ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕ ಜಾಗೃತಿ: ಇರಲಿ ಮಾಹಿತಿ

Last Updated 14 ಮಾರ್ಚ್ 2019, 20:04 IST
ಅಕ್ಷರ ಗಾತ್ರ

ಗ್ರಾಹಕರ ಹಕ್ಕು ಮತ್ತು ಸುರಕ್ಷತೆಯ ಸಲುವಾಗಿ ಪ್ರತಿವರ್ಷ ಮಾರ್ಚ್ ಹದಿನೈದರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಡಿಸೆಂಬರ್ 24ರಂದು ರಾಷ್ಟ್ರೀಯ ಗ್ರಾಹಕ ದಿನ ಆಚರಣೆಯಲ್ಲಿದೆ. ಆದರೆ, ಗ್ರಾಹಕರಿಗೆ ಸಂಬಂಧಪಟ್ಟ ಈ ದಿನಾಚರಣೆಗಳು ಕೇವಲ ತೋರಿಕೆಗೆ ಸೀಮಿತ ಆಗಿರುವುದು ಬೇಸರದ ಸಂಗತಿ.

ಈಚೆಗೆ ಒಂದಷ್ಟು ಗ್ರಾಹಕ ಜಾಗೃತಿ ಕಾರ್ಯಕ್ರಮಗಳು ನಡೆಯುವುದನ್ನು ಬಿಟ್ಟರೆ, ನಿಜಕ್ಕೂ ಗ್ರಾಹಕರಿಗೆ ತಲುಪಬೇಕಾದ ಮಾಹಿತಿ ಮತ್ತು ಎಚ್ಚರಿಕೆ ಇನ್ನೂ ತಲುಪುತ್ತಿಲ್ಲ ಎನ್ನುವುದು ನಿಜ. ಗ್ರಾಹಕರ ಸಂರಕ್ಷಣೆಯನ್ನು ಗುರಿಯಾಗಿ ಇರಿಸಿಕೊಂಡು ನೂರಾರು ಕಾನೂನುಗಳು, ನ್ಯಾಯಾಲಯಗಳು, ಸಂಘಗಳು ಸ್ಥಾಪಿತವಾಗಿವೆ. ಹೋರಾಟಗಳು ನಡೆದಿವೆ. ಆದರೂ ಗ್ರಾಹಕರ ಶೋಷಣೆ ನಿರಂತರವಾಗಿ ಮುಂದುವರಿದಿದೆ.

ಗ್ರಾಹಕರು ಸಾಮಾನ್ಯವಾಗಿ ಕಲಬೆರಕೆ, ಅವಧಿ ಮೀರಿದ ಉತ್ಪನ್ನಗಳು, ಕಾಳಸಂತೆ, ಅಗತ್ಯಕ್ಕಿಂತ ಅಧಿಕ ರಾಸಾಯನಿಕಗಳ ಬಳಕೆ, ಉತ್ಪ್ರೇಕ್ಷಿತ ಜಾಹೀರಾತುಗಳು, ನಕಲಿ ಉತ್ಪನ್ನಗಳು, ಅಕ್ರಮ ದಾಸ್ತಾನು ಇತ್ಯಾದಿಗಳ ಮೂಲಕ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಗ್ರಾಹಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿವಳಿಕೆಯ ಕೊರತೆ ಹಾಗೂ ಅವರು ಸಂಘಟಿತರಾಗದೇ ಇರುವುದು ಇಂತಹ ಶೋಷಣೆಗೆ ಕುಮ್ಮಕ್ಕು ನೀಡುತ್ತಿವೆ.

ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ತಾನು ಮೋಸ ಹೋದಾಗ ಅಥವಾ ಶೋಷಣೆಗೆ ಒಳಗಾದಾಗ ಏನು ಮಾಡಬೇಕು ಎನ್ನುವುದರ ಅರಿವು ಪ್ರತಿ ವ್ಯಕ್ತಿಯಲ್ಲೂ ಇರಬೇಕು. ಇಂತಹ ಶೋಷಣೆಗಳನ್ನು ತಡೆಗಟ್ಟಲೆಂದೇ ನಮ್ಮಲ್ಲಿ 1986ರಲ್ಲಿ ಜಾರಿಗೆ ತರಲಾದ ಗ್ರಾಹಕ ಸಂರಕ್ಷಣಾ ಕಾಯ್ದೆಯು ಗ್ರಾಹಕರಿಗೆ 6 ಹಕ್ಕುಗಳನ್ನು ನೀಡಿದೆ.

1. ಸುರಕ್ಷತೆಯ ಹಕ್ಕು: ಗ್ರಾಹಕರು ತಮ್ಮ ಆರೋಗ್ಯ ಅಥವಾ ಜೀವಕ್ಕೆ ಹಾನಿಯುಂಟು ಮಾಡುವ ಉತ್ಪನ್ನ ಅಥವಾ ನ್ಯೂನತೆಗಳನ್ನು ಒಳಗೊಂಡ ಉತ್ಪನ್ನಗಳಿಂದ ರಕ್ಷಣೆ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
2. ಮಾಹಿತಿ ಪಡೆಯುವ ಹಕ್ಕು: ಗ್ರಾಹಕರು ತಾವು ಖರೀದಿಸಲು ಇಚ್ಛಿಸುವ ಯಾವುದೇ ವಸ್ತುವಿನ ಬಗೆಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
3. ಆಯ್ಕೆಯ ಹಕ್ಕು: ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳನ್ನು ಮಾತ್ರ ಖರೀದಿಸುವ ಹಕ್ಕನ್ನು ಹೊಂದಿದ್ದಾರೆ.
4. ದೂರು ಸಲ್ಲಿಕೆಯ ಹಕ್ಕು: ಗ್ರಾಹಕರು ತಮಗಾದ ಶೋಷಣೆ ಅಥವಾ ಅನ್ಯಾಯದ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ.
5. ಕುಂದುಕೊರತೆ ನಿವಾರಣೆ ಹಕ್ಕು: ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಸೇವೆಯಲ್ಲಿ ನ್ಯೂನತೆಗಳಿದ್ದಲ್ಲಿ ಅದಕ್ಕೆ ತಕ್ಕ ಪರಿಹಾರ ಪಡೆಯುವ ಹಕ್ಕನ್ನು ಹೊಂದಿದ್ದಾರೆ.
6. ಗ್ರಾಹಕ ಶಿಕ್ಷಣದ ಹಕ್ಕು: ಗ್ರಾಹಕರು ತಮ್ಮ ಹಕ್ಕು ಮತ್ತು ಕಾನೂನುಗಳ ಬಗೆಗೆ ಹಾಗೂ ಖರೀದಿಯ ಸಂದರ್ಭದಲ್ಲಿ ವಸ್ತುಗಳ ಬಗೆಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ.

ಇದಲ್ಲದೆ ವಿಶ್ವಸಂಸ್ಥೆಯು ಗ್ರಾಹಕನಿಗೆ, ಮೂಲಭೂತ ಅವಶ್ಯಕತೆಗಳನ್ನು ಪಡೆಯುವ, ಮಾಲಿನ್ಯ ಮುಕ್ತ ಪರಿಸರ ಹೊಂದುವ ಹಕ್ಕುಗಳನ್ನು ನೀಡಿದೆ.

ಗ್ರಾಹಕರಿಗೆ ತಮ್ಮದೇ ಆದ ಜವಾಬ್ದಾರಿಗಳೂ ಇವೆ. ಮುಖ್ಯವಾಗಿ, ಅವರಿಗೆ ತಮ್ಮ ಹಕ್ಕುಗಳ ಬಗೆಗೆ, ವಸ್ತುಗಳ ಗುಣಮಟ್ಟದ ಬಗೆಗೆ ಅರಿವಿರಬೇಕು. ಉದಾಹರಣೆಗೆ, ಅಗ್‍ಮಾರ್ಕ್, ಐಎಸ್‍ಐ, ಹಾಲ್ ಮಾರ್ಕ್ ಇತ್ಯಾದಿಗಳ ಬಗೆಗೆ ತಿಳಿವಳಿಕೆ ಇರಬೇಕು. ಶೋಷಣೆಗೆ ಒಳಗಾದ ಸಂದರ್ಭದಲ್ಲಿ ದೂರು ನೀಡಲು ಸಿದ್ಧರಿರಬೇಕು. ಸಣ್ಣ ಮೊತ್ತ ಎನ್ನುವ ಕಾರಣಕ್ಕೆ ದೂರು ನೀಡದೇ ಇರಬಾರದು.

ಉತ್ಪ್ರೇಕ್ಷಿತ ಜಾಹೀರಾತುಗಳನ್ನು ನೋಡಿ ಮೋಸಹೋಗಬಾರದು. ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಸೀದಿ ಪಡೆದುಕೊಳ್ಳಬೇಕು. ವಸ್ತುಗಳನ್ನು ಎಚ್ಚರದಿಂದ ಪರಿಶೀಲಿಸಿ ಕೊಳ್ಳಬೇಕು. ಕಾಳಸಂತೆಯಲ್ಲಿನ ಅಥವಾ ನಕಲಿ ಪದಾರ್ಥಗಳನ್ನು ಕೊಳ್ಳಬಾರದು. ನೆನಪಿರಲಿ, ಅವಸರದಲ್ಲಿ ಖರೀದಿ ಒಳ್ಳೆಯದಲ್ಲ.

ಹತ್ತಿರದಲ್ಲಿನ ಗ್ರಾಹಕ ನ್ಯಾಯಾಲಯಗಳ ಬಗೆಗೆ ನಾವು ಮಾಹಿತಿ ಹೊಂದಿರಬೇಕು. ದೂರು ಕೊಡುವುದು ಹೇಗೆ ಎನ್ನುವ ಜಿಜ್ಞಾಸೆ ಬೇಕಾಗಿಲ್ಲ. ಗ್ರಾಹಕನ (ದೂರುದಾರ) ಹೆಸರು, ವಿಳಾಸ, ಕಕ್ಷಿದಾರನ ಹೆಸರು, ವಿಳಾಸ ಮತ್ತಿತರ ವಿವರಗಳು, ಖರೀದಿಸಿದ ವಸ್ತುವಿನ ನ್ಯೂನತೆಯ ಬಗೆಗೆ ಮಾಹಿತಿ, ದೂರಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅಪೇಕ್ಷಿಸುವ ಪರಿಹಾರದ ರೂಪ ಇತ್ಯಾದಿಗಳನ್ನು ಒಂದು ಖಾಲಿ ಹಾಳೆಯಲ್ಲಿ ವಿವರವಾಗಿ ಬರೆದು ದೂರು ನೀಡಿದರೆ ಸಾಕು.‌

ಗ್ರಾಹಕ ನ್ಯಾಯಾಲಯಗಳು ಗ್ರಾಹಕರಿಗೆ ಆದ ಅನ್ಯಾಯಗಳಿಗೆ, ಶೋಷಣೆಗಳಿಗೆ ಸೂಕ್ತ ಪರಿಹಾರ ಒದಗಿಸಿದ ಸಹಸ್ರಾರು ನಿದರ್ಶನಗಳಿವೆ. ಹಾಗಾಗಿ ವಸ್ತು ತಯಾರಿಕಾ ಅಥವಾ ಸೇವೆ ನೀಡುವ ಕಂಪನಿಗಳಿಂದ, ಮಾರಾಟಗಾರರಿಂದ ಅಥವಾ ಮಧ್ಯವರ್ತಿಗಳಿಂದ ನಮಗೆ ವಂಚನೆಯಾಗಿದೆ ಎನ್ನಿಸಿದರೆ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಬೇಕು. ನಮಗಾದ ಅನ್ಯಾಯದ ಬಗೆಗೆ, ಹೋದರೆ ಹೋಗಲಿ ಎಂದು ಉದಾಸೀನ ಮಾಡಿದರೆ ಅದು ಮಾರಾಟಗಾರರು ಮತ್ತಷ್ಟು ಗ್ರಾಹಕರನ್ನು ಶೋಷಿಸಲು ಅನುವು ಮಾಡಿಕೊಡುತ್ತದೆ ಎನ್ನುವುದು ನೆನಪಿರಲಿ.ಗ್ರಾಹಕರಿಗೆ ತಮ್ಮ ಹಕ್ಕುಗಳು, ವಸ್ತುಗಳ ಗುಣಮಟ್ಟದ ಬಗೆಗೆ ಅರಿವಿರದಿದ್ದರೆ, ನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇರಬೇಕಾಗುತ್ತದೆ.

ಲೇಖಕ: ವಾಣಿಜ್ಯಶಾಸ್ತ್ರ ಉಪನ್ಯಾಸಕ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು, ಗಂಗೊಳ್ಳಿ, ಕುಂದಾಪುರ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT