ಸೋಮವಾರ, ಮಾರ್ಚ್ 20, 2023
24 °C

ಸಂಗತ | ಕಲಿಕೆಯಲ್ಲಿ ಚೇತರಿಕೆ ಎಂದು?

ಡಾ. ಕೆ.ಎಸ್.ಶುಭ್ರತಾ Updated:

ಅಕ್ಷರ ಗಾತ್ರ : | |

‘ಕರ್ನಾಟಕದಲ್ಲಿ ಮೂರನೇ ತರಗತಿಯ ಶೇಕಡ 9ರಷ್ಟು ಮಕ್ಕಳು ಮಾತ್ರ ಎರಡನೇ ತರಗತಿಯ ಪುಸ್ತಕಗಳನ್ನು ಓದಬಲ್ಲರು!’ ಈ ಆಘಾತಕಾರಿ ವಿಷಯವನ್ನು ಬಯಲು ಮಾಡಿರುವುದು, ಪ್ರಥಮ್ ಸಂಸ್ಥೆಯ ಎಎಸ್‌ಇಆರ್‌ ಕೇಂದ್ರ ನಡೆಸುವ ರಾಷ್ಟ್ರ ಮಟ್ಟದ ಶಿಕ್ಷಣ ಸಮೀಕ್ಷೆಯ ವರದಿ. ಕೋವಿಡ್‍ನಿಂದಾಗಿ ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಸಮೀಕ್ಷೆಯನ್ನು ಈಗ ಮತ್ತೆ ಕೈಗೊಳ್ಳಲಾಗಿದೆ.

2018ರಲ್ಲಿ ನಡೆದ ಸಮೀಕ್ಷೆಯಲ್ಲಿ, ಈ ಸಂಖ್ಯೆ ಶೇ 19 ಇದ್ದರೆ, ಈ ವರ್ಷ ಇದು ಶೇ 9ಕ್ಕೆ ಇಳಿದಿರುವುದು ನಮ್ಮೆಲ್ಲರನ್ನೂ ಚಿಂತೆಗೆ ಹಚ್ಚಬೇಕು. ಶಿಕ್ಷಣ ಇಲಾಖೆಯೇನೋ ತಾನು ‘ಕಲಿಕಾ ಚೇತರಿಕೆ’ ಕಾರ್ಯಕ್ರಮ ಜಾರಿಗೆ ತಂದಿಲ್ಲದಿದ್ದರೆ ಇಂತಹ ಸ್ಥಿತಿ ಮತ್ತಷ್ಟು ಚಿಂತಾಜನಕವಾಗುತ್ತಿತ್ತು ಎಂದು ಸಮರ್ಥಿಸಿ ಕೊಳ್ಳುತ್ತಿದೆ. ಆದರೂ ಮಕ್ಕಳೊಂದಿಗೆ ಕೆಲಸ ಮಾಡುವ ಮನೋವೈದ್ಯೆಯಾಗಿ, ನನ್ನ ಅಭಿಪ್ರಾಯದಲ್ಲಿ, ಇದು ಮಕ್ಕಳ ಕಲಿಕಾ ಸಮಸ್ಯೆಗಳ ಬಗ್ಗೆ ಮತ್ತಷ್ಟು ಗಮನಹರಿಸಲು ಮತ್ತು ಪರಿಹಾರ ಹುಡುಕಲು ಒದಗಿರುವ ಸದವಕಾಶ.

ದೃಷ್ಟಿದೋಷ, ಅತೀ ಚಟುವಟಿಕೆ, ನಿರ್ದಿಷ್ಟ ಕಲಿಕಾ ಸಾಮರ್ಥ್ಯದ ಕೊರತೆ... ಹೀಗೆ ಬೇರೆ ಬೇರೆ ಕಾರಣಗಳಿಗೆ ಕಲಿಕಾ ಸಮಸ್ಯೆಗಳು ಉಂಟಾಗಬಹುದು. ಅವುಗಳನ್ನು ಗುರುತಿಸುವುದು ಮುಖ್ಯ. ಚಿಕಿತ್ಸೆಯ ಅಗತ್ಯವಿದ್ದರೆ ಪಡೆಯಬೇಕು. ನಿಯಮಿತವಾದ ಕಣ್ಣಿನ ಪರೀಕ್ಷೆಯಿಂದ ದೃಷ್ಟಿದೋಷ ಪತ್ತೆ ಹಚ್ಚಬಹುದು. ಅತೀ ಚಟುವಟಿಕೆ ಇರುವ ಮಕ್ಕಳಿಗೆ ಏಕಾಗ್ರತೆ ಇಲ್ಲದಿರುವುದರಿಂದ, ಕಲಿಕೆಯಲ್ಲಿ ತೊಂದರೆ ಉಂಟಾಗುತ್ತದೆ. ಇದನ್ನು ಗುರುತಿಸಿ ಅಂತಹ ಮಕ್ಕಳನ್ನು ಶಿಕ್ಷಕರು ತಮ್ಮ ಬಳಿ ಕೂರಿಸಿಕೊಳ್ಳಬೇಕು. ಅವರ ಗಮನವನ್ನು ಬೇರೆಡೆ ಸೆಳೆಯುವ ಯಾವುದೇ ವಸ್ತುಗಳನ್ನು ಇರಿಸಬಾರದು. ಪಾಠಗಳನ್ನು ಪುಟ್ಟ ಪುಟ್ಟ ಭಾಗಗಳಾಗಿ ವಿಂಗಡಿಸಿ ಹೇಳಿಕೊಡಬೇಕು.

ಇನ್ನು ‘ನಿರ್ದಿಷ್ಟ ಕಲಿಕಾ ಸಾಮರ್ಥ್ಯದ ಕೊರತೆ’ಯ ಬಗ್ಗೆ ಅರಿವು ಬಹಳ ಕಡಿಮೆ. ಡಿಸ್‌ಲೆಕ್ಸಿಯ ಅಥವಾ ನಿರ್ದಿಷ್ಟ ಕಲಿಕಾ ಅಸಾಮರ್ಥ್ಯ ಎಂದು ಕರೆಯುವ ಈ ಮಿದುಳಿನ ಬೆಳವಣಿಗೆಯ ಸಮಸ್ಯೆಯಲ್ಲಿ ಮಕ್ಕಳಿಗೆ ಓದಲು ಬಾರದಿರಬಹುದು. ಅದರಿಂದಾಗಿ ಕಲಿಕೆಯಲ್ಲಿ ಬಹಳ ಹಿಂದಿರುತ್ತಾರೆ. ಅಕ್ಷರಗಳನ್ನು ಸರಿಯಾಗಿ ಗುರುತಿಸಲಾಗದು. ಓದಲಿಕ್ಕೇ ಬಾರದಿದ್ದ ಮೇಲೆ ಅರ್ಥ ಮಾಡಿಕೊಳ್ಳುವುದು, ನೆನಪಿಡುವುದು, ‍ಪರೀಕ್ಷೆಯಲ್ಲಿ ಉತ್ತರಿಸುವುದು, ಅಂಕ ಗಳಿಸುವುದು ಸಾಧ್ಯವೇ? ಆತ್ಮವಿಶ್ವಾಸ ಕುಗ್ಗಿ, ಮಂಕಾಗಿರುವ ಈ ಮಕ್ಕಳನ್ನು ಹೆಚ್ಚಿನವರು ಮತ್ತಷ್ಟು ಬೈದು, ಅವರು ಅಂತರ್ಮುಖಿಗಳಾಗುವಂತೆ ಮಾಡುತ್ತಾರೆ. ಓದುವುದೇ ಹೀಗಾದರೆ, ಬರೆಯುವುದರಲ್ಲಂತೂ ಹೆಚ್ಚಿನ ಸಮಸ್ಯೆಗಳಿರಬಹುದು. ಕೆಲವರಿಗೆ ಓದುವುದಕ್ಕೆ ಚೆನ್ನಾಗಿ ಬಂದರೂ ಬರೆಯುವುದಕ್ಕೆ ಬರುವುದಿಲ್ಲ.

ಪೋಷಕರು, ಶಿಕ್ಷಕರು ಈ ಸಮಸ್ಯೆಯನ್ನು ಬೇಗ ಗುರುತಿಸಿದಷ್ಟೂ ಒಳ್ಳೆಯದು. ಒಬ್ಬ ಸಹೃದಯಿ ವ್ಯಕ್ತಿ, ಈ ಮಗುವಿನೊಂದಿಗೆ ಕುಳಿತು ಪ್ರತಿದಿನ ಒಂದೆರಡು ಗಂಟೆಗಳ ಕಾಲ ಪ್ರೀತಿಯಿಂದ ಅರ್ಥವಾಗುವ ರೀತಿ ಕಲಿಸಬೇಕಾದ ಅವಶ್ಯಕತೆ ಇದೆ. ಆ ವ್ಯಕ್ತಿ ಪೋಷಕರೇ ಆಗಬಹುದು ಅಥವಾ ಶಿಕ್ಷಕರು ಅಥವಾ ಮನೆಯ ಬಳಿಯಲ್ಲಿ ಇರುವ, ಈ ಮಗುವಿಗಿಂತ ದೊಡ್ಡವರಾದ ವಿದ್ಯಾರ್ಥಿಗಳೂ ಆಗಬಹುದು. ಮಗುವಿನ ಮಟ್ಟಕ್ಕೇ ಇಳಿದು, ಕಲಿಸಬೇಕಾದ ಅಗತ್ಯವಿದೆ. ವಾಕ್ಯಗಳನ್ನು ಓದುವುದಕ್ಕೆ ಶ್ರಮಪಡುವ ಮಗುವಿಗೆ, ಅಕ್ಷರಗಳನ್ನು ಕೂಡಿಸಿ ಓದಲು ಹೇಳಿಕೊಡಬೇಕು. ಈ ತರಬೇತಿಗೆ ಒಂದೆರಡು ವರ್ಷಗಳೇ ಹಿಡಿಯಬಹುದು. ಕಲಿಸುವ ರೀತಿಯಲ್ಲಿ ಸೃಜನಾತ್ಮಕವಾದ, ಕುತೂಹಲ ಹುಟ್ಟಿಸುವ ತಂತ್ರಗಳನ್ನು ತರಬೇಕು. ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರ ಸಲಹೆ ಪಡೆಯಬೇಕು.

ವಿದ್ಯಾವಂತ ಪೋಷಕರಾದರೆ, ಈ ನಿರ್ದಿಷ್ಟ ಕಲಿಕಾ ತೊಂದರೆಯ ವಿಶೇಷ ತರಬೇತಿಯ ಶಿಕ್ಷಣವನ್ನು ಅಲ್ಪಾವಧಿ ಕೋರ್ಸ್‌ಗಳ ಮೂಲಕ ಪಡೆಯಬಹುದು. ಬೆಂಗಳೂರಿನ ಸ್ಪ್ಯಾಸ್ಟಿಕ್‌ ಸೊಸೈಟಿ ಆಫ್‌ ಇಂಡಿಯಾದಂತಹ ಸಂಸ್ಥೆಗಳು ಇಂತಹ ಕೋರ್ಸ್‌ಗಳನ್ನು ನಡೆಸುತ್ತವೆ.

ಈಗಾಗಲೇ ಪ್ರೌಢಶಾಲೆಗಳಲ್ಲಿದ್ದರೆ ಕೆಲವು ಬಾರಿ ಮಕ್ಕಳು ಎಂಟು, ಒಂಬತ್ತನೆಯ ತರಗತಿಗೆ ಬಂದ ಮೇಲೆ ಈ ಸಮಸ್ಯೆಯು ಅರಿವಿಗೆ ಬರುತ್ತದೆ. ಆಗ ಈ ವಿಶೇಷ ತರಬೇತಿಯೊಂದಿಗೆ, ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆ, ಮೈಸೂರಿನ ಅಖಿಲ ಭಾರತ ವಾಕ್‌ ಶ್ರವಣ ಸಂಸ್ಥೆಯಂತಹ ಕಡೆಗಳಿಂದ ಡಿಸ್ಲೆಕ್ಸಿಯಾ ಕುರಿತು ಪ್ರಮಾಣಪತ್ರ ಪಡೆದು, ಸರ್ಕಾರ ಈ ಮಕ್ಕಳಿಗೆ ನೀಡಿರುವ ವಿಶೇಷ ಸವಲತ್ತುಗಳನ್ನು 10ನೇ ತರಗತಿ ಪರೀಕ್ಷೆಯಲ್ಲಿ ಉಪಯೋಗಿಸಿಕೊಳ್ಳಬಹುದು.

ಒಂದು ಮಗುವಿಗೆ ನಿರ್ದಿಷ್ಟ ಕಲಿಕಾ ಸಾಮರ್ಥ್ಯದ ಕೊರತೆ ಇದೆ ಅಂದುಕೊಳ್ಳೋಣ. ಆ ಮಗುವಿಗೆ ಈ ನ್ಯೂನತೆ ಬಿಟ್ಟರೆ ಬೇರೆ ಯಾವ ಬಗೆಯ ಸಾಮರ್ಥ್ಯಗಳಿವೆ ಎನ್ನುವುದನ್ನು ಸಕಾರಾತ್ಮಕವಾಗಿ ಅರಿಯಲು ಪ್ರಯತ್ನಿಸಬೇಕು. ಮಗುವಿಗೆ ಕಲೆಗಳಲ್ಲಿ ಆಸಕ್ತಿ ಮತ್ತು ಹೆಚ್ಚಿನ ಸಾಮರ್ಥ್ಯ ಇರಬಹುದೇ? ಅಥವಾ ಪರಸ್ಪರ ಸಂವಹಿಸುವ ಕೌಶಲ ಇದೆಯೇ? ನಿರ್ವಹಣಾ ಸಾಮರ್ಥ್ಯ ಚೆನ್ನಾಗಿದೆಯೇ ಎಂದು ನಾವು ಪ್ರಶ್ನಿಸಿಕೊಳ್ಳಬೇಕು.

ಶಾಲೆಯ ಪಾಠದ ಅಭ್ಯಾಸವನ್ನು ಹತ್ತನೇ ತರಗತಿಯ ತನಕವಾದರೂ ಮಾಡಲೇಬೇಕಾದ ಅಗತ್ಯವಿದೆ ನಿಜ, ಆದರೆ ಅದರ ನಂತರವಾದರೂ ಈ ಮಕ್ಕಳಿಗೆ ಅವರ ಸಾಮರ್ಥ್ಯದ ಮೇರೆಗೆ, ಬೇರೆ ಬೇರೆ ಕಾರ್ಯಕ್ಷೇತ್ರಗಳನ್ನು ಆರಿಸಿಕೊಳ್ಳುವ ಆಯ್ಕೆಗಳನ್ನು ಕೊಡಬೇಕು. ಆಗ ಅವರು ಜೀವನದಲ್ಲಿ ಯಶಸ್ಸು ಗಳಿಸುವುದು ಖಂಡಿತ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು