ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪಠ್ಯರಚನೆ; ವಸ್ತುಸಂಗತಿ ಆದ್ಯತೆಯಾಗಲಿ

ಬೇಕು ಪಂಥಾತೀತ, ಪಕ್ಷಾತೀತ ಧೋರಣೆಯ ಪಠ್ಯರಚನಾಕಾರರು, ಪರಿಶೀಲಕರು
Last Updated 22 ಸೆಪ್ಟೆಂಬರ್ 2021, 22:51 IST
ಅಕ್ಷರ ಗಾತ್ರ

‘ಪಠ್ಯಪುಸ್ತಕ ಪರಿಶೀಲನೆಯಲ್ಲಿ ಓಲೈಕೆಯ ರಾಜಕಾರಣ ಸಲ್ಲದು’ ಎಂಬ ಸಂಪಾದಕೀಯ (ಪ್ರ.ವಾ., ಸೆ. 21) ಅತ್ಯಂತ ಔಚಿತ್ಯಪೂರ್ಣ ಮತ್ತು ಸಕಾಲಿಕವಾದದ್ದು. ಬೆಳೆಯುವ ಹಂತದಲ್ಲಿರುವ ಮಕ್ಕಳಿಗೆ ಯಾವುದೇ ವಿಷಯದಲ್ಲಾದರೂ ಸರಿಯಾದ ಮತ್ತು ಪ್ರಸ್ತುತ ವೈಜ್ಞಾನಿಕ ಯುಗಕ್ಕೆ ತಕ್ಕುನಾದ ರೀತಿಯಲ್ಲಿರುವ ಹಾಗೂ ಕರಾರುವಾಕ್ಕಾಗಿರುವ ಮಾಹಿತಿಯನ್ನು ಪಠ್ಯಪುಸ್ತಕಗಳು ಒಳಗೊಂಡಿರಬೇಕು ಎಂಬುದು ಮಕ್ಕಳ ಶಿಕ್ಷಣದಲ್ಲಿ ಆಸಕ್ತಿ ಹೊಂದಿರುವವರೆಲ್ಲರ ಕಾಳಜಿ ಮತ್ತು ನಿರೀಕ್ಷೆ. ಹಾಗಿಲ್ಲದೆ ಆಕ್ಷೇಪಾರ್ಹ ವಿಷಯಗಳಿವೆ ಎಂದು ದೂರು ಬಂದಾಗ, ಪರಿಶೀಲನೆಯ ಸಲುವಾಗಿ ತಜ್ಞರ ಸಮಿತಿ ರಚಿಸುವುದೂ ಸರಿಯಾದ್ದೇ.

ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ವಿಷಯಗಳ ತಜ್ಞರೇ ಪಠ್ಯ ರಚನೆಯಲ್ಲಿ ಇರುತ್ತಾರಾದ್ದರಿಂದ ಹೆಚ್ಚು ವಿವಾದಗಳಿಗೆ ಆಸ್ಪದ ಇರುವುದಿಲ್ಲ. ಆದರೆ ಅದೇ ಸಮಾಜ ವಿಜ್ಞಾನ ಮತ್ತು ಇತಿಹಾಸ ವಿಷಯಗಳಿಗೆ ಸಂಬಂಧಿಸಿದ ಪಾಠಗಳು ಹಾಗೆಯೇ ವಸ್ತುನಿಷ್ಠವಾಗಿಯೇ ಇರುತ್ತವೆಂಬುದನ್ನು ಈಚಿನ ದಿನಗಳಲ್ಲಿ ನಿರೀಕ್ಷಿಸುವುದೇ ಸರಿಯಲ್ಲವೇನೋ ಎಂಬ ಭಾವನೆಗೆ ಮತ್ತೆ ಮತ್ತೆ ಎಡೆ ದೊರೆಯುತ್ತಿರುವುದು ವಿಷಾದಕರ. ಅದರ ರಚನಾಕಾರರು ಮತ್ತು ಪರಿಶೀಲಕರು ವಸ್ತುಸಂಗತಿಗಳನ್ನು ಮಾತ್ರ ಸೇರಿಸಿದರೆ ವಿವಾದಕ್ಕೆ ಎಡೆ ಇರುವುದಿಲ್ಲ. ಆದರೆ ಹಾಗಾಗದೆ, ಸರ್ಕಾರ ಮುನ್ನಡೆಸುವ ಪಕ್ಷ ಬದಲಾದಾಗ ಆಯಾ ಪಕ್ಷಗಳ ವಿಚಾರ, ಧೋರಣೆಗಳಿಗೆ ಅನುಸಾರವಾಗಿಯೋ ಅವುಗಳನ್ನು ಪರೋಕ್ಷವಾಗಿ ಬಿಂಬಿಸುವ ರೀತಿಯಲ್ಲೋ ಪಠ್ಯಗಳು ರಚಿತವಾಗುತ್ತಿವೆಯೆಂದು ಈಚೆಗೆ ಬಹಳವಾಗಿ ಕೇಳಿಬರುತ್ತಿದೆ. ಇದಕ್ಕಿಂತಲೂ ಹೇಯವಾದ್ದು ಇನ್ನೊಂದಿಲ್ಲ.

ಹೊಸಮತಗಳು, ಧರ್ಮಗಳು ಉದಯವಾದದ್ದು ವಸ್ತುಸತ್ಯ. ಇವುಗಳ ಉದಯಕ್ಕೆ ಕಾರಣಗಳೇನೆಂದು ಇದಮಿತ್ಥಂ ಎಂದು ಹೇಳಲಾಗದಿದ್ದಾಗ ಅವರವರ ವಿಚಾರಧಾರೆಗೆ ತಕ್ಕಂತೆ ವ್ಯಾಖ್ಯಾನಿಸುವುದು ಇದ್ದೇ ಇರುತ್ತದೆ. ವೈದಿಕ ಧರ್ಮ, ವೈದಿಕ ದರ್ಶನಗಳು, ವೈದಿಕಾಚರಣೆಗಳು ಕೆಲವು ಸಾವಿರ ವರ್ಷಗಳು ರೂಢಿಯಲ್ಲಿದ್ದ ನಂತರದಲ್ಲಿ ಅವುಗಳ ತತ್ವಗಳಲ್ಲಿ ಹೆಚ್ಚು ಸಮಾಧಾನ ಕಾಣದೆ, ಯಜ್ಞ ಯಾಗಾದಿಗಳ ಸಮಯದಲ್ಲಿ ಆಗುತ್ತಿದ್ದ ಪ್ರಾಣಿಬಲಿಯನ್ನು ವಿರೋಧಿಸಿ ಮೊದಲಿಗೆ ಜೈನ ಧರ್ಮ ಉದಿಸಿತು. ಹೆಚ್ಚು ಕಡಿಮೆ ಅದೇ ಸಮಯದಲ್ಲಿ ಕೆಲವೇ ವರ್ಷಗಳ ಅಂತರದಲ್ಲಿ ವೈದಿಕ ದರ್ಶನಗಳು ಹೇಳುವ ದೇವರು, ಆತ್ಮಗಳನ್ನು ಒಪ್ಪದೆ ಅಥವಾ ಅದರಲ್ಲಿ ಸಮಾಧಾನ ಸಿಗದೆ ಬೇರೊಂದೇ ವಿಚಾರ ಪ್ರಣಾಲಿಯ ಬೌದ್ಧ ಧರ್ಮ ಉದಿಸಿತು. ಜೈನವು ಪೂರ್ತಿ ಅಹಿಂಸೆಗೆ ಪ್ರಾಧಾನ್ಯ ನೀಡಿದರೆ ಬೌದ್ಧ ಧರ್ಮ ದಯೆ, ಕರುಣೆಗೆ ಪ್ರಾಧಾನ್ಯ ನೀಡಿದರೂ ಮಾಂಸಾಹಾರವನ್ನೇನೂ ವರ್ಜಿಸಲು ಹೇಳಲಿಲ್ಲ ಮತ್ತು ಬೌದ್ಧರಲ್ಲೂ ಬಲಿಯೇನೂ ಇಲ್ಲದೆ ಇಲ್ಲ. ‌

‘ವೇದವನೋದಿದವರ ಮುಂದೆ ಎಲೆ ಹೋತೇ ಅಳು ಕಂಡಾ’ ಎಂಬಂಥ ಬಸವಣ್ಣನವರ ವಚನಗಳಲ್ಲೂ (12ನೇ ಶತಮಾನ) ಯಜ್ಞ ವಿರೋಧ ಹೇಳುವಾಗ ಮೇಲು ನೆಲೆಗೆ ಬಂದಿರುವುದು ಅದರಲ್ಲಿರುವ ಹಿಂಸೆಯೇ ಹೊರತು ಅದರ ವಧೆಯಿಂದ ಆಹಾರ ನಾಶವಾಯಿತೆಂಬ ಮಾತಿಲ್ಲ. ಇದು ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಒಪ್ಪಿಕೊಂಡುಬಂದಿರುವ ಒಂದು ಸಂಗತಿ. ಆದರೆ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದವರೊಬ್ಬರು, ‘ವೇದಗಳ ಕಾಲದಲ್ಲಿದ್ದ ಕೆಲ ಪದ್ಧತಿ, ಆಚರಣೆಗಳು ಜನರ ಪರವಾಗಿರಲಿಲ್ಲ. ಜನರು ಆಹಾರದ ಸಮಸ್ಯೆ ಎದುರಿಸುತ್ತಿರುವಾಗ ಯಾಗ ಹಾಗೂ ಯಜ್ಞದ ಹೆಸರಿನಲ್ಲಿ ಆಹಾರ ವ್ಯರ್ಥ ಮಾಡಲಾಗುತ್ತದೆ ಎಂಬ ಅಭಿಪ್ರಾಯ ಮೂಡಿದ್ದರಿಂದ ಹೊಸ ಧರ್ಮಗಳು ಉದಯವಾದುವು ಎಂಬ ಅಂಶ ಪಠ್ಯಕ್ರಮದಲ್ಲಿತ್ತು’ ಎಂದು ಹೇಳಿದ್ದಾರೆ (ಪ್ರ.ವಾ., ಸೆ. 19). ಈ ‘ಜನರ ಪರ’, ‘ಆಹಾರ ವ್ಯರ್ಥ’ ಎಂಬುದು ಅತ್ಯಂತ ಪ್ರಗತಿಪರವೆಂದು ಅನಿಸುತ್ತದಾದರೂ ಅದು ವಸ್ತುಸಂಗತಿಯ ಮೇಲೆ ಹೇರಿದ ವ್ಯಾಖ್ಯಾನವೇ ಹೊರತು ವಸ್ತುಸಂಗತಿಯ ಕಥನವೆನಿಸುವುದಿಲ್ಲ.

ಇತಿಹಾಸವನ್ನು ಅದು ಇರುವಂತೆಯೇ ಬೋಧಿಸಿದರೆ ವಿವಾದಕ್ಕೆ ಎಡೆಯಿರುವುದಿಲ್ಲ. ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಮತ್ತು ಕಿತ್ತೂರು ಚನ್ನಮ್ಮ ಹೋರಾಡಿದರು ಎಂಬುದು ವಸ್ತುಸಂಗತಿ. ಅದಕ್ಕಾಗಿ ಟಿಪ್ಪು ತನ್ನ ಮಕ್ಕಳನ್ನೂ ಒತ್ತೆಯಾಗಿರಿಸಿದನೆಂಬುದು ಯಾರ ಕಣ್ಣನ್ನಾದರೂ ಒದ್ದೆ ಮಾಡುತ್ತದೆ. ಆದರೆ ಈ ಸಂಗತಿಯಿಂದ ಅವನೊಬ್ಬ ಮಹಾನ್ ದೇಶಭಕ್ತನೆಂದು ಬಿಂಬಿಸುವುದು ಹಾಗೆಯೇ ಚನ್ನಮ್ಮನನ್ನು ದೊಡ್ಡ ದೇಶಭಕ್ತಳೆಂದು ಬಿಂಬಿಸುವುದು ಅದಕ್ಕೆ ಮಾಡಿದ ಉದಾರ ವ್ಯಾಖ್ಯಾನವೇ ಸರಿ.

ಇಡೀ ಭಾರತ ಒಂದು ಆಳ್ವಿಕೆಯಲ್ಲಿಲ್ಲದೆ ಹಲವಾರು ರಾಜರು ತಮ್ಮ ತಮ್ಮ ಆಳ್ವಿಕೆಯ ಪ್ರದೇಶಗಳಲ್ಲಿ ಆಳುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷರು ಮಾತ್ರವಲ್ಲದೆ ತನ್ನ ರಾಜ್ಯದ ಮೇಲೆ ಆಕ್ರಮಣ ಮಾಡಿದ ತನ್ನ ಪಕ್ಕದ ಪ್ರಾಂತ್ಯದವನೊಂದಿಗೂ ಅಷ್ಟೇ ವೀರಾವೇಶದಿಂದ ಟಿಪ್ಪು ಅಷ್ಟೇ ಏಕೆ ಆಗಿನ ಎಲ್ಲ ರಾಜರೂ ಹೋರಾಡುತ್ತಿದ್ದರು. ಟಿಪ್ಪುವನ್ನೂ ಒಳಗೊಂಡಂತೆ ಆಗಿನ ರಾಜರುಗಳಿಗೆ ಅಕ್ಕಪಕ್ಕದ ರಾಜರೆಲ್ಲರೂ ಬ್ರಿಟಿಷರಷ್ಟೇ ಶತ್ರುಗಳು ಮತ್ತು ವಿರೋಧಿಗಳು. ಸಾಂಸ್ಕೃತಿಕವಾಗಿ ಭಾರತ ಸಹಸ್ರಾರು ವರ್ಷಗಳಿಂದ ಒಂದು ಎಂಬ ಭಾವ ದೃಢವಾಗಿದ್ದರೂ ರಾಜಕೀಯವಾಗಿ ಅದು ಒಂದು ಎಂಬ ಭಾವ ಇರಲೇ ಇಲ್ಲ ಎಂಬುದೇ ವಸ್ತುಸತ್ಯ.

ರಾಷ್ಟ್ರೀಯತೆಯ ಭಾವ ಉದಿಸಿದ 19ನೇ ಶತಮಾನದ ನಂತರದಲ್ಲಿ ದೇಶಭಕ್ತಿಯ ಭಾವನೆಗಳಿಗೆ ಹೆಚ್ಚು ಉಕ್ಕಂದ ಬಂದದ್ದು ಎಂಬುದನ್ನು ಹೇಗೆ ತಾನೇ ಮರೆಯುವುದು? ಆದ್ದರಿಂದ ಪಠ್ಯಪುಸ್ತಕಗಳನ್ನು ರಚಿಸುವಾಗ ಯಾವುದೋ ಮಂಡಳಿ ಆಕ್ಷೇಪಿಸಿತೆಂಬ ಕಾರಣಕ್ಕೆ ಇನ್ನಾವುದೋ ಸಮುದಾಯಕ್ಕೆ ನೋವಾಗುತ್ತದೆಂಬ ಕಾರಣಕ್ಕೆ ತಿದ್ದುತ್ತಾ ಹೋಗುವುದು ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT