ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಿಕ್ಷಕರಿಗೊಂದು ನೀತಿಸಂಹಿತೆ ಬೇಡವೇ?

ನಾವು ಧರಿಸುವ ಉಡುಪು ನಮ್ಮನ್ನು ಗೌರವಿಸುವಂತೆ ಇರಬೇಕು. ಈ ಸಣ್ಣ ಸೂಕ್ಷ್ಮವನ್ನು ಶಿಕ್ಷಕವೃಂದ ಮರೆತರೆ ಹೇಗೆ?
Last Updated 14 ಮಾರ್ಚ್ 2023, 22:01 IST
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ಸಹೋದ್ಯೋಗಿಯೊಬ್ಬರನ್ನು ಎದುರಿಗೆ ಕಂಡಾಗ ಫಕ್ಕನೆ ಆಶ್ಚರ್ಯವಾಯಿತು. ಮುನ್ನಾದಿನದವರೆಗೂ ಗಡ್ಡ ಬಿಟ್ಟುಕೊಂಡು, ಸ್ವಲ್ಪವೇ ಟ್ರಿಮ್ ಮಾಡಿಸಿಕೊಂಡು ಬರುತ್ತಿದ್ದವರು ನುಣ್ಣಗೆ ಗಡ್ಡ ಬೋಳಿಸಿಕೊಂಡು ಬಂದಿದ್ದರು. ಕುತೂಹಲಕ್ಕಾಗಿ ಅವರನ್ನು ಇತರರು ಪ್ರಶ್ನಿಸಿದಾಗ ಅವರಿಂದ ಬಂದ ಉತ್ತರವಿದು- ಅವರು ಯಾವುದೋ ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಲುವಾಗಿ ತಮ್ಮ ಗುರುಗಳನ್ನು ಭೇಟಿ ಯಾಗಿದ್ದರಂತೆ. ಅವರನ್ನು ಕಂಡ ತಕ್ಷಣ ಗುರುಗಳು ‘ನೀನು ಶಿಕ್ಷಕನೋ ಇಲ್ಲ ಸಿನಿಮಾ ನಟನೋ’ ಎಂದು ಪ್ರಶ್ನಿಸಿದರಂತೆ! ಇವರಿಗೆ ಒಂದೂ ಅರ್ಥವಾಗದೆ ಗುರು ಗಳನ್ನು ಕೇಳಿದಾಗ ಅವರು ಸ್ಪಷ್ಟವಾಗಿ ಹೇಳಿದ್ದಿಷ್ಟೇ: ‘ಶಿಕ್ಷಕರ ಉಡುಪು, ಮುಖಚಹರೆ ಹೇಗಿರಬೇಕೆಂದರೆ, ವಿದ್ಯಾರ್ಥಿಗಳು ಪಠ್ಯದ ಕಡೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತಿರಬೇಕು. ನೀವೇ ಸಿನಿಮಾ ನಟರಂತೆ ಮಕ್ಕಳ ಮುಂದೆ ಹೋದರೆ, ಅವರು ಪಾಠ ಕೇಳುವುದು ಬಿಟ್ಟು ಇನ್ನೇನೋ ಯೋಚನೆ ಮಾಡುತ್ತಾ ಕಳೆದುಹೋಗುತ್ತಾರೆ!’

ಹೌದಲ್ಲ, ಅವರ ಸಂದೇಶ ಅದೆಷ್ಟು ನೇರ! ಎಲ್ಲರೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಾ, ತಾವಿರುವುದು ಒಂದು ಸಮಾಜದಲ್ಲಿ, ತಮಗೆ ಸಾಮಾಜಿಕವಾದ ಬದ್ಧತೆಯೂ ಇದೆ ಎಂಬುದನ್ನು ಮರೆತಂಥ ಸಮಯವಿದು. ಟ್ರೆಂಡಿಯಾಗಿದ್ದರೆ ಮಾತ್ರ ತಮಗೆ ಮನ್ನಣೆ ಎಂಬ ಭ್ರಮೆಯೂ ಅನೇಕರಲ್ಲಿದೆ. ಆದರೆ, ನಿಜಾರ್ಥದಲ್ಲಿ ಮಕ್ಕಳಿಗೆ ತಮ್ಮ ಜ್ಞಾನವನ್ನು ತಲುಪಿಸಬೇಕೆಂಬ ಪ್ರಯತ್ನದಲ್ಲಿ ಇರುವವರಿಗೂ ಬರೀ ಬಾಹ್ಯ ಅಲಂಕಾರದಿಂದ ಗೆದ್ದೇವೆಂದು ಭಾವಿಸು ವವರಿಗೂ ಭಿನ್ನತೆ ಇದ್ದೇ ಇದೆಯಲ್ಲ!

ವಿದ್ಯಾರ್ಥಿಗಳ ಯೋಚನಾಲಹರಿ ಶಿಕ್ಷಕರು ಇಂದೇನು ಬೋಧಿಸಲಿದ್ದಾರೆ ಎಂಬುದರ ಕಡೆಗೆ ಇರ ಬೇಕಲ್ಲದೇ ಅವರೆಷ್ಟು ಸುಂದರವಾಗಿ ಬಂದಿದ್ದಾರೆ ಎಂಬುದರ ಕಡೆಗಲ್ಲವಲ್ಲ! ಹಾಗೆಂದು ಹೇಗೆ ಬಂದರೂ ನಡೆಯುತ್ತದೆ ಎಂದರ್ಥವಲ್ಲ. ಜೀನ್ಸ್ ಪ್ಯಾಂಟ್- ಟಿ ಷರ್ಟ್‌ನಲ್ಲಿ ಗುರುಗಳನ್ನು ಕಲ್ಪಿಸಿಕೊಳ್ಳಬಲ್ಲೆವೇ? ಕಾರ್ಪೊರೇಟ್ ಸಂಸ್ಕೃತಿಯೇ ಶಿಕ್ಷಣ ಕ್ಷೇತ್ರಕ್ಕೂ ಅನ್ವಯಿಸುವುದೇ?

ನಾವು ಧರಿಸುವ ಉಡುಪು, ತಿದ್ದಿತೀಡಿ ನಸುವಾಗಿ ಅಲಂಕರಿಸಿದ ಮುಖ ನಮ್ಮ ವ್ಯಕ್ತಿತ್ವವೇನು ಎಂಬುದನ್ನು ಹೇಳುತ್ತದೆ. ಮನಸ್ಸನ್ನು ಕೆರಳಿಸದೇ ಅರಳಿಸು ವಂತೆ ವಿದ್ಯಾರ್ಥಿಗಳ ಮುಂದೆ ನಮ್ಮನ್ನು ನಾವು ತೆರೆದಿಡಬೇಕಲ್ಲವೇ? ಆಧುನಿಕವಾಗಿರುವುದು ಎಂಬು ದರ ನಿಜವಾದ ಅರ್ಥವೇನು? ನಮ್ಮನ್ನು ನಾವು ಪ್ರಶ್ನಿಸಿ ಕೊಳ್ಳಬೇಕಾದ ಸಮಯವಿದು. ಹೆಣ್ಣುಮಕ್ಕಳ ಕತೆಯೂ ಇದಕ್ಕಿಂತ ಭಿನ್ನವೇನಲ್ಲ.

ಶಿಕ್ಷಕಿಯರಿಗೆ ವಸ್ತ್ರಸಂಹಿತೆಯಾಗಿ ಸೀರೆಯನ್ನೇ ಕಡ್ಡಾಯ ಮಾಡಿದಾಗ ಅನೇಕರು ವಿರೋಧಿಸಿದರು. ಅದು ಕಾಲಿಗೆ ತೊಡರಿಕೊಳ್ಳುವ, ಮಳೆಯಲ್ಲಿ ನೆನೆದು ತೊಪ್ಪೆಯಾಗುವ, ಬಸ್ಸನ್ನೇರುವಾಗ ಮುಗ್ಗರಿಸುವ, ಪಾಠದ ನಡುವೆ ಅಲ್ಲಿ ಇಲ್ಲಿ ಸರಿಪಡಿಸಿಕೊಳ್ಳಬೇಕಾದ ಅನಿವಾರ್ಯ ಕಾಡುವ ಬಗೆಗೂ ಗುಲ್ಲೆಬ್ಬಿಸಿದರು. ಸರಿಯೇ, ಚೂಡಿದಾರ ಅತ್ಯಂತ ಅನುಕೂಲಕರವಾದ ವಸ್ತ್ರ, ಅನುಮಾನವಿಲ್ಲ. ಆದರೆ ಬರಬರುತ್ತಾ ಚೂಡಿದಾರ ಹಾಕಿಕೊಂಡು ಮೇಲೊಂದು ಶಾಲು ಹಾಕಿಕೊಳ್ಳುವ ಅಗತ್ಯವನ್ನೇ ಮರೆತರೆ ಹೇಗೆ? ಈ ಪ್ರಶ್ನೆ ಎದುರಾದಾಗಲೆಲ್ಲ ನಮ್ಮ ಬಟ್ಟೆ ನಮ್ಮ ಆಯ್ಕೆ ಎಂಬ ಮಾತು ಥಟ್ಟನೇ ಬರುತ್ತದೆ. ಆದರೆ ನೆನಪಿಡಬೇಕಾದುದು, ‘ಊಟ ತನ್ನಿಚ್ಛೆ, ನೋಟ ಪರರಿಚ್ಛೆ’ ಎಂಬ ಮಾತನ್ನು. ನಮ್ಮ ಉಡುಪು ನಮ್ಮನ್ನು ಗೌರವಿಸುವಂತಿರಬೇಕೆ ವಿನಾ ನಮ್ಮತ್ತ ಆಕರ್ಷಿಸು ವಂತೆ ಅಲ್ಲವಲ್ಲ? ಈ ಸಣ್ಣ ಸೂಕ್ಷ್ಮವನ್ನು ಶಿಕ್ಷಕ ವೃಂದ ಮರೆತರೆ ಹೇಗೆ? ಇದೇ ಕಾರಣಕ್ಕಿರಬೇಕು, ಕೆಲವು ಶಾಲಾ–ಕಾಲೇಜುಗಳಲ್ಲಿ ಸೀರೆಯನ್ನೂ ಇಂಥದ್ದೇ ಮಾದರಿಯಲ್ಲಿ ಉಡಬೇಕೆಂಬ ನಿಯಮವಿದೆ.

ಸಿನಿಮಾ ತಾರೆಯರ ಬದುಕನ್ನು ಜನ ನೋಡಿಕೊಂಡು ಸಂತೋಷಪಟ್ಟಂತೆ ತಮ್ಮನ್ನೂ ನೋಡುತ್ತಾರೆಂಬ ಕನಸೋ ಅಥವಾ ತಾವೂ ಯಾವುದೇ ನಾಯಕ, ನಾಯಕಿಗೆ ಕಡಿಮೆಯಿಲ್ಲ ಎಂಬಂತೆ ಗಂಡ-ಹೆಂಡತಿಯರ ಚಿತ್ರಗಳು, ಪ್ರಿವೆಡ್ಡಿಂಗ್ ಫೋಟೊಗಳು ದಂಡಿಯಾಗಿ ಬಂದು ಜಾಲತಾಣಗಳಲ್ಲಿ ಬೀಳುತ್ತಿವೆ. ಯಾರು ಯಾರನ್ನು ನೋಡಿದರೋ ಮೆಚ್ಚಿಕೊಂಡರೋ ಲೈಕು ಕೊಟ್ಟರೋ ಗೊತ್ತಿಲ್ಲ ಎಂಬಂ ತಿದ್ದರೂ ಆತ್ಮರತಿಯ, ಆತ್ಮಪ್ರಶಂಸೆಯ ಗುಂಗಿನಲ್ಲಿ ಕಳೆದುಹೋಗುವ ಮಂದಿಯೇ ಹೆಚ್ಚುತ್ತಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಇನ್ನಿಲ್ಲದಂತೆ ಗಮನಿಸುತ್ತಿರುತ್ತಾರೆ. ತರಗತಿಯ ಪಾಠಗಳನ್ನೂ ಟ್ರೋಲ್ ಮಾಡುವವರಿದ್ದಾರೆ. ಹಾಗಿರುವಾಗ ಶಿಕ್ಷಕ ರಾದವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್‌ಗಳು, ರೀಲ್ಸ್‌ ಅತ್ಯಂತ ಎಚ್ಚರಿಕೆಯಿಂದ ಕೂಡಿರಬೇಕಲ್ಲವೇ? ತೀರಾ ಖಾಸಗಿಯಾದ ಕ್ಷಣ ಗಳನ್ನೂ ಮೊಬೈಲಿನಲ್ಲಿ ಸೆರೆಹಿಡಿದು ಅವನ್ನು ಸಾರ್ವಜನಿಕಗೊಳಿಸಿದರೆ ವಿದ್ಯಾರ್ಥಿಗಳು ನಮ್ಮನ್ನು ನೋಡುವ ನೋಟವೇ ಬದಲಾದೀತು ಎಂಬ ಎಚ್ಚರಿಕೆ ಇರಬೇಕು.

ಶಿಕ್ಷಕರೆಂದರೆ ಬರೀ ವ್ಯಕ್ತಿಗಳಲ್ಲ, ವ್ಯಕ್ತಿತ್ವಗಳು. ಮಕ್ಕಳ ಮೇಲೆ ನಮ್ಮ ಪ್ರಭಾವ ಬಹಳಷ್ಟಿರುತ್ತದೆ, ಅದು ಕಾಣಬೇಕಾದುದು ಕೇವಲ ನಮ್ಮ ಪೋಸ್ಟ್‌ಗಳನ್ನು ಅವರು ಲೈಕ್ ಮಾಡಿದರೋ ನಮ್ಮ ಹುಟ್ಟಿದಹಬ್ಬ ದಂದು ನಮ್ಮ ಫೋಟೊಗಳನ್ನು ಸ್ಟೇಟಸ್‌ನಲ್ಲಿ ಹಾಕಿ ಕೊಂಡರೋ ಎಂಬುದರಲ್ಲಿ ಖಂಡಿತಾ ಅಲ್ಲ, ನಾವು ಶ್ರದ್ಧೆಯಿಂದ ಕಲಿಸಿದ್ದನ್ನು ಅವರೂ ಅಷ್ಟೇ ಶ್ರದ್ಧೆಯಿಂದ ಕಲಿತರೋ ಎಂಬುದರಲ್ಲಿ. ಬೋಧನಾಕ್ರಮ, ಕೌಶಲದ ಮೂಲಕ ಗೆದ್ದರೆ ಅದು ನಿಜಾರ್ಥದ ಗೆಲುವಾದೀತೇ ವಿನಾ ಅನಗತ್ಯ ಸಲುಗೆ ಬೆಳೆಸಿಕೊಳ್ಳುವುದರಿಂದ ಅಲ್ಲ.

ಅಷ್ಟಕ್ಕೂ ಶಿಕ್ಷಣವೆಂದರೆ ಅಂಕಪಟ್ಟಿಯಲ್ಲ, ಅದು ಬದುಕು. ಶಿಕ್ಷಕರೆಂದರೆ ಉಸಿರುಗಟ್ಟಿಸುವ ಹೊಗೆಬತ್ತಿ ಗಳಲ್ಲ, ದಾರಿ ಬೆಳಗುವ ಬೆಳಕ ಕಿರಣಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT