ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶವನ್ನು ಹಿಂದಕ್ಕೊಯ್ಯತ್ತಿರುವ ಕೆಡುಕಿನ ತ್ರಿಮೂರ್ತಿಗಳು: ರಾಜೇಂದ್ರ ಚೆನ್ನಿ

ಅಖಿಲ ಭಾರತ ಅನುಭವ ಮಂಟಪ ಪ್ರತಿನಿಧಿಗಳ ಅಧಿವೇಶನದಲ್ಲಿ ರಾಜೇಂದ್ರ ಚೆನ್ನಿ
Published 23 ಸೆಪ್ಟೆಂಬರ್ 2023, 16:14 IST
Last Updated 23 ಸೆಪ್ಟೆಂಬರ್ 2023, 16:14 IST
ಅಕ್ಷರ ಗಾತ್ರ

ಬೆಂಗಳೂರು: ‘ಧರ್ಮ, ಕೋಮುವಾದ ಆಡಳಿತ ಮತ್ತು ಬಂಡವಾಳಶಾಹಿಗಳೆಂಬ ಕೆಡುಕಿನ ತ್ರಿಮೂರ್ತಿಗಳು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದ್ದಾರೆ’ ಎಂದು ಚಿಂತಕ ಪ್ರೊ. ರಾಜೇಂದ್ರ ಚೆನ್ನಿ ಆತಂಕ ವ್ಯಕ್ತಪಡಿಸಿದರು.

ಸಿಟಿಜನ್‌ ಫಾರ್‌ ಡೆಮಾಕ್ರಸಿ, ಜನಾಂದೋಲನಗಳ ಮಹಾಮೈತ್ರಿ ಕರ್ನಾಟಕ–ಮಹಾರಾಷ್ಟ್ರ ಜಂಟಿ ಕ್ರಿಯಾ ಸಮಿತಿಯು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವುದು ಹಾಗೂ ಕೋಮುಸಾಮರಸ್ಯ ಕಾಪಾಡುವ ಬಗ್ಗೆ ಹಮ್ಮಿಕೊಂಡಿರುವ ಅಖಿಲ ಭಾರತ ಅನುಭವ ಮಂಟಪ ಪ್ರತಿನಿಧಿಗಳ ಮೊದಲ ದಿನದ ಅಧಿವೇಶನದಲ್ಲಿ ಅವರು ಮಾತನಾಡಿದರು.

‘ಮೂರು ಕೆಡುಕುಗಳಿಗೆ ದೇಶ ಮುಂದಕ್ಕೆ ಹೋಗುವುದು ಬೇಕಾಗಿಲ್ಲ. ಅದಾನಿ, ಅಂಬಾನಿ ಯಾವುದೋ ಒಂದು ಯೋಜನೆಗೆ ಬಂಡವಾಳ ಹೂಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದ್ದರೂ ಅದು ಅಷ್ಟು ಸರಳವಾಗಿಲ್ಲ. ಎಲ್ಲರೂ ಅಭಿವೃದ್ಧಿಯಾಗುವುದು ಅವರಿಗೆ ಬೇಕಿಲ್ಲ. ಅದಕ್ಕಾಗಿ 21ನೇ ಶತಮಾನ ಎಂದು ನಾವು ಹೇಳಿದರೆ, ಅವರು ಕ್ರಿಸ್ತಪೂರ್ವ 21ನೇ ಶತಮಾನಕ್ಕೆ ಹೋಗಬೇಕು ಎಂದು ಹೇಳುತ್ತಾರೆ’ ಎಂದರು.

‘ಬುದ್ಧನಲ್ಲಿ, ಬುದ್ಧಪೂರ್ವದ ಬುಡಕಟ್ಟುಗಳಲ್ಲಿ ಪ್ರಜಾಪ್ರಭುತ್ವವಾದಿ ಸಿದ್ಧಾಂತದ ಮೂಲ ಕಾಣಬಹುದು. ಅದಕ್ಕಾಗಿಯೇ ನಮ್ಮ ಸಂಸ್ಕೃತಿಯ ಬೇರುಗಳನ್ನು ಯುರೋಪಿನಲ್ಲಿ ಹುಡುಕಬೇಕಿಲ್ಲ. ನಮ್ಮಲ್ಲೇ ಇದೆ ಎಂದು ಅಂಬೇಡ್ಕರ್‌ ಹೇಳಿದ್ದರು. 12ನೇ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಅನುಭವ ಮಂಟಪ ಜಾತಿ ನೋಡದೇ ಎಲ್ಲರನ್ನು ಒಳಗೊಂಡ ಮೊದಲ ಸಂಸತ್ತಾಗಿತ್ತು. ಶ್ರಮಿಕ ವರ್ಗದವರೇ ಅಲ್ಲಿ ಪ್ರತಿನಿಧಿಗಳಾಗಿದ್ದರು. ಅದೇ ಆದರ್ಶದಲ್ಲಿ ಪ್ರಜಾಪ್ರಭುತ್ವವನ್ನು ಕಟ್ಟಬೇಕು’ ಎಂದರು.

‘ವೈಯಕ್ತಿಕ ಹಿಂಸೆಗಿಂತ ಸೈದ್ಧಾಂತಿಕ ಹಿಂಸೆ ಹೆಚ್ಚು ಅಪಾಯಕಾರಿ. ಇದನ್ನು ನಾವು ಪ್ರಶ್ನಿಸದೇ ಇದ್ದರೆ ಇದೇ ನಿಸರ್ಗ ಸಹಜ ಸಿದ್ಧಾಂತ ಎಂದು ಜನ ಭಾವಿಸುವ ಸಾಧ್ಯತೆ ಇರುತ್ತದೆ’ ಎಂದು ಎಚ್ಚರಿಸಿದರು.

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಮಾತನಾಡಿ, ‘ವಿಶ್ವದ ವಿವಿಧ ದೇಶಗಳಲ್ಲಿ ಪ್ರಜಾಪ್ರಭುತ್ವ ಬಿರುಕು ಬಿಟ್ಟಿದೆ. ಆದರೆ, ಪ್ರಜಾಪ್ರಭುತ್ವಕ್ಕೆ ಪರ್ಯಾಯ ಕಾಣುತ್ತಿಲ್ಲ. ಹಾಗಾಗಿ ಪ್ರಜಾಪ್ರಭುತ್ವದೊಳಗಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಮುಂದುವರಿಸಬೇಕಿದೆ’ ಎಂದು ಹೇಳಿದರು.

ಭಾರತದಲ್ಲಿ ಮಾತ್ರವಲ್ಲ, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್‌ ಸಹಿತ ಎಲ್ಲ ಪ್ರಜಾಪ್ರಭುತ್ವ ದೇಶಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಭಾರತದಲ್ಲಿ ಚುನಾವಣಾ ಪದ್ಧತಿಯು ಧರ್ಮ, ಜಾತಿ, ಹಣ ಮತ್ತು ತೋಳ್ಬಲದ ಪ್ರಭಾವಕ್ಕೆ ಸಿಲುಕಿ ನಲುಗಿದೆ. ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸಬೇಕು. ಸಂವಿಧಾನವನ್ನು ಅಪವ್ಯಾಖ್ಯಾನ, ಅಪ್ರಸ್ತುತಗೊಳಿಸುವುದನ್ನು ತಡೆಯಬೇಕು. ಆಹಾರ, ಶಿಕ್ಷಣ, ಆರೋಗ್ಯವನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

‘ಪ್ರತಿಗಾಮಿ ಸಾಂಸ್ಕೃತಿಕ ರಾಜಕಾರಣಕ್ಕೆ ಜನಸಾಂಸ್ಕೃತಿ ಪ್ರತಿರೋಧ ಸಾಧ್ಯತೆಗಳ ಹುಡುಕಾಟ’ ಬಗ್ಗೆ ಹೋರಾಟಗಾರ್ತಿ ದು. ಸರಸ್ವತಿ ಅಧ್ಯಕ್ಷತೆಯಲ್ಲಿ ಮೊದಲ ಗೋಷ್ಠಿ ನಡೆಯಿತು. ಸಾಹಿತಿಗಳಾದ ದತ್ತ ದೇಸಾಯಿ, ರಹಮತ್‌ ತರೀಕೆರೆ, ಧಾನಾಜಿ ಗುರವ್‌ ವಿಷಯ ಮಂಡಿಸಿದರು.

‘ನಿಸರ್ಗ ಮತ್ತು ಅಭಿವೃದ್ಧಿ’ ಕುರಿತು ಟಿ.ಆರ್‌. ಚಂದ್ರಶೇಖರ್‌ ಅಧ್ಯಕ್ಷತೆಯಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಪರಿಸರ ಹೋರಾಟಗಾರರಾದ ಕೆ.ಜೆ. ಜಾಯ್‌, ಉಲ್ಕಾ ಮಹಾಜನ್‌, ದಿಲೀಪ್‌ ಕಾಮತ್‌ ವಿಷಯ ಮಂಡಿಸಿದರು. 

ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತುತ್ತಿರುವ ಆರ್‌ಎಸ್‌ಎಸ್‌ ಮನುವಾದಿಗಳ ಸರ್ವಾಧಿಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸಬೇಕು.

-ಎಸ್‌.ಆರ್‌. ಹಿರೇಮಠ ಅಧ್ಯಕ್ಷ ಸಿಟಿಜನ್ಸ್‌ ಫಾರ್‌ ಡೆಮಾಕ್ರಸಿ

ಮನುವಾದಿಗಳಿಗೆ ಜಾತಿವಾದಿಗಳಿಗೆ ಬಂಡವಾಳಶಾಹಿಗಳಿಗೆ ಮಾತ್ರ ಆಜಾದಿ ಬಂದಿದೆ. ಕೆಲವರಿಗಷ್ಟೇ ಅಮೃತಕಾಲವಾಗಿದೆ.

-ವಿಮಲ್‌ ಥೋರಟ್‌ ಹೋರಾಟಗಾರ್ತಿ ಮಹಾರಾಷ್ಟ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT