ಸಂಪತ್ತನ್ನು ಕೆಲವೇ ಕೆಲವು ಉದ್ಯಮಿಗಳು ತಮ್ಮ ಕಪಿಮುಷ್ಟಿಯಲ್ಲಿರಿಸಿಕೊಂಡಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಅಧಿಕಾರವನ್ನು ಮುಷ್ಟಿಯಲ್ಲಿರಿಸಿಕೊಂಡಿರುವ ರಾಜಕಾರಣಿಗಳು ಹೇಗೆ ಹೇಗೋ ಭ್ರಷ್ಟಾಚಾರದ ಸವಿ ಕಂಡು ಹಣ ಕೂಡಿಟ್ಟುಕೊಳ್ಳುತ್ತಿದ್ದಾರೆ. ಖರ್ಚು ಮಾಡಲಾಗದಷ್ಟು ದೊಡ್ಡ ಮೊತ್ತದ ಹಣದ ಮೇಲೆಯೇ ಕೊನೆಯುಸಿರೆಳೆಯುವ ಮಂದಿಗೆ ವಿವೇಕ ಮೂಡಿಸುವ ಕೆಲಸ ಮಾಡುವ ಜವಾಬ್ದಾರಿ ಯಾರದು? ಅದನ್ನು ಅತ್ಯಗತ್ಯವಾಗಿ ಮೋದಿಯವರೇ ಆರಂಭಿಸಬೇಕು.

ಏನು ಎಂಥದು ಎಂದು ಯಾರಿಗೂ ಸ್ಪಷ್ಟವಾಗಿ ಗೋಚರಿಸದ ಬಡತನ ದೇಶವ್ಯಾಪಿಯಾಗಿದೆ. ಅದೇ ರೀತಿ ಅದೇ ಸ್ವರೂಪದ ನಿರುದ್ಯೋಗ ಕೂಡ ದೇಶವ್ಯಾಪಿಯಾಗಿದೆ. ಈ ಕಾರಣದಿಂದಲೇ ಯಾವ್ಯಾವುದೋ ಬಗೆಯ ಅತೃಪ್ತಿಯಿಂದ ಕೊಲೆ, ಸುಲಿಗೆ, ಮಕ್ಕಳ- ಹೆಂಗಸರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಕ್ರಿಮಿನಲ್‌ಗಳಿಗೆ ಶಿಕ್ಷೆ ನೀಡುವುದು ಅಗತ್ಯ; ಆದರೆ ಅದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ.

ಭ್ರಷ್ಟಾಚಾರದ ಕೊಳೆಯನ್ನು ತೊಳೆದು ತೆಗೆಯದೆ ಭಾರತ ಸಂಪೂರ್ಣ ಸ್ವಚ್ಛ ಭಾರತ ಆಗುವುದಿಲ್ಲ. ಅಂಥ ಸ್ವಚ್ಛ ಭಾರತ ಆಗದಿದ್ದರೆ ಸ್ವಚ್ಛ ಪ್ರಜಾಪ್ರಭುತ್ವ ಉಂಟಾಗುವುದಿಲ್ಲ. ಭಾರತ ಸ್ವಚ್ಛ ಆಗಬೇಕಾದರೆ, ಹಣ ಹರಿದು ಬರುವ ದಾರಿಗಳನ್ನು ಮುಚ್ಚಬೇಕು. ಆ ಕೆಲಸವನ್ನೂ ಮೋದಿ ಮಾಡಬೇಕು, ಮಾಡಿಸಬೇಕು. ಮಂತ್ರಿಗಳು, ಸಂಸದರು, ಶಾಸಕರು ಮಾನವೀಯ ಗುಣದವರಾಗಿರಬೇಕು. ಹಾಗೆ ಮಾಡುವುದು ಹೇಗೆ ಎಂದು ಮೋದಿಯೇ ಕಂಡುಹಿಡಿಯಬೇಕು.

ಆದರೆ ಎಲ್ಲರೂ ಕೇವಲ ಅನ್ನ ಬಟ್ಟೆಯಲ್ಲಿ ತೃಪ್ತರಾಗಿರುವವರಲ್ಲ. ಪ್ರಾಜ್ಞರು, ಓದಿಕೊಂಡವರು, ಬುದ್ಧಿವಂತರು, ವಿದ್ಯಾವಂತರು, ಓದಲು ಬರೆಯಲು ಬಲ್ಲವರು ದೇಶದಲ್ಲಿ ಇದ್ದಾರೆ. ದೇಶದಲ್ಲಿ ಏನು ನಡೆಯುತ್ತಿದೆ ಎಂದು ಗಮನಿಸುವವರು, ಅಧ್ಯಯನ ನಡೆಸುವವರು, ದೇಶದ ಬಗ್ಗೆ ಕಾಳಜಿಯುಳ್ಳವರು ಇದ್ದಾರೆ. ಇವರು ಅನ್ನ ಆಹಾರಕ್ಕೆ ಕೊರತೆಯುಂಟಾದರೂ ಬದುಕುತ್ತಾರೆ. ಆದರೆ ಓದುವ, ಬರೆಯುವ, ಮಾತಾಡುವ, ಚಿತ್ರ ಬರೆಯುವ ಸ್ವಾತಂತ್ರ್ಯವಿಲ್ಲದಿದ್ದರೆ ಬದುಕಲಾರರು. ದೇಶದಲ್ಲಿ ಪ್ರಜೆಗಳು ಮಾನವಂತರಾಗಿ, ಮಾನವೀಯ ಗುಣದವರಾಗಿ ಬದುಕಬೇಕಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಇರಲೇಬೇಕು. ಮನುಷ್ಯನನ್ನು ಮನುಷ್ಯ ಎಂದು ಗುರುತಿಸುವುದು ಅವನು ಏನು ತಿನ್ನುತ್ತಾನೆ ಎಂಬುದರ ಮೂಲಕಅಲ್ಲ; ಮನುಷ್ಯನ ಅಂಕಿತ ಮತ್ತು ಅಸ್ತಿತ್ವದ ಶ್ರೇಷ್ಠತೆ ಇರುವುದು ಅವನ ನಡೆಯಲ್ಲಿ, ನುಡಿಯಲ್ಲಿ, ಓದಿನಲ್ಲಿ ಮತ್ತು ಬರಹದಲ್ಲಿ, ಇದೆಲ್ಲಕ್ಕೆ ಅವಕಾಶವಿಲ್ಲದ ದೇಶದಲ್ಲಿ ಒಳ್ಳೆಯ ಪ್ರಜಾಪ್ರಭುತ್ವ ಇರಲಾರದು. ಅಷ್ಟು ಮಾತ್ರವೇ ಅಲ್ಲ, ದುರ್ಬಲ ಪ್ರಜಾಪ್ರಭುತ್ವ ಮತ್ತು ಬೇಕಾಬಿಟ್ಟಿ ಸಂವಹನ ಮಾಧ್ಯಮಗಳು ನೀತಿ ನಿಯಮ ಎಂಬುದಿಲ್ಲದ ಕೇವಲ ಹಣಕ್ಕಾಗಿ ಕೆಲಸ ಮಾಡುವ ವ್ಯಾಪಾರೀ ಮಾರುಕಟ್ಟೆಗಳಾಗುತ್ತವೆ. ಸಾಮಾಜಿಕ ಶಿಕ್ಷಣ ನೀಡುವ ಜವಾಬ್ದಾರಿ ಮುಖ್ಯವಾಗಿ ಇರುವುದು ಮತ್ತು ಇರಬೇ
ಕಾದ್ದು ಸಂವಹನ ಮಾಧ್ಯಮಗಳಿಗೆ. ಅಂಥ ಕೆಲಸ ಇವತ್ತು ನಡೆಯುತ್ತಿದೆಯಯೇ ಎಂದು ವಿಚಾರಿಸಬೇಕಾದ್ದು ನಾವು. ಎಲ್ಲರೂ ಎಚ್ಚೆತ್ತು ಸ್ವಚ್ಛಗೊಳಿಸಬೇಕಾದ್ದು ಇನ್ನೂ ಕೆಲವಿವೆ.

ರಸ್ತೆ ಬದಿ ಕಾಲುದಾರಿ: ಅಮೆರಿಕದಂಥ ಮುಂದುವರಿದ ದೇಶಗಳಲ್ಲಿ ರಸ್ತೆ ಕಾಲುದಾರಿ ಅಗಲ 1.8 ಮೀ. ಇರುತ್ತದೆ. ವಾಣಿಜ್ಯ ಪ್ರದೇಶವಾದರೆ 2.5 ಮೀ. ಇರುತ್ತದೆ. ಮರಗಳು ರಸ್ತೆಯಿಂದ ಇಂತಿಷ್ಟು ದೂರ ಇರಬೇಕೆಂಬ ನಿಯಮವಿದೆ. ದಟ್ಟವಾದ ಕಾಡು ಸಹ ರಸ್ತೆಯಿಂದ ಸಾಕಷ್ಟು ದೂರದಲ್ಲಿ ಶಿಸ್ತಿನ ಸಿಪಾಯಿಯಂತೆ ಬೆಳೆದು ನಿಂತಿರುತ್ತದೆ. ನೂರಾರು ಎಕರೆ ವಿಸ್ತೀರ್ಣದ ಕೃಷಿ ಎಸ್ಟೇಟಿಗೂ ಭದ್ರವಾದ ಆವರಣವಿರುತ್ತದೆ.

ಭಾರತ ದೇಶದ ನಗರಗಳಲ್ಲಿ ರಸ್ತೆ ಬದಿ ಕಾಲು ದಾರಿ ಇಷ್ಟೇ ಇರಬೇಕು ಎಂಬ ನಿಯಮ ಇದ್ದ ಹಾಗೆ ಕಾಣುವುದಿಲ್ಲ. ಕೆಲವು ಕಡೆ ಮರಗಳು ಕಾಲುದಾರಿಯಲ್ಲೇ ಇರುತ್ತವೆ. ಮರಗಳು ಹಳೆಯದಾಗಿ ಮುರಿದು ಮನುಷ್ಯರ ಮೇಲೆ, ವಾಹನಗಳ ಮೇಲೆ ಮತ್ತು ವಿದ್ಯುತ್‌ ಕಂಬಗಳ ಮೇಲೆ ಬೀಳುತ್ತವೆ. ಪ್ರಾಣ ಹಾನಿ ಆಗುತ್ತಲೇ ಇರುತ್ತದೆ. ವಯಸ್ಸಾಗಿ ಮುರಿದು ಬೀಳುವ ಮರಗಳನ್ನು ತೆಗೆಯಲು ಅರಣ್ಯ ಇಲಾಖೆ ಮತ್ತು ಪರಿಸರವಾದಿಗಳು ಬಿಡುವುದಿಲ್ಲ. ಹಳೆಯ ಮರಗಳನ್ನು ಕಿತ್ತು ತೆಗೆದು ಹೊಸ ಗಿಡಗಳನ್ನು ನೆಡಬೇಕು ಎಂಬ ಕಾಳಜಿ ಮತ್ತು ಕಾಮನ್‌ ಸೆನ್ಸ್‌ ಸರ್ಕಾರಕ್ಕಾಗಲಿ, ಸ್ಥಳೀಯ ಆಡಳಿತಕ್ಕಾಗಲಿ ಇದ್ದಂತಿಲ್ಲ. ಯಾರು ಅವರನ್ನು ಎಚ್ಚರಿಸಬೇಕು? ಎಚ್ಚರಿಸುವ ಕೆಲಸ ನಾವಲ್ಲದೆ ಬೇರೆ ಯಾರು ಮಾಡುತ್ತಾರೆ? ಪರಿಸರವಾದಿಗಳು ಪರಿಸರ ರಕ್ಷಕರಾಗಬೇಕು. ಮುರಿದುಬೀಳುವ ಸ್ಥಿತಿಯಲ್ಲಿರುವ ಮರವನ್ನು ಕಡಿಯಲು ಬಿಡದಿರುವವರನ್ನು ಪರಿಸರ ರಕ್ಷಕರೆಂದು ಪರಿಗಣಿಸಲಾದೀತೆ? ಮೂಲಭೂತವಾದವೇನೊ ಎಂಬಂತೆ ವರ್ತಿಸುತ್ತಿರುವ ಪರಿಸರವಾದಿಗಳು ಯೋಚಿಸಬೇಕಾದ್ದು ಅಗತ್ಯವಲ್ಲವೇ?

ಆಂತರಿಕ ಸ್ವಚ್ಛತೆ: ವಾಸ್ತವದಲ್ಲಿ, ಭಾರತೀಯರು ಸ್ವಚ್ಛ ಮನಸ್ಸು, ಸ್ವಚ್ಛ ನಡೆನುಡಿಯವರೇ ಆಗಿದ್ದಾರೆ. ಭಾರತದಲ್ಲಿ ಸ್ವಚ್ಛವಿಲ್ಲದಿರುವುದು ರಾಜಕೀಯದ ಮಂದಿಯ ನಾಲಿಗೆ ಮಾತ್ರ. ಒಬ್ಬರನ್ನೊಬ್ಬರು ಅನಾಗರಿಕ ರೀತಿಯಲ್ಲಿ ನಿಂದಿಸುತ್ತಾ ಒಬ್ಬರಿನ್ನೊಬ್ಬರ ದುರ್ಗುಣ,ಕೆಟ್ಟ ವ್ಯವಹಾರಗಳನ್ನು ಬೀದಿಯಲ್ಲಿ ಒದರುತ್ತಾ ಇರುತ್ತಾರೆ. ಸಾಮಾನ್ಯ ಪ್ರಜೆಗಳಿಗೆ ಈ ಅಸಹ್ಯ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಇವರು ಪ್ರಜಾಪ್ರಭುತ್ವಕ್ಕೆ ಸಲ್ಲುವ ಯೋಗ್ಯತೆಯುಳ್ಳವರಲ್ಲ ಎಂದು ಜನರಾಡಿಕೊಳ್ಳುತ್ತಾರೆ. ಇವರಿಗೆ ಬೀದಿಯಲ್ಲಿಯೂ, ಅರ್ಥಪೂರ್ಣವಾದ, ಗಂಭೀರವಾದ ಮಾತುಕತೆ ಚರ್ಚೆ ನಡೆಯಬೇಕಾದಲ್ಲಿಯೂ ಇದೇ ಅನಾಗರಿಕ ನಡೆನುಡಿ. ಇದನ್ನು ಸ್ವಚ್ಛ
ಗೊಳಿಸಬೇಕಾದ್ದು ಯಾರು? ಅದು ಕೂಡ ದೇಶದ ಪ್ರಧಾನಿ ಮತ್ತು ಅಧ್ಯಕ್ಷರ ಜವಾಬ್ದಾರಿಯಾಗಿರಬಹುದೇ? ದೇಶದ ಸಾಮಾನ್ಯ ಪ್ರಜೆಗಳು ಮತ್ತು ಎಲ್ಲಾ ರಾಜಕಾರಣಿಗಳು ಒಂದೇ ಬುದ್ಧಿಯಿಂದ ಯೋಚಿಸಲಿ. ಭಾರತ ಪ್ರಜಾಪ್ರಭುತ್ವ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಪ್ರಜಾಪ್ರಭುತ್ವ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT