ಮಂಗಳವಾರ, ಜೂನ್ 2, 2020
27 °C
ಕೊಳ್ಳುಬಾಕನೆಂಬ ರಾಕ್ಷಸನನ್ನು ಮುನ್ನೆಲೆಗೆ ತರಲು ಯತ್ನಿಸುತ್ತಿರುವ ಅಮೆರಿಕ ಮತ್ತು ಚೀನಾದ ಧೋರಣೆಯು ಮಹಾವಿಕೃತಿಯಂತೆ ಭಾಸವಾಗುತ್ತಿದೆ

ಹೃದಯವಿಲ್ಲದ ‘ಮಹಾ’ ವ್ಯಾಪಾರಿಗಳು

ನೆಂಪೆ ದೇವರಾಜ್ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಎಂಬ ವೈರಾಣು ಒಂದೊಂದೇ ಭೂಪ್ರದೇಶವನ್ನು ಆಕ್ರಮಿಸುತ್ತಿರುವ ರೀತಿಗೆ ಭೂಮಂಡಲವೇ ತತ್ತರಿಸಿದೆ. ದೇಶ– ದೇಶಗಳ ನಡುವಿನ ಹಮ್ಮು ಬಿಮ್ಮುಗಳೆಲ್ಲ ಮೂಲೆಯಲ್ಲಿ ಕುಳಿತು ನರಳುತ್ತಿವೆ ಎಂಬ ವಾದ ಒಂದೆಡೆಯಾದರೆ, ಅಮೆರಿಕ, ಚೀನಾ ಎಂಬ ದೇಶಗಳು ಈ ಮಹಾಸಂಕಟದ ಸಂದರ್ಭದಲ್ಲೂ ಕೊಳ್ಳುಬಾಕನೆಂಬ ರಾಕ್ಷಸನನ್ನು ಮುನ್ನೆಲೆಗೆ ತರಲು ನಡೆಸುತ್ತಿರುವ ಪೈಪೋಟಿ ಮತ್ತೊಂದೆಡೆ.

ಈ ದೇಶಗಳ ಹೃದಯವನ್ನು ಹೊಕ್ಕಿರುವ ವ್ಯಾಪಾರಿ ಮನೋಭಾವವು ಮನುಷ್ಯತ್ವವನ್ನೇ ಹೊಸಕಿ ಹಾಕುವ ಶಕ್ತಿಯುಳ್ಳದ್ದು. ಚೀನಾದ ವುಹಾನ್ ನಗರದಲ್ಲಿ ಸತ್ತವರು ಮನುಷ್ಯರೇ ಅಲ್ಲ ಎನ್ನುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಭಾಷಣಗಳಲ್ಲಿ ಬಿಂಬಿಸಿರುವುದು ಇದಕ್ಕೆ ಸ್ಪಷ್ಟ ಉದಾಹರಣೆ. ಕೊರೊನಾವನ್ನು ‘ಚೀನಾ ವೈರಸ್ಸು’ ಎಂದು ಪದೇಪದೇ ಹೇಳುವ ಟ್ರಂಪ್ ಮನಃಸ್ಥಿತಿಯಲ್ಲಿ ಕಳೆದ ಶತಮಾನದ ‘ನಾಜಿ ಇಸಂ’ನ ಜನಾಂಗೀಯವಾದದ ಮುಂದುವರಿದ ಭಾಗವು ಕಾಣಿಸದೇ ಇರದು.

ಹಾಗೆಯೇ ತನ್ನ ನೆಲದಲ್ಲಿ ಪ್ರಪ್ರಥಮ ಬಾರಿಗೆ ಕಾಣಿಸಿಕೊಂಡ ವೈರಸ್ಸು ಪ್ರಪಂಚದಾದ್ಯಂತ ಎಬ್ಬಿಸಿದ ಆತಂಕ, ಜೀವಹಾನಿ ಗೊತ್ತಿದ್ದೂ ವಿಶ್ವ ಆರೋಗ್ಯ ಸಂಸ್ಥೆಗೆ (ಡಬ್ಲ್ಯುಎಚ್‌ಒ) ತಪ್ಪು ಮಾಹಿತಿ ಕೊಟ್ಟು, ನಿಜ ಮರೆ ಮಾಚುವುದರಲ್ಲಿ ಅಡಗಿರುವ ಚೀನಾದ ವ್ಯಾಪಾರಿ ದುರ್ಬುದ್ಧಿಯನ್ನು ಯಾಕಾಗಿ ಕ್ಷಮಿಸಬೇಕೆಂದೂ ಕೇಳಬೇಕಲ್ಲವೇ? ಆಫ್ರಿಕಾದ ಕಗ್ಗಾಡಿನಲ್ಲಿ ಹುಟ್ಟಿದ ‘ಎಬೋಲಾ’ ಎಂಬ ಮಾರಣಾಂತಿಕ ಕಾಯಿಲೆಯು 2014ರಲ್ಲಿ ಸೀಮಿತ ಪ್ರದೇಶವನ್ನು ಆವರಿಸಿದ ಕೆಲವೇ ದಿನಗಳಲ್ಲಿ ಅದನ್ನು ‘ಮಹಾಮಾರಿ’ (ಪ್ಯಾಂಡೆಮಿಕ್) ಎಂದು ಘೋಷಿಸುವಂತೆ ಡಬ್ಲ್ಯುಎಚ್‌ಒ ಮೇಲೆ ಒತ್ತಡ ಹೇರಿ ಯಶಸ್ವಿಯಾಗುತ್ತದೆ ಚೀನಾ. ಆದರೆ ಇಡೀ ವಿಶ್ವಕ್ಕೆ ವ್ಯಾಪಿಸಿರುವ ಕೊರೊನಾ–2 ವೈರಸ್ಸನ್ನು ಪ್ಯಾಂಡೆಮಿಕ್ ಎಂದು ಘೋಷಿಸುವುದಕ್ಕೆ ಎರಡು ತಿಂಗಳ ಕಾಲ ಡಬ್ಲ್ಯುಎಚ್‌ಒಗೆ ತಡೆಯೊಡ್ಡಿದ ಇದೇ ಚೀನಾ ತನ್ನ ತಪ್ಪಿಗೆ ಪಶ್ಚಾತ್ತಾಪ ಪಡಲೇಬೇಕಲ್ಲವೇ?

ತನ್ನಲ್ಲಿ ಕೊರೊನಾ ಸೋಂಕು ಕಡಿಮೆಯಾದ ಕೂಡಲೇ ಚೀನಾ, ತಾನು ಅದರಿಂದ ಹೊರಬರಲು ಕಾರಣವಾದ ವಿಧಾನಗಳನ್ನು ವಿಶ್ವದ ಜೊತೆ ಹಂಚಿಕೊಳ್ಳಬೇಕಿತ್ತು. ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಎಲ್ಲ ಅವಕಾಶಗಳೂ ಅದಕ್ಕೆ ಇದ್ದವು. ಕಾಯಿಲೆ ಉಂಟುಮಾಡುತ್ತಿರುವ ಅಂತಿಮಯಾತ್ರೆಯ ಕಠೋರ ಕನಸಿನಲ್ಲಿ ಏದುಸಿರು ಬಿಡುತ್ತಿರುವ ಇಟಲಿ, ಸ್ಪೇನ್‌, ಅಮೆರಿಕದ ನೆರವಿಗೆ ಧಾವಿಸಬೇಕಿತ್ತು. ಆದರೆ ಚೀನಾ ಹಾಗೆ ಮಾಡದೆ, ಮಹಾಮಾರಿಯನ್ನು ತಹಬಂದಿಗೆ ತರಲು ತಾನು ಉಪಯೋಗಿಸಿದ ತಂತ್ರಗಳನ್ನೆಲ್ಲ ಅಂತರರಾಷ್ಟ್ರೀಯ ವ್ಯಾಪಾರ ವೃದ್ಧಿಗೆ ಬಳಸತೊಡಗಿತು.

ಕೋಟ್ಯಂತರ ಗ್ಲೌಸ್, ಮಾಸ್ಕ್, ವೆಂಟಿಲೇಟರ್, ಸ್ಯಾನಿಟೈಸರುಗಳನ್ನು ಯುರೋಪಿನ ದೇಶಗಳಿಗೆ ರಫ್ತು ಮಾಡುವ ಯೋಜನೆ ಹೆಣೆಯಿತು. ಅದರಂತೆ, ಸ್ಪೇನ್‌, ನೆದರ್ಲೆಂಡ್ಸ್‌, ಜರ್ಮನಿಯಂತಹ ರಾಷ್ಟ್ರಗಳು ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡವು. ಈ ಒಪ್ಪಂದವು ಚೀನಾದ ಜೇಬನ್ನು ಭರಪೂರ ತುಂಬಿಸುವುದನ್ನು ನೋಡಿಯೂ ನೋಡದಂತೆ ಸುಮ್ಮನಿದ್ದೀತೇ ಅಮೆರಿಕವೆಂಬ ದೇಶ!

ಮೇಲ್ಕಂಡ ದೇಶಗಳ ಮೇಲೆ ಹೊಂದಿರುವ ಹಿಡಿತದಲ್ಲಾಗುವ ಸಣ್ಣ ಬಿರುಕನ್ನೂ ಸಹಿಸಿಕೊಳ್ಳದ ಅಮೆರಿಕವು ಚೀನಾದ ಈ ಪರಿಕರಗಳು ಗುಣಮಟ್ಟದವಲ್ಲ ಎಂದು ಈ ದೇಶಗಳ ಮೂಲಕ ಹೇಳಿಸಿ, ಸ್ಪೇನ್‌, ಇಟಲಿ, ನಾರ್ವೆಯು ಇಡೀ ಒಪ್ಪಂದವನ್ನೇ ತಿರಸ್ಕರಿಸುವಂತೆ ಮಾಡುತ್ತದೆ.

ಅಮೆರಿಕವನ್ನು ಇಲ್ಲಿಯವರೆಗೆ ಯಾವ ಪೆಟ್ರೋಲಾಗಲೀ, ಇಸಂ ಆಗಲೀ, ಧರ್ಮವಾಗಲೀ ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದರೀಗ ಬರಿಗಣ್ಣಿಗೆ ಕಾಣಸಿಗದ ವೈರಾಣುವೊಂದು ಅಮೆರಿಕದ ಆರ್ಥಿಕ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ದೌರ್ಬಲ್ಯಗಳನ್ನು ಹೊರಹಾಕುತ್ತಲೇ ಹೋಗುತ್ತಿದೆ. ಹಲ್ಲು ನೋವೆಂದು ಸಣ್ಣ ಆಸ್ಪತ್ರೆಗೆ ಹೋದರೂ ಲಕ್ಷಾಂತರ ಡಾಲರು ಪೀಕುವ ಅಲ್ಲಿನ ಆರೋಗ್ಯ ವ್ಯವಸ್ಥೆಯಲ್ಲಿ ಮೂಲಭೂತವಾಗಿ ಇರಲೇಬೇಕಾಗಿರುವ ಸಲಕರಣೆಗಳೇ ಇಲ್ಲದಿರುವುದನ್ನು ಜಗತ್ತಿಗೆ ತಿಳಿಸಲು ಕೊರೊನಾವೆಂಬ ವೈರಾಣು ಬರಬೇಕಾಗಿದ್ದು ವಿಪರ್ಯಾಸವೇ ಸರಿ.

ಇಡೀ ನ್ಯೂಯಾರ್ಕ್ ನಗರವೇ ಬಹುದೊಡ್ಡ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಈ ಗಳಿಗೆಯಲ್ಲೂ ಅಮೆರಿಕ ತನ್ನ ಮಾನವೀಯತೆಯ ಮುಖವಾಡವನ್ನು ಇರಾನಿನಂತಹ ಕೊರೊನಾಪೀಡಿತ ದೇಶಕ್ಕೆ ತೋರಿಸಹೋಗುತ್ತದೆ. ತನ್ನ ಜನರಿಗೆ ಅಮೆರಿಕದ ಔಷಧೋಪಚಾರದ ನೆರವಿನ ಅಗತ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಇರಾನ್ ಹೇಳುತ್ತದೆ. ‘ಇರಾನಿನ ಜನರ ಪ್ರಾಣದ ಬಗ್ಗೆ ಕಳಕಳಿ ಇರುವುದು ನಿಜವಾದರೆ ಸೋಂಕುಪೀಡಿತರಿಗೆ ವೈದ್ಯಕೀಯ ನೆರವು ನೀಡುವುದಕ್ಕಿಂತ, ನಮ್ಮ ವಿರುದ್ಧ ಹಾಕಿರುವ ಆರ್ಥಿಕ ದಿಗ್ಬಂಧನವನ್ನು ಮೊದಲು ತೆರವುಗೊಳಿಸಲಿ’ ಎಂದು ಹೇಳುವ ಮೂಲಕ ಇರಾನ್, ದೈತ್ಯನ ಬುಡಕ್ಕೇ ಬತ್ತಿ ಇಡತೊಡಗುತ್ತದೆ. ಒಮ್ಮೆ ಆರ್ಥಿಕ ದಿಗ್ಬಂಧನ ತೆರವುಗೊಂಡರೆ ಈ ಇರಾನ್ ಎಂಬ, ಸ್ವಾವಲಂಬನೆ ಸಾಧಿಸಿರುವ ಏಕೈಕ ಕೊಲ್ಲಿ ರಾಷ್ಟ್ರವು ಚೀನಾದ ತೆಕ್ಕೆಯೊಳಕ್ಕೆ ಸೇರಿಕೊಳ್ಳುತ್ತದೆಂಬ ಭಯ ಅಮೆರಿಕಕ್ಕೆ ಇದ್ದೇ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು