ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಒಡೆದಾಳುವವರಿಗೆ ದಲಿತರ ಉತ್ತರ

ವಿಕಾಸ್ ಮೌರ್ಯ ಅವರ ಲೇಖನ
Published 28 ಮೇ 2023, 22:31 IST
Last Updated 28 ಮೇ 2023, 22:31 IST
ಅಕ್ಷರ ಗಾತ್ರ

ವಿಕಾಸ್ ಮೌರ್ಯ

‘ಅವರು ಮಾಂಗ್‌ರನ್ನು ಬೆಂಬಲಿಸಿ ಮಹಾರರ ವಿರುದ್ಧ ಎತ್ತಿಕಟ್ಟುತ್ತಾರೆ. ಚಮ್ಮಾರರನ್ನು ಬೆಂಬಲಿಸಿ ಮಹಾರ್ ಮತ್ತು ಮಾಂಗ್‌ರ ವಿರುದ್ಧ ಎತ್ತಿಕಟ್ಟುತ್ತಾರೆ. ನಮ್ಮ ಏಕತೆಯನ್ನು ತಡೆಗಟ್ಟಲು ಅವರ ತಾರತಮ್ಯ ಸಿದ್ಧಾಂತವನ್ನು ನಮ್ಮೊಳಗೇ ಹರಡುತ್ತಾರೆ’– ಹೀಗೆ ಡಾ. ಬಿ.ಆರ್.ಅಂಬೇಡ್ಕರ್ ಅವರು ದಲಿತ ಸಮುದಾಯಗಳಿಗೆ ಸಂದೇಶ ನೀಡುವುದರ ಜೊತೆಗೆ ಎಚ್ಚರಿಸಿದ್ದರು. ಇಲ್ಲಿ ‘ಅವರು’ ಎಂದರೆ, ಜಾತಿ ಸಾಮರಸ್ಯ ಮತ್ತು ಜಾತಿ ವಿನಾಶದ ದಿಕ್ಕಿಗೆ ವಿರುದ್ಧವಾಗಿ ಸನಾತನ, ಸ್ವಜನಪಕ್ಷಪಾತದ ಚಾತುರ್ವರ್ಣ ಪದ್ಧತಿಯೆಡೆಗೆ ಸಮಾಜವನ್ನು ಸದಾ ಎಳೆದೊಯ್ಯಲು ಇತರರನ್ನು ಎತ್ತಿಕಟ್ಟುವ ‘ಮನುವಾದಿ’ ಪರಂಪರೆ ಎಂದರ್ಥ. ‘ಮೀಸಲು ಕ್ಷೇತ್ರ: ಒಳರಾಜಕಾರಣ’ ಎಂಬ ವಾದಿರಾಜ್ ಅವರ ಲೇಖನವು (ಪ್ರ.ವಾ., ಮೇ 23) ಬಾಬಾಸಾಹೇಬರ ಈ ಮಾತುಗಳನ್ನು ಇನ್ನೊಮ್ಮೆ ನೆನಪಿಸುವಂತಿದೆ.

ಮೀಸಲಾತಿಯ ಪ್ರಮಾಣ ಹೆಚ್ಚಳ, ಒಳಮೀಸಲಾತಿ ಶಿಫಾರಸು, ಬಂಜಾರ ಸಮುದಾಯದ ಪ್ರತಿಭಟನೆಗಳು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಯ (ಎಸ್‌ಸಿ) ಮೀಸಲು ಕ್ಷೇತ್ರಗಳ ಮೇಲೆ ಪ್ರಭಾವ ಬೀರಿದವು ಎಂದಷ್ಟೇ ಲೇಖಕರು ಹೇಳುತ್ತಾರೆ. ಆದರೆ ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿ ಶಿಫಾರಸಿಗೆ ಸಂಬಂಧಿಸಿದ ವಿಚಾರದಲ್ಲಿ ದಲಿತರಿಗೆ ಬಿಜೆಪಿ ಕೊಟ್ಟ ಮಾತು ತಪ್ಪಿದ್ದನ್ನು ಮರೆಮಾಚುತ್ತಾರೆ. ಮೊದಲ ಬಾರಿಗೆ, ಸಂವಿಧಾನಬದ್ಧವಾದ ವಿಧಾನಸೌಧವನ್ನು ಬಿಟ್ಟು ಸಾಂಪ್ರದಾಯಿಕವಾದ ಆರ್‌ಎಸ್‌ಎಸ್ ಕಚೇರಿ, ಬ್ರಾಹ್ಮಣ ಮಠಗಳ ಸುತ್ತ ದಲಿತರನ್ನು ಅಲೆದಾಡಿಸಿ ಅರ್ಧ ದಾರಿಯಲ್ಲಿಯೇ ಕೈಬಿಟ್ಟಿದ್ದರ ಬಗ್ಗೆ ತುಟಿ ಬಿಚ್ಚುವುದಿಲ್ಲ. ದಲಿತ ಸಂಘರ್ಷ ಸಮಿತಿಯು ಅಮರಜ್ಯೋತಿ ‘ಪ್ರೊ. ಬಿ.ಕೃಷ್ಣಪ್ಪ’ ಅವರ ಚೇತನಭೂಮಿಯಿಂದ ಸುಮಾರು 300 ಕಿ.ಮೀಗಿಂತಲೂ ಹೆಚ್ಚು ದೂರ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾ ಬಂದು, ಫ್ರೀಡಂ ಪಾರ್ಕಿನಲ್ಲಿ ನೂರಕ್ಕೂ ಹೆಚ್ಚು ದಿನ ಸತ್ಯಾಗ್ರಹ ಮಾಡಿದರೂ ಕಣ್ಣು ತೆರೆಯದ್ದನ್ನು ಉಲ್ಲೇಖಿಸುವುದೇ ಇಲ್ಲ.

ಇಂತಹ ಜಾಣ ಮರೆವಿನ ಲೇಖನವು ಕನ್ನಡದ ‘ಸಾಕ್ಷಿಪ್ರಜ್ಞೆ’ ದೇವನೂರ ಮಹಾದೇವ ಅವರನ್ನು ದಲಿತರೆಂದು ಸೀಮಿತಗೊಳಿಸಲು ಮಾತ್ರ ಮರೆಯುವುದಿಲ್ಲ. ದಲಿತ ಸಂಘರ್ಷ ಸಮಿತಿಯು ಕಾಂಗ್ರೆಸ್‌ಗೆ ನೀಡಿದ ಬೆಂಬಲಕ್ಕೆ ವಿಧಿಸಿದ ‘ಷರತ್ತು’ಗಳನ್ನು ಕಿತ್ತುಹಾಕಿ, ಬಹಿರಂಗ ಬೆಂಬಲ ಎನ್ನಲು ಹಿಂದೆ ಮುಂದೆ ಯೋಚಿಸುವುದಿಲ್ಲ.

ಇದನ್ನೆಲ್ಲ ಅರ್ಥ ಮಾಡಿಕೊಂಡಿರುವ ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳೂ ಬಿಜೆಪಿಯ ವಿರುದ್ಧ ಈ ಬಾರಿ ಮತ ಹಾಕಿವೆ. ಏಕೆಂದರೆ ಎಡಗೈ, ಬಲಗೈ, ಬೋವಿ, ಲಂಬಾಣಿ ಯಾರೇ ಇರಲಿ ಎಲ್ಲರಿಗೂ ಈ ಸಾರಿ ಬಿಜೆಪಿ ಬೇಡವಾಗಿತ್ತು. ಬಂಜಾರ ಸಮುದಾಯವು ಒಳಮೀಸಲಾತಿ ಶಿಫಾರಸಿನ ವಿರುದ್ಧ ತಿರುಗಿ ಬಿದ್ದಿದ್ದರೂ, ಆ ಸಮುದಾಯದಿಂದ ಗೆದ್ದ ಏಳು ಜನರಲ್ಲಿ ನಾಲ್ವರು ಬಿಜೆಪಿಯವರೇ ಆಗಿದ್ದಾರೆ, ಕಾಂಗ್ರೆಸ್ಸಿನಿಂದ ಗೆದ್ದವರು ಒಬ್ಬರೇ ಎಂದಿದ್ದಾರೆ. ಹಾಗಿದ್ದರೆ, ಕಾಂಗ್ರೆಸ್ಸಿನಿಂದಲೇ ಅತ್ಯಂತ ಹೆಚ್ಚು ಲಿಂಗಾಯತರು ಗೆದ್ದಿದ್ದಾರೆ, ಅದರಿಂದ ಲಿಂಗಾಯತರಲ್ಲಿ ಹೆಚ್ಚಿನವರು ಕಾಂಗ್ರೆಸ್ಸಿಗೆ ವೋಟು ಹಾಕಿದ್ದಾರೆ ಎಂದಾಗುತ್ತದೆಯೇ?

ಲಂಬಾಣಿ ಶಾಸಕರಿದ್ದಾರೆ ಎಂದರೆ ಅರ್ಥ ಆ ಕ್ಷೇತ್ರದಲ್ಲಿ ಲಂಬಾಣಿ ಸಮುದಾಯದ ಅತಿ ಹೆಚ್ಚು ಮಂದಿ ಇದ್ದರು ಎಂದೇನೂ ಅಲ್ಲ. ಬದಲಿಗೆ ಬಾಬಾಸಾಹೇಬರು ಎಚ್ಚರಿಸಿದ್ದ ‘ಅವರು’ ಮೀಸಲು ಕ್ಷೇತ್ರಗಳಲ್ಲಿ ಅತ್ಯಂತ ಹೆಚ್ಚಾಗಿ ಸ್ಪೃಶ್ಯ ಜಾತಿಗಳಿಗೆ ಸೇರಿದವರನ್ನೇ ನಿಲ್ಲಿಸಿ, ಜಾತಿ ಅಸಹನೆಯ ಲಾಭ ಪಡೆದುಕೊಳ್ಳುವ ಪಿತೂರಿ ಮಾಡಿದ್ದರು ಎಂಬುದೇ ಅದಕ್ಕೆ ಕಾರಣ. ಪರಿಶಿಷ್ಟ ಜಾತಿಗಳಲ್ಲೇ ಒಬ್ಬರನ್ನು ಇನ್ನೊಬ್ಬರ ವಿರುದ್ಧ ಎತ್ತಿಕಟ್ಟುವ ಇಂತಹ ಹುನ್ನಾರಕ್ಕೆಂದೇ ಕೆಲವರು ನಿಯೋಜಿತರಾಗಿದ್ದರು. ಅವರು ಸತತವಾಗಿ ಬಲಗೈ ವಿರುದ್ಧ ಎಡಗೈ ಅನ್ನು, ಎರಡೂ ಸಮುದಾಯಗಳ ವಿರುದ್ಧ ಲಂಬಾಣಿ, ಬೋವಿ ಸಮುದಾಯದವರನ್ನು, ಅವರ ವಿರುದ್ಧ ಇನ್ನು ಕೆಲವು ಸಮುದಾಯಗಳನ್ನು ಎತ್ತಿ ಕಟ್ಟಲು ಹತ್ತಾರು ವರ್ಷ ಕೆಲಸ ಮಾಡಿದ್ದಾರೆ. ಒಳಮೀಸಲಾತಿಯ ಮೂಲಕ ಈ ಸಮುದಾಯಗಳನ್ನು ಒಡೆಯಬಹುದು ಎಂದುಕೊಂಡಿದ್ದ ಅಂತಹವರ ಹುನ್ನಾರವು ಅವರಿಗೇ ತಿರುಗುಬಾಣವಾಗಿದೆ.

ಕಲ್ಯಾಣ ಕರ್ನಾಟಕದ ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಪಾಲು ಪಡೆದುಕೊಂಡಿರುವುದನ್ನು ಉಲ್ಲೇಖಿಸಿರುವ ಲೇಖಕರು, ಈ ಕ್ಷೇತ್ರಗಳಲ್ಲಿ ದಲಿತರು ಮಾತ್ರ ಇರುತ್ತಾರೆ ಎಂದುಕೊಂಡಿದ್ದಾರೆಯೇ? ಮೀಸಲು ಕ್ಷೇತ್ರಗಳಲ್ಲಿ ಜಾತಿ ಅಸಹನೆ ಹೆಚ್ಚಾಗುವಂತೆ ಮಾಡಿ, ಅಲ್ಲಿ ಅದರ ಫಲವನ್ನು ಪಡೆಯುವ ಹುನ್ನಾರ ದಲಿತರಿಗೆ ಗೊತ್ತಾಗುವುದಿಲ್ಲ ಎಂದುಕೊಂಡಿರಬಹುದು. 2022ರ ಡಿ. 6ರಂದು ನಡೆದ ದಲಿತರ ಸಾಂಸ್ಕೃತಿಕ ಪ್ರತಿರೋಧದ ನಂತರ ಎಡಗೈ-ಬಲಗೈ-ಅಲೆಮಾರಿ ಸಮುದಾಯಗಳು ಯಾವಾಗ ಒಗ್ಗಟ್ಟಿನಿಂದ ಒಳಮೀಸಲು ಜಾರಿಗಾಗಿ ಒತ್ತಾಯಿಸಿದವೋ ‘ಮನುವಾದಿ’ ಪಾಳಯದಲ್ಲಿ ಆಗಲೇ ತಲ್ಲಣ ಶುರುವಾಗಿತ್ತು. ಅಂತಿಮವಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಣಿಸುವಲ್ಲಿ ಪರಿಶಿಷ್ಟ ಸಮುದಾಯಗಳು ಪ್ರಮುಖ ಕಾಣಿಕೆ ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT