ಶನಿವಾರ, ಸೆಪ್ಟೆಂಬರ್ 26, 2020
22 °C
ಕೋವಿಡ್ ರೋಗಿಗಳ ಸೇವೆ ಮಾಡುವಾಗ ವೈದ್ಯರ ಮೇಲೆ ಎಷ್ಟು ಒತ್ತಡವಿರುತ್ತದೆ ಎಂಬುದನ್ನು ಸಾರ್ವಜನಿಕರು ಅರಿಯಬೇಕಾಗಿದೆ

ಸಂಗತ | ವೈದ್ಯ ವೃತ್ತಿ; ಮಿಥ್ಯಾರೋಪ ನಿವಾರಿಸೋಣ

ಡಾ. ಕೆ.ಆರ್.ಶ್ರೀಧರ್ Updated:

ಅಕ್ಷರ ಗಾತ್ರ : | |

Prajavani

‘ಲ್ಯಾನ್ಸೆಟ್’ ಎಂಬುದು ಇಂಗ್ಲಿಷ್‌ ಭಾಷೆಯಲ್ಲಿನ ವೈದ್ಯಕೀಯ ಮಾಸಪತ್ರಿಕೆ. ಕೋವಿಡ್– 19ರ ಈ ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕಿಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಸಾರ್ವಜನಿಕರಿಂದ ಆಗುತ್ತಿರುವ ಹಲ್ಲೆ ಹಾಗೂ ಮಿಥ್ಯಾರೋಪಗಳ ಬಗ್ಗೆ ಅದರ ಸಂಪಾದಕರು ಬರೆದಿದ್ದಾರೆ. ಅವರ ಪ್ರಕಾರ, ವೈದ್ಯಕೀಯ ಸೇವೆ ಸಲ್ಲಿಸುವವರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ನಡೆಯುವ ಹಲ್ಲೆ ಹಾಗೂ ಮಿಥ್ಯಾರೋಪಗಳು ಜಗತ್ತಿನಾದ್ಯಂತ ಜರುಗುತ್ತಿವೆಯಾದರೂ ಭಾರತದಲ್ಲಿ ಇಂತಹ ಪ್ರಕರಣಗಳು ಎಲ್ಲೆಡೆಗಿಂತ ಹೆಚ್ಚು.

ಕಳೆದ ನಾಲ್ಕು ತಿಂಗಳುಗಳಲ್ಲಿ ದೇಶದಾದ್ಯಂತ ವೈದ್ಯರು, ದಾದಿಯರು ಮತ್ತು ಆಶಾ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಗಳು ಇಲ್ಲಿ ಉಲ್ಲೇಖನೀಯ. ಎರಡು ವಾರಗಳ ಹಿಂದೆ ಬೆಳಗಾವಿಯಲ್ಲಿ ಸುಮಾರು 65 ವರ್ಷದ ವೃದ್ಧರೊಬ್ಬರು ಕೋವಿಡ್ ಸೋಂಕಿಗೆ ಒಳಗಾದರು. ಅವರು ಮಧುಮೇಹ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅಸುನೀಗಿದರು. ಆದರೆ ರೋಗಿಯ ಕಡೆಯವರು, ರೋಗಿಯು ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾದರೆಂದು ಆರೋಪಿಸಿ ವೈದ್ಯರ ಮೇಲೆ ಹಲ್ಲೆ ನಡೆಸಿದರು.

ಕೆಲವೆಡೆ, ಕೋವಿಡ್‌ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಆಂಬುಲೆನ್ಸ್‌ನಲ್ಲಿ ಕರೆತರಲು ಅವರ ಮನೆಗೆ ಹೋದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದಿವೆ. ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣವು ಜನಮಾನಸದಲ್ಲಿ ಇನ್ನೂ ಹಸಿಯಾಗಿದೆ. ವೈದ್ಯರನ್ನು ದೂಷಿಸಿರುವುದು, ಅವರ ಮೈಮೇಲೆ ಉಗುಳಿದಂತಹ, ಅವರನ್ನು ವಾರ್ಡಿನಲ್ಲಿ ಕೂಡಿ ಹಾಕಿದಂತಹ ಪ್ರಕರಣಗಳು ಸಹ ವರದಿಯಾಗಿವೆ.

ಇಂತಹ ಪ್ರಕರಣಗಳು ಹೆಚ್ಚಾದಾಗ, ಆರೋಗ್ಯ ಸೇವಕರು ಇದನ್ನು ಸರ್ಕಾರದ ಗಮನಕ್ಕೆ ತಂದರು. ಆಗ ಕೇಂದ್ರ ಸರ್ಕಾರವು ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಅನುವಾಗುವಂತೆ ಕಾನೂನನ್ನು ಜಾರಿಗೊಳಿಸಿತು. ಆದರೆ ಹಲ್ಲೆ ಪ್ರಕರಣಗಳು ಇಂದಿಗೂ ಜರುಗುತ್ತಲೇ ಇವೆ. ಇದಕ್ಕೆ ಕಾರಣ, ಹೀಗೆ ಹಲ್ಲೆ ನಡೆಸಿದವರು ವಕೀಲರ ಸಹಾಯದಿಂದ ತಪ್ಪಿಸಿಕೊಳ್ಳುವ ಜಾಣತನ ತೋರುತ್ತಿರುವುದು.

ಕೋವಿಡ್ ಕೇರ್ ವಾರ್ಡ್‌ಗಳಲ್ಲಿ ರೋಗಿಗೆ ಚಿಕಿತ್ಸೆ ನೀಡುವುದು ಬೇರೆಡೆ ಇತರ ರೋಗಿಗಳಿಗೆ ಚಿಕಿತ್ಸೆ ನೀಡಿದಂತೆಯೇ ಎಂಬ ಮನೋಭಾವ ಸಾರ್ವಜನಿಕರಲ್ಲಿದೆ. ಕೋವಿಡ್ ರೋಗಿಗಳ ಸೇವೆ ಮಾಡುವಾಗ ವೈದ್ಯರಿಗೆ ಎಷ್ಟು ಒತ್ತಡವಿರುತ್ತದೆ ಎಂಬ ಅರಿವು ಇವರಿಗೆ ಇರುವುದಿಲ್ಲ. ಇಂತಹ ವೈದ್ಯರು ಮೊದಲಿಗೆ ವಿಶೇಷ ಪೋಷಾಕು, ಅಂದರೆ ವೈಯಕ್ತಿಕ ರಕ್ಷಾ ಕವಚವಾದ ಪಿಪಿಇ ಧರಿಸಬೇಕು. ಪಿಪಿಇ ಧರಿಸಿದ ವ್ಯಕ್ತಿಯು ಅದನ್ನು ಕೇವಲ ಆರರಿಂದ ಎಂಟು ಗಂಟೆ ಕಾಲ ಧರಿಸಬಹುದು. ಅದಕ್ಕಿಂತ ಹೆಚ್ಚಿನ ಅವಧಿಗೆ ಧರಿಸುವುದು ಕಷ್ಟಸಾಧ್ಯ.

ಒಮ್ಮೆ ಪಿಪಿಇ ಧರಿಸಿದರೆ ಮೂತ್ರ ವಿಸರ್ಜನೆ ಮಾಡುವ ಹಾಗಿಲ್ಲ. ನೀರು ಬೇಕೆಂದರೂ ಕುಡಿಯುವುದು ಕಷ್ಟ. ಕೊರೊನಾ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ದಾದಿಯರು ಎಷ್ಟೋ ವೇಳೆ ದಿನಕ್ಕೆ ಹದಿನೈದರಿಂದ ಹದಿನೆಂಟು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ, ಈ ಸಂದರ್ಭದಲ್ಲಿ ಅವರಿಗೆ ಆಗುವ ಸುಸ್ತನ್ನು ಊಹಿಸುವುದೂ ಅಸಾಧ್ಯ.

ಕೋವಿಡ್ ರೋಗಿಗಳಿಗೆ ಸೇವೆ ಸಲ್ಲಿಸುವ ವೈದ್ಯರು ಮತ್ತು ದಾದಿಯರು ಒಂದು ವಾರ, ಕೆಲವು ವೇಳೆ ಎರಡು ವಾರಗಳು ಕುಟುಂಬದಿಂದ ದೂರ ಇರಬೇಕಾಗುತ್ತದೆ. ಹೀಗೆ ಒಂಟಿತನ ಅನುಭವಿಸುವ ಅವರನ್ನು, ತಮಗೆ ಎಲ್ಲಿ ಕೊರೊನಾ ವೈರಾಣುವಿನ ಸೋಂಕುಂಟಾಗುವುದೋ ಎಂಬ ಆತಂಕ, ಭಯ ನಿರಂತರವಾಗಿ ಕಾಡುತ್ತಿರುತ್ತದೆ. ಇದರಿಂದ ಕೊರೊನಾ ಸೇವಾನಿರತ ವೈದ್ಯರ ಕುಟುಂಬಕ್ಕೂ ಆತಂಕ, ಭಯ ಇದ್ದದ್ದೇ. ಒಟ್ಟಿನಲ್ಲಿ, ವೈದ್ಯರು, ದಾದಿಯರು ಮತ್ತು ಆರೋಗ್ಯ ಕಾರ್ಯಕರ್ತರು ಜೀವದ ಹಂಗು ತೊರೆದು ಕೋವಿಡ್‌ ರೋಗಿಗಳ ಸೇವೆ ಮಾಡುತ್ತಿರುತ್ತಾರೆ. ಇದು ಸಾರ್ವಜನಿಕರ ಗಮನಕ್ಕೆ ಹೆಚ್ಚಾಗಿ ಬರುವುದೇ ಇಲ್ಲ.

ಇನ್ನು ಕೊರೊನಾ ಸೋಂಕಿತರಲ್ಲಿ ವೈರಾಣುವಿನ ದುಷ್ಪರಿಣಾಮಗಳು ಯಾವಾಗ ತೀವ್ರಗೊಳ್ಳುತ್ತವೆ ಎಂಬುದನ್ನು ಊಹಿಸುವುದು ಸುಲಭವಲ್ಲ. ವೃದ್ಧರಲ್ಲಿ, ಮಧುಮೇಹ, ಮೂತ್ರಪಿಂಡದ ಸಮಸ್ಯೆ, ರಕ್ತದೊತ್ತಡ, ಕ್ಯಾನ್ಸರ್ ಅಥವಾ ಹೃದ್ರೋಗ ಇರುವವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಸಂಭವವಿದೆ. ಅದೇ ರೀತಿ, ಮದ್ಯಪಾನಿಗಳು ಮತ್ತು ಧೂಮಪಾನಿಗಳಲ್ಲೂ ರೋಗನಿರೋಧಕ ಶಕ್ತಿ ಕಡಿಮೆ ಇರುವ ಸಾಧ್ಯತೆ ಇದೆ. ಅಂತಹವರಿಗೆ ನೀಡುವ ಉತ್ತಮ ಚಿಕಿತ್ಸೆಯೂ ಕೆಲವೊಮ್ಮೆ ಫಲಿಸದೆ ಸೋಂಕು
ತೀವ್ರಗೊಳ್ಳಬಹುದು. ಅದಕ್ಕೆಲ್ಲ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗದು.

ಇಂತಹ ಹೆಚ್ಚಿನ ಸಂದರ್ಭಗಳಲ್ಲಿ ರೋಗಿಯ ಕಡೆಯವರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದು ಸಾಮಾನ್ಯ. ಈ ದಿಸೆಯಲ್ಲಿ ಜನಜಾಗೃತಿ ಮೂಡಿಸಬೇಕಾದ ಜರೂರಿದೆ. ಸ್ವಯಂಸೇವಾ ಸಂಸ್ಥೆಗಳು ಕರಪತ್ರಗಳ ಮೂಲಕ ಮೇಲಿನ ಅಂಶಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು. ಆಗ ಇಂತಹ ಪ್ರಕರಣಗಳಿಗೆ ಪರಿಹಾರ ಸಾಧ್ಯ.

ಲೇಖಕ: ಮನೋವೈದ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು