ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಹರಿಯಲಿ ಚಿತ್ತ ಸರ್ಕಾರಿ ಶಾಲೆಯತ್ತ

ಬಡವರಿಗೆ ನೆರವಾಗಲು ದಾನಿಗಳ ನಡುವೆ ಈಗ ಕಂಡುಬಂದಿರುವ ಪೈಪೋಟಿ, ಸರ್ಕಾರಿ ಶಾಲೆಗಳನ್ನು ಉಳಿಸುವ ವಿಷಯದಲ್ಲೂ ಕಾಣುವಂತೆ ಆಗಲಿ
Last Updated 19 ಮೇ 2020, 21:28 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಕಾಟದಿಂದ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಇದರ ಪರಿಣಾಮ ಕನ್ನಡ ಶಾಲೆಗಳ ಮೇಲೂ ಆಗಿದೆ. ಮೊದಲೇ ಸೊರಗಿಹೋಗಿದ್ದ ಸರ್ಕಾರಿ ಶಾಲೆಗಳು ಈಗ ಇನ್ನಷ್ಟು ಸಂಕಟಕ್ಕೆ ಈಡಾಗಿವೆ. ಈಗ ನಾವು ಮೈಮರೆತರೆ ಈ ಶಾಲೆಗಳು ಸಂಪೂರ್ಣ ಮಾಯವಾಗುತ್ತವೆ. ಕನ್ನಡ ಶಾಲೆಗಳು ಮಾಯವಾದರೆ ಕನ್ನಡವೂ ಮಾಯವಾಗಲು ಬಹಳ ದಿನ ಬೇಕಾಗುವುದಿಲ್ಲ.

ಬಹಳಷ್ಟು ಶ್ರೀಮಂತರು ಕೊರೊನಾ ಕಾಲದಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಪೈಪೋಟಿ ಮೇಲೆ ನೆರವಾಗುತ್ತಿದ್ದಾರೆ. ಈ ಪೈಪೋಟಿ ಸರ್ಕಾರಿ ಶಾಲೆಗಳನ್ನು ಉಳಿಸುವಲ್ಲಿಯೂ ಬೆಳೆಸುವಲ್ಲಿಯೂ ಕಾಣುವಂತೆ ಆಗಬೇಕು. ಸರ್ಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವತ್ತಲೂ ದಾನಿಗಳ ದೃಷ್ಟಿ ಹರಿಯಬೇಕು.

ರಾಜ್ಯ ಸರ್ಕಾರಕ್ಕೆ ಈಗ ಶಿಕ್ಷಕರಿಗೆ ಸಂಬಳ ನೀಡುವುದೇ ಕಷ್ಟವಾಗಿರುವಾಗ, ಇತರ ಸೌಲಭ್ಯ ಒದಗಿಸುವುದು ಕಷ್ಟದ ಮಾತು. ಸರ್ಕಾರಿ ಶಾಲೆಗಳನ್ನು ಉಳಿಸಲು ರಾಜ್ಯ ಸರ್ಕಾರ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಆದರೆ, ಸರ್ಕಾರದ ಕ್ರಮ ರಾಕ್ಷಸನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತೆ ಆಗಿದೆ. ಬಡವರ ಮಕ್ಕಳಿಗೆ ನೆರವಾಗಲೆಂದು ಜಾರಿಗೆ ತಂದ ಆರ್‌ಟಿಇ ಕೂಡ ನಿರೀಕ್ಷಿತ ಮಟ್ಟದಲ್ಲಿ ಉಪಯೋಗ ಆಗಿಲ್ಲ. ‘ಸರ್ಕಾರಿ ಶಾಲೆಗಳನ್ನು ಉಳಿಸಲು ಕೈಜೋಡಿಸಿ’ ಎಂದು ರಾಜ್ಯ ಸರ್ಕಾರ ಮನವಿ ಮಾಡಿಕೊಂಡರೆ ಸಾಲದು. ದಾನಿಗಳು ನೆರವಿಗೆ ಬರುವಂತೆ ಅಗತ್ಯ ಶಾಸನಬದ್ಧ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ.

ಈಗೊಂದು ಸಣ್ಣ ಲೆಕ್ಕಾಚಾರ ಮಾಡೋಣ. ನಮ್ಮ ವಿಧಾನಸಭೆಯಲ್ಲಿ 224 ಮಂದಿ ಚುನಾಯಿತ ಸದಸ್ಯರಿದ್ದಾರೆ. ಒಬ್ಬ ನಾಮನಿರ್ದೇಶಿತ ಸದಸ್ಯ ಇದ್ದಾರೆ. ಪ್ರತಿಯೊಬ್ಬ ಶಾಸಕರೂ ತಲಾ 3 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸಿದರೆ, 5 ವರ್ಷದ ಅವಧಿಯಲ್ಲಿ 675 ಶಾಲೆಗಳು ಅಭಿವೃದ್ಧಿಯಾಗುತ್ತವೆ. ಜೊತೆಗೆ ವಿಧಾನ ಪರಿಷತ್ ಸದಸ್ಯರೂ ಕೈಜೋಡಿಸಿದರೆ ಇನ್ನೂ 225 ಶಾಲೆಗಳಿಗೆ ಅಭಿವೃದ್ಧಿ ಭಾಗ್ಯ ಸಿಗುತ್ತದೆ. ಇದನ್ನು ಬೇಕಾದರೆ ಶಾಸನಬದ್ಧವಾಗಿಯೇ ಮಾಡಬಹುದು. ನಮ್ಮ ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು ತಮ್ಮ ಕ್ಷೇತ್ರದ ತಲಾ 10 ಶಾಲೆಗಳನ್ನು ದತ್ತು ಪಡೆದುಕೊಂಡರೆ ಇನ್ನೂ 320 ಶಾಲೆಗಳಿಗೆ ಹೊಸ ರೂಪ ಬರುತ್ತದೆ. ಅಂದರೆ ಐದು ವರ್ಷಗಳಲ್ಲಿ ಸರ್ಕಾರದ ಅನುದಾನ ಇಲ್ಲದೆ 1,220 ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು. ಇದಕ್ಕೆ ಶಾಸಕರು, ಸಂಸದರು ಸ್ವಯಂ ಇಚ್ಛೆಯಿಂದ ಮುಂದೆ ಬರಬೇಕು. ಸ್ವಂತ ಹಣವನ್ನು ವೆಚ್ಚ ಮಾಡಬೇಕು.

ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳೂ ತಮ್ಮ ವ್ಯಾಪ್ತಿಯಲ್ಲಿ ತಲಾ ಇಂತಿಷ್ಟು ಶಾಲೆಗಳನ್ನು ದತ್ತು ಪಡೆಯಬೇಕು. ಖಾಸಗಿ ವಿಶ್ವವಿದ್ಯಾಲಯಗಳೂ ಡೀಮ್ಡ್ ವಿಶ್ವವಿದ್ಯಾಲಯಗಳೂ ಈ ಕಾರ್ಯಕ್ಕೆ ಮುಂದಾಗಬೇಕು. ಹೀಗೆ ಮಾಡಿದಾಗ ಮಾತ್ರ ಅವರು ಈ ನೆಲ, ಜಲ, ಸಮಾಜದ ಋಣವನ್ನು ತೀರಿಸಲು ಸಾಧ್ಯ.

ರಾಜ್ಯ ಸರ್ಕಾರ ಇನ್ನು ಮುಂದೆ ಯಾವುದೇ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜಿಗೆ ಅನುಮತಿ ನೀಡುವಾಗ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವುದನ್ನು ಕಡ್ಡಾಯ ಮಾಡಬೇಕು. ಈಗಿರುವ ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜುಗಳೂ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಅನುವಾಗುವಂತೆ ಸೂಕ್ತ ನಿಯಮಾವಳಿ ರೂಪಿಸಬೇಕು.

ಶ್ರೀಮಂತರು ಮತ್ತು ಬಡವರಿಗೆ ಏಕರೂಪದ ಶಿಕ್ಷಣ ಸಿಗುವಂತೆ ಮಾಡಲು ಕೆಲವು ಕಠಿಣ ಕ್ರಮ ಕೈಗೊಳ್ಳುವುದರಲ್ಲಿ ಸರ್ಕಾರ ಹಿಂದೆ ಬೀಳಬಾರದು. ಇದರ ಜೊತೆಗೆ ಕಾರ್ಪೊರೇಟ್ ಕಂಪನಿಗಳು, ಇತರ ಉದ್ದಿಮೆಗಳು, ಸಮಾಜ ಸೇವಾ ಸಂಸ್ಥೆಗಳನ್ನೂ ಬಳಸಿಕೊಳ್ಳಬೇಕು. ಉದ್ಯಮ ಆರಂಭಕ್ಕೆ ಅನುಮತಿ ನೀಡುವಾಗ ಉದ್ದಿಮೆದಾರರಿಗೆ ಕೆಲವು ರಿಯಾಯಿತಿಗಳನ್ನು ರಾಜ್ಯ ಸರ್ಕಾರ ನೀಡುತ್ತದೆ. ಆದರೆ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ಒಂದು ಸಣ್ಣ ಷರತ್ತನ್ನೂ ಸರ್ಕಾರ ವಿಧಿಸಬಹುದು. ಇಡೀ ಶಾಲೆಯನ್ನು ದತ್ತುಪಡೆಯಲು ಸಾಧ್ಯವಾಗದೇ ಇದ್ದರೆ ಕೊಠಡಿಗಳ ನಿರ್ಮಾಣ, ಶೌಚಾಲಯ, ಗಣಕಯಂತ್ರ, ಗ್ರಂಥಾಲಯ, ಪ್ರಯೋಗಾಲಯ, ಕಾಂಪೌಂಡ್, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯಗಳ ನಿರ್ಮಾಣದತ್ತಲೂ ಅವರ ಗಮನವನ್ನು ಸೆಳೆಯಬಹುದು.

ದಾನಿಗಳು ತಮಗೆ ಇಷ್ಟವಾದ ಹಂತ ಮತ್ತು ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಅಥವಾ ರಾಜ್ಯದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ, ಪ್ರಕೃತಿ ವಿಕೋಪದಿಂದ ನಲುಗಿದ ಸಾಮಾಜಿಕ ಅಸಮಾನತೆಗೆ ಒಳಗಾದ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇಂತಹ ವ್ಯವಸ್ಥೆ ಜಾರಿಗೆ ಬಂದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ, ಕನ್ನಡವೂ ಉಳಿಯುತ್ತದೆ.

ಲೇಖಕ: ರಾಜ್ಯ ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT