ಸೋಮವಾರ, ಮೇ 23, 2022
24 °C
ಭೂಮಿಯ ಉಳಿವಿಗಾಗಿ ವಿವಿಧ ಕಾರ್ಯಕ್ರಮಗಳ ಬದಲು, ವೈಯಕ್ತಿಕ ಮಟ್ಟದಲ್ಲಿ ನಾವು ರೂಢಿಸಿಕೊಳ್ಳಬಹುದಾದ ಪುಟ್ಟ ಪುಟ್ಟ ಹಸಿರು ಕಾರ್ಯಗಳೇ ಬಹು ಮುಖ್ಯ

ಸಂಗತ: ಪ್ರತಿದಿನ ಆಗಲಿ ಭೂಮಿದಿನ

ಉದಯ ಗಾಂವಕಾರ Updated:

ಅಕ್ಷರ ಗಾತ್ರ : | |

Prajavani

ತೀರಾ ಭಾವನಾತ್ಮಕ ಸಂಗತಿಗಳನ್ನು ಎದುರಿಟ್ಟು ಯುವ ಸಮೂಹವನ್ನು ದಾರಿ ತಪ್ಪಿಸಿದ ಅನೇಕ ಉದಾಹರಣೆಗಳು ಇರಬಹುದು. ಆದರೆ, ಯುವಶಕ್ತಿಯನ್ನು ಶಾಂತಿಗಾಗಿ, ಸಹನೀಯ ಬದುಕಿಗಾಗಿ ಸಂಘಟಿಸಬಹುದೆಂದು ತೋರಿಸಿದವರೂ ಅನೇಕರಿದ್ದಾರೆ. ಗೇಲಾರ್ಡ್ ನೆಲ್ಸನ್ ಎಂಬ ಅಮೆರಿಕದ ಸೆನೆಟರ್ ಸುಸ್ಥಿರ ಭೂಮಿಗಾಗಿ ಯುವಕರನ್ನು ಒಂದುಗೂಡಿಸಿದರು. ಆಗ ಹುಟ್ಟಿದ್ದೇ ಭೂಮಿ ದಿನವನ್ನು ಆಚರಿಸುವ ಯೋಚನೆ.

1962ರಲ್ಲಿ ಪ್ರಕಟವಾದ ರಾಚೆಲ್ ಕಾರ್ಸನ್ ಅವರ ‘ಸೈಲೆಂಟ್ ಸ್ಪ್ರಿಂಗ್’ ಪುಸ್ತಕ, ಕೀಟನಾಶಕಗಳ ಬಳಕೆ ಹೇಗೆ ಭೂಮಿಯನ್ನು ಸದ್ದಿಲ್ಲದೆ ಬರಡಾಗಿಸುತ್ತಿದೆಎಂಬುದನ್ನು ಮನಮುಟ್ಟುವಂತೆ ವಿವರಿಸಿತು. ಕ್ಯಾಲಿಫೋರ್ನಿಯಾದ ಸಮೀಪ ಶಾಂತ ಸಾಗರದ ಮೇಲೆ ಹಡಗುಗಳು ಚೆಲ್ಲಿದ ಕಚ್ಚಾ ತೈಲದ ದಪ್ಪ ಪದರವೂ ದೊಡ್ಡ ಸುದ್ದಿಯಾಯಿತು. ಮನುಷ್ಯನ ಕ್ರಿಯೆಗಳಿಂದ ಭೂಮಿಗೆ ತಟ್ಟುತ್ತಿರುವ ಅಪಾಯವನ್ನು ಮನಗಂಡ ಗೇಲಾರ್ಡ್‌, ಭೂಮಿಗಾಗಿ ಪ್ರತಿಭಟನೆ ನಡೆಸಲು ಕಾಲೇಜು ವಿದ್ಯಾರ್ಥಿಗಳ ಬಳಿ ತೆರಳಿದರು. ಹತ್ತಾರು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನುದ್ದೇಶಿಸಿ ಭಾಷಣ ಮಾಡಿದರು. ‘ನಮ್ಮ ಕಾಡುಗಳು ಮೈದಾನಗಳಾಗುತ್ತಿವೆ, ಪ್ರಾಣಿ-ಪಕ್ಷಿಗಳು ಆವಾಸ ಕಳೆದುಕೊಳ್ಳುತ್ತಿವೆ, ಕಾರ್ಖಾನೆಗಳು ಹೊಗೆಯುಗುಳುತ್ತಿವೆ, ನದಿ-ಸರೋವರಗಳು ಮಲಿನವಾಗುತ್ತಿವೆ, ಆರೋಗ್ಯಕರ ಮತ್ತು ಸುಸ್ಥಿರ ಭೂಮಿಗಾಗಿ ನಾವು ಒಂದಾಗಬೇಕು’ ಎಂಬುದನ್ನು ಯುವಕರಿಗೆ ಮನವರಿಕೆ ಮಾಡಿದರು. ಅಷ್ಟೇ ಅಲ್ಲ, ಸರ್ಕಾರವು ತನ್ನ ನಿಲುವು ಪ್ರಕಟಿಸುವಂತೆ ಒತ್ತಾಯಿಸಬೇಕಿದೆ ಎಂಬುದನ್ನು ತಿಳಿಸಿದರು. ಡೆನಿಸ್‌ ಹೇಯ್ನ್ಸ್‌ ಎಂಬ ವಿದ್ಯಾರ್ಥಿನಾಯಕನ ಮುಂದಾಳತ್ವ
ದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದರು. ಪರಿಸರಕ್ಕಾಗಿ ನಡೆದ ದೊಡ್ಡ ಪ್ರತಿಭಟನೆ ಇದು.

ಹೀಗೆ, 1970ರ ಏ. 22ರಂದು ಮೊದಲ ಭೂಮಿ ದಿನ ಆಚರಿಸಲ್ಪಟ್ಟಿತು. ಅಮೆರಿಕ ಸರ್ಕಾರವು ಪರಿಸರ ನಿಯಂತ್ರಣ ಕಾಯ್ದೆ ರೂಪಿಸಲು ಕಾರಣವಾಯಿತು. ‘ಭೂಮಿಯಲ್ಲಿ ವಿನಿಯೋಗಿಸೋಣ’ ಎಂಬುದು ಈ ವರ್ಷದ ಭೂದಿನದ ಘೋಷವಾಕ್ಯ. ಭೂದಿನದಂದು ನಾವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿಲ್ಲ. ಪ್ರತಿಭಟನೆ ನಡೆಸಬೇಕಂತಿಲ್ಲ. ಅರ್ಧ ಶತಮಾನದ ಹೋರಾಟದ ಬಳಿಕ ಸುಸ್ಥಿರ ಭೂಮಿಗಾಗಿ ನೂರಾರು ನಿಯಮಗಳು, ಕಾನೂನುಗಳು, ದಂಡಸಂಹಿತೆಗಳೆಲ್ಲ ರೂಪುಗೊಂಡಿರುವಾಗ ಪ್ರತಿಭಟಿಸುವುದಾದರೂ ಯಾರ ವಿರುದ್ಧ?

ನಾವು ಈ ದಿನವನ್ನು ಈವೆಂಟ್‌ ಆಗಿಸಲು ಹೊರಟರೆ ಇನ್ನಷ್ಟು ಅಪಾಯವೇ ಉಂಟಾಗಬಹುದು. ಎಷ್ಟೋ ಶಾಲೆಗಳಲ್ಲಿ ವನಮಹೋತ್ಸವಕ್ಕಾಗಿ ಪ್ರತಿವರ್ಷವೂ ಅದೇ ಹೊಂಡದಲ್ಲೇ ಗಿಡ ನೆಡುತ್ತಾರೆ. ಸಂಘ ಸಂಸ್ಥೆಗಳು ಹಸಿರುಪ್ರೇಮ ಮೆರೆಯಲು ವೇದಿಕೆಯ ಮೇಲೆ ಇಡುವ ಗಿಡಗಳನ್ನು ಕಾರ್ಯಕ್ರಮದ ನಂತರ ಹೊರ ಬಿಸಾಡಲಾಗುತ್ತದೆ. ಹಾಗೆ ನೋಡಿದರೆ, ವೈಯಕ್ತಿಕ ಮಟ್ಟದಲ್ಲಿ ನಾವು ರೂಢಿಸಿಕೊಳ್ಳಬಹುದಾದ ಪುಟ್ಟ ಪುಟ್ಟ ಹಸಿರು ಕಾರ್ಯಗಳೇ ಬಹು ಮುಖ್ಯ. ಬಟ್ಟೆ ಕೈಚೀಲ ಬಳಸುವ ರೂಢಿ ಎಷ್ಟೊಂದು ಪ್ಲಾಸ್ಟಿಕ್‌ ಚೀಲಗಳನ್ನು ತಡೆಯಬಲ್ಲದು?

ವಾತಾವರಣದಲ್ಲಿ ಕಾರ್ಬನ್‌ ಡೈಆಕ್ಸೈಡಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಭೂಮಿಯ ಸರಾಸರಿ ತಾಪಮಾನವು ಏರುತ್ತಿದೆ. ಭೂಮಿಯ ಅತ್ಯಂತ ಬಿಸಿಯ ಏಳು ವರ್ಷಗಳಲ್ಲಿ 2021 ಕೂಡಾ ಒಂದು. ಬೇಸಿಗೆಯಲ್ಲೂ ಹಿಮನದಿಗಳ ಪ್ರವಾಹ ಉಂಟಾಗುತ್ತಿದೆ. ಸಮುದ್ರದ ಮಟ್ಟ ಏರುತ್ತಿದೆ. ಅತಿವೃಷ್ಟಿಯ ನಂತರ ಮುಂದೆ ಅನಾವೃಷ್ಟಿಯೂ ಕಾದಿದೆ ಎಂದು ಪರಿಸರ ತಜ್ಞರು ಎಚ್ಚರಿಸುತ್ತಿದ್ದಾರೆ.

ಒಂದು ಲೀಟರ್‌ ಪೆಟ್ರೋಲ್‌ ಸುಟ್ಟಾಗ ಎರಡೂವರೆ ಕೆ.ಜಿ. ಕಾರ್ಬನ್‌ ಡೈಆಕ್ಸೈಡ್ ವಾತಾವರಣವನ್ನು ಸೇರುತ್ತದೆ. ನಿಮ್ಮದು ಇಪ್ಪತ್ತು ಕಿ.ಮೀ. ಮೈಲೇಜಿನ ಡೀಸೆಲ್‌ ಕಾರಾಗಿದ್ದರೆ ಅದು ನೂರು ಕಿ.ಮೀ. ಪ್ರಯಾಣದಲ್ಲಿ ಹದಿಮೂರು ಕೆ.ಜಿ. ಕಾರ್ಬನ್‌ ಡೈಆಕೈಡನ್ನು ಉಗುಳುತ್ತದೆ. ಇದು ನಮ್ಮ ಕಾರ್ಬನ್‌ ಹೆಜ್ಜೆಗುರುತು. ಪ್ರಯಾಣದ ನಡುವೆ ನಾವು ಬಾಳೆಹಣ್ಣು ತಿಂದೆವೋ ಸೇಬು ತಿಂದೆವೋ ಎನ್ನುವುದರ ಮೇಲೆ ಕಾರ್ಬನ್‌ ಹೆಜ್ಜೆಗುರುತು ಹೆಚ್ಚು ಕಡಿಮೆ ಆಗಬಹುದು. ಸೇಬಾದರೆ ಅದನ್ನು ಸಾವಿರಾರು ಕಿ.ಮೀ. ದೂರದಿಂದ ತಂದಿರುತ್ತಾರೆ, ಎಷ್ಟೋ ದಿನಗಳವರೆಗೆ ಸ್ಟೋರೇಜಿನಲ್ಲಿ ಇಟ್ಟಿರುತ್ತಾರೆ. ಇವೆಲ್ಲವೂ ಇನ್ನಷ್ಟು ಕಾರ್ಬನ್‌ ಡೈಆಕ್ಸೈಡ್‌ ಉಗುಳುವಿಕೆಗೆ ಕಾರಣವಾಗಿರುತ್ತವೆ.

ಮನೆಗೆ ಸಮೀಪವಿರುವ ಕಚೇರಿಗೆ ಕಾರ್ಬನ್‌ ಹೆಜ್ಜೆಗುರುತು ಮೂಡದಂತೆ ನಡೆದೇ ಹೋಗಬಹುದು. ನೂರು ಗ್ರಾಂ ಕಾರ್ಬನ್‌ ಡೈಆಕ್ಸೈಡ್‌ ಹೊರಸೂಸಿ ಬೈಕ್‌ನಲ್ಲೂ ಹೋಗಬಹುದು. ಬೈಕಿನಲ್ಲಿ ಇನ್ನೊಬ್ಬರನ್ನು ಕರೆದುಕೊಂಡು ಹೋದರೆ ನಮ್ಮ ಕಾರ್ಬನ್‌ ಹೆಜ್ಜೆಗುರುತು ಅರ್ಧದಷ್ಟು ಕಡಿಮೆಯಾಗುತ್ತದೆ. ಎಲ್ಲವೂ ನಮ್ಮ ಆಯ್ಕೆಯನ್ನು ಅವಲಂಬಿಸಿವೆ.

ಐದು ಪ್ಲಾಸ್ಟಿಕ್ ಚೀಲಗಳನ್ನು ತಯಾರಿಸುವಾಗ ಒಂದು ಕೆ.ಜಿ. ಕಾರ್ಬನ್‌ ಡೈಆಕ್ಸೈಡ್ ವಾತಾವರಣ ಸೇರುತ್ತದೆ. ಎರಡು ನೀರಿನ ಬಾಟಲು ತಯಾರಿಸುವಾಗಲೂ ಇಷ್ಟೇ ಕಾರ್ಬನ್‌ ಡೈಆಕ್ಸೈಡ್ ವಾತಾವರಣ ಸೇರುತ್ತದೆ. ಮಾಲ್‌ಗಳಿಗೆ ಹೋಗುವ ಬದಲು ಮನೆಯಾಚೆಯ ಪುಟ್ಟ ದುಕಾನಿನಿಂದ ದಿನಸಿಯನ್ನು ತಂದರೆ ಅನಗತ್ಯದ ಅನೇಕ ವಸ್ತುಗಳು ಮನೆ ಸೇರುವುದು ತಪ್ಪುತ್ತದೆ. ಖರ್ಚೂ ಕಡಿಮೆಯಾಗುತ್ತದೆ. ಲಾಕ್‌ಡೌನ್‌ ಕಾಲದಲ್ಲಿ ಜೀವ ಉಳಿಸಿದ ಆ ಅಂಗಡಿಯಾತನ ಹೊಟ್ಟೆಯೂ ತಣ್ಣಗಾಗುತ್ತದೆ. ಊಟದ ಎಲೆಯ ಮೇಲೆ ಬಿಟ್ಟ ಅನ್ನ ತೊಟ್ಟಿ ಸೇರಿ ಕೊಳೆತು ಮಿಥೇನ್‌ ಅನಿಲವನ್ನು ಉತ್ಪಾದಿಸುತ್ತದೆ. ನಾವು ಅಗತ್ಯಕ್ಕಿಂತ ತುಸು ಕಡಿಮೆ ಬಡಿಸಿಕೊಂಡರೂ ಈ ಭೂಮಿ ಅಷ್ಟರಮಟ್ಟಿಗೆ ತಣ್ಣಗಾಗುತ್ತದೆ. ಪ್ರತಿದಿನವೂ ಭೂದಿನವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.