ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕತೆಯ ಅಡಿ ಜಲಸ್ಫೋಟಕಗಳು!

ಪಂಚಭೂತಗಳಲ್ಲಿ ಒಂದಾದ ನೀರನ್ನು ಜೀವಜಲವಾಗಿಸುವುದು ಅಥವಾ ಸ್ಫೋಟಕವಾಗಿಸುವುದು ನಮ್ಮ ಕೈಯಲ್ಲಿದೆ
Last Updated 21 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಶತಮಾನದ ಭೀಕರ ಪ್ರವಾಹವನ್ನು ನಮ್ಮ ನೆರೆರಾಜ್ಯ ಕೇರಳ ಎದುರಿಸುತ್ತಿದೆ. ಕರ್ನಾಟಕವೂ ಇದರಿಂದ ಕಲಿತುಕೊಳ್ಳಬೇಕಿರುವುದು ಬಹಳಷ್ಟಿದೆ. ಈ ಪ್ರವಾಹದ ಬೇರು ಹುಡುಕುತ್ತಾ ಹೋದಂತೆ ಮಾನವನ ಬೃಹತ್‌ ನಿರ್ಮಾಣಗಳು ಹಾಗೂ ಅವುಗಳ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಎಂಥ ಭಯಂಕರ ಸನ್ನಿವೇಶಗಳು ಸೃಷ್ಟಿಯಾಗುತ್ತವೆ ಎಂಬುದು ಅರಿವಾಗುತ್ತದೆ. ಭಾರತದ ಒಟ್ಟು ಭೂಪ್ರದೇಶದಲ್ಲಿ ಕೇವಲ ಶೇ 1.18ರಷ್ಟಿರುವ ಕೇರಳದಲ್ಲಿ ಇರುವ ಒಟ್ಟು ಅಣೆಕಟ್ಟುಗಳ ಸಂಖ್ಯೆ 58. ಅತಿವೃಷ್ಟಿಯ ಜೊತೆಗೆ ಈ ಜಲಾಶಯಗಳಲ್ಲಿ ತುಂಬಿ ಹರಿದ ಹೆಚ್ಚುವರಿ ನೀರು ಸಹ ಈಗಿನ ಜಲಪ್ರಳಯಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಈ ಸನ್ನಿವೇಶ ನೈಸರ್ಗಿಕ ವಿಕೋಪವಾಗಿ ತೋರಿದರೂ ಆಳಕ್ಕೆ ಇಳಿದಾಗ ಕಾಣುವ ಸತ್ಯವೇ ಬೇರೆ.

‘ಇಂದಿನದು ಇಂದಿಗೆ, ನಾಳಿನದು ನಾಳಿಗೆ’ ಎಂಬುದು ನಿಸರ್ಗದ ನಿಯಮ. ಈ ನಿಯಮದ ವಿರುದ್ಧವಾದ ಕಲ್ಪನೆ ಅಣೆಕಟ್ಟುಗಳ ಹಿಂದಿನದು. ಅಣೆಕಟ್ಟುಗಳು ಮಾನವನ ಪ್ರಚಂಡ ಬುದ್ಧಿವಂತಿಕೆಯ ಮೂರ್ತರೂಪ (Peter Bosshard, 2015). ಸಿರಿಯಾದ ‘ಲೇಕ್ ಹೋಮ್ಸ್’, ಕ್ರಿಸ್ತಪೂರ್ವ 1319- 1304ರಲ್ಲಿ ಕಟ್ಟಲಾದ, ಈಗಲೂ ಬಳಕೆಯಲ್ಲಿರುವ ಜಗತ್ತಿನ ಅತಿ ಪುರಾತನವಾದ ಅಣೆಕಟ್ಟು. ವಿವಿಧ ಉದ್ದೇಶಗಳಿಗಾಗಿ ಕಟ್ಟಲಾಗುವ ಜಲಾಶಯಗಳು ಪರಿಸರವನ್ನು ನಾಶ ಮಾಡುವುದರ ಜೊತೆಗೆ ಉದ್ದೇಶಿತ ಯೋಜನಾ ಸ್ಥಳದ ಆಸುಪಾಸಿನಲ್ಲಿ ಜೀವಿಸುವ ಜನರು ಮತ್ತು ಪ್ರಾಣಿಗಳ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತವೆ. ಜಲಾಶಯಗಳಿಂದಾಗುವ ಅನುಕೂಲಗಳನ್ನು ಗಣನೆಗೆ ತೆಗೆದುಕೊಂಡು ನಾಗರಿಕತೆಗಳು ಅಣೆಕಟ್ಟುಗಳನ್ನು ಕಟ್ಟುತ್ತಲೇ ಬಂದಿವೆ.

ಹತ್ತು ಲಕ್ಷ ಘನ ಮೀಟರ್‌ಗಿಂತ ಜಾಸ್ತಿ ನೀರು ಶೇಖರಿಸುವ ಜಲಾಶಯಗಳನ್ನು ‘ಬೃಹತ್ ಜಲಾಶಯ’ ಎಂದು ಗುರುತಿಸಲಾಗುತ್ತದೆ. ನಮ್ಮ ದೇಶದಲ್ಲಿ ಅಂತಹ 50 ಜಲಾಶಯಗಳಿವೆ. ಇವನ್ನೂ ಸೇರಿದಂತೆ ಸುಮಾರು 5000 ದೊಡ್ಡ ಅಣೆಕಟ್ಟುಗಳಿವೆ. ನೀರಿಗಿರುವ ಶಕ್ತಿ ಅಪಾರ. ಹೀಗಿರುವಾಗ ನಾವು ಎಷ್ಟರಮಟ್ಟಿಗೆ ಜಲಾಶಯಗಳ ಸಾಧಕ ಬಾಧಕಗಳ ಬಗ್ಗೆ ಅರಿತಿದ್ದೇವೆ ಎಂಬುದು ಮುಖ್ಯ ಪ್ರಶ್ನೆ. ಜಲಾಶಯಗಳು ಸ್ಫೋಟಕಗಳಿದ್ದಂತೆ. ಸರಿಯಾದ ನಿರ್ವಹಣೆ ಇಲ್ಲದಿದ್ದರೆ ಅನಾಹುತಕಾರಿಯಾಗಿ ಮಾರ್ಪಡುತ್ತವೆ. ಜಲಾಶಯಗಳಲ್ಲಿ ಪರಮಾವಧಿ ನೀರು ಶೇಖರಿಸುವುದರಿಂದ, ಕೆಳಗಿನ ಪ್ರದೇಶದ ನದಿಯ ಗಾತ್ರ ಚಿಕ್ಕದಾಗಿ, ಪಾತ್ರ ಹಿರಿದಾಗುತ್ತಾ ಹೋಗುತ್ತದೆ. ಹಿರಿದಾದ ನದಿ ಪಾತ್ರದಲ್ಲಿ ಜನಜೀವನ- ಕೃಷಿ ಬೆಳೆಯುತ್ತದೆ. ಅನಿರೀಕ್ಷಿತವಾಗಿ ಜಲಾಶಯ ತುಂಬಿ ಒಮ್ಮೆಲೇ ನೀರು ಬಿಟ್ಟಾಗ ಒತ್ತಡದಿಂದಾಗಿ ನದಿಯು ಸ್ವಾಭಾವಿಕವಾಗಿ ಅದರ ಮೂಲ ಗಾತ್ರಕ್ಕಿಂತಲೂ ಹಿರಿದಾಗಿ ಹರಿದು ಅಪಾರ ನಾಶ ನಷ್ಟಗಳನ್ನು ಉಂಟುಮಾಡುತ್ತದೆ. ಇಂತಹ ಸನ್ನಿವೇಶಗಳು ಅಣೆಕಟ್ಟುಗಳ ನಿರ್ವಹಣೆಯಲ್ಲಾಗುವ ಲೋಪದಿಂದ ಹಾಗೂ ಜನಸಾಮಾನ್ಯರ ನಿರ್ಲಕ್ಷ್ಯದಿಂದ ಉಂಟಾಗುವಂಥವು.

ಕರ್ನಾಟಕದಲ್ಲಿ ‘ರಾಷ್ಟ್ರೀಯ ಪ್ರಾಮುಖ್ಯ’ ಹೊಂದಿರುವ ಹತ್ತು ಅಣೆಕಟ್ಟುಗಳಿವೆ. ಆದ್ದರಿಂದ ನಮ್ಮ ಜನರ ರಕ್ಷಣೆಯಲ್ಲಿ ಅಣೆಕಟ್ಟುಗಳ ನಿರ್ವಹಣೆಯು ಬಹು ಮುಖ್ಯಪಾತ್ರ ವಹಿಸುತ್ತದೆ. ಆದರೆ ‘ಬೃಹತ್ ಅಣೆಕಟ್ಟುಗಳ ರಾಷ್ಟ್ರೀಯ ನೋಂದಣಿ– 2017’ (National Register of Large Dams) ಕರ್ನಾಟಕದ ಪಾಲಿಗೆ ಅನೇಕ ಕಹಿ ಸತ್ಯಗಳನ್ನು ಬಹಿರಂಗಪಡಿಸುತ್ತದೆ. ಆ ನೋಂದಣಿಯ ಪ್ರಕಾರ ಕರ್ನಾಟಕವೂ ಸೇರಿ ಕೆಲವು ರಾಜ್ಯಗಳು ತಮ್ಮಲ್ಲಿರುವ ಅಣೆಕಟ್ಟುಗಳ ಜಲಾನಯನ ಪ್ರದೇಶದ ಹೆಸರು, ನದಿಯ ಹೆಸರು ಮುಂತಾದ ವಿವರಗಳನ್ನು ದಾಖಲಿಸಿಲ್ಲ. ಕರ್ನಾಟಕವು ತನ್ನ ಯಾವುದೇ ಅಣೆಕಟ್ಟಿನ ಅಕ್ಷಾಂಶ- ರೇಖಾಂಶ ವಿವರಗಳನ್ನು ನಮೂದಿಸಿಲ್ಲ. ಎಷ್ಟೋ ಅಣೆಕಟ್ಟುಗಳ ನಿರ್ಮಾಣದ ವರ್ಷ ನಮೂದಾಗಿಲ್ಲ. ಅಣೆಕಟ್ಟುಗಳ ಭದ್ರತೆಯನ್ನು ಅಳೆಯುವಲ್ಲಿ ಇಂಥ ವಿಚಾರಗಳು ನಿರ್ಣಾಯಕ ಪಾತ್ರ ವಹಿಸುತ್ತವೆ.

ಸರ್ಕಾರಗಳು ಹಾಗೂ ಜನರು ಜಲಾಶಯಗಳ ನಿರ್ಮಾಣಕ್ಕೆ ಕೊಡುವಷ್ಟು ಒತ್ತನ್ನು ಅದರ ನಿರ್ವಹಣೆಗೆ ಕೊಡುತ್ತಿಲ್ಲ. ಹೂಳು ತೆಗೆಯುವುದು, ಕೆಳ ಪ್ರದೇಶದಲ್ಲಿನ ಜನರ ನೀರಿನ ಅಗತ್ಯತೆ, ನದಿ ಸಂರಕ್ಷಣೆಗಾಗಿ ನಿಯಮಿತವಾದ ನೀರು ಬಿಡುಗಡೆ... ಇತ್ಯಾದಿ ಮಾಹಿತಿಗಳ ಸಮಗ್ರ ಮುನ್ನೋಟವನ್ನು ವರ್ಷವರ್ಷವೂ ಕ್ಯಾಲೆಂಡರ್ ಆಗಿ ರೂಪಿಸಿ, ಕಾರ್ಯಗತಗೊಳಿಸಬೇಕು. ಇಂಥ ಕೆಲಸವನ್ನು ನಮ್ಮ ಸರ್ಕಾರಗಳು ಮಾಡುತ್ತಿಲ್ಲ.

ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳು (International Humanitarian Laws) ಜಲಾಶಯಗಳನ್ನು ‘ಪರಮಾಣು ಸ್ಥಾವರಗಳಿಗೆ ಸಮ’ ಎಂದು ಪರಿಗಣಿಸಿವೆ. ಅವುಗಳನ್ನು ‘ಅಪಾಯಕಾರಿ ಶಕ್ತಿಯನ್ನು ಹೊಂದಿರುವ ನಿರ್ಮಾಣ’ಗಳ ಪಟ್ಟಿಗೆ ಸೇರಿಸಿವೆ.

ಸುಸ್ಥಿರ ಅಭಿವೃದ್ಧಿಗಾಗಿ ಮೂರು ಸ್ತರಗಳಲ್ಲಿ ಜಲಾಶಯಗಳನ್ನು ಪರೀಕ್ಷಿಸಬೇಕಾಗುತ್ತದೆ. ಮೊದಲನೆಯದು ‘ನಿರ್ಮಾಣ ಹಂತ’. ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಮಗೆ ಸಾಕಷ್ಟು ಅರಿವಿದೆ. ಎರಡನೆಯದು ಹಾಗೂ ಮುಖ್ಯವಾದದ್ದು ‘ನಿರ್ವಹಣೆ’. ಮೂರನೆಯದು ಮತ್ತು ಅತಿ ಅಪರೂಪವಾಗಿ ಜಾರಿಯಾದದ್ದು ‘ನಿರ್ಮೂಲನೆ’.

ಯಾವುದೇ ಜಲಾಶಯವು ಹಳೆಯದಾದಾಗ, ಅಪಾಯಕಾರಿಯಾದಾಗ ಅಥವಾ ಪರಿಸರಕ್ಕೆ ಅಪಾಯಕಾರಿಯಾಗುವ ಸ್ಥಿತಿಗೆ ತಲುಪಿದಾಗ ಅದನ್ನು ವೈಜ್ಞಾನಿಕ ವಿಧಾನದಲ್ಲಿ ನಿರ್ಮೂಲನೆ ಮಾಡಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಅಣೆಕಟ್ಟು ನಿರ್ಮಾಣಕ್ಕಿಂತ ನದಿಗಳ ಪುನರುಜ್ಜೀವನಕ್ಕೆ ಹೆಚ್ಚಿನ ಆದ್ಯತೆಯನ್ನು ವಿವಿಧ ದೇಶಗಳು ಕೊಡುತ್ತಿವೆ. ಅಂತಹ ಪ್ರಸ್ತಾವಗಳು ಜಾಗತಿಕ ಮಟ್ಟದ ಅನುಮೋದನೆ ಪಡೆದುಕೊಳ್ಳುತ್ತಿರುವುದನ್ನುನಮ್ಮ ಸರ್ಕಾರಗಳು ಗಮನಿಸಬೇಕು. ಅನಗತ್ಯ ಹಾಗೂ ಅಪಾಯಕಾರಿ ಜಲಾಶಯಗಳ ನಿರ್ಮೂಲನೆಗೆ ಹಲವುದೇಶಗಳು ಮುಂದಾಗುತ್ತಿದ್ದು, ನದಿಗಳ ಪುನರುಜ್ಜೀವನದತ್ತ ಬಹುದೊಡ್ಡ ಕೊಡುಗೆಯಾಗಿ ಪರಿಣಮಿಸಿದೆ. ಭಾರತ ಈ ನಿಟ್ಟಿನಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಸಾಧ್ಯಾಸಾಧ್ಯತೆಗಳ ಪರಿಶೀಲನೆಯನ್ನು ಮಾಡಬೇಕಾಗಿದೆ. ಇದೆಲ್ಲಸಾಧ್ಯವಾಗುವುದು ಜನರು ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಹೊಂದಿ, ಸರ್ಕಾರಗಳ ಜೊತೆ ಕೈಜೋಡಿಸಿದಾಗ ಮಾತ್ರ.

ಪಂಚಭೂತಗಳಲ್ಲಿ ಒಂದಾದ ನೀರನ್ನು ಜೀವಜಲವಾಗಿಸುವುದು ಅಥವಾ ಸ್ಫೋಟಕವಾಗಿಸುವುದು ನಮ್ಮ ಕೈಯಲ್ಲಿದೆ.

ಮೈತ್ರೇಯಿ ಹೆಗಡೆ
ಮೈತ್ರೇಯಿ ಹೆಗಡೆ

ಲೇಖಕಿ: ಕೇರಳ ಹೈಕೋರ್ಟ್‌ನಲ್ಲಿ ವಕೀಲರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT