ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬರುತ್ತಿದೆ... ಮರುಬಳಕೆಯ ಕಾಲ

ಶರೀರದಿಂದ ಹೊರಬೀಳುವ ತ್ಯಾಜ್ಯವೇ ಅನಿಲವಾಗಿ, ಕಾಗದವಾಗಿ, ಪಾನೀಯವಾಗಿ ಪರಿವರ್ತಿತವಾಗುವ ವ್ಯಾಪಕ ಸಾಧ್ಯತೆಯನ್ನು ವೈಜ್ಞಾನಿಕ ಜಗತ್ತು ನಮ್ಮ ಮುಂದಿಟ್ಟಿದೆ!
Last Updated 31 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ನೈಸರ್ಗಿಕ ಸಂಪನ್ಮೂಲಗಳು ಬತ್ತಿ ಬರಡಾಗುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗಿಳಿಯುತ್ತಿರುವ ವಾಹನಗಳು ಭೂಮಿಯೊಳಗಿನ ತೈಲ ಕಣಜವನ್ನು ಬಹುಬೇಗ ಖಾಲಿ ಮಾಡಿದರೆ ಆಶ್ಚರ್ಯವಿಲ್ಲ. ಪ್ಲಾಸ್ಟಿಕ್ ಬಳಕೆಗೆ ಪರ್ಯಾಯ ಮಾರ್ಗವನ್ನು ಇನ್ನೂ ಹುಡುಕಿಲ್ಲ. ಪೆಟ್ರೋಲ್ ಬತ್ತಿದರೆ ಪ್ಲಾಸ್ಟಿಕ್ ತಯಾರಿಸಲು ಅನ್ಯ ಕಚ್ಚಾವಸ್ತು ಏನೆಂಬುದು ಗೊತ್ತಾಗಿಲ್ಲ. ಆದರೆ ಇಂದು ಬಳಸುತ್ತಿರುವ ಎಲ್ಲ ಇಂಧನದ ಬಾವಿಗಳು ಬರಿದಾದಾಗ ಕೈಕಟ್ಟಿ ಕೂಡಬಾರದೆಂಬ ದಿಸೆಯಲ್ಲಿ ವಿಜ್ಞಾನ ಜಗತ್ತು ಹೊಸ ಆವಿಷ್ಕಾರಗಳನ್ನು ಮಾಡುತ್ತ ಹೋಗುತ್ತಿದೆ. ಅದು ಪ್ರಮುಖವಾಗಿ ವಸ್ತುಗಳ ಮರುಬಳಕೆ. ಈ ದಿಸೆಯಲ್ಲಿ ಮನುಷ್ಯನ ಶೌಚವೂ ಪ್ರಾಮುಖ್ಯ ಪಡೆಯುತ್ತಿದೆ!

ದಕ್ಷಿಣ ಕೊರಿಯಾದ ಉಲ್ಸಾನ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿಯ ಹಾಸ್ಟೆಲ್ ನಿವಾಸಿ ವಿದ್ಯಾರ್ಥಿಗಳು ವಿಸರ್ಜಿಸಿದ ಶೌಚಕ್ಕೂ ತಿಂಗಳಿನ ಕೊನೆಗೆ ಗಮನಾರ್ಹ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಹಾಗೆಯೇ ಮನೆಗಳಲ್ಲಿ ಶೌಚವು ಒಳಚರಂಡಿ ಕೊಳವೆಗಳ ಮೂಲಕ ಹರಿಯುವುದನ್ನು ತಪ್ಪಿಸಿ ಪ್ರತ್ಯೇಕವಾಗಿ ಇಲ್ಲಿಗೇ ಹರಿದುಬರುವ ವ್ಯವಸ್ಥೆ ಮಾಡಲಾಗಿದೆ.

ಅಲ್ಲಿ ವಿಜ್ಞಾನ ಕಟ್ಟಡದಲ್ಲಿ ತಂತ್ರಜ್ಞ ಜೀವಿನ್ ಚೋ ನೇತೃತ್ವದಲ್ಲಿ ಮನುಷ್ಯನ ಶೌಚದಿಂದ ಅಡುಗೆಗೆ ಮತ್ತು ವಾಹನ ಸಂಚಾರಕ್ಕೆ ಬಳಸುವ ಅನಿಲ ಉತ್ಪಾದನೆಯಾಗುತ್ತದೆ. ಕಡಿಮೆ ಬಂಡವಾಳದ ಸರಳ ತಂತ್ರಜ್ಞಾನದ ಮೂಲಕ ಹೊರಬರುವ ಅನಿಲ ಸಂಚರಿಸಲು ಇಡೀ ಕಟ್ಟಡದಲ್ಲಿ ಕೊಳವೆಗಳಿವೆ. ನೂರಾರು ವಿದ್ಯಾರ್ಥಿಗಳ ಅಡುಗೆಗೆ ಹಾಗೂ ದೀಪಗಳಿಗೆ ಇಲ್ಲಿ ಬಳಕೆಯಾಗುವುದು ಇದೇ ಅನಿಲ. ಫಿಲ್ಟರ್‌ನಲ್ಲಿ ಶುದ್ಧೀಕರಣಗೊಂಡು ಬರುವ ಕಾರಣ ಅನಿಲವು ಯಾವುದೇ ದುರ್ಗಂಧವನ್ನೂ ಸೂಸುವುದಿಲ್ಲ. ಪೆಟ್ರೋಲಿಯಂ ಅನಿಲದ ಹಾಗೆ ಅನಾಹುತದ ಸಂಭವವೂ ತೀರಾ ವಿರಳವಾಗಿದೆ.

ಶೌಚವು ಪ್ರತ್ಯೇಕಗೊಳ್ಳುವ ಕಾರಣ, ನಗರದಲ್ಲಿ ಹರಿಯುವ ಒಳಚರಂಡಿ ನೀರಿಗೂ ವಾಸನೆ ಇರುವು ದಿಲ್ಲ. ಇದರಿಂದಾಗಿ ಅಡುಗೆ ಅನಿಲಕ್ಕೆ ತೆರುವ ಹಣದಲ್ಲಿ ಒಂದಂಶವನ್ನು ವಿಶ್ವವಿದ್ಯಾಲಯದ ಆಡಳಿತ ವರ್ಗ ಪ್ರತೀ ತಿಂಗಳೂ ವಿದ್ಯಾರ್ಥಿಗಳಿಗೆ ನೀಡುತ್ತಿದೆ.

ನಮ್ಮಲ್ಲಿ ಜಾನುವಾರುಗಳ ಸೆಗಣಿಯಿಂದ ಅಡುಗೆ ಅನಿಲ ಉತ್ಪಾದಿಸುತ್ತಿದ್ದೇವೆ. ಅದರ ಪ್ರಮಾಣ ಏರಿಕೆ ಯಲ್ಲಿ ರೈತರೂ ಆಸಕ್ತಿ ವಹಿಸದೆ ಮನೆ ಬಳಕೆಗೆ ಅನಿಲವನ್ನು ಹಣ ಕೊಟ್ಟು ತರುವುದುಂಟು. ದಕ್ಷಿಣ ಜರ್ಮನಿಯ ವರ್ಣಚಿತ್ರ ಕಲಾವಿದ ವೆರ್ನರ್ ಹರ್ಟ್ಸ್‌ ಹಸಿ ಸೆಗಣಿಯನ್ನು ಬಣ್ಣಗಳ ಬದಲಿಗೆ ಬಳಸಿ ಸುಂದರವಾದ ವರ್ಣಚಿತ್ರಗಳನ್ನು ರೂಪಿಸಬಹುದೆಂದು ತೋರಿಸಿಕೊಟ್ಟರು. ಅದಾದ ಬಳಿಕ ಭಾರತದಲ್ಲಿ ಕೂಡ ಸೆಗಣಿಯಿಂದ ಗೋಡೆಗಳಿಗೆ ಬಳಿಯುವ ಬಣ್ಣಗಳನ್ನು ತಯಾರಿಸುವ ಕಾರ್ಖಾನೆ ಆರಂಭಗೊಂಡಿದೆ. ಮಾಮೂಲಿ ಬಣ್ಣಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಸೀಸ ಬೆರೆತಿರುತ್ತದೆ. ಸೆಗಣಿಯ ಬಣ್ಣ ಅನಾರೋಗ್ಯಕರವಲ್ಲ ಎನ್ನುತ್ತಾರೆ ತಜ್ಞರು.

ದೇಶದ ಹಲವೆಡೆಗಳಲ್ಲಿ ಆನೆಗಳ ಅಭಯಾರಣ್ಯಗಳಿವೆ. ಸಸ್ಯಗಳನ್ನು ತಿಂದು ಆನೆ ವಿಸರ್ಜಿಸುವ ಅಗಾಧ ಪ್ರಮಾಣದ ಲದ್ದಿಯನ್ನು ಕೆಲವೆಡೆ ರೈತರು ಗೊಬ್ಬರವಾಗಿ ಕೃಷಿಗೆ ಬಳಸಲು ತೆಗೆದುಕೊಂಡು ಹೋಗುವುದು ಬಿಟ್ಟರೆ ಆರ್ಥಿಕವಾಗಿ ಸದ್ಬಳಕೆ ಮಾಡಿ ಕೊಳ್ಳುವ ಪ್ರಯತ್ನಗಳು ನಡೆದಂತೆ ಕಾಣುವುದಿಲ್ಲ. ಆದರೆ ವ್ಯರ್ಥವಾಗಿ ಹೋಗುವ ಲದ್ದಿಯನ್ನು ಮರು ಬಳಕೆ ಮಾಡಿ, ಬರೆಯುವ ಕಾಗದ ತಯಾರಿಸುವ ಶೋಧನೆ ಥಾಯ್ಲೆಂಡ್‌ನಲ್ಲಿ ನಡೆಯಿತು. ಈ ಮೂಲಕ ಅಲ್ಲೀಗ, ಗಮನಾರ್ಹ ಪ್ರಮಾಣದಲ್ಲಿ ಕಾಗದಕ್ಕಾಗಿ ಧರೆಗುರುಳುವ ಮರಗಳ ಸಂರಕ್ಷಣೆ ಸಾಧ್ಯವಾಗಿದೆ. ಇದರಿಂದ ಪ್ರೇರಿತವಾಗಿ ಸಿಂಹಳವೂ ಲದ್ದಿಯಿಂದ ಕಾಗದ ತಯಾರಿಸತೊಡಗಿದೆ. ಅದು ಪೂರ್ಣವಾಗಿ ಮನುಷ್ಯರ ಕೈಗಳಿಂದಲೇ ಸಿದ್ಧವಾಗುತ್ತಿದ್ದು ಹಲವರಿಗೆ ಉದ್ಯೋಗ ನೀಡಿದೆ.

ದಕ್ಷಿಣ ಆಫ್ರಿಕಾದ ಪೌಲಾ ವೆನ್ಸ್‌ಲೆ ದಂಪತಿ ಇನ್ನೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ಅವರು ಆನೆ ಲದ್ದಿಯಿಂದ ಭಟ್ಟಿಯಿಳಿಸುತ್ತಿರುವ ಜಿನ್, ಬೆಲ್ಜಿಯಂ ಸೇರಿ ಜರ್ಮನಿಯಾದ್ಯಂತ ಪಾನಪ್ರಿಯರ ಮನಸೂರೆಗೊಂಡಿದೆ. ದಂಪತಿ ಶರೀರಶಾಸ್ತ್ರ ಮತ್ತು ಇಮ್ಯುನಾಲಜಿ ಪ್ರಾಧ್ಯಾಪಕರು. ತಮ್ಮ ನೂತನ ಶೋಧವು ಲದ್ದಿಯಿಂದ ತಯಾರಾಗಿದೆ ಎಂಬುದನ್ನು ಅವರು ರಹಸ್ಯವಾಗಿಟ್ಟಿಲ್ಲ. ಆದರೂ ಜಿನ್ ಬಹು ಬೇಡಿಕೆ ಪಡೆದಿದೆ. ಇನ್ನು ಬಾವಲಿಗಳು ತಂಗುವ ಗುಹೆಗಳಿಂದ ಸಂಗ್ರಹವಾಗುವ ಅಪಾರ ಪ್ರಮಾಣದ ಹಿಕ್ಕೆಗಳ ಪದರವು ಯೂರಿಯಾ ಗೊಬ್ಬರಕ್ಕಿಂತಲೂ ಅಧಿಕ ಅಮೋನಿಯಾ ಸತ್ವ ಪಡೆದಿರುವ ಗೊಬ್ಬರ ಎಂಬುದನ್ನು ವಿಜ್ಞಾನಿಗಳು ಪ್ರಮಾಣೀಕರಿಸಿದ್ದಾರೆ.

ಶತಕೋಟಿ ವರ್ಷಗಳಿಂದ ಭೂಮಿ ತನ್ನೊಡಲಿ ನಲ್ಲಿ ಸಂಗ್ರಹಿಸಿಟ್ಟಿದ್ದ ಖನಿಜಗಳು, ಅನಿಲಗಳು ಕೆಲವು ದಶಕಗಳ ಅವಧಿಯಲ್ಲಿ ಬಟ್ಟ ಬಯಲಾಗಿವೆ. ಪಟ್ಟಣಗಳ ವಿಸ್ತರಣೆಯು ನಿಸರ್ಗದತ್ತ ಮಳೆಕಾಡುಗಳನ್ನು ಮುಗಿಸಿದೆ. ಆರೋಗ್ಯಕ್ಕೆ ಮಾರಕವಾಗುವ ಪೆಟ್ರೋಲಿಯಂ ಬಳಕೆಗೆ ಅಂಟಿಕೊಂಡಿರುವ ದೈನಂದಿನ ಬದುಕು ಒಂದು ದಿನ ಆ ಸೌಲಭ್ಯ ಇಲ್ಲವೇ ಇಲ್ಲ ಎಂದಾದಾಗ ಏನು ಮಾಡಬಹುದೆಂಬುದು ಊಹೆಗೇ ಅತೀತವಾಗಿದೆ. ಇಂಥ ಸಂದರ್ಭ ಬಂದಾಗ, ಶರೀರದಿಂದ ಹೊರ ಬೀಳುವ ತ್ಯಾಜ್ಯವೇ ಅನಿಲ ಮೊದಲಾಗಿ ಪರಿವರ್ತಿತವಾಗಿ ಬದುಕನ್ನು ಮುನ್ನಡೆಸಲಿರುವ ವ್ಯಾಪಕ ಸಾಧ್ಯತೆಯನ್ನು ವೈಜ್ಞಾನಿಕ ಜಗತ್ತು ನಮ್ಮ ಮುಂದಿಟ್ಟಿದೆ. ಎಲ್ಲ ಹೇಸಿಗೆ, ಜುಗುಪ್ಸೆಗಳನ್ನೂ ಬದಿಗೊತ್ತಿ ಅದನ್ನು ಸ್ವಾಗತಿಸಲು ನಾವು ಸಿದ್ಧರಾಗಲೇಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT