ಸೋಮವಾರ, ಫೆಬ್ರವರಿ 24, 2020
19 °C
ಶಿಕ್ಷಕೇತರ ಸಿಬ್ಬಂದಿಯ ಪ್ರಮಾಣ ಸಮರ್ಪಕವಾಗಿ ಇದ್ದರಷ್ಟೇ ಶಿಕ್ಷಕರು ಶಿಕ್ಷಣೇತರ ಕಾರ್ಯಗಳನ್ನು ಅವರಿಗೊಪ್ಪಿಸಿ, ಬೋಧನೆಯಲ್ಲಿ ತೊಡಗಲು ಸಾಧ್ಯ

ಉತ್ತಮ ಬೋಧನೆಗೆ ಬೇಕು ಶಿಕ್ಷಕೇತರರು!

ಡಾ. ಎಚ್‌.ಬಿ.ಚಂದ್ರಶೇಖರ್‌ Updated:

ಅಕ್ಷರ ಗಾತ್ರ : | |

Prajavani

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಶಾಲೆಗಳಿಗೆ ‘ಡಿ’ ದರ್ಜೆ ನೌಕರರನ್ನು ನೇಮಿಸಲು ಶಿಫಾರಸು ಮಾಡಿರುವುದು ಸೂಕ್ತವಾಗಿದೆ. ಈ ವಿಷಯವನ್ನು ಎಸ್.ಮಲ್ಲಿಕಾರ್ಜುನಯ್ಯ ಅವರು ವಿಧಾನ ಪರಿಷತ್‌ನಲ್ಲಿ 35 ವರ್ಷಗಳ ಹಿಂದೆ, ಕರ್ನಾಟಕ ಶಿಕ್ಷಣ ಕಾಯ್ದೆ ಕುರಿತಂತೆ ನಡೆದ ಚರ್ಚೆಯ ಸನ್ನಿವೇಶದಲ್ಲಿ ಪ್ರಸ್ತಾಪಿಸಿದ್ದರು.

‘ಪ್ರೈಮರಿ ಶಾಲೆಗಳಲ್ಲಿ ಜವಾನರುಗಳಿಲ್ಲ. ವಿನೋಭಾ ಭಾವೆಯವರ ಆದರ್ಶದ ರೀತಿಯಲ್ಲಿ ಉಪಾಧ್ಯಾಯರೇ ಬಾಗಿಲು ತೆಗೆದು, ಕಸ ಗುಡಿಸಿ, ತರಗತಿ ನಡೆಸುವ ಪದ್ಧತಿಯೇನೋ ಒಳ್ಳೆಯದು. ಆದರೆ ಅನೇಕ ಮಹನೀಯರು ಶಾಲೆಗಳಿಗೆ ಲೈಬ್ರರಿ ಪುಸ್ತಕಗಳು, ಟೇಬಲ್‍ಗಳು, ಬೆಂಚ್‍ಗಳು, ಸ್ಟೂಲ್‍ಗಳು ಮುಂತಾದವುಗಳನ್ನು ಕೊಡುತ್ತಾರೆ. ಇವುಗಳನ್ನು ಉಳಿಸಿಕೊಳ್ಳಬೇಕಾದರೆ ಜವಾನರ ಅವಶ್ಯಕತೆ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳು ಶಾಲೆಗಳಿಗೆ ಸರಿಯಾಗಿ ಬರುವುದಿಲ್ಲ. ಅಂಥ ಸಮಯದಲ್ಲಿ ಮನೆಗೆ ಜವಾನರನ್ನು ಕಳುಹಿಸಿ ಹುಡುಗರನ್ನು ಕರೆ ಯಿಸಿ ಪಾಠ ಹೇಳಬೇಕಾದ ಅವಶ್ಯಕತೆ ಇದೆ. ಈ ಎಲ್ಲಾ ಕಾರಣಗಳಿಂದ ಪ್ರತಿಯೊಂದು ಶಾಲೆಯಲ್ಲಿ ಜವಾನ ರನ್ನು ನೇಮಿಸತಕ್ಕದ್ದು ಅವಶ್ಯ’ ಎಂದು ಅಭಿಪ್ರಾಯಪಟ್ಟಿದ್ದರು. ಈ ಅಂಶವು ಪ್ರಸಕ್ತ ಸನ್ನಿವೇಶದಲ್ಲಿಯೂ ಸೂಕ್ತವಾಗಿಯೇ ಇರುವುದನ್ನು ಗಮನಿಸಬಹುದು. ಇಂತಹ ಅನೇಕ ಸೂಕ್ಷ್ಮ ಹಾಗೂ ಮಹತ್ವದ ವಿಷಯಗಳು ಹೇಗೆ ನಮ್ಮೆಲ್ಲರ ಕಣ್ತಪ್ಪಿ ಜಾರಿಯಾಗದೇ ಉಳಿಯುತ್ತವೆ ಎಂಬುದು ಕುತೂಹಲದ ಮತ್ತು ಬೇಸರದ ಸಂಗತಿ.

ಶಾಲೆಗಳಲ್ಲಿ ಗುಮಾಸ್ತರು, ಲೆಕ್ಕಿಗರು, ಪ್ರಯೋ ಗಾಲಯ ಸಹಾಯಕರು, ಜವಾನರು, ರಾತ್ರಿ ಕಾವಲುಗಾರರಂತಹ ಶಿಕ್ಷಕೇತರರ ಅವಶ್ಯಕತೆ ಇದೆ. ಹೆಚ್ಚಿನ ಖಾಸಗಿ ಶಾಲೆಗಳು ಶಿಕ್ಷಕೇತರ ಸಿಬ್ಬಂದಿಯನ್ನು ಹೊಂದಿವೆ. ಶಿಕ್ಷಕೇತರ ಸಿಬ್ಬಂದಿಯ ಪ್ರಮಾಣ ಸಮರ್ಪಕವಾಗಿ ಇದ್ದಲ್ಲಿ ಶಿಕ್ಷಕರು ಬೋಧನ ಕಲಿಕಾ ಚಟುವಟಿಕೆಗಳ ಕಡೆ ಗಮನಹರಿಸಲು ಅನುಕೂಲವಾಗುತ್ತದೆ. ಇಲ್ಲದಿದ್ದಲ್ಲಿ ಶಾಲೆಗಳಲ್ಲಿ ಕೈಗೊಳ್ಳಲೇಬೇಕಾದ ಶಿಕ್ಷಣೇತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಇದರಿಂದ ಅವರ ಮುಖ್ಯ ಕಾರ್ಯವಾದ ಬೋಧನಾ ಚಟುವಟಿಕೆಗಳ ಆಯೋಜನೆ, ಅನುಷ್ಠಾನ, ನಿರ್ವಹಣೆಯಲ್ಲಿ ಅವರ ಗಮನ ಸಹಜವಾಗಿ ಕಡಿಮೆಯಾಗುತ್ತದೆ. ಇದು ಮಕ್ಕಳ ಕಲಿಕಾ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ, ಬೋಧಕರ ಹುದ್ದೆಗಳನ್ನು ಭರ್ತಿ ಮಾಡಲು ನೀಡುವ ಪ್ರಾಮುಖ್ಯವನ್ನೇ ಬೋಧಕೇತರ ಹುದ್ದೆಗಳ ನೇಮಕಾತಿಗೂ ನೀಡುವುದು ಅಗತ್ಯವಾಗಿದೆ.

ಪ್ರಸ್ತುತ ಚರ್ಚೆಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಈ ವಿಷಯದ ಬಗ್ಗೆ ಇರುವ ಪ್ರಸ್ತಾವಗಳನ್ನು ಕುತೂಹಲದಿಂದ ಗಮನಿಸಿದೆ. ದೇಶದ ಅತಿ ಕಡಿಮೆ ಶಾಲೆಗಳಲ್ಲಿ ಬೆಂಬಲಿತ ಸಿಬ್ಬಂದಿ ಇರುವ ಕಾರಣ, ಮಧ್ಯಾಹ್ನದ ಊಟದ ನಿರ್ವಹಣೆಯಿಂದ ಹಿಡಿದು ಶಾಲೆಗಳ ಅಗತ್ಯಗಳನ್ನು ಪೂರೈಸಿಕೊಳ್ಳುವ ತನಕ ಎಲ್ಲಾ ಕಾರ್ಯಗಳನ್ನು ಶಿಕ್ಷಕರು ಮಾಡಬೇಕಾಗುತ್ತದೆ ಎಂಬ ಅಂಶವನ್ನು ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಪರಿಹಾರವಾಗಿ 8 ಕಿ.ಮೀ.ನಿಂದ 10 ಕಿ.ಮೀ. ವ್ಯಾಪ್ತಿಯ ಶಾಲೆಗಳಲ್ಲಿರುವ ದೊಡ್ಡ ಸರ್ಕಾರಿ ಪ್ರೌಢಶಾಲೆಯನ್ನು ‘ಶಾಲಾ ಸಂಕೀರ್ಣ’ ಎಂದು ಪದನಾಮೀಕರಿಸಿ, ಆ ಶಾಲೆಗೆ ಸಾಮಾನ್ಯ ಆಡಳಿತ, ಲೆಕ್ಕ ನಿರ್ವಹಣೆ, ಶಾಲಾ ಸ್ವಚ್ಛತೆ, ಶಾಲಾ ಆಸ್ತಿ ನಿರ್ವಹಣೆಯಂತಹ ಕಾರ್ಯಗಳನ್ನು ಮಾಡಲು ಅಗತ್ಯವಾದ ಬೆಂಬಲಿತ ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು ಹಾಗೂ ಈ ಸಿಬ್ಬಂದಿಗೆ ಸಾರಿಗೆ ಸೌಲಭ್ಯ ಅಥವಾ ಸಾರಿಗೆ ಭತ್ಯೆ ನೀಡುವ ಮೂಲಕ, ಶಾಲಾ ಸಂಕೀರ್ಣದ ಶಾಲೆಯ ಜೊತೆಗೆ ಅದರ ವ್ಯಾಪ್ತಿಯ ಇತರ ಶಾಲೆಗಳಿಗೂ ತೆರಳಿ ಕಾರ್ಯನಿರ್ವಹಣೆ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದು ನೀತಿಯಲ್ಲಿ ವಿವರಿಸಲಾಗಿದೆ. ಸಿಬ್ಬಂದಿಯು ಅನೇಕ ಶಾಲೆಗಳಿಗೆ ತೆರಳಿ ಕಾರ್ಯನಿರ್ವಹಣೆ ಮಾಡುವುದು ನೂತನ ಅಂಶವಾಗಿದೆ. ಸಿಬ್ಬಂದಿಯು ಇತರ ಶಾಲೆಗಳಿಗೆ ಹೋಗಿ ಅಲ್ಲಿ ಕಾರ್ಯನಿರ್ವಹಣೆ ಮಾಡಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಸವಾಲಿನ ಸಂಗತಿಯೇ ಆಗಿದೆ. ಇದು ಪ್ರಾಯೋಗಿಕವಾಗಿ ಜಾರಿಯಾದ ಬಳಿಕವಷ್ಟೇ ಇದರ ಪರಿಣಾಮ ತಿಳಿಯಲು ಸಾಧ್ಯ.

ಶಿಕ್ಷಕರ ಹುದ್ದೆಗಳೂ ಸೇರಿದಂತೆ ಬೆಂಬಲಿತ ಸಿಬ್ಬಂದಿಯ ಹುದ್ದೆಗಳನ್ನು ಸಕಾಲದಲ್ಲಿ ಭರ್ತಿ ಮಾಡಲು ಶಿಕ್ಷಣ ಕ್ಷೇತ್ರಕ್ಕೆ ಅಧಿಕ ಅನುದಾನ ನೀಡಬೇಕಾದುದು ಅನಿವಾರ್ಯ ಸಂಗತಿಯಾಗಿದೆ. ಈ ಸಾಲಿನಲ್ಲಿ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಶಾಲಾ ಶಿಕ್ಷಣಕ್ಕೆ ₹56,536 ಕೋಟಿ ನಿಗದಿಪಡಿಸಲಾಗಿದೆ. ದೇಶದಲ್ಲಿರುವ 11 ಲಕ್ಷಕ್ಕೂ ಅಧಿಕ ಸರ್ಕಾರಿ ಶಾಲೆಗಳಿಗೆ ಈ ಮೊತ್ತ ಕಡಿಮೆಯೆಂದೇ ಹೇಳಬಹುದು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ದಾಖಲಿಸಿರುವಂತೆ, ಶಿಕ್ಷಣಕ್ಕೆ ದೇಶದ ಜಿಡಿಪಿಯ ಶೇ 6ರಷ್ಟನ್ನು ವೆಚ್ಚ ಮಾಡಬೇಕೆಂಬ ಕುರಿತು 1968 ಹಾಗೂ 1986ರ ರಾಷ್ಟ್ರೀಯ ಶಿಕ್ಷಣ ನೀತಿಗಳಲ್ಲಿ ಉಲ್ಲೇಖಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ವೆಚ್ಚವು ಶೇ 3ರ ಆಸುಪಾಸಿನಲ್ಲಿದೆ. ಶಿಕ್ಷಣ ಕ್ಷೇತ್ರಕ್ಕೆ ಅಮೆರಿಕ ಶೇ 5, ಇಂಗ್ಲೆಂಡ್ ಶೇ 5.5, ದಕ್ಷಿಣ ಆಫ್ರಿಕಾ ಶೇ 6, ಫಿನ್‍ಲ್ಯಾಂಡ್ ಶೇ 7 ಹಾಗೂ ಭೂತಾನ್ ಶೇ 7.5ರಷ್ಟು ವೆಚ್ಚ ಮಾಡುತ್ತಿವೆ. ನಮ್ಮ ದೇಶದಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ವೆಚ್ಚ ಮಾಡಬೇಕಾದ ಅಗತ್ಯ ಇದೆ. ಎಷ್ಟೇ ಆದರೂ ಗುಣಮಟ್ಟಕ್ಕೆ ಹೆಚ್ಚಿನ ಹಣದ ವಿನಿಯೋಗ ಅಗತ್ಯವಲ್ಲವೇ? 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)